ಶುಲ್ಕ ವಿನಾಯತಿ: ತಪ್ಪದ ಪರದಾಟ
ಕನ್ನಡಪ್ರಭ ವಾರ್ತೆ ಗುರುಮಠಕಲ್ ಫೆ.18
ಬಿಸಿಎಂ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಶುಲ್ಕ ವಿನಾಯಿತಿ ಇನ್ನು ಮುಂದೆ ರದ್ದು ಮಾಡುವ ಸಂಬಂಧ ಸರ್ಕಾರವು ಕಳೆದ 5.10.2013ರಂದು ಹೊರಡಿಸಿರುವ ಅದೇಶದ ಪ್ರಕಾರ ಇದೀಗ ವಿದ್ಯಾರ್ಥಿಗಳು ಶುಲ್ಕ ವಿನಾಯತಿ ಪಡೆಯುವುದು ಕಷ್ಟಕರವಾಗಿ ಪರಿಣಮಿಸಿದೆ. ಬಡ ವಿದ್ಯಾರ್ಥಿಗಳು ವಿನಾಯತಿಗಾಗಿ ಪರದಾಡುವಂತೆ ಆಗಿದೆ.
ಈ ಹಿಂದೆ ವಿದ್ಯಾರ್ಥಿಗಳು ತಾವು ವಿದ್ಯಾಭ್ಯಾಸ ಮಾಡುವ ಕಾಲೇಜಿನಲ್ಲಿ ಪಾವತಿಸುವ ಶುಲ್ಕದಲ್ಲಿ ವಿನಾಯಿತಿ ಪಡೆಯಲು ಜಾತಿ ಹಾಗೂ ಅದಾಯ ಪ್ರಮಾಣ ಪತ್ರಗಳನ್ನು ನೀಡಿ ವಿನಾಯಿತಿ ಪಡೆಯುತ್ತಿದ್ದರು. ಅದರೆ ಸರ್ಕಾರ ರೂಪಿಸಿದ ಹೊಸ ನಿತಿಯಿಂದ ಬಡ ವಿದ್ಯಾರ್ಥಿಗಳು ಶುಲ್ಕ ವಿನಾಯಿತಿ ಪಡೆಯುವುದು ಕೇವಲ ಕನಸಿನ ಮಾತೇ ಅಗಿದೆ.
ಸರ್ಕಾರದ ಆದೇಶಾನುಸಾರ ವಿದ್ಯಾರ್ಥಿಗಳು ಪಾವತಿಸಿದ ಹೆಚ್ಚುವರಿ ಶುಲ್ಕವನ್ನು (ಡಿಬಿಟಿ) ನಗದು ವರ್ಗಾವಣೆ ಸೌಲಭ್ಯದಡಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಿದೆ ಎಂದು ಹೇಳಲಾಗಿತ್ತು. ಅದರೆ ಇದು ಕಾರ್ಯರೂಪಕ್ಕೆ ಬಂದಿಲ್ಲ ಎನ್ನುವುದು ವಿದ್ಯಾರ್ಥಿಗಳ ವಾದ.
ಷರತ್ತುಗಳು ಅಧಿಕ: ವಿದ್ಯಾರ್ಥಿಯು ಶುಲ್ಕ ವಿನಾಯಿತಿ ಪಡೆಯಲು ಆನೇಕ ಷರತ್ತುಗಳನ್ನು ರೂಪಿಸಲಾಗಿದ್ದು ಯಾವುದೇ ಮುಷ್ಕರಗಳಲ್ಲಿ ಭಾಗಿಯಾಗಿರಬಾರದು. ಎಲ್ಲಾ ವಿಷಯಗಳಲ್ಲಿ ತೇರ್ಗಡೆಯಾಗುವುದರೊಂದಿಗೆ ಸರ್ಕಾರ ನಿಗದಿಪಡಿಸಿರುವಷ್ಟು ಶೇಕಡ ಅಂಕಗಳು ಹಾಗೂ ಹಾಜರಾತಿ ಪಡೆದಿರಬೇಕು, ಆಧಾರ್ ಕಾರ್ಡ್ಕಡ್ಡಾಯವಾಗಿ ಹೊಂದಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಶೇ. 70ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಅನುತ್ತೀರ್ಣರಾಗುವುದು ಸರ್ವೇ ಸಾಮಾನ್ಯವಾಗಿದ್ದು ಷರತ್ತುಗಳ ಕಾರಣ ಇದೀಗ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಈ ಸೌಲಭ್ಯದಿಂದ ದೂರ ಉಳಿಯುವಂತಾಗಿದೆ.
