ಗುಲ್ಬರ್ಗಾ

ಜೆಸ್ಕಾಂ ಜಾಗೃತದಳದಿಂದ ದಾಳಿ

Published On :

ಶಹಾಪುರ: ಕೆಂಭಾವಿ ಕಕ್ಕೇರಿ ಮತ್ತು ನಾಯ್ಕಲ್ ಗ್ರಾಮಗಳಲ್ಲಿ ಜೆಸ್ಕಾಂ ಅಧಿಕಾರಿ ರಾಜಶೇಖರ ಬಿಳವಾರ ನೇತೃತ್ವದಲ್ಲಿ ಜಾಗೃತ ದಳದ ತಂಡ ಆಕಸ್ಮಿಕ ದಾಳಿ ನಡೆಸಿ 4 ಲಕ್ಷ ಮೌಲ್ಯದ ವಿದ್ಯುತ್ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಜಾಗೃತದಳದ ಎ.ಇ.ಇ. ರಾಜಶೇಖರ ಬಿಳವಾರ ವಿದ್ಯುತ್ ಕಳ್ಳತನ ಪ್ರಕರಣ ಪತ್ತೆ ಹಚ್ಚಲು ವಿಶೇಷ ತಂಡವಿದ್ದು, ಸೆಕ್ಷನ್ ಆಫಿಸರ್ ಮಲ್ಲಿನಾಥ ಗೋದೆ ಮತ್ತು ಪರಮೇಶ್ವರ, ರಾಮನಗೌಡ, ವಿಷ್ಣು ಮೆಕ್ಯಾನಿಕ್ ಜಗನ್ನಾಥ ಲೈನಮನ್ಗಳಾದ ಬನ್ನಯ್ಯಸ್ವಾಮಿ, ಭೀಮರಾಯ ರಾಮು ಇದ್ದು ವಿದ್ಯುತ್ ಸೋರಿಕೆ ತಡೆಗಟ್ಟಲು ಮತ್ತು ಆಕ್ರಮವಾಗಿ ವಿದ್ಯುತ್ ಸಂಪರ್ಕ ಹೊಂದಿರುವವರ ವಿರುದ್ಧ ವಿಶೇಷ ನಿಗಾ ವಹಿಸುತ್ತಿದೆ ಎಂದು ತಿಳಿಸಿದರು.
ಯಾದಗಿರಿಗೆ ಇಂದು ಸಚಿವ ಚಿಂಚನಸೂರ್
ಯಾದಗಿರಿ: ಜಿಲ್ಲಾ ಉಸ್ತುವಾರಿ ಸಚಿವರಾದ ಬಾಬುರಾವ್ ಚಿಂಚನಸೂರ ಅವರು  ಫೆ.16 ರಂದು ಯಾದಗಿರಿಯಲ್ಲಿ ರೈಲ್ವೆ ಬೋಗಿಗಳ ನಿರ್ಮಾಣ ಕಾರ್ಖಾನೆಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಸಾರ್ವಜನಿಕರ ಕುಂದುಕೊರತೆ ವಿಚಾರಿಸಿ ರಾತ್ರಿ ಗುಲ್ಬರ್ಗಕ್ಕೆ ಪ್ರಯಾಣ ಬೆಳೆಸುವರು.
ಗ್ರೂಪ್ ಡಿ ನೌಕರನ ವಜಾ
ಯಾದಗಿರಿ: ಯಾದಗಿರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಗ್ರೂಪ್ ಡಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ಬಸವರಾಜ ಕಲಾಲ ಅವರನ್ನು ದೀರ್ಘಕಾಲದ ಅನಧಿಕೃತ ಗೈರುಹಾಜರಿಯ ಕಾರಣಕ್ಕಾಗಿ ಸರ್ಕಾರಿ ಸೇವೆಯಿಂದ ವಜಾ ಮಾಡಲಾಗಿದೆ. ಬಸವರಾಜ ಕಲಾಲ ಅವರು 2006ರ ಜುಲೈ 23ರಿಂದ ಯಾದಗಿರಿ ಜಿಲ್ಲಾ ಆಸ್ಪತೆಯಲ್ಲಿ ಡಿ ಗ್ರೂಪ್ ಹುದ್ದೆಯ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಈ ಗೈರು ಹಾಜರಿಯನ್ನು ಗಂಭೀರವಾಗಿ ಪರಿಗಣಿಸಿ ಕರ್ನಾಟಕ ನಾಗರಿಕ ಸೇವಾ-1957ರ ರೀತ್ಯಾ ಹಾಗೂ ಸರ್ಕಾರಿ ಸೇವೆಗೆ ಪುನರ್ ನೇಮಕಾತಿ ಹೊಂದಲು ಅನರ್ಹವಾಗುವ ರೀತಿ ಸದರಿಯವರನ್ನು ಸರ್ಕಾರಿ ಸೇವೆಯಿಂದ ವಿಮೋಚನೆಗೊಳಿಸಿದ್ದಾರೆಂದು ಯಾದಗಿರಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಯಾದಗಿರಿ: ಶಹಾಪುರ ಪುರಸಭೆ ವತಿಯಿಂದ 2013-14ನೇ ಸಾಲಿನ ಎಸ್ಎಫ್ಸಿ ಮುಕ್ತನಿಧಿ ಹಾಗೂ ಪುರಸಭೆ ನಿಧಿ ಅನುದಾನದ ಶೇ. 22.75 ಯೋಜನೆಯಡಿ ಪಟ್ಟಣದ ಪರಿಶಿಷ್ಟ ಪಂಗಡ ಹಾಗೂ ಪಟ್ಟಣದ ಇತರೆ ಬಡಜನರಿಗಾಗಿ ಮೀಸಲಿದ್ದ ಶೇ. 7.25 ಯೋಜನೆಯಲ್ಲಿ ವೈಯಕ್ತಿಕ ಸೌಲಭ್ಯಗಳಿಗಾಗಿ ಅರ್ಹ ಫಲಾನುಭವಿಗಳಿಗೆ ಸಹಾಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಈ ಸಂಬಂಧಿತ ಕಲ್ಯಾಣ ಕಾರ್ಯಕ್ರಮಗಳ ಸೌಲಭ್ಯಗಳ ಕುರಿತು ಪುರಸಭೆ ಸೂಚನಾ ಫಲಕದಲ್ಲಿ ಮಾಹಿತಿ ಪಡೆಯಬಹುದು. ಮಾ.3, 2014ರಂದು ಸಂಜೆ 4 ಗಂಟೆಯೊಳಗೆ ಸಲ್ಲಿಸಲು ಸೂಚಿಸಲಾಗಿದೆ.
ಕೋಚ್ ಫ್ಯಾಕ್ಟರಿಗೆ ಇಂದು ಶಿಲಾನ್ಯಾಸ
ಗುರುಮಠಕಲ್: ಮಲ್ಲಿಕಾರ್ಜುನ ಖರ್ಗೆ ತಮ್ಮ ತವರು ಕ್ಷೇತ್ರಕ್ಕೆ ಕೊಡುಗೆ ನೀಡಿರುವ ರೇಲ್ವೆ ಕೋಚ್ ಫ್ಯಾಕ್ಟರಿಯ ಶಿಲಾನ್ಯಾಸ ಫೆ.16ರಂದು ನಡೆಯಲಿದೆ. ಫೆ.15ರಂದು ನಡೆಯಬೇಕಿದ್ದು, ಕಾರಣಾಂತರಗಳಿಂದ ಒಂದು ದಿನ ಮುಂದಕ್ಕೆ ಹೋಗಿದೆ. ಸೈದಾಪುರ ವ್ಯಾಪ್ತಿಯಲ್ಲಿ ಸುಮಾರು 150 ಎಕರೆ ಪ್ರದೇಶದಲ್ಲಿ 770 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಈ ರೇಲ್ವೆ ಕೋಚ್ ಫ್ಯಾಕ್ಟರಿ ತಲೆ ಎತ್ತಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.