ಗುಲ್ಬರ್ಗಾ

ಚಿತ್ರಸಂತೆಗೆ ಭಾರಿ ಸ್ಪಂದನೆ

Published On :

ಕ.ಪ್ರ.ವಾರ್ತೆ  ಗುಲ್ಬರ್ಗ  ಫೆ. 9
ಇಲ್ಲಿನ ಜಗತ್ ವೃತ್ತದ ಪಾಲಿಕೆ ಆಡಳಿತ ಕಚೇರಿ ಅಂಚಿನಿಂದ ಮುಖ್ಯರಸ್ತೆಯಲ್ಲಿರುವ ಪಂಡಿತ ರಂಗಮಂದಿರದವರೆಗೂ ಇರುವ ಪಾದಚಾರಿ ಪಥದಲ್ಲಿ ಭಾನುವಾರ ಇಡೀ ದಿನ ಕಲಾವಿದರು, ಕಲಾರಸಿಕರ ಕಲರವ.
ಇದೇ ಮೊದಲ ಬಾರಿಗೆ ಇಲ್ಲಿನ ಎಚ್ಕೆಸಿಸಿಐ, ಗುಲ್ಬರ್ಗ ವಿವಿ, ವಿವಿಧ ಕಲಾ ಸಂಸ್ಥೆಗಳು, ಹಿರಿಯ ಕಲಾವಿದರ ಬೆಂಬಲದೊಂದಿಗೆ ನಡೆಸಲಾದ ಚಿತ್ರಸಂತೆಗೆ ಕಲಾವಿದರು, ಕಲಾಕೃತಿಗಳ ಜೊತೆಗೆ ಕಲೆಯನ್ನು ಆರಾಧಿಸುವ, ಅಭಿಮಾನಪಡುವ ಕಲಾಸಕ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಂತೆಯನ್ನು ಯಶಸ್ವಿಯಾಗಿಸಿದರು.
ಭಾನುವಾರದ ಇಡೀದಿನ ನಡೆದ ಚಿತ್ರಸಂತೆಗೆ ಬಂದವರು ಹೈ-ಕ ಭಾಗದ 6 ಜಿಲ್ಲೆಗಳಲ್ಲದೆ ಪಕ್ಕದ ಬಿಜಾಪುರ, ಬಾಗಲಕೋಟೆಯಿಂದಲೂ ಕಲಾವಿದರು ಕಲಾಕೃತಿಗಳೊಂದಿಗೆ ಬಂದಿದ್ದು ವಿಶೇಷವಾಗಿತ್ತು. ಸುಮಾರು 200 ಕಲಾವಿದರು 10 ಸಾವಿರ ಕಲಾಕೃತಿಗಳೊಂದಿಗೆ ಇಲ್ಲಿಗೆ ಬಂದಿದ್ದರು. ಭಾನುವಾರದ ಸಂತೆಯಲ್ಲಿ 5 ರಿಂದ 6 ಲಕ್ಷ ಮೌಲ್ಯದಷ್ಟು ಕಲಾಕೃತಿಗಳು ಮಾರಾಟವಾಗಿವೆ. ಚಿತ್ರಸಂತೆ ಯಶಸ್ವಿಯಾಗಿದೆ ಎನ್ನಲು ಈ ಮಾರಾಟದ ವಿಷಯವೇ ಕನ್ನಡಿ ಎನ್ನುತ್ತಾರೆ ಹಿರಿಯ ಕಲಾವಿದ ಎ.ಎಸ್. ಪಾಟೀಲ್.
ಕುಮಾರ್ ಎಂಬುವವರ ಕಲಾಕೃತಿ ಸಂತೆಯಲ್ಲಿ 25 ಸಾವಿರ ರುಪಾಯಿಗೆ ಮಾರಾಟವಾಗಿದೆ. ಇದು ಅತಿ ಹೆಚ್ಚಿನ ಬೆಲೆಗೆ ಮಾರಾಟವಾದ ಕಲಾಕೃತಿ. 500 ರಿಂದ ಆರಂಭವಾಗಿ 25 ಸಾವಿರದವರೆಗೂ ಕಲಾಕೃತಿಗಳು ಇಲ್ಲಿ ಮಾರಾಟವಾಗಿವೆ. ಅದೆಷ್ಟೋ ಕಲಾವಿದರು 10 ರಿಂದ 50 ಸಾವಿರದವರೆಗೂ ವಿವಿಧ ಬಗೆಯ ಕಲಾಕೃತಿಗಳನ್ನು ರಚಿಸಿಕೊಡುವ ಆದೇಶಗಳನ್ನೂ ಪಡೆದುಕೊಂಡಿದ್ದಾರೆ.
ಇದೇ ಮೊದಲ ಬಾರಿಗೆ ಕಲಾಕೃತಿಗಳನ್ನು ಸಂತೆ ರೂಪದಲ್ಲಿಟ್ಟು ಮಾರಾಟ ಮಾಡುವಂತಹ ನವೀನ ಪರಿಕಲ್ಪನೆಗೆ ಗುಲ್ಬರ್ಗದಲ್ಲಿ ಅಭೂತಪೂರ್ವ ಯಶ ದೊರಕಿರುವುದು ಕಲಾವಿದರು, ಕಲಾಸಕ್ತರಲ್ಲಿ ಹೊಸ ಸಂಚಲನ ಮೂಡಿಸಿದೆ.
ಚಿತ್ರಸಂತೆಗೆ ಭಾನುವಾರ ಬೆಳಗ್ಗೆಯೇ ರಾಜ್ಯಸಭಾ ಸದಸ್ಯ ಬಪಾ ಸೇಡಂ ಚಾಲನೆ ನೀಡಿದರು. ಎಚ್ಕೆಸಿಸಿಐನ ಉಮಾಕಾಂತ ನಿಗ್ಗುಡಗಿ, ಹಿರಿಯ ಕಲಾವಿದ ಎ.ಎಸ್. ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.