ಹೆಚ್ಚುವರಿ ಶುಲ್ಕ ಭರಿಸಬೇಕಾಗುತ್ತದೆ: ಪ್ರಾರಂಭದಲ್ಲಿ ಪೂರ್ಣ ಪ್ರಮಾಣದ ಶುಲ್ಕವನ್ನು ನೀಡಿ ನಂತರ ಶುಲ್ಕ ವಿನಾಯಿತಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು ಎನ್ನುವ ಸೂಚನೆಯನ್ನು ಸರ್ಕಾರ ಹೇಳಿದ್ದು ಅದು ಕೂಡ 2013-14ನೇ ಸಾಲಿನಲ್ಲಿ ಜಾರಿಯಾಗಬೇಕು ಎಂದು ಅದೇಶಿಸಿದೆ. ಇದರಿಂದ ವಿದ್ಯಾರ್ಥಿಗಳು ಇದೀಗ ಶುಲ್ಕ ವಿನಾಯ್ತಿ ಸಿಗುವ ತನಕ ಕಾದು ನೊಡುವ ತಂತ್ರವನ್ನು ಅನುಸರಿಬೇಕಾಗಿದ್ದು ಅದಕ್ಕಿಂತ ಮುಂಚಿತವಾಗಿ ಹೆಚ್ಚುವರಿಯಾಗಿ ಶುಲ್ಕವನ್ನು ಭರಿಸಬೇಕಾಗುತ್ತಿದೆ. ಇದರಿಂದ ಲಕ್ಷಾಂತರ ಬಡ ವಿದ್ಯಾರ್ಥಿಗಳು ಶುಲ್ಕ ವಿನಾಯ್ತಿಯಿಂದ ಹೊರಗೆ ಉಳಿಯಲಿದ್ದಾರೆ.
ಪ್ರಶ್ನಿಸುವ ಹಕ್ಕು ಇಲ್ಲ: ಇದೀಗ ಹೊರಡಿಸಿರುವ ಅದೇಶದಿಂದ ವಿದ್ಯಾರ್ಥಿಗಳು ಇನ್ನು ಮುಂದೆ ಯಾವುದೇ ವಿಷಯದ ಬಗ್ಗೆ ಪ್ರಶ್ನಿಸುವ ಹಾಗೆಯೇ ಇಲ್ಲವಾಗಿದೆ. ಸರ್ಕಾರ ಕಾಮೆಡ್-ಕೆ ಲಾಬಿಗೆ ಮಣಿಯುವುದನ್ನು, ಕಾಲೇಜುಗಳಲ್ಲಿ ಮೂಲ ಸೌಕರ್ಯದ ಕೊರತೆ, ಏಕಾಏಕಿ ಶುಲ್ಕ ದುಪ್ಪಟ್ಟು ಆಗುವುದು, ಮೌಲ್ಯ ಮಾಪನದಲ್ಲಿನ ಲೋಪದೋಷಗಳು, ವಿವಿಗಳಲ್ಲಿ ರಾರಾಜಿಸುತ್ತಿರುವ ಭ್ರಷ್ಟಾಚಾರ-ಈ ಯಾವುದನ್ನೂ ವಿದ್ಯಾರ್ಥಿಗಳು ಪ್ರಶ್ನಿಸುವುದು ಪ್ರಸಕ್ತ ಆದೇಶದ ಪ್ರಕಾರ ಕಾನೂನು ಬಾಹಿರವಾಗಿದೆ.
ಇದೊಂದು ಅಪ್ರಜಾತಾಂತ್ರಿಕ ಫ್ಯಾಸಿಸ್ಟ್ ದಾಳಿಯಾಗಿದ್ದು ಈ ಆದೇಶ ಶುಲ್ಕ ವಿನಾಯಿತಿಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ.
ಸರ್ಕಾರದ ಈ ಆದೇಶದ ವಿರುದ್ಧ ಎಐಡಿಎಸ್ಒದ ಬೆಂಗಳೂರು ಜಿಲ್ಲಾ ಸಮಿತಿ, ಹಾಗೂ ವಿದ್ಯಾರ್ಥಿ ಸಂಘಟನೆಗಳು ಅನೇಕ ಬಾರಿ ಹೋರಾಟಗಳನ್ನು ನಡೆಸಿ ಸರ್ಕಾರದ ಗಮನಕ್ಕೆ ತಂದಿವೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರವನ್ನು ಸಕಾರ ತೆಗೆದುಕೊಂಡಿಲ್ಲ. ಈ ಕೂಡಲೇ ಆದೇಶವನ್ನು ರದ್ದುಗೊಳಿಸದಿದ್ದಲ್ಲಿ ವಿದ್ಯಾರ್ಥಿಸಂಘಟನೆಗಳ ಹೋರಾಟ ಅನಿವಾರ್ಯವಾಗುತ್ತದೆ
ಟಿ ಗೌರಮ್ಮ, ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ನ ಜಿಲ್ಲಾ ಅಧ್ಯಕ್ಷೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

