ಗುಲ್ಬರ್ಗದಲ್ಲಿ ಮಳೆ ಆರ್ಭಟ
ಗುಲ್ಬರ್ಗ: ನಗರ ಹಾಗೂ ಸುತ್ತಲಿನ ಅನೇಕ ಸ್ಥಳಗಳಲ್ಲಿ ಗುರುವಾರ ಗುಡುಗು- ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿದಿದೆ. ಮಳೆಗಿಂತ ಗಾಳಿ, ಗುಡುಗಿನ ಆರ್ಭಟವೇ ಜೋರಾಗಿತ್ತು. ನಗರದಲ್ಲಂತೂ ಅನೇಕ ಸಾರಿ ಗುಡುಗಿನ ಆರ್ಭಟ ಕೇಳಿಬಂತಲ್ಲದೆ ಜನತೆ ಮಳೆ ಸುರಿಯುವ ಅವಧಿ ಪೂರ್ತಿ ರಸ್ತೆಗಳಲ್ಲಿ ಸಂಚರಿಸದೆ ಮನೆಗಳಲ್ಲಿ, ತಾವಿರುವ ತಾಣಗಳಲ್ಲೇ ಆಸರೆ ಪಡೆದುಕೊಂಡರು. ಸಿಡಿಲಿನ ಸಪ್ಪಳಕ್ಕೆ ಬೆಚ್ಚಿದಂತಿದ್ದ ಜನಜೀವನ ಅಕಾಲಿಕ ಮಳೆಗೆ ಅಸ್ತವ್ಯಸ್ತಗೊಂಡಿತ್ತು.
ಗುಲ್ಬರ್ಗದಲ್ಲಿ ಬುಧವಾರ ಸಂಜೆ ಅಲ್ಪಕಾಲ ಮಳೆ ಸುರಿದಿತ್ತು. ಆದರೆ ಶಿವರಾತ್ರಿಯ ಗುರುವಾರದ ಈ ಮಳೆ ಅರ್ಧ ಗಂಟೆಯವರೆಗೂ ಸುರಿಯುವ ಮೂಲಕ ಜನತೆಯನ್ನು ಆತಂಕಕ್ಕೆ ದೂಡಿತ್ತು. ಅನೇಕರು ಅಕಾಲಿಕ ಮಳೆಗೆ ತೊಂದರೆ ಅನುಭವಿಸಿದರು. ರೈತರು ಹೊಲ- ಗದ್ದೆಗಳಲ್ಲಿ ರಾಶಿಯಾಗಿದ್ದ ದವಸ- ಧಾನ್ಯಗಳನ್ನು ಆಸರೆ ಇಲ್ಲದೆ ಸಂಗ್ರಹಿಸಿದ್ದರಿಂದ ದಿಢೀರನೆ ಸುರಿದ ಮಳೆಗೆ ಹಾನಿಗೀಡಾಗಿರುವ ವರದಿಗಳು ಬಂದಿವೆ.
ಪರಿಹಾರಕ್ಕೆ ಆಗ್ರಹ: ಜೇವರ್ಗಿ ತಾಲೂಕಿನ ಭೂಸಗಾ, ಬಿ ಹಾಗೂ ಕೆ, ಭೀಮಾ ನದಿಯ ದಂಡೆಯ ಮೇಲಿರುವ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ ಧಾರಾಕಾರವಾಗಿ ಆಲಿಕಲ್ಲಿನಿಂದ ಕೂಡಿದ ಮಳೆ ಸುರಿದು, ಜಮೀನುಗಳ ಬೆಳೆಗಳು ನಷ್ಟವಾಗಿದ್ದು, ಸರ್ಕಾರ ರೈತರಿಗೆ ಪರಿಹಾರ ನೀಡಬೇಕೆಂದು ಜಿಪಂ ಸದಸ್ಯೆ ಶೋಭಾ ರಾಣಿ ಒತ್ತಾಯಿಸಿದ್ದಾರೆ. ಬೆಳೆ ಹಾನಿ ಬಗ್ಗೆ ಪ್ರತಿಕ್ರಯಿಸಿರುವ ಅವರು, ಸರ್ಕಾರ ಕೂಡಲೇ ತಜ್ಞರ ಸಮಿತಿ ರಚಿಸಿ, ಬೆಳೆ ಹಾನಿ ಬಗ್ಗೆ ಅಧ್ಯಯನ ನಡೆಸಬೇಕು ಹಾಗೂ ಬೆಳೆ ನಷ್ಟವಾಗಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಆತಂಕದಲ್ಲಿ ರೈತರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೋಡ ಮಸುಕಿದ ವಾತಾವರಣ ಕಂಡು ಬಂದಿದ್ದು, ಇದರಿಂದ ರೈತರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

