ಗುಲ್ಬರ್ಗಾ

ಬಾಕಿ ಪಾವತಿಗೆ ಆಶಾರ ಆಗ್ರಹ

Published On :

ಯಾದಗಿರಿ: ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಪೂರಕ ಅನುದಾನದ ಹಣವನ್ನು ಈ ಕೂಡಲೇ ಪಾವತಿಸಬೇಕೆಂದು ಆಲ್ ಇಂಡಿಯಾ ಯುಟಿಯುಸಿಗೆ ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಯಾದಗಿರಿ ಜಿಲ್ಲಾ ಸಮಿತಿಯು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಒತ್ತಾಯಿಸಿದೆ.
ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 35 ಸಾವಿರ ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದ ಪ್ರೋತ್ಸಾಹಧನಕ್ಕೆ ಸರಿಸಮನಾಗಿ ನೀಡಬೇಕಾಗಿದೆ. ರಾಜ್ಯ ಸರ್ಕಾರದ  ಪೂರಕ ಅನುದಾನ 7 ತಿಂಗಳಿಂದ ಬಾಕಿಯಿರಿಸಲಾಗಿತ್ತು.
ಈ ಕುರಿತು ಸಂಘದ ನಿರಂತರ ಪ್ರಯತ್ನದಿಂದ ಪ್ರೋತ್ಸಾಹ ಧನದ ಮೊದಲ ಕಂತಿನ ಹಣವನ್ನು 2014 ಮೇ 29ರಂದು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಯಾದಗಿರಿ ಜಿಲ್ಲೆಗೆ ರು. 22,24,300 ಬಿಡುಗಡೆಯಾಗಿದ್ದು, ಕೂಡಲೇ ಪಾವತಿಸಬೇಕು ಎಂದು ಮನವಿ ಮಾಡಿದ್ದಾರೆ.  
ಪಾವತಿಸಿ: ಮೊದಲನೇ ಕಂತಿನಲ್ಲಿ ಪ್ರತಿ ಆಶಾ ಕಾರ್ಯಕರ್ತೆಯರಿಗೆ ನವಂಬರ್ 2013ರಿಂದ ಮಾರ್ಚ್ 2014ವರೆಗಿನ ಪ್ರಯಾಣ ಭತ್ಯೆ (ಪ್ರತಿ ತಿಂಗಳಿಗೆ ರು. 200ರಂತೆ 5ತಿಂಗಳಿಗೆ) ರು. 1000 ಮತ್ತು ಪಿಎಚ್‌ಸಿ ಮೀಟಿಂಗ್, ವಿಎಚ್‌ಸಿ ಮೀಟಿಂಗ್ ಮತ್ತು ವಿಎಚ್‌ಎನ್‌ಡಿ ಮೀಟಿಂಗ್‌ಗಳ ಪ್ರೋತ್ಸಾಹಧನ ರು. 1900- ಸೇರಿದಂತೆ ರು. 2900 ಅನ್ನು ಈ ಕೂಡಲೇ ಪಾವತಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
ಆರ್ಥಿಕ ಸಂಕಟ: ಇನ್ನೂ 20ಕ್ಕೂ ಹೆಚ್ಚು ಕಾಂಪೋನೆಂಟ್‌ಗಳಿಂದ ಬರಬೇಕಾಗಿರುವ ಭಾರೀ ಮೊತ್ತದ ಹಣವನ್ನು ಬಾಕಿ ಉಳಿಸಿಕೊಂಡಿರುವ ರಾಜ್ಯ ಸರ್ಕಾರವು ಇದೀಗ ಕೇವಲ 4 ಕಾಂಪೊನೆಂಟ್‌ಗಳ ಹಣವನ್ನು ಮಾತ್ರ ಬಿಡುಗಡೆ ಮಾಡಿ, ಅತ್ಯಲ್ಪ ಪ್ರೋತ್ಸಾಹ ಧನದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರ ಕುಟುಂಬಗಳನ್ನು ಇನ್ನಷ್ಟು ಆರ್ಥಿಕ ಸಂಕಟಕ್ಕೆ ದೂಡಿದೆ. ಇದು ಅತ್ಯಂತ ಖಂಡನಾರ್ಹ ಎಂದು ಸಂಘದ ಡಿ. ಉಮಾದೇವಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಹೋರಾಟ: ಕಳೆದ 6-7 ವರ್ಷಗಳಿಂದ ಗ್ರಾಮೀಣ ಜನತೆಗೆ ಆರೋಗ್ಯದ ಅರಿವು-ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು ವಿವಿಧ ರಾಜ್ಯಗಳಲ್ಲಿ ಇರುವಂತೆ ರಾಜ್ಯ ಸರ್ಕಾರದಿಂದ ಮಾಸಿಕ ನಿಗದಿತ ವೇತನಕ್ಕಾಗಿ ಮತ್ತು ವಿವಿಧ ಅನೇಕ ಸೌಲಭ್ಯಗಳಿಗಾಗಿ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಗ್ರಹಿಸುತ್ತಾ ಬಂದಿದ್ದಾರೆ. ವಿವಿಧ ಹಂತಗಳಲ್ಲಿ ನಿರಂತರವಾಗಿ ಹೋರಾಟಗಳನ್ನು ಬೆಳೆಸಿದ ಕಾರ್ಯಕರ್ತೆಯರ ಹೋರಾಟದಲ್ಲಿ ನಾಡಿನ ಗಣ್ಯರೂ ಭಾಗವಹಿಸಿ ತಮ್ಮ ಬೆಂಬಲವನ್ನು ನೀಡಿದ್ದರು. ಅದರ ಫಲವಾಗಿ ರಾಜ್ಯ ಸರ್ಕಾರ ಕಾರ್ಯಕರ್ತೆಯರ ನೆರವಿಗೆ ಬಂದಿದ್ದರೂ, ಸಕಾಲದಲ್ಲಿ ನೆರವು ಸಿಗದಿರುವುದರಿಂದ ಇವರ ಕುಟುಂಬಗಳು ಸಂಕಟಪಡುವಂತಾಗಿದೆ. ಶೀಘ್ರ ಬಿಡುಗಡೆಗೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದವು ಸರ್ಕಾರವನ್ನು ಆಗ್ರಹಿಸುತ್ತದೆ. ಇಲ್ಲದೆ ಹೋದರೆ ರಾಜ್ಯಮಟ್ಟದಲ್ಲಿ ಹೋರಾಟ ಕೈಗೊಳ್ಳುವುದರ ಹೊರತಾಗಿ ಬೇರೆ ದಾರಿ ಕಾಣದಾಗಿರುವುದಾಗಿದೆ ಸಂಘ ಎಚ್ಚರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.