ಗುಲ್ಬರ್ಗಾ

ಆಟೋ ಚಾಲಕರಿಗೆ ರಸ್ತೆ ನಿಯಮ ಪಾಠ

Published On :

ಕ.ಪ್ರ. ವಾರ್ತೆ  ಗುಲ್ಬರ್ಗ  ಜ.23
ಗುಲ್ಬರ್ಗ ಜಿಲ್ಲಾ ಪೊಲೀಸ್ ಹಾಗೂ ಕರುಣಾ ಟೊಯೋಟಾ ಸಹಯೋಗದೊಂದಿಗೆ ನಗರದ ಆಟೋ ಚಾಲಕರಿಗೆ ರಸ್ತೆ ಸಾಕ್ಷರತೆಯ ಜಾಗೃತಿ ಕಾರ್ಯಕ್ರಮ ನಡೆಯಿತು.
ಪ್ರಯಾಣಿಕರು ನಿಂತಿದ್ದಾರೆಂದು ಮೊದಲು ಅವರನ್ನು ತಾವೇ ಕುಳ್ಳಿರಿಸಿಕೊಳ್ಳಬೇಕೆಂದು ರಸ್ತೆ ಮಧ್ಯದಲ್ಲೇ ಆಟೋ ನಿಲ್ಲಿಸಬೇಡಿ, ಇಂಡಿಕೇಟರ್ ಬಳಸಿ ತಿರುವು ತೆಗೆದುಕೊಳ್ಳಿ, ಪಾದಚಾರಿಗಳು ಕಂಡಾಗ ಸಾವಧಾನವಾಗಿದ್ದು ಆಟೋ ಚಾಲನೆ ಮಾಡಿರಿ, ಸಂಚಾರಿ ನಿಯಮಗಳನ್ನು ಪಾಲಿಸಿರಿ, ರಸ್ತೆಯಲ್ಲಿ ವೇಗದ ಚಾಲನೆ ಬೇಡ, ನಿಧಾನವಾಗಿ, ರಸ್ತೆಯಲ್ಲಿರುವ ಇತರೆ ವಾಹನಗಳು, ಚಾಲಕರ ಸ್ನೇಹಿಯಾಗಿ ಆಟೋ ಓಡಿಸಿರಿ...
ಇಲ್ಲಿನ ಸಂಚಾರಿ ಪೊಲೀಸ್ ಠಾಣೆಯವರು ಆಟೋ ಚಾಲಕರಿಗೆ ಹೇಳಿರುವ ಕಿವಿಮಾತುಗಳಿವು. ಇದೇ ಮೊದಲ ಬಾರಿಗೆ ಸಂಚಾರಿ ಪೊಲೀಸರು ಆಟೋ ಚಾಲಕರಿಗೆ ಸಂಚಾರ ಶಿಸ್ತು ಹೇಳಿಕೊಡುವ ದಿಸೆಯಲ್ಲಿ ಚಾಲಕರ ಸಭೆ ಕರೆದಿದ್ದರು. ಸಭೆಯಲ್ಲಿ ಸುದೀರ್ಘ ಅವಧಿ ನಿಯಮಗಳು, ಆಟೋ ಚಾಲಕರು ಮಾಡುತ್ತಿರುವ ತಪ್ಪುಗಳು, ಏನೆಲ್ಲಾ ಮಾಡಿದರೆ ಸುಗಮ ಸಂಚಾರ ಸಾಧ್ಯ ಎಂಬುದನ್ನೆಲ್ಲ ವಿವರವಾಗಿ ಹೇಳುತ್ತ ಸುಗಮ ಸಂಚಾರಕ್ಕೆ ಚಾಲಕರ ಸಹಕಾರ ಕೋರಿದರು.
ಪ್ರವಾಸಿಗರೊಂದಿಗೆ ಸೌಜನ್ಯದ ವರ್ತಿಸಿ: ಗುಲ್ಬರ್ಗಕ್ಕೆ ವಿದೇಶ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ಪ್ರವಾಸಿಗರೊಂದಿಗೆ ಆಟೋ ಚಾಲಕರು ಸೌಜನ್ಯಯುತವಾಗಿ ನಡೆದುಕೊಂಡು ಗುಲ್ಬರ್ಗ ಕೀರ್ತಿಯನ್ನು ಹರಡಬೇಕು, ಗುಲ್ಬರ್ಗ ಅಂದರೆ ತುಂಬ ಸೌಜನ್ಯದ ನಾಡು ಎಂಬುದು ನಿಮ್ಮಿಂದಲೇ ಎಲ್ಲರಿಗೂ ಪರಿಚಯಿಸಿರಿ ಎಂದವರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾಶೀನಾಥ ತಳಕೇರಿ.
ಆಟೋ ಚಾಲನೆ ಸಮಾಜದಲ್ಲಿ ಒಳ್ಳೆಯ ವೃತ್ತಿ. ಜನರ ಮೆಚ್ಚುಗೆಗೆ ಪಾತ್ರರಾಗುವ ಹಾಗೆ ಕೆಲಸ ಮಾಡಬೇಕು. ಸಾರಿಗೆ ನಿಯಮಗಳನ್ನು ಪಾಲಿಸುವುದರ ಮೂಲಕ ವಯೋವೃದ್ಧರು, ಮಕ್ಕಳು ಹಾಗೂ ಹೆಣ್ಣು ಮಕ್ಕಳೊಂದಿಗೆ ಮಾನವೀಯತೆಯ ದೃಷ್ಟಿಯಿಂದ ನಡೆದುಕೊಳ್ಳಬೇಕೆಂದರು.
