ಗುಲ್ಬರ್ಗಾ

ಕಾಮುಕರ ಗಲ್ಲಿಗಾಗಿ ಗುಲ್ಲು

Published On :

ಗುಲ್ಬರ್ಗ: ನಗರದಲ್ಲಿ ಎಬಿವಿಪಿ ಕಾರ್ಯಕರ್ತರು ಹಾಗೂ ಬಿಸಿಲು ಬೆಳದಿಂಗಳು ಕವಿಗಳ ವೇದಿಕೆಯ ಸದಸ್ಯರು ಮಂಗಳವಾರ ಪ್ರತ್ಯೇಕವಾಗಿ ಹೋರಾಟ ನಡೆಸುವ ಮೂಲಕ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಜಿಲ್ಲಾಡಳಿತದ ಮುಖಾಂತರ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಲೈಂಗಿಕ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ ಎಂದು ಹೋರಾಟಕ್ಕಿಳಿದ ಎಬಿವಿಪಿ ಜೊತೆ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ರ್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿ ಇರುವ ವಿಕಾಸ ಭವನಕ್ಕೆ ಆಗಮಿಸಿ ಕಾಮುಕರ ಪ್ರತಿಕೃತಿ ಮಾಡಿ ಬೆಂಕಿಯಿಟ್ಟರು. ನಂತರ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಎಬಿವಿಪಿ ಕಾರ್ಯಕರ್ತರು, ಕಾಲೇಜು ವಿದ್ಯಾರ್ಥಿನಿಯರು ಯತ್ನಿಸಿದರಾದರೂ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಹೋರಾಟಗಾರರನ್ನು ತಡೆದರು.
ನೂಕಾಟ- ಉದ್ವಿಗ್ನ ಸ್ಥಿತಿ: ಈ ಸಂದರ್ಭದಲ್ಲಿ ಹೋರಾಟಗಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಹೋರಾಟಗಾರರು ಬಹು ಹೊತ್ತು ಧರಣಿ ನಡೆಸುತ್ತ ಜಿಲ್ಲಾಧಿಕಾರಿಗಳನ್ನು ಕಚೇರಿಯಲ್ಲೇ ಕಾಣುತ್ತೇವೆಂದು ಪಟ್ಟು ಹಿಡಿದರಾದರೂ ಪೊಲೀಸರು ಅದಕ್ಕೆ ಅವಕಾಶ ಕಲ್ಪಿಸಲಿಲ್ಲ. ಈ ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರು- ಪೊಲೀಸರ ಮಧ್ಯೆ ನೂಕಾಟ- ತಳ್ಳಾಟ ನಡೆದು ಕೆಲಕಾಲ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು.
ಎಬಿವಿಪಿ ಜಿಲ್ಲಾ ಸಂಚಾಲಕ ಪ್ರವೀಣ ನಾಯಕ, ವೀರೇಂದ್ರಗೌಡ, ವಿದ್ಯಾನಂದ ಕಾಂಬಳೆ, ಆನಂದ, ಗಪಾಲ, ರೇವಣಸಿದ್ದಪ್ಪ, ಸುರೇಖಾ, ಅನಿತಾ, ಶ್ರುತಿ, ಮೀನಾಕ್ಷಿ, ಮಹೇಶ, ಅಶ್ವಿನಿ, ಅರ್ಚನಾ, ಎಬಿವಿಪಿ ನಗರ ಕಾರ್ಯದರ್ಶಿ ಅರುಣ ಪಾಟೀಲ್ ಹಾಗೂ ಸಾವಿರಾರು ವಿದ್ಯಾರ್ಥಿನಿಯರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.