ಗುಲ್ಬರ್ಗಾ

ಮೋದಿ ರ್ಯಾಲಿಗೆ ಭರದ ಸಿದ್ಧತೆ

Published On :

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಫೆ.24
ಇಲ್ಲಿನ ಜೇವರ್ಗಿ ರಸ್ತೆಯಲ್ಲಿರುವ ಜಿಡಿಎ ನಿರ್ಮಾಣದ ವಾಜಪೇಯಿ ವಸತಿ ಯೋಜನೆಯ ವಿಶಾಲ ಮೈದಾನದಲ್ಲಿ ಫೆ.28ರಂದು ನಡೆಯಲಿರುವ ಭಾರತ ಗೆಲ್ಲಿಸಿ ರ್ಯಾಲಿಗೆ ಭರದ ಸಿದ್ಧತೆಗಳು ಸಾಗಿವೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ರಾಷ್ಟ್ರೀಯ ನಾಯಕರಾದ ರಾಜನಾಥ ಸಿಂಗ್, ಬಿಜೆಪಿ ಕರ್ನಾಟಕ ಉಸ್ತುವಾರಿ ತಾವರಚಂದ್ ಗೆಲ್ಹೋಟ್, ಅನಂತ ಕುಮಾರ್, ಬಿಎಸ್ ಯಡಿಯೂರಪ್ಪ, ಜಗದೀಶ ಶೆಟ್ಟರ್, ಡಿವಿ ಸದಾನಂದಗೌಡ ಸೇರಿದಂತೆ ಪ್ರಮುಖ ನಾಯಕರು ಈ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ.
ಗುಲ್ಬರ್ಗ, ಬೀದರ್ ಹಾಗೂ ರಾಯಚೂರು ಲೋಕಸಭೆ ಕ್ಷೇತ್ರಗಳ ವ್ಯಾಪ್ತಿಗೆ ಅನ್ವಯವಾಗುವಂತೆ ಈ ರ್ಯಾಲಿ ಗುಲ್ಬರ್ಗದಲ್ಲಿ ಸಂಘಟಿಸಲಾಗುತ್ತಿದೆ. ಹೀಗಾಗಿ ಮೂರು ಲೋಕಸಭೆ ಕ್ಷೇತ್ರಗಳ ವ್ಯಾಪ್ತಿಯಿಂದ 2 ಲಕ್ಷಕ್ಕೂ ಅಧಿಕ ಜನ ಸೇರುವ ಅಂದಾಜಿದೆ. ರ್ಯಾಲಿ ಉಸ್ತುವಾರಿ ವಹಿಸಿಕೊಂಡಿರುವ ಬಿಜೆಪಿ ರಾಜ್ಯ ಕಾರ್ಯದರ್ಶಿ ಶಿವಾನಂದ ಕಲ್ಲೂರ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ್ ಸುದ್ದಿಗೋಷ್ಠಿಯಲ್ಲಿ ರ್ಯಾಲಿಯ ಈ ಮುಖ್ಯಾಂಶಗಳನ್ನು ವಿವರಿಸಿದರು.
ಗುಜರಾತ್‌ನಿಂದ ಗುಲ್ಬರ್ಗಕ್ಕೆ ಮೋದಿ ಪ್ರಯಾಣ:  ಗುಜರಾತ್‌ನಿಂದ ವಿಶೇಷ ವಿಮಾನದಲ್ಲಿ ಬೀದರ್ ಮಾರ್ಗವಾಗಿ ಗುಲ್ಬರ್ಗಕ್ಕೆ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಬೀದರ್‌ನಿಂದ ಹೆಲಿಕಾಪ್ಟರ್ ಮೂಲಕ ಪೊಲೀಸ್ ತರಬೇತಿ ಶಾಲೆಯ ಮೈದಾನದಲ್ಲಿರುವ ಹೆಲಿಪ್ಯಾಡಿನಲ್ಲಿಳಿದು ಅಲ್ಲಿಂದ ಜೇವರ್ಗಿ ರಸ್ತೆಯ ವಾಜಪೇಯಿ ನಗರ ವೇದಿಕೆಗೆ ಆಗಮಿಸುತ್ತಿದ್ದಾರೆ. ನಂತರ ಮೋದಿ ಇಲ್ಲಿಂದಲೇ ಹುಬ್ಬಳ್ಳಿಗೆ ತೆರಳಲಿದ್ದಾರೆ.
