ಗುಲ್ಬರ್ಗಾ

ಸಾಲು ಪ್ರತಿಭಟನೆಗಳ ಸದ್ದು

Published On :

ಕ.ಪ್ರ. ವಾರ್ತೆ, ಗುಲ್ಬರ್ಗ, ಜ.29
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ತಾನು ಲೈನ್‌ಮನ್ ಹುದ್ದೆಗಾಗಿ ನೀಡುತ್ತಿರುವ ತರಬೇತಿ ಅವಧಿಯನ್ನು 3 ರಿಂದ 1ವರ್ಷಕ್ಕೆ ಕಡಿತಗೊಳಿಸಿರುವಾಗ ಅದೇ ನಿಗಮದ ಮಾರ್ಗದಾಳು (ಲೈನ್‌ಮನ್) ಹುದ್ದೆಗಳ ನೇಮಕಾತಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ, ಕೆಪಿಟಿಸಿಎಲ್- ಕೆಪಿಸಿ 3 ವರ್ಷದ ತರಬೇತಿ ಪಡೆದವರೇ ಬೇಕು ಎಂದು ಇಂದಿಗೂ ಹೇಳುತ್ತಿರುವುದು ಅವಾಸ್ತವ ಎಂದಿರುವ ಕೆಪಿಟಿಸಿಎಲ್ ಐಟಿಸಿ ತರಬೇತಿ ಪಡೆದ ಶಿಶುಕ್ಷುಗಳು ತಕ್ಷಣ ನೇಮಕಾತಿ ನಿಯಮದಲ್ಲಿ ಬದಲಾವಣೆಗೆ ಆಗ್ರಹಿಸಿದ್ದಾರೆ.
ಗುಲ್ಬರ್ಗದಲ್ಲಿ ಐಟಿಸಿ ತರಬೇತಿದಾರರ ಒಕ್ಕೂಟ, ಎಐವೈಎಫ್ ಬೆಂಬಲದಲ್ಲಿ ಈ ವಿಷಯವನ್ನು ಇಟ್ಟುಕಂಡು ಬೀದಿಗೆ ಇಳಿದಿದೆ. ಶೇ.30 ಲೈನ್‌ಮನ್ ಹುದ್ದೆಯಲ್ಲಿ ಎಸ್ಸೆಸ್ಸೆಲ್ಸಿ, ನಂತರ ಐಟಿಸಿ ತರಬೇತಿ ಹೊಂದಿದವರಿಗೆ ಮೀಸಲಾತಿ ಇತ್ತು. ಇದೀಗ ತರಬೇತಿಯನ್ನು ಐಟಿಐ ಮೇಲೆ ನೀಡಲಾಗುತ್ತಿದ್ದು, ಅವಧಿ 1 ವರ್ಷಕ್ಕೆ ಇಳಿಕೆಯಾಗಿದೆ. ಹೀಗಿರುವಾಗ ನೇಮಕಾತಿಯಲ್ಲಿಯೂ ಅದಕ್ಕನುಸಾರವಾಗಿಯೇ ಬದಲಾವಣೆ ಆಗಬೇಕು. ಅಂದಾಗ ಮಾತ್ರ ಶೇ.30 ರಷ್ಟು ತರಬೇತಿ ಶಿಶುಕ್ಷುಗಳಿಗೆ ಮೀಸಲಾತಿ ನೆರವು ದೊರಕೀತು. ಇಲ್ಲದೆ ಹೋದಲ್ಲಿ ಮೀಸಲಾತಿ ನೀತಿ ಕಾಗದದ ಮೇಲೆಯೇ ಉಳಿಯುತ್ತದೆ ಎಂಬ ಆತಂಕ ಹೊರಹಾಕಿದ್ದಾರೆ.
3ರಿಂದ 1 ವರ್ಷಕ್ಕೆ ಇಳಿಕೆ: ಕೆಪಿಟಿಸಿಎಲ್ ತನ್ನ 3ವರ್ಷದ ಐಟಿಸಿ ತರಬೇತಿಯನ್ನು ಎಸ್ಸೆಸ್ಸೆಲ್ಸಿ ಆಧಾರದ ಬದಲು ಐಟಿಐ 2ವರ್ಷ ವಿದ್ಯುತ್ ವಿಷಯದ ಟ್ರೇಡ್ ಮುಗಿಸಿದವರಿಗೆ ನೀಡುತ್ತಿದೆ. ಇದಕ್ಕಾಗಿ ತರಬೇತಿಯನ್ನು 3ರಿಂದ 1 ವರ್ಷಕ್ಕೆ ಇಳಿಸಿದೆ. ಐಟಿಸಿ ತರಬೇತಿಗೆ ಅಭ್ಯರ್ಥಿಗಳ ಆಯ್ಕೆಯಲ್ಲಿಯೇ ಈ ಬದಲಾವಣೆ ಆಗಿರುವ ಕಾರಣ ಪ್ರಸರಣ ನಿಗಮ, ಕರ್ನಾಟಕ ವಿದ್ಯುತ್ ಕಂಪನಿಗಳು ತಮ್ಮ ಲೈನ್‌ಮನ್ ನೇಮಕದಲ್ಲಿಯೂ ಅಗತ್ಯ ಬದಲಾವಣೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಜಿಲ್ಲಾಧಿಕಾರಿ ಮೂಲಕ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ಗೆ ಮನವಿ ಪತ್ರವನ್ನು ಸಲ್ಲಿಸಿದರು. ಐಟಿಸಿ ಒಕ್ಕೂಟದ ಹಣಮಂತರಾವ ಅಟ್ಟೂರ್, ಭೀಮಾಶಶಂಕರ ಮಾಡಿಯಾಳ, ಜನಾರ್ದನ ಸಂತಾಳ, ಉತ್ತಮ ಕುಮಾರ್, ಅರುಣ ಕುಮಾರ್, ಪಾಟೀಲ್, ಮಹೇಶಕುಮಾರ್ ರಾಠೋಡ ಸೇರಿದಂತೆ ಅನೇಕರು ಹೋರಾಟದಲ್ಲಿ ಭಾಗವಹಿಸಿದ್ದರು.
ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಆಗ್ರಹಿಸಿ ಪ್ರತಿಭಟನೆ: ನಗರದ ಸೂಪರ್ ಮಾರ್ಕೆಟ್, ಬಾಂಡಿ ಬಜಾರ್, ಕಿರಾಣಾ ಬಜಾರ್‌ನಲ್ಲಿ ಕೈಗೆತ್ತಿ ಕೊಂಡಿರುವ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲು ಒತ್ತಾಯಿಸಿ ಜೈ ಕನ್ನಡಿಗರ ರಕ್ಷಣಾ ವೇದಿಕೆ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಕಾಮಗಾರಿಗೆ ಚಾಲನೆ ನೀಡಿ ಎರಡು ತಿಂಗಳಾಗಿದೆ. ಅಲ್ಲದೆ 2 ಕೋಟಿ ಅನುದಾನವೂ ಬಿಡುಗಡೆಯಾಗಿದೆ. ಆದರೂ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿದೆ. ಇದರಿಂದಾಗಿ ರೈತರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ. ಆದ್ದರಿಂದ 15 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಚಿನ್ ಫರಹತಾಬಾದ್, ಅಣವೀರ ಪಾಟೀಲ್, ಕಾಶಿನಾಥ ಮಾಳಗಿ, ಸಂದೇಶ ಪವಾರ, ಸಂಜು ಗುತ್ತೇದಾರ ಇತರರು ಇದ್ದರು.

