ಗುಲ್ಬರ್ಗಾ

ಚರಗಾ ಚೆಲ್ಲಿ ಖುಷಿಪಟ್ಟ ರೈತರು

Published On :

ಕ.ಪ್ರ. ವಾರ್ತೆ, ಗುಲ್ಬರ್ಗ, ಜ.1
ಯವ್ವಾ.., ಒಕ್ಕಲಗ್ಯಾನ ಹೆಂಡತಿ ನಾ, ಚರಗ ಹೊಡೀಬೇಕ ಎಳ್ಳಮಾಸಿ ದಿನ... ಎಂದು ಜನಪದರ ಹಾಡಿನಂತೆ ರೈತರೆಲ್ಲರೂ ಕುಟುಂಬ ಸಮೇತ ಪವಿತ್ರ ಮತ್ತು ವಿಶಿಷ್ಟ ಎಳ್ಳಮಾವಾಸ್ಯೆಯನ್ನು ಹೊಸ ವರ್ಷದ ದಿನವಾದ ಬುಧವಾರ ಹೊಲ- ಗದ್ದೆಗಳಲ್ಲಿ ಆಚರಿಸಿ ಖುಷಿಪಟ್ಟರು.
ಈ ಬಾರಿಯ ಎಳ್ಳಮಾವಾಸ್ಯೆ ಹೊಸ ವರ್ಷದ ಮೊದಲ ದಿನವೇ ಬಂದಿದ್ದರಿಂದ ಸಂಭ್ರಮ ದ್ವಿಗುಣವಾಗಿತ್ತು. ಎಲ್ಲರೂ ಪರಸ್ಪರ ಸೇರಿ ಕೈ ಕುಲುಕುತ್ತ ಎಳ್ಳಮಾವಾಸ್ಯೆಯ ಜೊತೆಗೇ ಹೊಸ ವರ್ಷದ ಶುಭಾಷಯಗಳನ್ನು ವಿನಿಮಯ ಮಾಡಿಕೊಂಡದ್ದು ವಿಸೇಷವಾಗಿತ್ತು.
ಮಳೆ ಬಂದರೆ ಬೆಳೆ ಚಿಂತೆ, ಬೆಳೆ ಬಂದರೆ ಬೆಲೆಯ ಚಿಂತೆ ಎಂಬಂತೆ ಸದಾಕಾಲ ಅನಿಶ್ಚಿತತೆ ಸುಳಿಗಳಲ್ಲೇ ಸಿಲುಕಿ ಒದ್ದಾಡುವ ಮಣ್ಣಿನ ಮಕ್ಕಳೆಲ್ಲರೂ ಕುಟುಂಬದವರು, ಬಂಧು ಬಾಂಧವರ ಸಮೇತ ಸಂತಸದಿಂದ ಎಳ್ಳಮಾವಾಸ್ಯೆ ಆಚರಿಸುತ್ತಾರೆ. ಕೃಷಿಯನ್ನಾವರಿಸಿರುವ ಆತಂಕ- ಅನಿಶ್ಚಿತತೆಗಳನ್ನೆಲ್ಲ ಮರೆತು ರೈತರೆಲ್ಲ ಕುಟುಂಬದವರೊಟ್ಟಿಗೆ ಖುಷಿಯಿಂದ ಇರೋದು ಎಳ್ಳಮಾವಾಸ್ಯೆ ದಿನ ಮಾತ್ರ.