ಅಂದು ಬೆ.11ಕ್ಕೆ ಸಮಾರಂಭ ಶುರುವಾಗಲಿದೆ. ಇದಕ್ಕೂ ಮುನ್ನ 9 ಗಂಟೆಯಿಂದ ಸಂಗೀತ ಬಳಗದ ವತಿಯಿಂದ ದೇಶಭಕ್ತಿ ಗಾಯನ, ಭಕ್ತಿ ಸಂಗೀತ ಗಾಯನ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೇ ಬಿಜೆಪಿಯ ಪ್ರಮುಖ ನಾಯಕರು ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಶಿವಾನಂದ ಕಲ್ಲೂರ್, ರಾಜಕುಮಾರ ತೇಲ್ಕೂರ್ ಹೇಳಿದ್ದಾರೆ.
ಇಂದು ಅಶೋಕ ಭೇಟಿ: ಮಾಜಿ ಡಿಸಿಎಂ ಆರ್.ಅಶೋಕ ಫೆ.25ರಂದು ಗುಲ್ಬರ್ಗಕ್ಕೆ ಆಗಮಿಸಿ ಮೋದಿ ರ್ಯಾಲಿಯ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ. ಇದೇ ವೇಳೆ ನಗರ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ನೇತೃತ್ವದಲ್ಲಿ 5 ಸಾವಿರ ಯುವಕರ ಬೈಕ್ ರ್ಯಾಲಿ ನಗರದ ಶರಣಬಸವೇಶ್ವರ ಮಂದಿರದಿಂದ ಮೋದಿ ರ್ಯಾಲಿ ನಡೆಯಲಿರುವ ವಾಜಪೇಯಿ ನಗರ ಬಡಾವಣೆಯವರೆಗೂ ನಡೆಯುಲಿದೆ.
  ಮೋದಿ ರ್ಯಾಲಿಗೆ ಈಗಾಗಲೇ ಸಾರ್ವಜನಿಕವಾಗಿ 50 ಲಕ್ಷ ಹಣ ಸಂಗ್ರಹವಾಗಿದೆ. ಇನ್ನೂ 50 ಲಕ್ಷ ಹಣ ಸಾಮಗ್ರಿ ರೂಪದಲ್ಲಿ ಸಂಗ್ರಹವಾಗುವ ನಿರೀಕ್ಷೆ ಇದೆ. ಇದಕ್ಕೆ ಅನೇಕ ದಾನಿಗಳು ವಾಗ್ದಾನ ಮಾಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ರಾಜಕುಮಾರ ತೇಲ್ಕೂರ್ ಹೇಳಿದ್ದಾರೆ.
ರ್ಯಾಲಿ ಸುತ್ತಮುತ್ತ...
1) ಗುಲ್ಬರ್ಗ, ಬೀದರ್, ರಾಯಚೂರು ಲೋಕಸಭೆ ಕ್ಷೇತ್ರಗಳ 5,600 ಬೂತ್‌ನಿಂದ (ಪ್ರತಿ ಬೂತ್‌ನಿಂದ 20 ರಂತೆ) ಕಾರ್ಯಕರ್ತರ ಆಗಮನ
2) ರ್ಯಾಲಿಯಲ್ಲಿ 200 ವಿವಿಧ ಮಠಗಳ ಸ್ವಾಮೀಜಿಗಳ ಉಪಸ್ಥಿತಿ
3) ಜೇವರ್ಗಿ ರಸ್ತೆಯ ಜಿಡಿಎ ನಿರ್ಮಿತ ವಾಜಪೇಯಿ ಬಡಾವಣೆಯ 180 ಎಕರೆ ಪ್ರದೇಶದಲ್ಲಿ ರ್ಯಾಲಿ
4) 30 ಎಕರೆಯಲ್ಲಿ ಮುಖ್ಯ ವೇದಿಕೆ
5) 30 ಎಕರೆಯಲ್ಲಿ ಪಾಕಶಾಲೆ- ಬೋಜನ ಸೌಕರ್ಯ
6) 120 ಎಕರೆನಲ್ಲಿ ಪಾರ್ಕಿಂಗ್ (ಬಸ್, ಉಳಿದೆಲ್ಲ ವಾಹನಗಳಿಗೆ)
7) ಫೆ.28ರ ರ್ಯಾಲಿಗೆ 3 ಜಿಲ್ಲೆಗಳಿಂದ 25 ಸಾವಿರ ಯುವಕರು ಬೈಕ್ ರ್ಯಾಲಿಯಲ್ಲಿ ಆಗಮನ
8) 2,000 ಬಸ್‌ಗಳು, 5,000 ಕಾರು, ಜೀಪ್ ಮೂಲಕ ಜನರ ಆಗಮನ
9) 1 ಲಕ್ಷ ಆಸನ ಸೌಕರ್ಯ
