ಬಿಸಿ ಊಟದ ಸಿಲಿಂಡರ್ಗೆ ಬೆಂಕಿ
ಕೆಂಭಾವಿ: ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಬಿಸಿ ಊಟದ ಸಿಲಿಂಡರ್ಗೆ ಬೆಂಕಿ ಹೊತ್ತಿಕೊಂಡಿದ್ದ ಕಾರಣ ಕೆಲಕಾಲ ಭೀತಿಯ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಬಿಸಿಯೂಟ ತಯಾರಕರು ಶಾಲೆಯ ಬಿಸಿಯೂಟದ ಕೋಣೆಯಲ್ಲಿ ಗ್ಯಾಸ್ ಹಚ್ಚಲು ಹೋದಾಗ ಪಕ್ಕದಲ್ಲಿದ್ದ ಮತ್ತೊಂದು ಸಿಲಿಂಡರ್ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಅಡುಗೆ ಮಾಡುವವರು ಗಾಬರಿಯಾಗಿ ಹೊರಗಡೆ ಓಡಿ ಬಂದಿದ್ದಾರೆ. ಶಾಲೆಯ ಮುಖ್ಯಗುರು ಬಸವರಾಜ ಕೋಣಸಿರಸಗಿ ಅವರು ಅಗ್ನಿಶಾಮಕದಳ ಹಾಗೂ ಪೊಲೀಸ್ ಠಾಣೆಗೆ ಕರೆಮಾಡಿದರು. ಅಗ್ನಿಶಾಮಕದಳದವರು ಬಂದು, ಬೆಂಕಿ ಆರಿಸಿದರು. ಘಟನೆ ಕಾರಣ ಮಂಗಳವಾರ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟದ ಭಾಗ್ಯ ಇರಲಿಲ್ಲ. ಸಿಆರ್ಸಿ ಶ್ರೀಶೈಲ ಪಾಸೋಡಿ, ಜಿಲ್ಲಾ ಬಿಸಿಯೂಟದ ಅಧಿಕಾರಿ ಡಿ.ಎಮ್. ಹೊಸಮನಿ, ತಾಲ್ಲೂಕಾ ಬಿಸಊಿಟದ ಮೇಲ್ವಿಚಾರಕ ಚಂದ್ರಕಾಂತ ಕೊಣ ುರ ಸ್ಥಳಕ್ಕೆ ಭೇಟಿ ನೀಡಿದರು.
ಶಾಲೆಗಳಲ್ಲಿ ಬಿಸಿಯೂಟಕ್ಕೆ ಸಿಲಿಂಡರ್ಗಳನ್ನು ಪೂರೈಸಲಾಗಿದೆ. ಆದರೆ ಅವನ್ನು ಬಳಸುವ ವಿಧಾನಗಳ ಬಗ್ಗೆ ಅಡುಗೆ ಮಾಡುವವರಿಗೆ ತರಬೇತಿ ನೀಡಿಲ್ಲ. ಬೆಂಕಿ ಅನಾಹುತ ಸಂಭವಿಸಿದಾಗ ಅದನ್ನು ನಂದಿಸುವ ಪರಿಕರಗಳಿದ್ದು ಅವುಗಳನ್ನು ಬಳಸುವ ವಿಧಾನ ಯಾರಿಗೂ ತಿಳಿದಿಲ್ಲ. ಬೆಂಕಿ ನಂದಿಸುವ ಪರಿಕರಗಳು ಖಾಲಿಯಾಗಿದ್ದು ಅವುಗಳನ್ನು ತುಂಬಿಸುವ ಗೋಜಿಗೆ ಯಾರೂ ಹೋಗಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.
