ಶಿವರಾತ್ರಿಗಾಗಿ 47 ಅಡಿ ಲಿಂಗ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಫೆ.25
ಈ ಬಾರಿಯ ಶಿವರಾತ್ರಿಯನ್ನು ಸಂಭ್ರಮ ಸಡಗರಗಳೊಂದಿಗೆ ಆಚರಿಸುವಂತೆ ಮಾಡಲು ಇಲ್ಲಿನ ಆಸ್ತಿಕ ಭಕ್ತರಿಗೆ ನೆರವಾಗಲು ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಸೇಡಂ ರಸ್ತೆಯ ಗೀತಾ ನಗರದಲ್ಲಿ ನಿರ್ಮಿಸುತ್ತಿರುವ ರೀಟ್ರೀಟ್ ಸೆಂಟರ್, ಅಮೃತ ಸರೋವರದ ಪ್ರಥಮ ಹಂತದ ಉದ್ಘಾಟನೆ ಜೊತೆಗೆ ದ್ವಾದಶ ಜ್ಯೋತಿರ್ಲಿಂಗಗಳನ್ನು ಸ್ಥಾಪಿಸಿ, ಜನತೆಗೆ ದರ್ಶನಕ್ಕೆ ವ್ಯವಸ್ಥೆ ಮಾಡಿದೆ.
ಪರಮಾತ್ಮನು ಒಬ್ಬನೇ ಎಂದು ಪ್ರತಿಪಾದಿಸಲು, ಜ್ಯೋತಿ ಸ್ವರೂಪನಾದ ಅವನನ್ನು ಸಾಕಾರದಲ್ಲಿ ಕಾಣಲು ಸಾಂಕೇತಿಕವಾಗಿ ಶಿವಲಿಂಗ ಸ್ಥಾಪಿಸಿ ಪೂಜಿಸುವ ಪರಂಪರೆಗೆ ಬ್ರಹ್ಮಕುಮಾರಿ ವಿದ್ಯಾಲಯ ಪ್ರಮುಖರು, ಗೀತಾ ನಗರದಲ್ಲಿ ಈ ಸಾಹಸಕ್ಕೆ ಕೈ ಹಾಕಿದ್ದಾರೆ.
ಈ ಕಲ್ಪನೆಯ ಮೇರೆಗೆ ಬ್ರಹ್ಮಾಕುಮಾರಿಸ್ ರಿಟ್ರೀಟ್ ಸೆಂಟರ್‌ನವರು ಗುಲ್ಬರ್ಗ ನಗರದ ಸೇಡಂ ರಸ್ತೆಯ ಗೀತಾ ನಗರದಲ್ಲಿ ಬೃಹತ್ ಶಿವಲಿಂಗವನ್ನು ನಿರ್ಮಿಸಿ ಜನರ ಗಮನ ಸೆಳೆದಿದ್ದಾರೆ. ಲಂಡನ್‌ನಲ್ಲಿ ಬ್ರಹ್ಮಕುಮಾರಿ ವಿದ್ಯಾಲಯದ ಕಾರ್ಯಚಟುವಟಿಕೆಗಳನ್ನೆಲ್ಲ ನೋಡಿಕೊಳ್ಳುತ್ತಿರುವ ಸಹೋದರಿ ಜಯಂತಿ ಲಿಂಗವನ್ನು ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸಿದ್ದಾರೆ. ಸಾರ್ವಜನಿಕರಿಗೆ ಸೌಕರ್ಯ: ಫೆ. 25ರಿಂದ 3ನೇ ಮಾರ್ಚ್‌ವರೆಗೆ ಶಿವರಾತ್ರಿ ನಿಮಿತ್ತ ಅನೇಕ ಕಾರ್ಯಕ್ರಮಗಳು ಇಲ್ಲಿ ನಡೆಯುವವು. ಎನ್‌ಇಕೆಎಸ್‌ಆರ್ಟಿಸಿ ಈ 6 ದಿನಗಳ ಕಾಲ ಮಧ್ಯಾಹ್ನ 3ರಿಂದ ರಾತ್ರಿ 9 ಗಂಟೆಯವರೆಗೆ ಪ್ರತಿ ಬಡಾವಣೆಯಿಂದ ಉಚಿತ ಬಸ್ ಸೌಲಭ್ಯ ವ್ಯವಸ್ಥೆ ಮಾಡಿದೆ ಎಂದು ಬ್ರಹ್ಮಾಕುಮಾರಿ ಅಮೃತ ಸರೋವರ ಅಧ್ಯಕ್ಷೆ ವಿಜಯಾ ತಿಳಿಸಿದ್ದಾರೆ.
