15 ದಿನಗಳಲ್ಲಿ ಕನ್ನಡ ಅನುಷ್ಠಾನ
ಆಳಂದ: ಬರುವ ದಿನಗಳಲ್ಲಿ ಮೂರು ದಿನಗಳ ವಿಭಾಗ ಮಟ್ಟದ ಕನ್ನಡ ಕಮ್ಮಟ ನಡೆಸಿ ಹೈ.ಕ. ಭಾಗದಲ್ಲಿನ ಮರೆತುಹೋದ ಇತಿಹಾಸಕಾರರನ್ನ ಹಾಗೂ ಇಲ್ಲಿಯ ಭಾಷೆ, ವೈವಿಧ್ಯತೆ, ಪರಂಪರೆಯನ್ನು ಒಳಗೊಂಡ ಸಮಗ್ರವಾದ ಪುಸ್ತಕ ಪ್ರಕಟಿಸಿ ರಾಜ್ಯಕ್ಕೆ ಲೋಕಾರ್ಪಣೆ ಮಾಡಲಾಗುವುದು ಎಂದು ಚಿತ್ರನಟ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪ್ರಕಟಿಸಿದರು.
ಪಟ್ಟಣದ ಹನುಮಾನ ದೇವಸ್ಥಾನ ಆವರಣದಲ್ಲಿ ಶನಿವಾರ ಕನ್ನಡ ನುಡಿ ಜಾಗೃತಿ ಜಾಥಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಭಾಷೆ ಆಧಾರದ ಮೇಲೆ ಪ್ರದೇಶ ವಿಂಗಡಣೆ, ಆಂಗ್ಲ ವ್ಯಾಮೋಹ, ಗಡಿ ಭಾಗದಲ್ಲಿ ದಬ್ಬಾಳಿಕೆ ಈ ಎಲ್ಲದರ ನಡುವೆ ಕನ್ನಡ ಉಳಿಸಿ ಬೆಳೆಸಿ ಸಂಸ್ಕೃತಿ, ಸಾಹಿತ್ಯ ಪ್ರಗತಿಗೆ ಅಧಿಕಾರಿಗಳು ಕನ್ನಡಪರ ಸಂಘಟನೆಗಳು, ಸಾರ್ವಜನಿಕರು ಕಂಕಣಬದ್ಧವಾಗಿ ದುಡಿಯಬೇಕು. ಕನ್ನಡ ಕೆಲಸಕ್ಕಾಗಿ ಪ್ರಾಧಿಕಾರ ಹೆಚ್ಚಿನ ಶ್ರಮವಹಿಸುತ್ತಿದೆ ಎಂದು ಹೇಳಿದರು.
ಚರಿತ್ರೆಯ ಪುಸ್ತಕ ಪ್ರಕಟಿಸಿಲ್ಲ: ಸಾಹಿತಿ ಪ್ರಾಧ್ಯಾಪಕ ಡಾ. ಬಸವರಾಜ ಸಬರದ ಮಾತನಾಡಿ, ಕುವೆಂಪು, ಬೇಂದ್ರೆ ಅವರಿಗಿಂತ ಐವತ್ತು ವರ್ಷ ಮೊದಲು ಈ ಭಾಗದ ದ್ಯಾಗಾಯಿ, ಮಹಾಗಾಂವ ಸೇರಿ 18 ಮಹಾಕವಿಗಳು ತಮ್ಮ ದೇಶಿ ಭಾಷೆಯಲ್ಲಿ ಕಾವ್ಯಗಳನ್ನು ಬರೆದರೂ ಚರಿತ್ರೆಯಲ್ಲಿ ಬರೆದಿಲ್ಲ. ವಿಶ್ವ ಕನ್ನಡ ಸಮ್ಮೇಳನ, ಸಾಹಿತ್ಯ ಸಮ್ಮೇಳನ ನಡೆದಾಗಲೂ ಅಲ್ಲಿ ಈ ಭಾಗದ ಚರಿತ್ರೆಯ ಪುಸ್ತಕ ಪ್ರಕಟಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಆರ್. ಪಾಟೀಲ, ಕನ್ನಡ ನಾಡು ನುಡಿ ಭಾಷೆ ಅಭಿವೃದ್ಧಿಗೆ ಗಡಿನಾಡಿನಲ್ಲಿ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿ ಶಿಕ್ಷಣ, ಸೌಲಭ್ಯ ಒದಗಿಸಬೇಕೆಂದ ಅವರು, ಕನ್ನಡ ಇತಿಹಾಸ ಪರಂಪರೆಯನ್ನು ಎಲ್ಲರ ಅಭಿಮಾನ ಸ್ವಾಭಿಮಾನವಾಗಿ ಹೊರಹೊಮ್ಮಬೇಕು ಎಂದರು.
ಕನ್ನಡ ಅನುಷ್ಠಾನಕ್ಕೆ: ತಹಸೀಲ್ದಾರ್ ಪರಮೇಶ್ವರ ಕೆ.ಸ್ವಾಮಿ ಮಾತನಾಡಿ, ಬರುವ 15 ದಿನಗಳಲ್ಲಿ ಅಂಗಡಿ, ಕಚೇರಿ ವ್ಯಾಪಾರಿಗಳ ನಾಮಫಲಕ ಒಳಗೊಂಡು ಸರ್ಕಾರಿ ಕಚೇರಿಗಳಲ್ಲಿ ಸಂಪೂರ್ಣವಾಗಿ ಕನ್ನಡ ಅನುಷ್ಠಾನಕ್ಕೆ ತರಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷರಿಗೆ ಭರವಸೆ ನೀಡಿದರು.
ಕಸಾಪ ತಾಲೂಕು ಅಧ್ಯಕ್ಷ ಡಾ. ಅಪ್ಪಸಾಬ ಬಿರಾದಾರ, ಜಾಥಾ ಕಲಾ ತಂಡದ ಸಂಯೋಜಕ ಕೆ.ವಿ.ನಾಗರಾಜಮೂರ್ತಿ, ಕಾರ್ಯದರ್ಶಿ ಡಾ. ಕೆ. ಮುರಳೀಧರ್ ನಾಡು, ನುಡಿ ಕುರಿತು ಮಾತನಾಡಿದರು.
ತಾಪಂ ಅಧ್ಯಕ್ಷೆ ಪ್ರಭಾವತಿ ಎಸ್. ಢಗೆ, ಉಪಾಧ್ಯಕ್ಷ ಲಕ್ಷ್ಮಣ ಬೀಳಗಿ, ಇಒ ಲಕ್ಷ್ಮಣ ಬೀಳಗಿ, ಜಿಪಂ ಎಇಇ ಅಬ್ದುಲ ಸಲಾಂ, ಗ್ರೇಡ್ ತಹಸೀಲ್ದಾರ್ ಪಂಡಿತರಾವ್ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯಾ ಇನಾಮದಾರ, ಶಿರಸ್ತೆದಾರ ಪ್ರಕಾಶ ಶಿಂಧಗಿ, ರಮೇಶ ಮಾಡಿಯಾಳ, ಪುರಸಭೆ ಉಪಾಧ್ಯಕ್ಷೆ ಫರ್ಜಾನಾ ಬೇಗಂ, ಆರ್ಐ ಅಬ್ದುಲ ವಾಹಬ ಅನೇಕರು ಉಪಸ್ಥಿತರಿದ್ದರು. ಸಂತೋಷ ಶಿಂಧೆ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