ಭೂಮಿ ತಾಯಿಗೆ ಪೂಜೆ: ಮಾರ್ಗಶಿರ ಮಾಸದಲ್ಲಿ ಬರುವ ಎಳ್ಳಮಾವಾಸ್ಯೆ ಸುಗ್ಗಿಗೂ ಮುನ್ನ ಬರುವ ಹಿಗ್ಗಿನ ಹಬ್ಬ. ಹಾಲ್ದೆನೆ ಹೊಲದಲ್ಲೆಲ್ಲಾ ತೊನೆದಾಡುತ್ತಿರುವ ಕಾಲ. ಬಗೆಬಗೆಯ ಬೆಳೆಗಳು ಹಾಲ್ದೆನೆ ಬಿಟ್ಟು ಕುಳಿತಿರುವ ಈ ಸಂದರ್ಭ ಭೂಮಿ ತಾಯಿಯೇ ಗರ್ಭವತಿಯಾಗಿದ್ದಾಳೇನೋ ಎಂಬ ಅನುಭೂತಿ ನೀಡುತ್ತಿರುತ್ತದೆ. ಗರ್ಭಿಣಿಗೆ ಸೀಮಂತ(ಕುಪ್ಪಸ) ಮಾಡುವಂತೆ ಹೊಲದಲ್ಲೇ ಚಪ್ಪರ(ಕೊಂಪಿ) ಹಾಕಿ ಲಕ್ಷ್ಮೀದೇವಿಯನ್ನು ಆಹ್ವಾನಿಸಿ ಪೂಜಿಸುವ ರೈತರು ಬಳೆ- ಕುಪ್ಪಸ ತೊಡಿಸಿ ಅರಿಷಿಣ, ಕುಂಕುಮ, ಹೂವು ಏರಿಸಿ ಪೂಜಿಸಿದ ನೋಟಗಳು ಕಂಡು ಬಂದವು.
ಪಾಂಡವರಿಗೆ ಮತ್ತು ಲಕ್ಷ್ಮೀಗೆ ನೈವೇದ್ಯ ಅರ್ಪಿಸಿ ಧನ್ಯರಾಗುವರು. ಬೆಳೆಗೆ ಯಾವುದೇ ರೋಗ ಬಾಧೆ ಆಗಬಾರದು, ಒಳ್ಳೆಯ ಫಸಲು ಬರಲೆಂದು ಹೊಲ ಸುತ್ತಾಡಿ ಚರಗ(ದೇವಿ ನೈವೇದ್ಯ) ಸಿಂಪಡಿಸಿ ಉತ್ತಮ ಫಸಲಿಗಾಗಿ ರೈತರೊಟ್ಟಿಗೆ ಹೊಲಗದ್ದೆ ಹೋದವರೆಲ್ಲರೂ ಪ್ರಾರ್ಥಿಸಿದರು.
ಬಜ್ಜಿ- ಪಲ್ಯಕ್ಕೆ ಸಾಟಿಯೇ ಇಲ್ಲ: ಎಳ್ಳಮಾವಾಸ್ಯೆ ಅಡುಗೆ ಸ್ವಾದ ಸವಿದವರೇ ಬಲ್ಲರು, ಹತ್ತಾರು ನಮೂನೆ ಪಲ್ಲೆ, ತರಹೇವಾರಿ ರೊಟ್ಟಿ, ಪುಡಿ, ಚಟ್ನಿ... ಹೀಗೆ ಎಲ್ಲವೂ ದೇಶಿ ಅಡುಗೆ. ಮೆಂತ್ಯ, ಪಾಲಕ್, ಕೊತ್ತಂಬರಿ, ಈರುಳ್ಳಿ ಸೊಪ್ಪು, ಅವರೆ, ತೊಗರಿ, ಬಟಾಣಿ, ಶೇಂಗಾ, ಕಡಲೆ ಹಸಿಕಾಳು, ಕಡಲೆಹಿಟ್ಟು, ಹಸಿ ಮೆಣಸಿನಕಾಯಿ, ಹುಣಸೆಕಾಯಿ ಮತ್ತು ಶುಂಠಿ, ಬೆಳ್ಳುಳ್ಳಿ ಬಳಸಿ ರುಚಿಕಟ್ಟಾದ ಭಜ್ಜಿ ಪಲ್ಯೆ ಈ ದಿನದ ಆಕರ್ಷಣೆಯಾಗಿತ್ತು.