ಗಂಟೆಯ ಸದ್ದಿಲ್ಲದೆ, ನೈವೇದ್ಯದ ಗೋಜಿಲ್ಲದೆ ಶಾಂತವಾದ ನೆಮ್ಮದಿಯ ಶಿವಭಕ್ತಿಯ ಸಾರವನ್ನು ಆಲಿಸಬಹುದು. ಸಾರ್ವಜನಿಕರು ಈ ಭವ್ಯ ಶಿವಲಿಂಗದ ಜೊತೆ ಜೊತೆಗೆ 12 ಜ್ಯೋತಿರ್ಲಿಂಗಗಳ ದರ್ಶನ ಪಡೆದು ಪುನೀತರಾಗಲಿ ಎಂದು ವಿಜಯ ಹೇಳಿದ್ದಾರೆ. ಸಗೀತಾ ನಗರಕ್ಕೆ ಬಂದು ಹೋಗಲು ಬಸ್ ಸೌಕರ್ಯಕ್ಕಾಗಿ ಆಸಕ್ತರು (08472) 246 149 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ಸಹೋದರಿ ಜಯಂತಿ ಸಂದೇಶ: ಒತ್ತಡದಿಂದ ಕೂಡಿರುವ ಬದುಕಿನಲ್ಲಿ ನೆಮ್ಮದಿಗಾಗಿ ಅತ್ತಿತ್ತ ಅರಸದೆ ಪರಮಾತ್ಮನ ಪ್ರಾರ್ಥನೆ ಮಾಡಬೇಕು. ಧನಾತ್ಮಕ ಚಿಂತನೆಯೊಂದಿಗೆ ಬದುಕಿನಲ್ಲಿ ಉನ್ನತಿ ಸಾಧಿಸಬೇಕು ಎಂದು ಬಹ್ರಹ್ಮಕುಮಾರಿ ವಿಶ್ವವಿದ್ಯಾಲಯದ ಯೂರೋಪ್ ರಾಷ್ಟ್ರಗಳ ಆಡಲಿತ ನಿರ್ವಾಹಕಿ, ಸಹೋದರಿ ಜಯಂತಿ ಕರೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಘಟನೆಗಳನ್ನು ನೋಡುವ ದೃಷ್ಟಿಕೋನ ಬದಲಿಸಿಕೊಲ್ಳಬೇಕು. ಸದಾಕಾಲ ಕೆಟ್ಟದ್ದನ್ನೇ ಯೋಚಿಸದೆ, ಒಲ್ಳೆಯದು ನಡೆಯುತ್ತಿದೆ ಎಂದು ಯೋಚಿಸಿದರೆ ಧನಾತ್ಮಕ ಚಿಂತನೆಯೊಳಗೆ ಕಾಲ ಕಳೆಯುವುದು ಸಾಧ್ಯ ಎಂದು ಹೇಳಿದರು.
