ಶಹಾಪುರ: ತಿರುಪತಿ ದೇವಸ್ಥಾನದ ಪೂಜೆ ಕೈಂಕರ್ಯಗಳನ್ನು ಹಾಗೂ ಉತ್ಸವ ನೆರವೇರಿಸಲು ಸುರಪುರ ಸಂಸ್ಥಾನದ ರಾಜರು ತಾಲೂಕಿನ ಐಕೂರ ಗ್ರಾಮದ ಜಮೀನಿನ ಭೂ ಕಂದಾಯವನ್ನು ಸಲ್ಲಿಸುತ್ತಿದ್ದರು. ಇಂದಿಗೂ ಸಂಪ್ರದಾಯ ಮುಂದುವರೆಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ ಎಂದು ಇತಿಹಾಸಕಾರ ಭಾಸ್ಕರರಾವ್ ಮುಡಬೂಳ ಹೇಳಿದರು.
ಪಟ್ಟಣದ ಜೀವ್ಹೇಶ್ವರ ಕಲ್ಯಾಣಮಂಟಪದಲ್ಲಿ ಶನಿವಾರ ಭೀಮರಾಯನಗುಡಿ ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 1857 ಸ್ವಾತಂತ್ರ್ಯ ಸಂಗ್ರಾಮದ ವಿಜಯ ಸ್ಫೂರ್ತಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶಾಭಿಮಾನಿ: 202 ವರ್ಷಗಳ ಕಾಲ ಸ್ವತಂತ್ರವಾಗಿ ರಾಜ್ಯಭಾರ ಮಾಡಿದ ರಾಜರು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇತಿಹಾಸಕಾರರ ಸರಿಯಾದ ಅಧ್ಯಯನದ ಕೊರತೆ ನಿಷ್ಕಾಳಜಿಯಿಂದ ಸತ್ಯ ಹೊರಬರದೆ ಮುಚ್ಚಿ ಹಾಕಿದ್ದಾರೆ. ಬ್ರಿಟಿಷರ ಹಾಗೂ ನಿಜಾಮರ ನಡುವೆ ದೇಶಾಭಿಮಾನಿಯಾಗಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರಣಕಹಳೆ ಕಿಡಿಯನ್ನು ಹೊತ್ತಿಸಿದವರು ರಾಜಾ ವೆಂಕಟಪ್ಪ ನಾಯಕ ಎಂದು ಅವರು ಬಣ್ಣಿಸಿದರು.
ಇತಿಹಾಸ ಗಟ್ಟಿಬೇರುಗಳು ಇಲ್ಲಿವೆ. ಸಂಶೋಧನೆಗಳ ಮೂಲಕ ಹೊರ ತೆಗೆದು ಬೆಳಕು ಚೆಲ್ಲಬೇಕು. ಮುಂದಿನ ಯುವ ಜನತೆ ಅದನ್ನು ಅಸ್ವಾದಿಸುವಂತಾಗಬೇಕು. ದೇಶಾಭಿಮಾನ ಹಾಗೂ ಭ್ರಷ್ಟಾಚಾರದ ವಿರುದ್ಧ ಯುವಕರು ಸಿಡಿದೇಳಬೇಕು. ನಮ್ಮೂರಿನ ಕೋಟೆ, ಕೊತ್ತಲು, ಸ್ಮಾರಕಗಳ, ಶಿಲಾ ಶಾಸನಗಳನ್ನು ಕಾಪಾಡಿಕೊಂಡು ಹೋಗಬೇಕು ಎಂದು ಅವರು ಕರೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಸುರಪುರ ಸಂಸ್ಥಾನದ ವಂಶಜ ರಾಜಾ ವೆಂಕಟಪ್ಪ ನಾಯಕ(ತಾತಾ) ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಡಾ.ಶ್ರೀನಿವಾಸ ಸಿರನೂರ, ಚಿತ್ರಕಲಾವಿದ ವಿಜಯ ಹಾಗರಗುಂಡಗಿ ಇದ್ದರು.
