ನವನಾಥನ ಪ್ರಾಣ ರಕ್ಷಿಸಿತ್ತು
ಶೇಷಮೂರ್ತಿ ಅವಧಾನಿ
ಕ.ಪ್ರ. ವಾರ್ತೆ ಗುಲ್ಬರ್ಗ ಜೂ. 20
ಜಿಲ್ಲೆಯ ಆಳಂದ ತಾಲೂಕಿನ ಭೂಸನೂರು ಕಬ್ಬಿನ ಗದ್ದೆಯಲ್ಲಿದ್ದ ಅಪಾಯಕಾರಿ ಕೊಳವೆಬಾವಿಯಲ್ಲಿ ಮಗು ಜಾರಿಬಿದ್ದು ಪ್ರಾಣಾಪಾಯಕ್ಕೆ ತುತ್ತಾಗಿದ್ದ ಘಟನೆಗೆ ಸಾಕ್ಷಿಯಾಗಿತ್ತು. ಆದರೆ ಈ ಘಟನೆ ದುರಂತ ಅಂತ್ಯ ಕಾಣದೆ ಸುಖಾಂತ್ಯವಾಗಿದ್ದು ನಿಜಕ್ಕೂ ಅಚ್ಚರಿ ಸಂಗತಿ.
ಬಿಜಾಪುರದ ನಾಗಠಾಣದಲ್ಲಿ ಬಾಲಕಿ ಬಿದ್ದ ಕೊಳವೆ ಬಾವಿಗೆ ರೋಬೋ ಇಳಿಸಿ, ಇನ್ನೇನೆಲ್ಲ ತಂತ್ರಜ್ಞಾನ ಬಳಸಿದರೂ ಮಗು ಬದುಕಲಿಲ್ಲ. ಆದರಿಲ್ಲಿ ನೋಡಿ, ಕೊಳವೆಬಾವಿಯಲ್ಲಿ ಬಿದ್ದಿದ್ದ ಬಾಲಕ ನವನಾಥನನ್ನು ಹಗ್ಗದ ಸಹಾಯದಿಂದ ಉಪಾಯವಾಗಿ ಮೇಲಕ್ಕೆಳೆದ ಕೀರ್ತಿ ಹಳ್ಳಿ ಹೈದರಿಗೆ ಸಲ್ಲುತ್ತದೆ. ಇಲ್ಲಿ ದೇಶಿ ತಂತ್ರಜ್ಞಾನ ಬಾಲಕನನ್ನು ಬದುಕಿಸಿದ್ದೇ ಚಮತ್ಕಾರ.
ದೇವಂತಗಿಯ ಕಾಶೀನಾಥ ದಂಪತಿಯ ಪುತ್ರ, 8 ವರ್ಷದ ನವನಾಥ ಆಟವಾಡುತ್ತ ಕಬ್ಬಿನಗದ್ದೆಯಲ್ಲಿದ್ದಾಗ ಕಾಲಕೆಳಗೇ ಬಾಯಿ ತೆರೆದ ಕೊಳವೆಬಾವಿಗೆ ಜಾರಿಬಿಟ್ಟಿದ್ದ. ಕೈಗಳೆರಡು ಮೇಲಾಗಿರುವ ಭಂಗಿಯಲ್ಲಿ ನವನಾಥ ಕೊಳವೆಬಾವಿಯೊಳಗಿಳಿದ ನೋಟ ಕಂಡ ತಾಯಿ, ಬಂಧುಗಳು ಹೌಹಾರಿದ್ದರು. ತಕ್ಷಣ ಸುದ್ದಿ ಪೊಲೀಸರಿಗೆ ತಲುಪಿತ್ತು.
50 ಅಡಿ ಆಳದಲ್ಲಿ ಅಟಕಾಯಿಸಿಕೊಂಡಿದ್ದ: ಅಗ್ನಿಶಾಮಕ ದಳ ಸಿಬ್ಬಂದಿ, ವಿಪತ್ತು ನಿರ್ವಹಣೆಯ ತಂಡದವರು ಜೆಸಿಬಿ, ಕ್ರೇನ್ ಮೊದಲಾದ ದೈತ್ಯ ಯಂತ್ರಗಳೊಂದಿಗೆ ತೋಟದಲ್ಲಿ ಜಮಾಯಿಸಿದ್ರು. 30ರಿಂದ 35 ಅಡಿ ಆಳದಲ್ಲಿ ಕೊಳವೆ ರಂಧ್ರದಲ್ಲಿ ನವನಾಥ ಅಟಕಾಯಿಸಿಕೊಂಡಿದ್ದ.
ಕೊಳವೆಬಾವಿ ಪಕ್ಕದಲ್ಲೇ ಉದ್ದಕ್ಕೆ ಅಗೆಯುವ ಕಾರ್ಯ ಶುರುವಾಗಿತ್ತು. ರಕ್ಷಣಾ ಕಾರ್ಯಾಚರಣೆ ಅತ್ತ ನಡೆಯುತ್ತಿರುವಂತೆಯೇ ಭೂಸನೂರಿನವರು ಮಾತ್ರ ಹಗ್ಗ, ದೊಣ್ಣೆಗಳೊಂದಿಗೆ ದೇಶೀಯವಾಗಿ ತಾವೇ ಚರ್ಚಿಸಿ ನಡೆಸುತ್ತಿದ್ದ ಕಾರ್ಯಾಚರಣೆ ಮಾತ್ರ ಕೈಬಿಟ್ಟಿರಲಿಲ್ಲ.