10) 2. 50 ಲಕ್ಷ ಜನರಿಗೆ ಊಟದ ಸೌಕರ್ಯ
ಬಿಜೆಪಿ ಜನಜಾಗರಣ ಅಭಿಯಾನಕ್ಕೆ ಚಾಲನೆ
ಜೇವರ್ಗಿ: ರಾಜ್ಯ ಬಿಜೆಪಿ ಘಟಕದಿಂದ ಜನಜಾಗರಣ ಅಭಿಯಾನ ಬಿಜೆಪಿ ತನ್ನಿ ದೇಶ ಉಳಿಸಿ ಎಂಬ ಘೋಷಣೆ ಅಡಿಯಲ್ಲಿ ಫೆ.28ರಂದು ಗುಲ್ಬರ್ಗದಲ್ಲಿ ಆಯೋಜಿಸಿದ ಭಾರತ ಗೆಲ್ಲಿಸಿ ರ್ಯಾಲಿಗೆ ಆಗಮಿಸುವಂತೆ ಮಹಿಳಾ ಮೋರ್ಚಾ ತಾಲೂಕು ಘಟಕದ ಪದಾಧಿಕಾರಿಗಳು ಮನೆ-ಮನೆಗೆ ತೆರಳಿ ಮಹಿಳೆಯರಿಗೆ ಅರಿಶಿಣ ಕುಂಕುಮ, ಬಳೆ, ಹೂ ನೀಡುವುದರ ಮೂಲಕ ಆಮಂತ್ರಿಸಿದರು.
ರ್ಯಾಲಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಭಾರತದ ಭವ್ಯ ಭವಿಷ್ಯ ಬಿಜೆಪಿಯಿಂದ ಮಾತ್ರ ಸಾಧ್ಯ. ಭಾರತ ಗೆಲ್ಲಿಸಿ ರ್ಯಾಲಿ ಯಶಸ್ವಿಗೊಳಿಸಬೇಕೆಂದು ತಾಪಂ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಆಂದೋಲಾ ಕೋರಿದರು.
ಜನ ಜಾಗರಣ ಅಭಿಯಾನದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸಹರಾಬೇಗಂ, ಪಪಂ ಮಾಜಿ ಅಧ್ಯಕ್ಷೆ ರೇಣುಕಾ ಹಿರೇಮಠ, ರುದ್ರಮ್ಮ ದೇಸಾಯಿ, ಚನ್ನಮ್ಮ ಖಾನಾಪುರ, ಲಲಿತಾಬಾಯಿ, ನಾಗಮ್ಮ ಜವಳಗಿ, ವಿಜಯಲಕ್ಷ್ಮೀ ಹಿರೇಮಠ, ಸುನೀತಾ ಕಾಂಬಳೆ, ಅನಸೂಯಾ ಪೂಜಾರಿ, ಅಶ್ವಿನಿ, ಸುಮಾ ಹಾಗೂ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಚಿತ್ತಾಪುರದಿಂದ 10 ಸಾವಿರ ಕಾರ್ಯಕರ್ತರು
ಚಿತ್ತಾಪುರ: ಗುಲ್ಬರ್ಗ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ನಡೆಯಲಿರುವ ಬಿಜೆಪಿ ಭಾವಿ ಪ್ರಧಾನಿ ಅಭ್ಯರ್ಥಿ ನರೇದ್ರ ಮೋದಿಯವರ ಭಾರತ ಗೆಲ್ಲಿಸಿ ರ್ಯಾಲಿಗೆ ಚಿತ್ತಾಪುರದಿಂದ 10 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ತಳವಾರ ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾವಿ ಪ್ರಧಾನಿ ನರೇಂದ್ರ ಮೋದಿಯವರು ಗುಲ್ಬರ್ಗ ಜಿಲ್ಲೆಗೆ ಪ್ರಥಮವಾಗಿ ಅಗಮಿಸುತ್ತಿದ್ದು, ಅವರೊಂದಿಗೆ ಬಿಜೆಪಿ ರಾಷ್ಟ್ರಧ್ಯಕ್ಷ ರಾಜನಾಥ ಸಿಂಗ್, ಪ್ರ.ಕಾರ್ಯದರ್ಶಿ ಅನಂತಕುಮಾರ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ, ಆರ್.ಅಶೋಕ ಆಗಮಿಸುತ್ತಿದ್ದಾರೆ.
