ಕನ್ನಡ ಅನ್ನದ ಭಾಷೆಯಾಗಲಿ
ಕ.ಪ್ರ. ವಾರ್ತೆ , ಯಾದಗಿರಿ , ಜೂ.13
ಕ.ಪ್ರ: ಯಾದಗಿರಿ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ನಿಮ್ಮನ್ನು ಆಯ್ಕೆ ಮಾಡಿದಕ್ಕೆ ಹೇಗನಿಸುತ್ತಿದೆ?
ನರಸಿಂಹ ಗುಪ್ತ: ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ನಿಶ್ಚಯಿಸಿ ಸರ್ವಾನುಮತದಿಂದ ನಿಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ ಎಂದು ಫೋನ್ ಮೂಲಕ ತಿಳಿಸಿದರು. ನನ್ನಗೆ ತುಂಬಾ ಸಂತೋಷವಾಯಿತು. ಇದ್ದರಿಂದ ನನಗೆ ಈ ಇಳಿ ವಯಸ್ಸಿನಲ್ಲೂ ಸಹ ಹೆಚ್ಚು ಜವಾಬ್ದಾರಿ ಕೊಟ್ಟಂತಾಗಿದೆ. ಇದಕ್ಕೆ ಎಲ್ಲ ಸಾಹಿತ್ಯಾಸಕ್ತರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ.
ಕ.ಪ್ರ: ನಿಮ್ಮಲ್ಲಿ ಸಾಹಿತ್ಯ ಆಸಕ್ತಿ ಹೇಗೆ ಮೂಡಿತು?
ನರಸಿಂಹ ಗುಪ್ತ: ಹಿರಿಯ ಸಾಹಿತಿಗಳಾದ ಬಿ.ಚೀ., ಅನಕೃ, ಫಣಿಯಮ್ಮ ಅಂಥವರ ಕಾದಂಬರಿಯಿಂದ ಪ್ರಭಾವಿತನಾಗಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ಅನ್ಯ ವಿಷಯಗಳಿಗೆ ಹರಿದಾಡದೆ ಕುಮಾರವ್ಯಾಸನ ಗದುಗಿನ ಭಾರತ, ಚಾಮರಸನ ಪ್ರಭುಲಿಂಗ ಲೀಲೆ, ತೊರವೆ ರಾಮಾಯಣ, ಜೈಮಿನಿ ಭಾರತ, ಹರಿಶ್ಚಂದ್ರ ಕಾವ್ಯ, ಗಿರಿಜಾ ಕಲ್ಯಾಣ, ರನ್ನನ ಗದಾಯುದ್ಧ, ಪಂಪನ ವಿಕ್ರಮಾರ್ಜುನ ವಿಜಯ ಹೀಗೆ ಅನೇಕ ಪೌರಾಣಿಕ ಗ್ರಂಥಗಳ ಅಧ್ಯಯನದಿಂದಾಗಿ ಪೌರಾಣಿಕ ಸಾಹಿತ್ಯಕ್ಕೆ ಹೆಚ್ಚು ಗಮನಕೊಟ್ಟಿದೇನೆ.
ಕ.ಪ್ರ: ಜನರಲ್ಲಿ ಸಾಹಿತ್ಯ ಆಸಕ್ತಿ ಕಡಿಮೆಯಾಗಲು ಕಾರಣವೇನು?
ನರಸಿಂಹ ಗುಪ್ತ: ಆಧುನಿಕತೆ, ಜಾಗತೀಕರಣದಿಂದ ಜನರಲ್ಲಿ ಸಾಹಿತ್ಯ ಆಸಕ್ತಿ ಕಡಿಮೆ ಆಗುತ್ತಿದೆ. ಜನರು ಹೆಚ್ಚಿನ ಸಮಯವನ್ನು ಸಂಪಾದನೆಯಲ್ಲಿ ಕಳೆಯುತ್ತಿದ್ದು, ಇದ್ದರಿಂದ ಸಾಹಿತ್ಯ ಮರೆಯುತ್ತಿದ್ದಾರೆ. ಮೊದಲು ಚಿತ್ರಮಂದಿರಗಳು ಇರದ ಕಾರಣ ಆಗಿನ ಜನರು ಸಾಹಿತ್ಯದ ಕಡೆ ಹೆಚ್ಚಿನ ಒಲವು ಹೊಂದಿದ್ದರು. ಈಗವರು ಮನರಂಜನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇದ್ದರಿಂದ ಸಾಹಿತ್ಯ ಆಸಕ್ತಿ ಕುಂದಲು ಕಾರಣ.
