ಮುಖ್ಯೋಪಾಧ್ಯಾಯ ಅಮಾನತು
ಆಳಂದ: ತಾಲೂಕಿನ ಖಜೂರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಚನ್ನಬಸಪ್ಪ ಧುತ್ತರಗಾಂವ ಅವರು ಶಾಲಾ ಕೋಣೆ ನಿರ್ಮಾಣದ ಹಣ ದುರ್ಬಳಿಕೆ ಮತ್ತು ಕರ್ತವ್ಯಲೋಪ ಆರೋಪದ ಮೇರೆಗೆ ಮೇಲಾಧಿಕಾರಿಗಳು ಇತ್ತೀಚೆಗೆ ಅಮಾನತು ಮಾಡಿ ಆದೇಶ ಹೋರಡಿಸಿದ್ದಾರೆ. ಕಳೆದ 2011- 12ನೇ ಸಾಲಿನಲ್ಲಿ ಮಂಜೂರಾದ ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ಹೆಚ್ಚುವರಿ ಕೋಣೆ ನಿರ್ಮಾಣಕ್ಕೆ 4.33 ಲಕ್ಷ ಮಂಜೂರಾಗಿತ್ತು. ಹೀಗಾಗಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೆ ಹಣ ಎತ್ತಿ ಹಾಕಲಾಗಿದೆ ಎಂದು ಗ್ರಾಮಸ್ಥರು ಶಿಕ್ಷಣ ಇಲಾಖೆಗೆ ದೂರು ನೀಡಿದರು. ಈ ದೂರಿನ ಆಧಾರದ ಮೇಲೆ ತಾಲೂಕಿನ ಬಿಇಒ ವೆಂಕಯ್ಯ ಇನಾಮದಾರ ಅವರು, ಸಮಗ್ರ ತನಿಖೆ ನಡೆಸಿ ಮುಖ್ಯಗುರು ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಶಿಫಾರಸು ಮಾಡಿದರು. ಈ ಶಿಫಾರಸು ಆಧಾರ ಮೇಲೆ ಡಿಡಿಪಿಐ ಎಸ್.ಪರಮೇಶ ಅವರು, ಮುಖ್ಯಗುರುಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
91 ಹೆಚ್ಚುವರಿ ಶಿಕ್ಷಕರ ಪತ್ತೆ
ಆಳಂದ: ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಮತ್ತು ಕೊರತೆ ನಿವಾರಣೆಗಾಗಿ 91 ಹೆಚ್ಚುವರಿ ಶಿಕ್ಷಕರ ಪತ್ತೆ ಮಾಡಲಾಗಿದೆ. ಈ ಎಲ್ಲ ಶಿಕ್ಷಕರನ್ನು ಕೊರತೆಯಿರುವ ಶಾಲೆಗಳಿಗೆ ನೇಮಕ ಮಾಡಲು ಕ್ರಮ ಜರುಗಿಸಲಾಗಿದೆ ಎಂದು ಬಿಇಒ ವೆಂಕಯ್ಯ ಇನಾಮದಾರ ಅವರು ಹೇಳಿದ್ದಾರೆ. ಫೆ.24ರಂದು ಕ್ಷೇತ್ರ ಶಿಕ್ಷಾಧಿಕಾರಿಗಳ ಕಚೇರಿಯಲ್ಲಿ ಕೌನ್ಸೆಲಿಂಗ್ ಮಾಡಲಾಗುತ್ತಿದೆ. ಈ ಮೇಲಿನ ಎಲ್ಲ ಶಿಕ್ಷಕರು ಹಾಜರಾಗಬೇಕು. ಗೈರಾದ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟವಾಗಿ ಸೂಚಿಸಿದ್ದಾರೆ.
