ಎಲ್ಲಿದೆ ಬಹುಗ್ರಾಮ ಯೋಜನೆ?
ಕ.ಪ್ರ. ವಾರ್ತೆ , ಚಿಂಚೋಳಿ , ಜೂ. 12
ತಾಲೂಕಿನ ಐನಾಪೂರ ವಲಯ ವ್ಯಾಪ್ತಿಯಲ್ಲಿ ಬರುವ ಕೆಲವು ಗ್ರಾಮಗಳ ಜನರು ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿಗಾಗಿ ಹಲವು ವರ್ಷಗಳಿಂದ ಪರದಾಟ ನಡೆಸುತ್ತಲೇ ಜೀವನ ಸಾಗಿಸುತ್ತಿದ್ದಾರೆ.
ಕುಡಿಯುವ ನೀರಿಗಾಗಿ ಬರ ಎದುರಿಸುತ್ತಿರುವ ಗ್ರಾಮಗಳಿಗೆ ನೀರಿನ ದಾಹ ನೀಗಿಸಲು ವಿಶ್ವ ಬ್ಯಾಂಕ್ ನೆರವಿನ ಜಲ ನಿರ್ಮಲ ಯೋಜನೆ ಅಡಿಯಲ್ಲಿ ಚಂದನಕೇರಾ ಗ್ರಾಮದ ಸುತ್ತಲಿನ 12 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಬಹು ಗ್ರಾಮ ಯೋಜನೆ ಅಡಿಯಲ್ಲಿ 17 ಕೋಟಿ ರುಪಾಯಿ ವೆಚ್ಚದ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು ಬಹುಗ್ರಾಮ ಯೋಜನೆ ಬಹು ದೂರವಾಗುತ್ತಿದೆ.
ತಾಲೂಕಿನ ಚಂದನಕೇರಾ, ರಾಣಾಪೂರ, ಸಾಸರಗಾಂವ, ರುಮ್ಮನಗೂಡ್, ಕೊಟಗಾ, ಚೇಂಗಟಾ, ಖಾನಾಪೂರ, ಭುಯ್ಯಾರ(ಕೆ) ಮುಂತಾದ ಗ್ರಾಮಗಳು ಯೋಜನೆಯ ವ್ಯಾಪ್ತಿಯಲ್ಲಿವೆ. ಇನ್ನು ಪಂಗರಗಾ, ರಾಣಾಪೂರ ತಾಂಡ, ಭಯ್ಯಾರ(ಬಿ) ಸಾಸರಗಾಂವ ತಾಂಡ ಮುಂತಾದವುಗಳು ಮಾರ್ಗ ಮಧ್ಯೆ ಬರುವ ಗ್ರಾಮಗಳು ಒಳಗೊಂಡಿವೆ. 12 ಗ್ರಾಮಗಳ ಒಟ್ಟು 23,171 ಜನಸಂಖ್ಯೆ ಹೊಂದಿರುವ 3,026 ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಬೇಕಾಗಿದೆ. ಪ್ರತಿ ವ್ಯಕ್ತಿಗೆ ಪ್ರತಿದಿನಕ್ಕೆ 70 ಲೀಟರ್ ನೀರು ಪೂರೈಕೆ ಮಾಡಬೇಕಾಗಿದ್ದ ಬಹು ಗ್ರಾಮ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿಲ್ಲ ಕಳೆದ 4 ವರ್ಷಗಳಿಂದ ನಿಧಾನಗತಿಯಲ್ಲಿ ನಡೆಯುತ್ತಿದೆ.
ತಾಲೂಕಿನ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಯ ಮುಳುಗಡೆ ಪ್ರದೇಶ ಗ್ರಾಮ ಚೆನ್ನೂರ ಗ್ರಾಮದ ಹತ್ತಿರದ ಮುಲ್ಲಾಮಾರಿ ನದಿಯಿಂದ ಎಲ್ಲ ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಜಾಕವೆಲ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ. ಶುದ್ಧೀಕರಣ ಘಟಕ ಚಂದನಕೇರಾ, ರಾಣಾಪೂರ, ಗ್ರಾಮಗಳ ಹತ್ತಿರದಲ್ಲಿ 3 ಲಕ್ಷ ಲೀಟರ್ ಪಂಪ್ಹೌಸ ಕಾಮಗಾರಿ ನಿಂತು ಹೋಗಿದೆ. ಇನ್ನು ಪೈಪ್ಲೈನ್ ಕಾಮಗಾರಿಯೂ ಪ್ರಗತಿಯಲ್ಲಿದೆ. ಬಹುಗ್ರಾಮ ಯೋಜನೆಯ ಕಾಮಗಾರಿಯನ್ನು ಕಳೆದ 2013 ಜೂನ್ 6 ರಂದು ಈ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 2014 ಜೂನ್ 10 ರಂದು ಪೂರ್ಣಗೊಳ್ಳಬೇಕಾಗಿತ್ತು. ಅದರೆ ಹಣಕಾಸಿನ ಕೊರತೆ ಮತ್ತು ಗುತ್ತಿಗೆದಾರ ಅಲ್ಲದೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಯೋಜನೆ ಪ್ರಗತಿಯ ಗ್ರಾಮಗಳ ಜನರ ನಿರೀಕ್ಷೆಯಂತೆ ನಡೆಯುತ್ತಿಲ್ಲವೆಂದು ಗ್ರಾಮಸ್ಥರು ದೂರಿದ್ದಾರೆ.
ತಾಲೂಕಿನ ಚಂದನಕೇರಾ, ಚೇಂಗಟಾ, ಮೋಘಾ, ಸುತ್ತಲಿನ ಗ್ರಾಮ ಮತ್ತು ತಾಂಡಾದ ಜನರು ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗುತ್ತಿದೆ. ಈ ಯೋಜನೆ ಪೂರ್ಣಗೊಂಡರೆ ಕುಡಿಯುವ ನೀರಿನ ಸಮಸ್ಯೆಗೆ ಬರೆ ಎಳೆದಂತಾಗುತ್ತದೆ. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಷ್ಟರ ಮಟ್ಟಿಗೆ ಗಮನ ಹರಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