ಕ.ಪ್ರ: ಕನ್ನಡ ಮಾಧ್ಯಮ ಕಡ್ಡಾಯವಲ್ಲ ಎಂಬ ಸುಪ್ರೀಂಕೋರ್ಟ್ ತೀರ್ಪು ಕನ್ನಡಕ್ಕೆ ಮಾರಕವೇ?
ನರಸಿಂಹ ಗುಪ್ತ: ಸುಪ್ರೀಂಕೋರ್ಟ್ ಹೇಳಿರುವುದು ಜನರು ಯಾವುದೇ ಒಂದು ಮಾಧ್ಯಮ ಓದಿ ಎಂದು ಒತ್ತಡ ಹೇರುವುದು ಸರಿಯಲ್ಲ. ಆದ್ದರಿಂದ ವಿದ್ಯಾರ್ಥಿಗಳು ಅವರ ಭಾಷೆಯನ್ನು ಕಲಿಯಲು ಸ್ವತಂತ್ರವಿದೆ ಎಂದು ಹೇಳಿದೆ. ಆದರೆ ಸರ್ಕಾರವೇ ಎಲ್ಲವೂ ಮಾಡಬೇಕು ಎಂದರೆ ಆಗದು. ಜನರಲ್ಲಿಯೂ ಸಹ ಕನ್ನಡ ಅರಿವು ಮೂಡಬೇಕು. ಇನ್ನೂ ಬಹಳಷ್ಟು ತಂದೆ- ತಾಯಂದಿರು ಮಕ್ಕಳಿಗಿಂತ ಅವರೇ ಇಂಗ್ಲಿಷ್ ವ್ಯಾಮೋಹ ಬೆಳೆಸಿಕೊಂಡು, ಮಕ್ಕಳನ್ನು ಇಂಗಿಷ್ ಶಾಲೆಗೆ ಸೇರಿಸುತ್ತಿದ್ದಾರೆ. ಈ ರೀತಿಯ ಕನ್ನಡದ ಬಗ್ಗೆ ಇರುವ ತಾತ್ಸಾರ ನಮ್ಮಲ್ಲಿ ಹೋಗಲಾಡಿಸಿ, ಕನ್ನಡಿಗರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಪ್ರವೇಶಿಸಿ ಕನ್ನಡವನ್ನು ಕಲಿಸಿದರೆ ಸಾಕು. ಕನ್ನಡ ಭಾಷೆ ತನ್ನಿಂದ ತಾನೇ ಬೆಳೆಯತ್ತದೆ.
ಕ.ಪ್ರ: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಸಾಹಿತ್ಯ ಆಸಕ್ತಿ ಕಡಿಮೆಯಾಗುತ್ತಿದೆಯೇ?
ನರಸಿಂಹ ಗುಪ್ತ: ಇದು ದುರಂತದ ಸಂಗತಿ. ಇದನ್ನು ನಾವೆಲ್ಲರೂ ಗಮನಹರಿಸಬೇಕು. ಯುವಕರು ಸಿನೆಮಾ ಹಾಗೂ ಆಟೋಟಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದುತ್ತಿದ್ದಾರೆ. ಕೆಲವು ಯುವಕರು ಸಾಹಿತ್ಯದ ಕಡೆ ಒಲವು ತೋರಿಸಿದರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿ ತೋರುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವೂ ಸಹ ಯುವ ಜನರಲ್ಲಿ ಕನ್ನಡ ಭಾಷೆ, ಕಲೆ, ಸಾಹಿತ್ಯದ ಬಗ್ಗೆ ಅರಿವೂ ಮೂಡಿಸುವಂತಹ ಕೆಲಸ ಮಾಡಬೇಕಾಗಿದೆ.
