ಮೋದಿ ರ್ಯಾಲಿಗೆ ಶೀತಲ ಸಮರ ಸಂಕಟ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಫೆ.25
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾಗವಹಿಸುತ್ತಿರುವ ಫೆ.28ರ ಗುಲ್ಬರ್ಗದಲ್ಲಿನ ಭಾರತ ಗೆಲ್ಲಿಸಿ ರ್ಯಾಲಿ ಸ್ಥಳೀಯ ಬಿಜೆಪಿ ಸಂಘಟನೆ ಪಾಲಿಗೆ ಅಗ್ನಿ ಪರೀಕ್ಷೆಯಾಗಿದೆಯೇ?
ಮೋದಿ ರ್ಯಾಲಿ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಬಿಜೆಪಿ ಸಂಘಟನೆಯಲ್ಲಿ, ಆ ಪಕ್ಷದ ಸ್ಥಳೀಯ ನಾಯಕರ ವಲಯದಲ್ಲಿ ಸಾಗಿರುವ ವಿದ್ಯಮಾನಗಳನ್ನು ಹತ್ತಿರದಿಂದ ಕಂಡವರು ಈ ಪ್ರಶ್ನೆಗೆ ಹೌದು ಎಂದೇ ಹೇಳುತ್ತಿದ್ದಾರೆ.
ಏಕೆಂದರೆ- ನರೇಂದ್ರ ಮೋದಿ ಗುಲ್ಬರ್ಗ ಕಾರ್ಯಕ್ರಮಕ್ಕೆ ಎರಡು ದಿನ ಮಾತ್ರ ಬಾಕಿ. ಹೀಗಿದ್ದರೂ ಅತಿಥೇಯ ಗುಲ್ಬರ್ಗದಲ್ಲಿ ನಿರೀಕ್ಷಿತ ವಾತಾವರಣ ಇನ್ನೂ ಮೂಡಿಲ್ಲ. ಗುಲ್ಬರ್ಗ(ದ) ಬಿಜೆಪಿ ಶಾಸಕರೇ ಇರುವ ಕ್ಷೇತ್ರ. ಇಲ್ಲೇ ಮೋದಿ ರ್ಯಾಲಿ ನಡೆಯುತ್ತಿದ್ದು, ಹೊರಗಿನಿಂದ ಆಗಮಿಸಿರುವ ನಾಯಕರು ಹೇಳುವಂತೆ ಗುಲ್ಬರ್ಗ ನಗರ ಹಾಗೂ ಗ್ರಾಮಾಂತರದ ಬಿಜೆಪಿ ಸಾರಥಿಗಳು ತಮ್ಮ ತಮ್ಮ ಇತಿಮಿತಿಗಳಲ್ಲಿ ಸಿದ್ಧಗೊಡಿದ್ದಾರೆಯೇ ಎಂಬ ಪ್ರಶ್ನೆಗಳು ಉದ್ಭವವಾಗಿವೆ.
ಶೀತಲ ಸಮರ: 2013ರ ಅಸೆಂಬ್ಲಿ ಚುನಾವಣೆಯಲ್ಲಿ ಗುಲ್ಬರ್ಗ(ದ) ಹೊರತುಪಡಿಸಿ ಉಳಿದೆಲ್ಲೆಡೆ ಸೋತು ಸುಣ್ಣವಾಗಿರುವ ಬಿಜೆಪಿಯಲ್ಲಿ ಈಗ ಲೋಕಸಭೆ ಚುನಾವಣೆ ಎದುರಿಸುವಷ್ಟು ಉತ್ಸಾಹ ಕಾಣುತ್ತಿಲ್ಲ. ಕಳೆದು ಹೋಗಿರುವ ಉತ್ಸಾಹ ಪುನಃ ತುಂಬಲೆಂದೇ ಮೋದಿ ರ್ಯಾಲಿಗೆ ಗುಲ್ಬರ್ಗ ಆಯ್ಕೆ ಮಾಡಿದ್ದರೂ ಸ್ಥಳೀಯ ನಾಯಕರ ಹತ್ತು ಹಲವು ಗುಂಪುಗಳು ಪರಸ್ಪರ ಮುಖ ನೋಡದಷ್ಟು ಶೀತಲಸಮರದಲ್ಲಿ ಮುಳುಗಿದ್ದರಿಂದ ರ್ಯಾಲಿ ಸಂಘಟನೆಯೇ ಸವಾಲಾಗಿದೆ.
