ಗುಲ್ಬರ್ಗಾ

15 ದಿನಗಳಿಂದ ನೀರಿಗೆ ಹಾಹಾಕಾರ

Published On :

ಚಿತ್ತಾಪುರ: ತಾಲೂಕಿನ ಲಾಡ್ಲಾಪುರ ಗ್ರಾಪಂ ವ್ಯಾಪ್ತಿಯ ಹಣಿಕೇರಾ ಗ್ರಾಮದ ದಲಿತರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಅಲ್ಪಸಂಖ್ಯಾತ ಕುಟುಂಬಗಳೂ ಸಹ ಇದೇ ಸಮಸ್ಯೆಗೆ ಬಲಿಯಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ 15 ದಿನಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಇಲ್ಲಿ ಹಾಹಾಕಾರ ಭುಗಿಲೆದ್ದಿದೆ.
ಗ್ರಾಮದ ದಲಿತರ ಬಡಾವಣೆಯಲ್ಲಿರುವ ನೀರಿನ ಗುಮ್ಮಿ ಸೋರುತ್ತಿದ್ದ ಪರಿಣಾಮ ಗುಮ್ಮಿಯನ್ನು ತೆರವುಗೊಳಿಸಲಾಗಿದೆ. ಹೊಸ ಗುಮ್ಮಿ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ್ದ ಗ್ರಾಪಂ ಅಧ್ಯಕ್ಷರು ಹಾಗೂ ಅಧಿಕಾರಿಗಳು, ಇಂದಿಗೆ 15 ದಿನ ಕಳೆದರೂ ಕಾಮಗಾರಿ ಆರಂಭಿಸಿಲ್ಲ ಎಂದು ದಲಿತರು ಹಾಗೂ ಅಲ್ಪಸಂಖ್ಯಾತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನಾಗರಿಕ ಬದುಕು: ಸುಮಾರು 300 ಜನಸಂಖ್ಯೆ ಹೊಂದಿರುವ ಹಣಿಕೇರಾ ಗ್ರಾಮದ ದಲಿತರಿಗೆ ಕನಿಷ್ಟ ಕುಡಿಯುವ ನೀರು ಒದಗಿಸಲು ಗ್ರಾಪಂ ಆಡಳಿತಕ್ಕೆ ಸಾಧ್ಯವಾಗಿಲ್ಲ. ಸಾರ್ವಜನಿಕ ನಳಗಳ ಸೌಲಭ್ಯ ಒದಗಿಸಿಲ್ಲ. ರಸ್ತೆ, ನೀರು, ಶೌಚಾಲಯ ಹಾಗೂ ಬೀದಿ ದೀಪಗಳಿಲ್ಲದೆ ದಲಿತ ಕುಟುಂಬಗಳು ಅನಾಗರಿಕ ಬದುಕು ಸಾಗಿಸುವಂತಾಗಿದೆ.  ರಿಪೇರಿ ಮಾಡುವ ಭರವಸೆ ಕೊಟ್ಟು ಕೆಡವಿದ ಗ್ರಾಪಂ ಅಧಿಕಾರಿಗಳು ಪುನಃ ಗುಮ್ಮಿ ನಿರ್ಮಿಸದೆ ಜನರ ಗೋಳಾಟಕ್ಕೆ ಕಾರಣವಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಸಂಚಾಲಕ ಸಾಯಬಣ್ಣ ಕಳಶನ್ನೋರ ಆರೋಪಿಸಿದ್ದಾರೆ.
ನಿತ್ಯ ಪರದಾಟ: ಹತ್ತು ಅಡಿ ಎತ್ತರದ ಪೈಪ್ನಿಂದ ಬೀಳುವ ನೀರು ಪಡೆಯಲು ಹರಸಾಹಸ ಪಡುವಂತಾಗಿದೆ. ಗಾಳಿಯ ರಭಸಕ್ಕೆ ಅಡ್ಡಾದಿಡ್ಡಿ ಸಿಡಿಯುತ್ತಿರುವ ನೀರಿನಿಂದ ಕೊಡಗಳನ್ನು ತುಂಬಲಾಗುತ್ತಿಲ್ಲ. ನೀರು ಹಿಡಿಯುವ ಸಾಹಸದಲ್ಲಿ ಮೈಗೆ ಜಲಾಭಿಷೇಕವಾಗುತ್ತಿದೆ. ಚುನಾಯಿತ ಗ್ರಾಪಂ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಎಷ್ಟು ಸಲ ದೂರು ನೀಡಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಇದರಂದ ನಿತ್ಯ ನೀರಿಗಾಗಿ ಪರದಾಡುವಂತಾಗಿದೆ ಎಂದು ಬಡಾವಣೆಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕುಡಿಯುವ ನೀರಿನ ಸಮಸ್ಯೆ ಪರಿಹರಿಸದಿದ್ದರೆ ಲಾಡ್ಲಾಪುರ ಗ್ರಾಪಂ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ದಲಿತರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.