--
ಡಬ್ಬಿಂಗ್ ತಡೆಗೆ ಜೈಕರವೇ ಆಗ್ರಹ
ಚಿತ್ತಾಪುರ: ಕನ್ನಡ ಚಲನಚಿತ್ರಗಳಲ್ಲಿ ಡಬ್ಬಿಂಗ್ ಹಾವಳಿಯನ್ನು ತಡೆಹಿಡಿದು ಕನ್ನಡಿಗರ ಭಾಷೆಗೆ ಧಕ್ಕೆ ಬರದಂತೆ ಕ್ರಮ ಕೈಗೊಳ್ಳಬೇಕೆಂದು ಜೈ ಕರವೇ ತಾಲೂಕು ಅಧ್ಯಕ್ಷ ಜಗದೇವ ಕುಂಬಾರ ಸಿಎಂಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಹಾವಳಿಯಿಂದ ಒಂದೇ ಚಿತ್ರಗಳು ಹಲವು ಭಾಷೆಯಲ್ಲಿ ಡಬ್ಬಿಂಗ್ ಮಾಡಿ ತೋರಿಸುತ್ತಿದ್ದು, ಇದರಿಂದ ಕನ್ನಡ ಭಾಷೆ ಉಳಿಯುವಿಕೆಗೆ ಧಕ್ಕೆ ಅಗುತ್ತದೆ ಎಂದರು. ದುರ್ಗೇಶ ಪೂಜಾರಿ, ಶಿವಕುಮಾರ ಮಲ್ಲು, ಮಲ್ಲಿಕಾರ್ಜುನ, ಕುಪೇಂದ್ರ ಮಹೇಶ ವಗ್ಗನ, ಶಿವಾನಂದ ಅಚ್ಚಗೇರಿ, ರಿಯಾಜ, ದಶರಥ ಮೋಗಲಾ ಸೇರಿದಂತೆ ಹಲವಾರು ಕಾರ್ಯಕರ್ತರು ಇದ್ದರು.