ಅದಕ್ಕಾಗಿಯೇ ರ್ಯಾಲಿ ಉಸ್ತುವಾರಿ- ಸಂಘಟನೆ ಹೊಣೆಯನ್ನು ಸಂಪೂರ್ಣವಾಗಿ ರಾಜ್ಯ ಬಿಜೆಪಿಯೇ ವಹಿಸಿಕೊಂಡು ತನ್ನದೇ ಆದಂತಹ ಕಾರ್ಯಕರ್ತರ ಪಡೆಯನ್ನು ಕೆಲಸದಲ್ಲಿ ತೊಡಗಿಸಿದೆ.
ಎಲ್ಲವೂ ಅಷ್ಟಕ್ಕಷ್ಟೆ: ಗುಲ್ಬರ್ಗ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಎಂಎಲ್ಸಿ ಅಮರನಾಥ ಪಾಟೀಲ್, ಮಾಜಿ ಎಂಎಲ್ಸಿ ಶಶಿಲ್ ನಮೋಶಿ, ಮಾಜಿ ಮಂತ್ರಿ ಬೆಳಮಗಿ, ಜಿಲ್ಲಾಧ್ಯಕ್ಷ ರಾಜಕುಮಾರ್ ಪಾಟೀಲ್ ತೇಲ್ಕೂರ್, ನಗರಾಧ್ಯಕ್ಷ ವಿದ್ಯಾಸಾಗರ ಶಾಬಾದಿ, ಯುವ ಮೋರ್ಚಾ, ಮಹಿಳಾ ಮೋರ್ಚಾ... ಹೀಗೆ ಇಲ್ಲಿನ ಬಿಜೆಪಿ ನಾಯಕರು, ವಿವಿಧ ವಿಭಾಗಗಳು, ಮೋರ್ಚಾಗಳ ಪರಸ್ಪರ ಸಂಬಂಧಗಳು ಅಷ್ಟೊಂದು ಮಧುರವಾಗಿಲ್ಲ ಎಂಬುದು ಅನೇಕ ಸಂದರ್ಭಗಳಲ್ಲಿ ರಟ್ಟಾದ ಗುಟ್ಟು. ಹೀಗಾಗಿ ಮೋದಿ ರ್ಯಾಲಿ ಒಡೆದ ಮನೆಯಂತಿರುವ ಬಿಜೆಪಿಯಲ್ಲಿ ಒಂದು ಹಂತದಲ್ಲಿ ಅಗ್ನಿ ಪರೀಕ್ಷೆಯಂತಾಗಿರುವುದು ಕಟು ವಾಸ್ತವ.
ದೇಣಿಗೆ ಸಂಗ್ರಹಿಸಲೂ ಮುಂದಾಗುತ್ತಿಲ್ಲ: ಭಾರತ ಗೆಲ್ಲಸಿ ರ್ಯಾಯ ಖರ್ಚು- ವೆಚ್ಚ ವಿಚಾರದಲ್ಲಿಯೂ ಸ್ಥಳೀಯ ನಾಯಕರು, ಹಾಲಿ, ಮಾಜಿ ಶಾಸಕರು, ಮಾಜಿ ಮಂತ್ರಿಗಳಾದಿಯಾಗಿ ಅನೇಕರು ಮೌನವಾಗಿರುವುದು ಸಹ ಸಂಘಟನೆಯ ಹಂತದಲ್ಲಿ ಚರ್ಚೆಯಾಗುವಂತಾಗಿದೆ. ರ್ಯಾಲಿ ಖರ್ಚು 1.25 ಕೋಟಿ ಎಂದು ಅಂದಾಜಿಸಲಾಗಿದ್ದು ಈ ಹಣ ದೇಣಿಗೆ ಮೂಲಕ ಸಂಗ್ರಹಿಸಲು ಬಿಜೆಪಿ ಮುಂದಾಗಿದೆ. ಇಂತಹ ಹಲವು ವಿಚಾರಗಳಲ್ಲಿ ಸ್ಥಳೀಯ ಪಕ್ಷ ಸಂಘಟನೆಯಲ್ಲಿ ಹುರುಪಿಲ್ಲ ಎಂದ ಮೇಲೆ ಹೇಗೆ ಎಂಬುದೇ ರ್ಯಾಲಿ ಉಸ್ತುವಾರಿ ಹೊತ್ತಿರುವ ಹಿರಿಯ ನಾಯಕರ ಪ್ರಶ್ನೆ.