ಬ್ಯಾಂಕ್ ಮುಷ್ಕರ, ಗ್ರಾಹಕ ತತ್ತರ
ಗುರುಮಠಕಲ್: ವೇತನ ಪರಿಷ್ಕರಣೆ ಮಾಡುಬೇಕು ಹಾಗೂ ಬ್ಯಾಂಕಿಂಗ್ ವಲಯದಲ್ಲಿನ ಸುಧಾರಣೆ ಕ್ರಮಗಳನ್ನು ತಕ್ಷಣ ನಿಲ್ಲಿಸಬೇಂದು ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ನೌಕರರು ನಡೆಸುತ್ತಿರುವ ಮುಷ್ಕರದ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ಗ್ರಾನಾಂತರ ಜನತೆ ಬುಧವಾರ ಬ್ಯಾಂಕಿಂಗ್ ಸೇವೆಗಳಿಗಾಗಿ ಪರದಾಡುವಂತೆ ಅಯಿತು. ಶನಿವಾರ ಅರ್ಧದಿನದ ಹಿನ್ನೆಲೆಯಲ್ಲಿ, ಭಾನುವಾರ ಹಾಗೂ ಸೋಮ, ಮಂಗಳವಾರಗಳಂದು ಬ್ಯಾಂಕ್ ನೌಕರರು ಮುಷ್ಕರದಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ, ಹೀಗೆ ಒಟ್ಟಾರೆಯಾಗಿ ಬ್ಯಾಂಕಿಗೆ ಸತತವಾಗಿ ಮೂರು ದಿನಗಳ ಕಾಲ ರಜೆ ನೀಡಿದಂತೆ ಆಗಿ ಗ್ರಾಹಕರು ತೀವ್ರ ಸಮಸ್ಯೆ ಎದುರಿಸಬೇಕಾಯಿತು. ಮುಷ್ಕರದ ಕಾರಣ ಎಟಿಎಂಗಳಲ್ಲಿಯೂ ಕೂಡ ಹೆಚ್ಚಿನ ಹಣವಿರಲಿಲ್ಲ. ಇದರಿಂದಾಗಿ ಗ್ರಾಹಕರು ಹಣಕಾಸಿನ ತೊಂದರೆಯನ್ನು ಅನುಭವಿಸಬೇಕಾಯಿತು.
ಸೌಲಭ್ಯ ಕೊರತೆ ಮಧ್ಯೆ ಎಲ್ಲಮ್ಮ ದೇವಿ ಜಾತ್ರೆ
ಶಹಾಪುರ: ಸಗರನಾಡಿನ ಆರಾಧ್ಯ ದೈವವೆನಿಸಿರುವ ಸಗರದ ಎಲ್ಲಮ್ಮದೇವಿ ಜಾತ್ರೆಗೆ ಅಸಂಖ್ಯ ಭಕ್ತರು ಆಗಮಿಸುತ್ತಾರೆ ಎಂಬ ವಿಷಯ ದೇವಸ್ಥಾನ ಸಮಿತಿಗೆ ಗೊತ್ತಿದ್ದರೂ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಸಂಪೂರ ವಿಫಲವಾಗಿದೆ.
ಈ ಕುರಿತು ದೇವಸ್ಥಾನ ಸಮಿತಿಯವರನ್ನು ಪ್ರಶ್ನಿಸಿದರೆ ಭಕ್ತಾದಿಗಳ ಅನುಕೂಲದ ದೃಷ್ಟಿಯಿಂದ ಎಲ್ಲ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ವಾಡಿಕೆಯಾಗಿದೆ.
ಗುಡ್ಡದ ದೇವಸ್ಥಾನದವರೆಗೂ ಹೋಗಲು ಕಾಟಾಚಾರದ ರಸ್ತೆ ನಿರ್ಮಾಣ, ಎಲ್ಲೆಡೆ ಜಾಲಿಕಂಟಿ, ಟ್ರಾಫಿಕ್ ಜಾಮ್, ಅಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ಅವ್ಯವಸ್ಥೆ, ಇದು ಇಲ್ಲಿನ ಅವ್ಯವಸ್ಥೆಗೆ ಕನ್ನಡಿ ಹಿಡಿದಂತಿದ್ದವು. ಭಕ್ತಾದಿಗಳಿಗಂತೂ ಉಸಿರುಕಟ್ಟುವ ವಾತಾವರಣವಿತ್ತು. ಇದು ಅನೇಕ ಭಕ್ತಾದಿಗಳ ಬೇಸರಕ್ಕೂ ಕಾರಣವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