ಕನ್ನಡ ಸೇನೆ ಕಾರ್ಯಕರ್ತರಿಂದ ಸಂಪು
ಗುಲ್ಬರ್ಗ: ಭಾಷೆ ಬೆಳವಣಿಗೆಗೆ ಮಾರಕವಾಗಿರುವ ಡಬ್ಬಿಂಗ್ ಸಿನಿಮಾ ಸಂಸ್ಕೃತಿಯನ್ನು ನಿಷೇಧಿಸಬೇಕು, ಅಲ್ಲದೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಡಬ್ಬಿಂಗ್ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕನ್ನಡ ಸೇನೆ ಕರ್ನಾಟಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಡಬ್ಬಿಂಗ್ ವಿರೋಧಿಸಿ ಬೆಂಗಳೂರಿನಲ್ಲಿ ಕನ್ನಡ ಸೇನೆ ಕರ್ನಾಟಕ ಹೋರಾಟ ನಡೆಸುತ್ತಿದ್ದು, ಅದಕ್ಕೆ ಬೆಂಬಲಿಸಿ ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ನಡೆಸುವ ಮೂಲಕ ಕನ್ನಡಿಗರಲ್ಲಿ ಭಾಷೆಯ ಅಭಿಮಾನ ಮೂಡಿಸುವ ಉದ್ದೇಶದಿಂದ ಈ ಹೋರಾಟ ನಡೆಸಲಾಗುತ್ತಿದೆ. ಹೀಗಾಗಿ ಸರ್ಕಾರ ಕೂಡಲೇ ರಾಜ್ಯದಲ್ಲಿ ಡಬ್ಬಿಂಗ್ ಚಿತ್ರಗಳನ್ನು ನಿಷೇಧಿಸಿ ಆದೇಶ ಹೊರಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕನ್ನಡ ಭಾಷೆ ಮತ್ತು ಸಂಸ್ಕೃತಿ ಮೇಲೆ ದಾಳಿ ನಡೆಸುವ ಡಬ್ಬಿಂಗ್‌ಗೆ ಅವಕಾಶ ನೀಡಲೇಬಾರದು ಎಂದು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸಾವಳಗಿ, ಮಹ್ಮದ್ ಸಲೀಮ್ ಚೌದ್ರಿ, ಸಂಗಣ್ಣ ಪಾಟೀಲ್, ಶಿವಲಿಂಗಪ್ಪ ಬಿರಾದಾರ, ನರಸಿಂಗ ಬಾನ ಚವ್ಹಾಣ, ರಂಗನಾಥ ಜೋಷಿ, ಗುಂಡು ಕಪನೂರ, ಗೋಪಾಲರೆಡ್ಡಿ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಡಬ್ಬಿಂಗ್ ನಿಷೇಧಕ್ಕೆ ಆಗ್ರಹಿಸಿ ಮನವಿ
ಗುಲ್ಬರ್ಗ: ಡಬ್ಬಿಂಗ್ ನಿಷೇಧಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಗುಲ್ಬರ್ಗದಲ್ಲಿ ಪ್ರತಿಭಟನೆ ನಡೆಸಿ ಸಿಎಂಗೆ ಜಿಲ್ಲಾಧಿಕಾರಿ ಮೂಲಕ ಮನವಿ ಪತ್ರ ಸಲ್ಲಿಸಿದರು.
ಅರವಿಂದ ನಾಟಿಕಾರ, ಶಿವಗೌಡ ಪಾಟೀಲ್, ರಾಜೇಶ ಕುಲ್ಕರ್ಣಿ, ಶರಣು ಹೊಸಮನಿ, ಸಾಯಿಬಣ್ಣ ಕಾವಲದಾರ, ರಾಜಕುಮಾರ ಮೈನಾಳಕರ್, ಪ್ರದೀಪ ಬಾಚನಳ್ಳಿ, ಶಾಮರಾವ ದೊಡ್ಡಮನಿ ಇತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.