ಗುಲ್ಬರ್ಗ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ತಳಹದಿ ಇದೆ, ಮತದಾರರಿದ್ದಾರೆ. ಆದರೆ ಜನರ ಮನಸ್ಸನ್ನು ಗೆಲ್ಲುವ, ಅವರನ್ನೆಲ್ಲ ಕಮಲದತ್ತ ಆಕರ್ಷಿಸುವ ವರ್ಚಸ್ಸಿನ ಸ್ಥಳೀಯ ನಾಯಕತ್ವ ಕೊರತೆ ಬಲವಾಗಿ ಕಾಡುತ್ತಿದೆ ಎಂಬಂಶದ ಮೇಲೆ ಭಾರತ ಗೆಲ್ಲಿಸಿ ರ್ಯಾಲಿ ಸಂದರ್ಭವೂ ಬೆಳಕು ಚೆಲ್ಲಿದಂತಾಗಿದೆ.
ಬಿಎಸ್ವೈ ಸಭೆಯಲ್ಲಿ ಬಹಿರಂಗ
ಮೋದಿ ರ್ಯಾಲಿ ಸಿದ್ಧತೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಗುಲ್ಬರ್ಗಕ್ಕೆ ಬಂದಿದ್ದ ಮಾಜಿ ಸಿಎಂ ಯಡಿಯೂರಪ್ಪ ಕರೆದಿದ್ದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ನಾಯಕರಲ್ಲಿ ಸಾಮರಸ್ಯದ ಕೊರತೆಯ ವಿಚಾರವೇ ಪ್ರಮುಖವಾಗಿ ಪ್ರಸ್ತಾಪವಾಗಿದ್ದು ವಿಶೇಷ.
ಸಾಮರಸ್ಯ ಕೊರತೆಗೆ ಪರಿಹಾರ ಕಂಡುಹಿಡಿದರೆ ಮಾತ್ರ ಗುಲ್ಬರ್ಗ ಸೇರಿದಂತೆ ಹೈ-ಕ ಮೂರು ಲೋಕಸಭೆ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಭವಿಷ್ಯವಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ವಾಲ್ಮೀಕಿ ನಾಯಕ, ಸುನೀಲ ವಲ್ಯಾಪೂರೆ ಸೇರಿದಂತೆ ಅನೇಕ ಪ್ರಮುಖರು ನಿರೀಕ್ಷೆಯಂತೆ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಲ್ಲಿ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ ಎಂದು ಅವರ ಆಪ್ತರೇ ಹೇಳುತ್ತಿದ್ದಾರೆ.
ಇದೆಲ್ಲದರ ಜೊತೆಗೇ ಪಕ್ಷ ಅಧಿಕಾರದಲ್ಲಿದ್ದಾಗ ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ಅಧ್ಯಕ್ಷರಾಗಿ, ಸದಸ್ಯರಾಗಿ ನೇಮಕಗೊಂಡು ಪಕ್ಷ ಸಂಘಟನೆಯ ಸಿಹಿಫಲ ಉಂಡವರೂ ಪಕ್ಷಕ್ಕಾಗಿ ತನುಮನದಿಂದ ಸೇವೆ ಸಲ್ಲಿಸುವಲ್ಲಿ ನಿರೀಕ್ಷೆಯಂತೆ ಮುಂದೆ ಬಾರದ ಸಂಗತಿಯೂ ಪಕ್ಷ ಸಂಘಟನೆಗೆ ತೀವ್ರ ಪೆಟ್ಟು ನೀಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇಂತಹ ಸಂಚಿತ ಅಸಮಾಧಾನಗಳು ಭಾರತ ಗೆಲ್ಲಿಸಿಯಂತಹ ರ್ಯಾಲಿಗಳ ಸಂದರ್ಭದಲ್ಲಿ ತಮ್ಮದೇ ಆದ ರೀತಿಯಲ್ಲಿ ಚಾಚಿಕೊಂಡು ಪಕ್ಷ ಸಂಘಟನೆಯತ್ತಲೇ ಜನರ ಲಕ್ಷ ಕೇಂದ್ರೀಕೃತವಾಗುವಂತೆ ಮಾಡುತ್ತಿರುವುದು ಪಕ್ಷದ ಸಂಘಟನೆ ವಿಚಾರ ಇನ್ನೂ ಹೆಚ್ಚು ಚರ್ಚೆಗೆ ಬರುವಂತಾಗಲು ಕಾರಣವಾದಂತಾಗಿದೆ. 2009ರ ಲೋಕಸಭೆಯಲ್ಲಿ ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ತೀವ್ರ ಪೈಪೋಟಿ ನೀಡಿತ್ತು. ಈ ಬಾರಿ ಹೇಗಾದರೂ ಮಾಡಿ ಕಮಲ ಅರಳಿಸುವ ಇರಾದೆ ಪಕ್ಷಕ್ಕಿದ್ದರೆ, ಇಲ್ಲಿನ ನಾಯಕರಲ್ಲಿ ಸಾಮರಸ್ಯ ಬರ ಕಾಡುವಂತಾಗಿದೆ.
-ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