ಶೇಂಗಾ- ಎಳ್ಳಿನ ಹೋಳಿಗೆ, ಚಟ್ನಿ, ಸಜ್ಜೆ- ಜೋಳದ ರೊಟ್ಟಿ, ಜೋಳದ ಹಿಟ್ಟಿನ ದಪಾಟಿ, ಜೋಳದ ಅನ್ನ, ಅಂಬಲಿ, ಕಟಂಬಲಿ, ಅಕ್ಕಿಹುಗ್ಗಿ, ಜೋಳದ ಕಡಬು ಊಟದ ಸವಿ ಹೆಚ್ಚಿಸುತ್ತವೆ. ಬಜ್ಜಿಪಲ್ಯೆ ಸವಿ ಬಲ್ಲವರೆ ಬಲ್ಲರು. ಚರಗ ಚೆಲ್ಲಿ ಪೂಜಾದಿಗಳನ್ನು ಪೂರೈಸಿದ ರೈತರು ಗಿಡದ ನೆರಳಲ್ಲೋ, ಶ್ಯಾಮಿಯಾನಾದ ಆಸರೆಯಲ್ಲಿಯೋ ಸೇರಿಕೊಂಡು ಊಟದ ಸವಿ ಸವಿಯುತ್ತಿದ್ದ ನೋಟಗಳು ಕಂಡವು.
ಗುಲ್ಬರ್ಗ ವರ್ತುಲ ರಸ್ತೆಯ ಪಕ್ಕದಲ್ಲೇ ಇರುವ ಸುರೇಶ ಸಜ್ಜನ್ ಹೊಲದಲ್ಲಂತೂ ನೂರಾರು ಜನರಿಗೆ ಆಹ್ವಾನ ನೀಡಿ ಎಳ್ಳಮಾವಾಸ್ಯೆ ಸಂಭ್ರಮ ಆಚರಿಸಲಾಯ್ತು. ಇಲ್ಲಿನ ಸಂತಸದ ಸಂದರ್ಭಕ್ಕೆ ಭೋಜನಕೂಟ ಮೆರಗು ನೀಡಿತ್ತು. ಸುಭಾಸ ಸುಗೂರ್, ಎಂಸಿ ಗುಡೂರ್, ಚಂದ್ರಶೇಖರ, ಚಂದ್ರಶೇಖರ ಸಜ್ಜನ್ ಐಕೂರ್, ಮಕ್ಕಳಾದ ಶಿವಾನಿ ಸಜ್ಜನ್, ಶ್ರೀರಕ್ಷಾ ಅವಧಾನಿ, ಸುಧನ್ವ ಅವಧಾನಿ, ಶ್ರೀಶ ಕುಲ್ಕರ್ಣಿ ಸುಲೇಪೇಟ್ ಸೇರಿದಂತೆ ಅನೇಕರು ಸಂತಸದಲ್ಲಿ ಭಾಗವಹಿಸಿ ರೈತರಿಗೆ ಶುಭ ಕೋರಿದರು.
ಹೊಲಗದ್ದೆ ಇರದವರು ಕುಟುಂಬ ಸಮೇತ ನಗರದ ಸಾರ್ವಜನಿಕ ಉದ್ಯಾನವನ, ಶರಣಬಸವೇಶ್ವರ ಕೆರೆ ಉದ್ಯಾನವನ, ಕೆಸರಟಗಿ ಗಾರ್ಡನ್ ಪ್ರದೇಶ ಸೇರಿದಂತೆ ಅನೇಕ ಕಡೆಗಳಲ್ಲಿ ಸೇರಿ ಎಳ್ಳಮಾವಾಸ್ಯೆ ಮಜಾ ಅನುಭವಿಸಿದರು. ಮಕ್ಕಳು- ಮಹಿಳೆಯರು ಮೋಜು- ಮಜಾ ಮಾಡುತ್ತ ಇಡೀ ದಿನ ಹೊಲಗದ್ದೆ, ಉದ್ಯಾನವನ ಎಂದು ಹಸಿರು ಪರಿಸರದಲ್ಲೇ ಕಾಲಕಳೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.