ಕಳವು; 3 ಆರೋಪಿಗಳ ಸೆರೆ
ಅಳಂದ: ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಗಿದ್ದಾರೆ. ಆಳಂದ ಠಾಣೆ ವ್ಯಾಪ್ತಿಯ ತಾಲೂಕಿನ ತುಗಾಂವ ಗ್ರಾಮದ ಶಿವಾಜಿ ಬಿರಾದಾರ ಅವರ ಮನೆ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಅರೋಪಿಗಳ ಪೈಕಿ ಕಮಸರ್ ನಾಯಕ ತಂಡಾದ ಗುಲಾಬ ಗಂಗಾರಾಮ ಚವ್ಹಾಣ, ಶ್ಯಾಮ ಗೋವಿಂದ ಕಾಳೆ, ಸೋಮನಾಥ ಬಗ್ಗು ಚವ್ಹಾಣ ಈ ಮೂವರನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಂದ ಸುಮಾರು 95 ಗ್ರಾಂ ಚಿನ್ನ, (2.70 ಲಕ್ಷ ಮೌಲ್ಯ) ಅಪರಾಧಕ್ಕೆ ಬಳಸಿದ ಬೈಕ್ ಜಪ್ತಿ ಮಾಡಿದ್ದಾರೆ. ಇನ್ನಿಬ್ಬರ ಪತ್ತೆಗೆ ಜಾಲ ಬೀಸಿದ್ದಾರೆ. ಡಿವೈಎಸ್ಪಿ ಎಸ್.ಎಲ್.ಝಂಡೇಕರ್ ಮಾರ್ಗದರ್ಶನ, ಸಿಪಿಐ ಕೆ.ಎಚ್.ಹಟ್ಟಿ ನೇತೃತ್ವಲ್ಲಿ ಪ್ರಭಾರಿ ಪಿಎಸ್ಐ ಎಸ್.ಎಸ್.ದೊಡ್ಡಮನಿ, ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಗಡಿಯಲ್ಲಿನ ಸಾಮಗ್ರಿ ಭಸ್ಮ
ಆಳಂದ: ತಾಲೂಕಿನ ಹಿತ್ತಲಶಿರೂರ ಗ್ರಾಮದ ಕಿರಾಣಿ ಅಂಗಡಿಗೆ ಕಿಡಿಗೇಡಿಗಳಿಂದ ಬೆಂಕಿ ಹಚ್ಚಲಾಗಿದೆ. ಇದರಿಂದ ಅಂಗಡಿಯಲ್ಲಿರುವ ಸುಮಾರು 15,000 ಮೌಲ್ಯದ ಸಾಮಗ್ರಿ ನಾಶಗೊಂಡಿವೆ ಎಂದು ಅಂದಾಜಿಸಲಾಗಿದೆ. ತುಕ್ಕಾರಾಮ ತಂದೆ ಕಲ್ಲಪ್ಪ ಕಾಮನಕರ್ ಎಂಬುವವರಿಗೆ ಸೇರಿದ ಅಂಗಡಿಗೆ ಬಾಗಿಲು, ಮತ್ತು ಒಳಗಡೆ ಇರುವ ಪದಾರ್ಥಗಳು ನಾಶಗೊಂಡಿವೆ. ಕಿಡಿಗೇಡಿಗಳು ಬೆಳಗ್ಗೆ 2 ಗಂಟೆಗೆ ತೊಗರಿ ಕಟ್ಟಿಗೆ ಬಾಗಿಲು ಮುಂದೆ ಇಟ್ಟು ಬೆಂಕಿ ಹಚ್ಚಿ ಹೊರಟು ಹೋಗಿದ್ದಾರೆ. ಇದರಿಂದ ಬಾಗಿಲು, ಆಹಾರ ಪದಾರ್ಥಗಳು ನಾಶಗೊಂಡಿವೆ. ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜೂಜು: 7 ಜನರ ಬಂಧನ
ಶಹಾಬಾದ್: ಖಚಿತ ಮಾಹಿತಿ ಆಧಾರದ ಮೇಲೆ ಡಿವೈಎಸ್ಪಿ ಮಹೇಶ ಮೇಘಣ್ಣನವರ ಮಾರ್ಗದರ್ಶನದಲ್ಲಿ ಪಿಐ ವಿಜಯಕುಮಾರ ಹೊಸ್ಮನಿ, ಸಿಬ್ಬಂದಿ ತಮ್ಮಣ್ಣ, ಬಸವರಾಜ ಮಡಿವಾಳ, ಜಮೀಲ ಅಹ್ಮದ, ನಾಗೇಂದ್ರ, ಬಸವರಾಜ ಅಗಸರ ಅವರು ರೈಲು ನಿಲ್ದಾಣದ ಬಳಿಯ ನಾಗರಕಟ್ಟೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಮೋಹನ ನಾಯಕ, ರಂಗಪ್ಪ, ಮಲ್ಲೇಶಿ, ಬೀಜು, ಶರಣು ಭಂಡಾರಿ, ಯಶವಂತ, ಆಬೀದ್ ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 4,080 ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಾಳೆ ನಗರಕ್ಕೆ ಯಡಿಯೂರಪ್ಪ
ಗುಲ್ಬರ್ಗ: ನಗರದಲ್ಲಿ ಫೆ.28ರಂದು ಜರುಗುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಭಾರತ ಗೆಲ್ಲಿಸಿ ರ್ಯಾಲಿ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಫೆ.22ರಂದು ಅಟಲ್ಜೀ ಬಡಾವಣೆಯಲ್ಲಿ ಬೆ.10.30ಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ನಂತರ 11ಕ್ಕೆ ಕ್ರಿಕೆಟ್ ಟೂರ್ನಾಮೆಂಟ್ನಲ್ಲಿ ಗೆದ್ದವರಿಗೆ ನೂತನ ವಿದ್ಯಾಲಯ ಮೈದಾನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮ.12ಕ್ಕೆ ಸೇಡಂಗೆ ತೆರಳಲಿದ್ದು ಬೈಕ್ ರ್ಯಾಲಿ, ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳುವರು. ಮ.3ಕ್ಕೆ ಚಿತ್ತಾಪುರಕ್ಕೆ ತೆರಳಿ ಸೇವಾಲಾಲ ಮಹಾರಾಜರ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಜೇವರ್ಗಿಯಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