ಕಲ್ಯಾಣಿ ಜಮಾದಾರ್, ಗುರುಶಾಂತ ಪಾಟೀಲ್ ಮೊದಲ್ಗೊಂಡು ಸೇರಿದ್ದ ಗೆಳೆಯರೆಲ್ಲರೂ ಕೂಡಿಕೊಂಡು ನವನಾಥನತ್ತ ಹಗ್ಗ ಬಿಡುತ್ತ ಅದನ್ನು ಗಟ್ಟಿಯಾಗಿ ಹಿಡಿ ಎಂದು ಕೊಳವೆಯಲ್ಲಿ ಧ್ವನಿವರ್ಧಕ ಸಹಾಯದಿಂದ ಆತನಿಗೆ ಸೂಚನೆ ನೀಡುತ್ತಲೇ ಇದ್ದರು.
ನವನಾಥ ಹಗ್ಗ ಹಿಡಿದಾಗ ಹಿಗ್ಗಿದ ಜನ: ಅಷ್ಟೊತ್ತಿಗಾಗಲೇ 10ರಿಂದ 15 ಗಂಟೆ ಉರುಳಿತ್ತು. ಮಗುವಿಗೆ ಮೇಲಿನಿಂದಲೇ ಪ್ರಾಣವಾಯು ಸರಬರಾಜು ಸಹ ಸಾಗಿತ್ತು. ಅಷ್ಟೊತ್ತಿಗಾಗಲೇ ಸಂಜೆಯಾಯ್ತು, ಕಲ್ಯಾಣಿ ಜಮಾದಾರ್ ಮತ್ತೊಮ್ಮೆ ಹಗ್ಗದ ಸಹಾಯದಿಂದ ನವನಾಥನನ್ನು ಮೇಲಕ್ಕೆತ್ತುವ ಪ್ರಯತ್ನಕ್ಕೆ ಮುಂದಾದ್ರು. ಹಗ್ಗ ಕೆಳಗೆ ಬಿಟ್ಟವರೇ ಅದನ್ನು ಗಟ್ಟಿ ಹಿಡಿಯುವಂತೆ ನವನಾಥನಿಗೆ ನೀಡಿದ್ದ ಸಂದೇಶ ಕೆಲಸ ಮಾಡಿತ್ತು. ಕೊಳವೆಬಾವಿಯಲ್ಲಿದ್ದ ನವನಾಥ ಹಗ್ಗವನ್ನು ಗಟ್ಟಿಯಾಗಿ ಹಿಡಿದುಬಿಟ್ಟಿದ್ದ.
ಮೇಲಿದ್ದ ಕಲ್ಯಾಣಿ ಹಾಗೂ ಗೆಳೆಯರು ಹಗ್ಗ ಎಳೆದಾಗ ಕೆಳಗಡೆ ಭಾರ ಕಂಡುಬಂತು. ನವನಾಥ ಹಗ್ಗ ಗಟ್ಟಿಯಾಗಿ ಹಿಡಿದಿರುವುದು ಪಕ್ಕಾ ಮಾಡಿಕೊಂಡವರೇ 'ಒಂದು ಕೈ ನೋಡೇ ಬಿಡೋಣ' ಎಂದು ಹಗ್ಗವನ್ನು ಮೇಲಕ್ಕೆಳೆದೇ ಬಿಟ್ರು. ಹಗ್ಗದ ಜೊತೆಗೆ ನವನಾಥನ ಕೈಗಳು ಕೊಳವೆ ಬಾವಿ ತುದಿಗೇ ಬಂದುಬಿಟ್ಟವು. ತಕ್ಷಣ ಕೈ ಹಿಡಿದ ಹಲವರು ಮಗುವನ್ನು ಅನಾಮತ್ತಾಗಿ ಮೇಲಕ್ಕೆ ಸೆಳೆದುಕೊಂಡರು.
ಇಡೀ ಕಾರ್ಯಾಚರಣೆಯ ಉಸ್ತುವಾರಿ ಹೊಣೆ ಹೊತ್ತಿದ್ದ ಆಗಿನ ಎಸ್ಪಿ ಮನೀಶ್ ಖರ್ಬಿಕರ್ ಅಂತೂ ನವನಾಥ ಮೃತ್ಯುಗೆದ್ದು ಬಂದನಲ್ಲ... ಎಂದು ಮಗುವನ್ನು ಎತ್ತಿಕೊಂಡು ಹೊಲದ ತುಂಬೆಲ್ಲ ಓಡಾಡಿಬಿಟ್ಟಿದ್ದರು. ಅಲ್ಲೇ ಇದ್ದ ವೈದ್ಯಕೀಯ ಸೇವೆಯನ್ನು ನವನಾಥನಿಗೆ ನೀಡಲಾಯ್ತು. ತಕ್ಷಣ ಆತನಿಗೆ ಗುಲ್ಬರ್ಗ ಆಸ್ಪತ್ರೆಗೆ ದಾಖಲಿಸಿ ಸಂಪೂರ್ಣ ಆರೋಗ್ಯ ತಪಾಸಣೆಗೊಳಪಡಿಸಲಾಗಿತ್ತು. ನವನಾಥ ಅಲ್ಪ ತರಚು ಗಾಯಗಳಿಂದ ಹೈರಾಣಾಗಿದ್ದು ಹೊರತುಪಡಿಸಿದರೆ ಆತನ ದೇಹಾರೋಗ್ಯ ಉತ್ತಮವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