ವಿದೇಶಗಳಲ್ಲಿ ಶೇ. 50 ರಷ್ಟು ವಿದೇಶಿಯರೇ ಬ್ರಹ್ಮಕುಮಾರಿ ವಿದ್ಯಾಲಯದ ರಾಜಯೋಗದೆಡೆ ಆಕರ್ಷಿತರಾಗಿದ್ದಾರೆ. ಲಂಡನ್‌ನಲ್ಲಿಂದು ಜನತೆ ಕೌಟುಂಬಿಕ ಸಮಸ್ಯೆಗಳಿಂದ ಜರ್ಝರಿತರಾಗಿದ್ದಾರೆ. ಅಂತಹವರಿಗೆಲ್ಲರಿಗೂ ಶಾಂತಿ- ನೆಮ್ಮದಿಯ ಕೇಂದ್ರವಾಗಿ ಬ್ರಹ್ಮಕುಮಾರಿ ವಿದ್ಯಾಲಯ ಘಟಕಗಳು ಯೂರೋಪ್ ಭಾಗದಲ್ಲಿನ 28 ಕ್ಕೂ ಹೆಚ್ಚು ದೇಶಗಳಲ್ಲಿ ಕೆಲಸ ಮಾಡುತ್ತಿವೆ ಎಂದರು. ಇವರೊಂದಿಗೆ ಆಗಮಿಸಿರುವ ರೋಸ್ ಮೇರಿ ಇವರು ಮಾತನಾಡಿ, ಬ್ರಹ್ಮಕುಮಾರಿ ವಿದ್ಯಾಲಯದ ರಾಜಯೋಗ ಇಂದಿನ ಒತ್ತಡದ ಬದುಕಿಗೆ ದಿವ್ಯೌಷಧಿ ಎಂದರು. ಬ್ರಹ್ಮಕುಮಾರಿ ವಿದ್ಯಾಲಯದ ಗುಲ್ಬರ್ಗ ಘಟದ ಮುಖ್ಯಸ್ಥೆ ವಿಜಯ ಅಕ್ಕ, ಸಹೋದರಿ ರಾಗಿಣಿ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಬ್ರಹ್ಮಾಕುಮಾರಿ ರಿಟ್ರೀಟ್ ಸೆಂಟರ್ ಸುತ್ತ...
ಬೆಟ್ಟದಡಿ ಬೃಹತ್ ಶಿವಲಿಂಗ: ಸ್ವಾಗತ ಭವನದೆದುರಿಗೆ ನಿಂತರೆ ನಿಮಗೆ ನೇರವಾಗಿ ಕಾಣುವುದು 47 ಅಡಿ ಎತ್ತರದ ಬೃಹತ್ ಶಿವಲಿಂಗ, ಶಿವನು ಗಿರಿಯಲ್ಲಿ ನೆಲೆಸುತ್ತಾನೆ ಎಂದು ಹೇಳಲಾಗುತ್ತದೆ. ಗೀತಾನಗರದ ಕೊನೆಯಂಚಿನಲ್ಲಿ ಹಬ್ಬಿಕೊಂಡ ಎರಡು ಬೆಟ್ಟಗಳ ಮಧ್ಯ ನಿರ್ಮಾಣಗೊಂಡ ಬೃಹತ್ ಶಿವಲಿಂಗ ಚುಂಬಕದಂತೆ ಆಕರ್ಷಿಸುತ್ತದೆ.
ಜಾನಕಿ ಜಲಧಾರೆ: ಶಿವಲಿಂಗದತ್ತ ನೀವು ಹೋದರೆ ನಿಮ್ಮ ಕಿವಿಗಳಿಗೆ ನೀರು ಇಳಿದು ಬರುವ ಶಬ್ದ ಲಯಬದ್ದ, ಮಧುರ ಸಂಗೀತದಂತೆ ಕೇಳುತ್ತದೆ. ಶಿವಲಿಂಗದಡಿಯಿಂದ ನಿರಂತರವಾಗಿ ಹರಿದು ಬರುತ್ತಿರುವ ಜಲಧಾರೆ ಕಂಡರೆ ಮನಸ್ಸಿಗೆ ನೆಮ್ಮದಿ ಮೂಡುತ್ತದೆ.
ದ್ವಾದಶ ಜ್ಯೋತಿರ್ಲಿಂಗಗಳು: ಈ ನಿಮಿತ್ತ ಭಾರತದಲ್ಲಿ ನಾಲ್ಕು ನಿಟ್ಟಿನಲ್ಲಿ ಹನ್ನೆರಡು ಜ್ಯೋತಿರ್ಲಿಂಗಗಳನ್ನು ಸ್ಥಾಪಿಸಿ ಪೂಜಿಸಲಾಯಿತು. ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಒಂದು ಸಲ ದ್ವಾದಶ ಜ್ಯೋತಿಲಿಂಗಗಳ ದರ್ಶನ ಪಡೆದರೆ ಜೀವನ ಸಾರ್ಥಕ ಎಂಬ ನಂಬಿಕೆ. ಇಂಥದೊಂದು ಪ್ರಯತ್ನ ಇಲ್ಲಿ ಮಾಡಲಾಗಿದೆ. ಹನ್ನೆರಡು ಜ್ಯೋತಿರ್ಲಿಂಗಗಳು ಸ್ಥಾಪನೆಗೊಂಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