ಕಾರ್ಯಕ್ರಮದಲ್ಲಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಕೃಷ್ಣಾ ಸುಬೇದಾರ, ಎಪಿಎಂಸಿ ಅಧ್ಯಕ್ಷ ತಿಮ್ಮಣ್ಣ ರಾಂಪೂರ, ಆರ್. ಚೆನ್ನಬಸು ವನದುರ್ಗ, ರಾಮಚಂದ್ರ ಕಾಶಿರಾಜ, ಯಲ್ಲಯ್ಯ ನಾಯಕ, ರಾಜಗೋಪಾಲ, ದೇವು ಹೆಬ್ಬಾಳ, ಬಂಡೆಪ್ಪ ಮುಡಬೂಳ, ಈರಣ್ಣ ಇಜೇರಿ, ಹಣಮಂತರಾಯ, ಸಾಯಿಬಣ್ಣ, ಶರಣಪ್ಪ ಹವಾಲ್ದಾರ, ಮಾನಪ್ಪ ಹಡಪದ, ಲಿಂಗಣ್ಣಗೌಡ ದೇಸಾಯಿ, ಮಲ್ಲಿಕಾರ್ಜುನ ಚಿಲ್ಲಾಳ, ಅಂಬರೇಶ ಇಟಗಿ, ವಾಲ್ಮೀಕಿ ಕೊಳ್ಳೂರ ಇದ್ದರು. ವಿಜಯೋತ್ಸವ ಅಂಗವಾಗಿ ಈಚೆಗೆ ಗುಲ್ಬರ್ಗದಲ್ಲಿ ರೌಡಿ ಮುನ್ನಾನ ಗುಂಡಿನ ದಾಳಿಯನ್ನು ಹಿಮ್ಮೆಟ್ಟಿಸಿದ ಎಎಸ್ಐ ಉದಂಡಪ್ಪನವರನ್ನು ಸನ್ಮಾನಿಸಲಾಯಿತು.
ನಿರ್ಣಯಗಳು: ಇದೇ ಸಂದರ್ಭದಲ್ಲಿ ಆರು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ನಿರ್ಣಯದ ಸುರಪುರ ವಿಜಯೋತ್ಸವವನ್ನು ಪ್ರತಿ ವರ್ಷ ಸರ್ಕಾರ ಆಚರಿಸಬೇಕು. ಸುರಪುರ ಇತಿಹಾಸದ ಬಗ್ಗೆ ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು. ಸುರಪುರ ಸಂಸ್ಥಾನದ ಸಾಹಿತ್ಯ, ಕಲೆ, ಸ್ಮಾರಕ ಸಂರಕ್ಷಣೆಗೆ ಮುಂದಾಗಬೇಕು. ಬ್ರಿಟಿಷರ ವಿರುದ್ಧ ಹೋರಾಡಿದ ರುಕ್ಮಾಪೂರ ಬಗಡಿಯನ್ನು ರಾಷ್ಟ್ರೀಯ ಐಕ್ಯತೆ ಸ್ಥಳವೆಂದು ಸರ್ಕಾರ ಘೋಷಣೆ ಮಾಡಬೇಕು. ಯಾದಗಿರಿ ಮಿನಿ ವಿಧಾನಸೌಧ ಮುಂದೆ ವೆಂಕಟಪ್ಪ ನಾಯಕರ ಪುತ್ಥಳಿ ಸ್ಥಾಪನೆಯಾಗಲಿ. ಬಸ್ ನಿಲ್ದಾಣದಲ್ಲಿ ವೆಂಕಟಪ್ಪ ನಾಯಕರ ಭಾವಚಿತ್ರ ಹಾಕಬೇಕು ಎಂದು ನಿರ್ಣಯಿಸಲಾಯಿತು.
Advertisement