ರ್ಯಾಲಿಯನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಲು ಗುಲ್ಬರ್ಗ, ಬೀದರ್, ರಾಯಚೂರು ಜಿಲ್ಲೆಗಳಿಂದ 3 ಲಕ್ಷಕ್ಕೂ ಅಧಿಕ ಕಾರ್ಯಕರ್ತರನ್ನು ಸೇರಿಸುವ ಗುರಿ ಹೊಂದಲಾಗಿದೆ. ಚಿತ್ತಾಪುರ ತಾಲೂಕಿನಿಂದ 100 ಬಸ್ ಹಾಗೂ ಯುವ ಮೋರ್ಚಾದಿಂದ 1 ಸಾವಿರ ಬೈಕ್ ರ್ಯಾಲಿ ಒಳಗೊಂಡಂತೆ 10 ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸುವರು ಎಂದು ತಿಳಿಸಿದರು.
 ಬಿಜೆಪಿ ತಾಲೂಕಾಧ್ಯಕ್ಷ ಶಶಿಕಾಂತ ಪಾಟೀಲ್ ಬೆಳಗುಂಪಾ, ಪ್ರ.ಕಾರ್ಯದರ್ಶಿ ಮಹೇಂದ್ರ ಕೋರಿ, ಬಾಲಾಜಿ ಬುರಬುರೆ, ಯುವ ಮೋರ್ಚಾ ಅಧ್ಯಕ್ಷ ತಮ್ಮಣ್ಣ ಡಿಗ್ಗಿ, ಭೀಮರಾಯ ಕರದಾಳ, ಪುರಸಭೆ ಸದಸ್ಯ ದಶರಥ ದೊಡ್ಮನಿ, ವಿಷ್ಣು ಜಿತುರೆ, ನಾಗಾರಾಜ ಹೂಗಾರ, ರಮೇಶ ಪಾಟೀಲ್, ಬಸವರಾಜ ಬಟಗೇರಿ, ಸದಾಶಿವ, ಹನುಮೇಶ, ದೇವಿಂದ್ರ ನಾಗರಾಜ ಅಳ್ಳೋಳ್ಳಿ ಉಪಸ್ಥಿತರಿದ್ದರು.
ಶಹಾಬಾದ್‌ನಲ್ಲೂ...
ಗುಲ್ಬರ್ಗ: ನಗರದಲ್ಲಿ ಫೆ.28ರಂದು ಬೆ.11ಕ್ಕೆ ನಡೆಯಲಿರುವ ಭಾರತ ಗೆಲ್ಲಿಸಿ ರ್ಯಾಲಿಗೆ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಶಹಾಬಾದ್ ಮಂಡಲ ವತಿಯಿಂದ ನೂರಾರು ಯುವ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ಮಾಡುವ ಮೂಲಕ ಪ್ರಚಾರ ಕೈಗೊಳ್ಳಲಾಯಿತು.
ರ್ಯಾಲಿಯಲ್ಲಿ ಇಂಗಿನಶೆಟ್ಟಿ, ರೇವುನಾಯಕ ಬೆಳಮಗಿ, ಪರಶುರಾಮ ನಸಲವಾಯಿ, ಶಾಂತರೆಡ್ಡಿ ದಂಡಗುಂಡಕರ್,ನಾಗಣ್ಣ ರಾಂಪೂರೆ, ಅರುಣ ಪಟ್ಟಣಕರ್, ಡಾ. ಅಶೋಕ ಜಿಂಗಾಡೆ, ಬಸವರಾಜ ಮದ್ರಿಕಿ ಸೇರಿದಂತೆ ಅನೇಕ ಯುವ ಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.