ರಸ್ತೆಮಧ್ಯೆ ನಿಲ್ಲಿಸಬ್ಯಾಡ್ರಿ- ಇಂಡಿಕೇಟರ್ ಬಳಸ್ರಿ: ಸೂಪರ್ ಮಾರ್ಕೆಟ್ ಸಂಚಾರಿ ಪೊಲೀಸ್ ಠಾಣೆಯ ಸಿಪಿಐ ಡಿ.ಟಿ. ಪ್ರಭು ಪ್ರಾಸ್ತಾವಿಕ ಮಾತನಾಡಿ, ಗುಲ್ಬರ್ಗದಲ್ಲಿ ಆಟೋಗಳನ್ನಾಧರಿಸಿ ಹಲವು ಕುಟುಂಬಗಳು ಅವಲಂಬಿತವಾಗಿವೆ. ಆಟೋ ಚಾಲನೆ ಕನಿಷ್ಠ ಕೆಲಸವೆಂದು ಭಾವಿಸದೆ ಶ್ರದ್ಧೆ, ಘನತೆ ಮತ್ತು ಗೌರವದಿಂದ ಚಾಲನೆಯನ್ನು ಮಾಡಬೇಕು. ಆಟೋ ಚಾಲಕರು ತಮ್ಮ ಲೋಪದೋಷಗಳನ್ನು ಸರಿಪಡಿಸಿಕೊಂಡರೆ ಸಂಚಾರ ಸುಗಮವಾಗುತ್ತದೆ ಎಂದರು.
ನಗರದಲ್ಲಿನ ರಸ್ತೆಗಳಲ್ಲಿ ನಡೆಯುವ ನಿತ್ಯದ ಸಂಚಾರದಲ್ಲಿ ಶೇ.50 ಆಟೋಗಳ ಪಾಲಿದೆ. ಸುಗಮ ಸಂಚಾರಕ್ಕೆ ಆಟೋ ಚಾಲಕರು ನಿಯಮ ಪಾಲನೆ ಮಾಡುವುದು ಅದೆಷ್ಟು ಮಹತ್ವದ್ದು ಎಂಬುದು ಇಲ್ಲೇ ಅರಿಯಬಹುದಾಗಿದೆ.
ಪ್ರಯಾಣಿಕರು ಆಟೋಗಳಿಗಾಗಿ ಕೈ ಮಾಡಿದಾಗ ಆಟೋಗಳನ್ನು ತಕ್ಷಣವೇ ರಸ್ತೆ ನಡುವೆ ನಿಲ್ಲಿಸದೆ ರಸ್ತೆ ಬದಿಗೆ ನಿಲ್ಲಿಸಬೇಕು. ಆಟೋ ಚಾಲಕರು ತಿರುವು ತೆಗೆದುಕೊಳ್ಳುವಾಗ ಕಡ್ಡಾಯವಾಗಿ ಇಂಡಿಕೇಟರ್‌ಗಳನ್ನು ಬಳಸಬೇಕು ಹಾಗೂ ತಿರುವುಗಳಲ್ಲಿ ಆಟೋಗಳನ್ನು ನಿಲ್ಲಿಸಬಾರದು. ನಿಗದಿತ ವೇಗದಲ್ಲಿ ಚಲಿಸಬೇಕು. ಎಲ್ಲ ಆಟೋ ಚಾಲಕರು ಒಂದೇ ದರವನ್ನು ನಿಗದಿಗೊಳಿಸಿ ಪ್ರಯಾಣಿಕರಿಂದ ಪಡೆಯಬೇಕು ಹಾಗೂ ದಾಖಲಾತಿಗಳನ್ನು ಕಡ್ಡಾಯವಾಗಿ ಇಟ್ಟುಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬಿ ವಿಭಾಗದ ಡಿವೈಎಸ್‌ಪಿ ಉದಯಕುಮಾರ ಎಂ.ಬಿ., ಈಕರಸಾ ಸಂಸ್ಥೆಯ 2ನೇ ಘಟಕದ ಡಿವಿಜನಲ್ ಕಂಟ್ರೋಲರ್ ಇನಾಯತ್ ಬಾಗಬನ್, ಕರುಣಾ ಟೊಯೋಟಾ ನಿರ್ದೇಶಕ ಭೀಮಾಶಂಕರ ಬಿಲಗುಂದಿ, ಆಟೋ ಸಂಘದ ಅಧ್ಯಕ್ಷ ಗುರುಶರಣ, ಸಂಘಟನಾ ಕಾರ್ಯದರ್ಶಿ ಶೇಖ್ ಅಹ್ಮದ್, ರೇವಣಸಿದ್ದಪ್ಪ, ಪರಿಶಿಷ್ಟ ಜಾತಿ ಮತ್ತು ಪಂಗಡದ ಆಟೋ ಚಾಲಕರ ಸಂಘದ ಕಾರ್ಯದರ್ಶಿ ಪೀರಪ್ಪ ಜಿ. ಹಾದಿಮನಿ, ಕರುಣಾ ಟೊಯೋಟಾ ವ್ಯವಸ್ಥಾಪಕ ವ್ಯಾಸ್ ಜೋಷಿ, ಗುಕಾಪಸಂ ಅಧ್ಯಕ್ಷ ಬಾಬುರಾವ ಯಡ್ರಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.