ಕಪಟ ಸ್ವಾಮಿಗೆ ಯುವತಿ 'ಬಲಿ'
ಕ.ಪ್ರ. ವಾರ್ತೆ , ಸಿಂಧನೂರು , ಜ.31
ಮಹಾರಾಷ್ಟ್ರದ ಯಾತ್ರಾಸ್ಥಳ ಫಂಡರಾಪುರಕ್ಕೆ ಕುಟುಂಬದೊಂದಿಗೆ ತೆರಳಿದ್ದ ನಗರದ ಮಹೆಬೂಬಿಯಾ ಕಾಲೋನಿಯ ಯುವತಿ 'ಹತ್ಯಾ'ಚಾರಕ್ಕೊಳಗಾದ ಘಟನೆ ನಡೆದಿದೆ.
ನಗರದ ದುದ್ದುಪುಡಿ ಮಹಿಳಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಶ್ರೀದೇವಿ(17) ಕೊಲೆಯಾದ ದುರ್ದೈವಿ. ಜ.26ರಂದು ಫಂಡರಾಪುರದ ದೇವಸ್ಥಾನಕ್ಕೆ ಪಾಲಕರೊಂದಿಗೆ ತೆರಳಿದ್ದ ಶ್ರೀದೇವಿ 27ರಂದು ಕಾಣೆಯಾಗಿದ್ದಾಳೆ. ಪಾಲಕರು ಮಗಳನ್ನು ದಿನವಿಡೀ ಹುಡುಕಾಡಿ ಕೊನೆಗೆ ಫಂಡರಪುರ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಕುರಿತು ದೂರು ಸಲ್ಲಿಸಿ, ನಗರಕ್ಕೆ ವಾಪಸ್ಸಾಗಿದ್ದಾರೆ.
ಜ.30ರಂದು ಮಧ್ಯಾಹ್ನ ಪೊಲೀಸ್ ಠಾಣೆಯಿಂದ ಶ್ರೀದೇವಿಯ ಶವ ಸಾಂಗ್ಲಿಯ ಹೊಲವೊಂದರಲ್ಲಿ ಪತ್ತೆಯಾಗಿರುವ ಬಗ್ಗೆ ಕುಟುಂಬಕ್ಕೆ ಮಾಹಿತಿ ಬಂದಿದೆ. ಯುವತಿಯ ಮೃತದೇಹವನ್ನು ಶುಕ್ರವಾರ ಸಾಂಗ್ಲಿಯಿಂದ ಆಕೆಯ ಮನೆಗೆ ತರಲಾಗಿದೆ.
ಮುಗಿಲುಮುಟ್ಟಿದ ರೋದನ: ಯುವತಿಯ ಮೃತದೇಹ ಮನೆಗೆ ತರುತ್ತಿದ್ದಂತೆ ತಾಯಿ, ಬಂಧುಗಳು, ಕಾಲೋನಿಯ ನಿವಾಸಿಗಳು ರೋದಿಸುತ್ತಿದ್ದುದು ಮುಗಿಲು ಮುಟ್ಟಿತ್ತು. ಬಹುತೇಕ ಕೂಲಿಕಾರ್ಮಿಕ ಕುಟುಂಬಗಳೇ ನೆಲೆಸಿರುವ ವಾರ್ಡ್ನಲ್ಲಿ ನೂರಾರು ಮಹಿಳೆಯರು ನೆರೆದು ಕಣ್ಣೀರಿಟ್ಟರು.
ಸ್ವಾಮಿಯ ಕೈವಾಡ ಶಂಕೆ: ಫಂಡರಾಪುರ ಮೂಲದ ವ್ಯಕ್ತಿಯೊಬ್ಬ ತಾನು ಸ್ವಾಮಿಯೆಂದು ಮೃತ ಯುವತಿಯ ಕುಟುಂಬದೊಂದಿಗೆ ಸಂಪರ್ಕವಿಟ್ಟುಕೊಂಡಿದ್ದ. ಆಗಾಗ ಇವರ ಮನೆಗೆ ಬಂದು ಹೋಗುತ್ತಿದ್ದ. ಆತ ನಿಮ್ಮ ಮನೆಗೆ ಕಂಟಕವಿದೆ, ಅದರ ಪರಿಹಾರಕ್ಕೆ ಫಂಡರಾಪುರದಲ್ಲಿ ಪೂಜೆ ಸಲ್ಲಿಸಬೇಕೆಂದು ಹೇಳಿದ್ದ ಎನ್ನಲಾಗುತ್ತಿದೆ.
ಆತ ಹೇಳಿದಂತೆ ಕುಟುಂಬ ಪಂಡರಾಪುರಕ್ಕೆ ತೆರಳಿದೆ. ನಂತರ ಯುವತಿ ಕಾಣೆಯಾಗಿ ಶವವಾಗಿ ಪತ್ತೆಯಾಗಿದ್ದಾಳೆ. ಆದರೆ ಸ್ವಾಮಿ ಫಂಡರಾಪುರದಲ್ಲಿ ಮೊದಲ ದಿನ ಭೇಟಿಯಾದವನು, ನಂತರ ನಾಪತ್ತೆಯಾದ ಎಂದು ಮೃತಳ ತಾಯಿ ರೇಣುಕಮ್ಮ ಹೇಳುತ್ತಾರೆ.
ಈ ಕುರಿತು ಫಂಡರಾಪುರ ಪೊಲೀಸ್ ಠಾಣೆಯಲ್ಲಿ ಯುವತಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂದು ಸಿಂಧನೂರು ಶಹರ್ ಠಾಣೆಯ ಪಿಎಸ್ಐ ಬಾಳನಗೌಡ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