ಕ.ಪ್ರ: ಹೈ-ಕ ಭಾಗದ ಸಾಹಿತ್ಯ ಬಗ್ಗೆ ನಿಮ್ಮ ಅನಿಸಿಕೆ?
ನರಸಿಂಹ ಗುಪ್ತ: ಹೈ-ಕ ಭಾಗದ ಎಲ್ಲ ಜಿಲ್ಲೆಗಳೂ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಹೆಸರುವಾಸಿ ಯಾಗಿವೆ. ಯಾದವರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು ನಿಜಾಮರು ಈ ಭಾಗದಲ್ಲಿ ಆಳ್ವಿಕೆ ಮಾಡಿದ್ದಾರೆ. ಕೋಟೆ-ಕೊತ್ತಲುಗಳ ನಾಡಿನಲ್ಲಿ ಕಲೆ ಸಾಹಿತ್ಯ ಜನಪದ ಸಾಹಿತ್ಯ ರಾಜಾಶ್ರಯ ಪಡೆದಿತ್ತು. ಸುರಪುರ ತಾಲೂಕಿನ ದೇವಾಪುರದಲ್ಲಿ ಲಕ್ಷ್ಮೀಶನ 'ಜೈಮಿನಿ ಭಾರತ' ಕೃತಿಯನ್ನು ರಚಿಸಿದ್ದರು.
ಕ.ಪ್ರ: ಸಾಹಿತ್ಯ ಬೆಳವಣಿಗೆ ನಿಟ್ಟಿನಲ್ಲಿ ಎಲ್ಲಿ ತೊಡಕುಂಟಾಗಿದೆ?
ನರಸಿಂಹ ಗುಪ್ತ: ಸಾಹಿತ್ಯದಲ್ಲೂ ನಿಖರವಾಗಿ ಮಾತನಾಡುವ ಪ್ರವೃತ್ತಿ ಹೆಚ್ಚುತ್ತಿರುವ ಪರಿಣಾಮ ಭಾವನೆಗಳು, ಸಾಹಿತ್ಯದ ತಳಪಾಯ ಕಡಿಮೆಯಾಗುತ್ತಿದೆ. ದಿನೇ ದಿನೇ ಜನರಲ್ಲಿಯೂ ಸಹ ಸಾಹಿತ್ಯ, ಕಲೆಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದ್ದು, ಇದಕ್ಕೆ ಜನಪತ್ರಿನಿಧಿಗಳು ಸಹ ಸರಿಯಾಗಿ ಸ್ಪಂದಿಸುತ್ತಿಲ್ಲ. ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತದೆ.
ಕ.ಪ್ರ: ಕನ್ನಡ ಬೆಳೆಸಲು ನಿಮ್ಮ ಸಲಹೆ?
ನರಸಿಂಹ ಗುಪ್ತ: ಕನ್ನಡ ಅನ್ನದ ಭಾಷೆಯಾಗಬೇಕು. ಕನ್ನಡ ಎಲ್ಲಿಯವರಿಗೆ ಅನ್ನದ ಭಾಷೆ ಮತ್ತು ಅನಿವಾರ್ಯ ಭಾಷೆ ಆಗುವುದಿಲ್ಲವೋ ಅಲ್ಲಿಯವರೆಗೆ ಪರಭಾಷಿಕರಿಗಷ್ಟೇ ಅಲ್ಲ. ಕನ್ನಡಿಗರಿಗೂ ಸಹ ಕನ್ನಡ ಕಲಿಯಬೇಕು ಮತ್ತು ಕಲಿಸಬೇಕು ಎಂಬು ಉಮೇದು ಬರುವುದಿಲ್ಲ. ಕನ್ನಡದಿಂದ ಉದ್ಯೋಗಾವಕಾಶ ಮತ್ತು ಪ್ರೋತ್ಸಾಹ ಸಿಗುವುದಾದರೆ ಕನ್ನಡದತ್ತ ಯಾರೂ ಸಹ ನಿರ್ಲಕ್ಷ್ಯ ಮತ್ತು ನಿರಾಸಕ್ತಿ ತೋರುವುದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

