ಗುಲ್ಬರ್ಗಾ

ಅದಲು- ಬದಲು: ಹೂತ ಶವ ಹಸ್ತಾಂತರ

Published On :

ಗುಲ್ಬಗ/ಸೇಡಂ: ಇತ್ತೀಚೆಗೆ ಸಂಭವಿಸಿದ್ದ ಬೆಂಗಳೂರು-ನಾಂದೇಡ್ ಲಿಂಕ್ ಎಕ್ಸ್ಪ್ರೆಸ್ ರೈಲು ದುರಂತದಲ್ಲಿ ಸೇಡಂನ ಕುರುಕುಂಟಾ ಹಾಗೂ ಮಹಾರಾಷ್ಟ್ರದ ಔರಂಗಾಬಾದ್ನ ನಿವಾಸಿಗಳಿಬ್ಬರ ಶವಗಳು ಅದಲು ಬದಲಾಗಿ ವಾರಸುದಾರರಿಗೆ ಹಸ್ತಾಂತರವಾಗಿದ್ದವು. ಡಿಎನ್ಎ ಪರೀಕ್ಷೆಯಿಂದ ಈ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬುಧವಾರ ಹೂತಿದ್ದ ಶವವನ್ನು ಹೊರ ತೆಗೆದು ಮೂಲ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ದುರಂತಕ್ಕೀಡಾದ ರೈಲಿನ ಬಿ-1 ಬೋಗಿಯಲ್ಲಿ ಕುರುಕುಂಟಾದ ಭೀಮಯ್ಯ ಶಾಬಾದ್ಕರ್ ಪ್ರಯಾಣಿಸುತ್ತಿದ್ದರು. ದುರಂತದ ಮರುದಿನವೇ ಅವರ ಬಂಧುವರ್ಗ ಅಲ್ಲಿಗೆ ಧಾವಿಸಿ ಭೀಮಯ್ಯನವರ ಶವ ಗುರುತಿಸಿ ಕೊಂಡೊಯ್ದು ಸಂಸ್ಕಾರ ನಡೆಸಲಾಗಿತ್ತು.
ನಂತರ ನಡೆದ ಡಿಎನ್ಎ ಪರೀಕ್ಷೆಯಲ್ಲಿ ಔರಂಗಾಬಾದ್ನ ಈಶ್ವರಿ ನಗರಿ ಎಂಬುವವರ ಶವ ಕುರುಕುಮಟೀದ ಭೀಮಯ್ಯ ಎಂದು ತಪ್ಪಾಗಿ ಗುರುತಿಸಿ ಹಸ್ತಾಂತರವಾದ ಸಂಗತಿ ಬೆಳಕಿಗೆ ಬಂತು. ತಕ್ಷಣ ರೇಲ್ವೆ ಇಲಾಖೆ ಸಿಬ್ಬಂದಿ ಕುರುಕುಂಟಾದ ಭೀಮಯ್ಯನವರ ಕುಟುಂಬವನ್ನು ಸಂಪರ್ಕಿಸಿ, ಆದ ಅನಾಹುತದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು.
ಹೂತಿದ್ದ ಶವ ಹೊರಕ್ಕೆ: ಬುಧವಾರ ಆಂಧ್ರದ ಪೊಲೀಸ್ ಸಿಬ್ಬಂದಿ, ಔರಂಗಾಬಾದ್ನ ಈಶ್ವರ ನಗರಿ ಕುಟುಂಬ ಸದಸ್ಯರು ಸೇಡಂನ ಕುರುಕುಂಟಾಕ್ಕೆ ಆಗಮಿಸಿದ್ದರು. ಅಪರ ಎಸಿಯಾಗಿರುವ ತಹಶೀಲ್ದಾರ್ ಪ್ರಕಾಶ ಕುದರಿ ಹಾಗೂ ಸಿಪಿಐ, ಪಿಎಸ್ಐ ಸಮ್ಮುಖದಲ್ಲಿ ಹೂತಿದ್ದ ಶವವನ್ನು ಹೊರ ತೆಗೆದು ನಗರಿ ಕುಟುಂಬಕ್ಕೆ ಹಸ್ತಾಂತರಿಸಿದರು.
ಊರವರು, ಹಿರಿಯರು, ಆಂಧ್ರ ಡಿಎಸ್ಪಿ ಸುದರ್ಶನ್, ಸೇಡಂ ಸಿಪಿಒ ಸಂದೀಪ್ ಮುರುಗೌಡ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು. ಭೀಮಯ್ಯ ಶಾಬ್ದಾದ್ಕರ್ ಅವರ ಶವ ಬೆಂಗಳೂರಿನಿಂದ ಸೇಡಂನ ಕುರುಕುಂಟಾಕ್ಕೆ ಬುಧವಾರ ಮಧ್ಯರಾತ್ರಿ ತಲುಪುವ ನಿರೀಕ್ಷೆ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್ ಸಂಬಂಧಿಯಾದ ಮೃತ ಭೀಮಯ್ಯ ತಾಪಂ ಮಾಜಿ ಅಧ್ಯಕ್ಷರ ಪುತ್ರಿಯ ಮದುವೆ ಸಮಾರಂಭದಲ್ಲಿ ಭಾಗವಹಿಸಿ ದುರಂತಕ್ಕೀಡಾದ ನತದೃಷ್ಟ ರೈಲಿನಲ್ಲಿ ಊರಿಗೆ ಮರಳುತ್ತಿದ್ದರು. ಬೋಗಿ ಬಿ-1ರ ಸೀಟ್ 7 ಮತ್ತು 20ರಲ್ಲಿರುವವರ ವಿಚಾರದಲ್ಲಿ ಗೊಂದಲವಿದ್ದ ಕಾರಣ ರೇಲ್ವೆ ಅಧಿಕಾರಿಗಳು ಶವ ಹಸ್ತಾಂತರಿಸುವಾಗಲೇ ಶವವನ್ನು ಹೂತು ಸಂಸ್ಕಾರ ನಡೆಸುವಂತೆ ತಿಳಿಸಿದ್ದರು. ಅದರಂತೆಯೇ ಭೀಮಯ್ಯ ಅವರ ಅಂತ್ಯ ಸಂಸ್ಕಾರ ನಡೆದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.