346 ಕೋಟಿ ಯೋಜನೆಗೆ ಜಿಪಂ ಅಸ್ತು
ಯಾದಗಿರಿ: ಜಿಲ್ಲೆಯ 37 ಗ್ರಾಪಂ.ಗಳಲ್ಲಿ ನಡೆದಿದೆ ಎನ್ನಲಾದ 8.8 ಕೋಟಿ ಅವ್ಯವಹಾರದಲ್ಲಿ ಭಾಗಿಯಾದ 47 ಕಂಪ್ಯೂಟರ್ ಆಪರೇಟರ್ಗಳ ಅಮಾನತು ಆದೇಶ ಜಿಪಂನಲ್ಲಿ ಚರ್ಚೆಗೆ ಗ್ರಾಸವಾಯಿತು.
ಜಿಪಂ ಸಭಾಂಗಣದಲ್ಲಿ ಸೋಮವಾರ ಜಿಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಎಚ್.ಸಿ. ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದು, ಕೇವಲ 47 ಕಂಪ್ಯೂಟರ್ ಆಪರೇಟರ್ಗಳಿಗೆ ಮಾತ್ರ ಅಮಾನತು ಮಾಡಿದರೆ ಸಾಲದು. ಇದ್ದಕ್ಕೆ ಕಾರಣರಾದ ಪಿಡಿಒಗಳನ್ನು ಸಹ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಈ ಚರ್ಚೆ ಸಭೆಯಲ್ಲಿ ಗಂಭೀರತೆ ಪಡೆದು ಸದಸ್ಯರ ಮಧ್ಯೆ ಕೆಲವು ಸಮಯ ಮಾತಿನ ಚಕಮಕಿ ನಡೆಯಿತು. ಕೂಡಲೇ ಮಧ್ಯೆ ಪ್ರವೇಶಿಸಿದ ಅಧ್ಯಕ್ಷರು, ಸಿಇಒ ಉತ್ತರ ನೀಡಲು ತಿಳಿಸುತ್ತೇನೆಂದು ಸಮಾಧಾನಪಡಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಜಿಪಂ ಸಿಇಒ ಜಲಾನಿ, ಜಿಲ್ಲೆಯ 47 ಗಾಪಂಗಳಲ್ಲಿ ಅವ್ಯವಹಾರ ನಡೆದಿದ್ದು ಕೇಂದ್ರ ತಂಡ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ನೀಡಿತ್ತು. ಇದರನ್ವಯ ಪ್ರಾದೇಶಿಕ ಆಯುಕ್ತರ ಆದೇಶದಂತೆ ತಕ್ಷಣವಾಗಿ 47 ಕಂಪ್ಯೂಟರ್ ಆಪರೇಟರ್ಗಳನ್ನು ಅಮಾನತು ಮಾಡಲಾಗಿದೆ. ಪಿಡಿಒಗಳ ಮೇಲೆ ತಾಪಂ ಎಇ ಅವರಿಗೆ ತನಿಖೆ ವಹಿಸಲಾಗಿದ್ದು, ತನಿಖೆ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಕ್ರಿಯಾಯೋಜನೆಗೆ ಅನುಮೋದನೆ: 2014ನೇ ಸಾಲಿಗೆ ಯೋಜನೆ ಹಾಗೂ ಯೋಜನೇತರ ಕಾರ್ಯಕ್ರಮಗಳಿಗೆ ಒಟ್ಟು 346.71 ಕೋಟಿ ಅನುದಾನ ನಿಗದಿಪಡಿಸಿದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.
ಇದರಲ್ಲಿ ಯೋಜನೆ ಕಾರ್ಯಕ್ರಮಗಳಿಗಾಗಿ 157.31 ಕೋಟಿ ಹಾಗೂ ಯೋಜನೇತರ ಅಡಿಯಲ್ಲಿ 189.40 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಈ ಅನುದಾನದಲ್ಲಿ ಜಿಪಂಗೆ 124.02 ಕೋಟಿ, ತಾಪಂಗೆ 206.40 ಕೋಟಿ ಹಾಗೂ ಗ್ರಾಪಂಗಳಿಗೆ 16.30 ಕೋಟಿ ಅನುದಾನ ನಿಗದಿಪಡಿಸಿದೆ.
ಜಿಲ್ಲೆಯಲ್ಲಿ ಹಲವು ಗ್ರಾಮಗಳಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ಕೊರೆಯಿಸಲಾಗುವ ಕೊಳವೆ ಬಾವಿಗಳಿಗೆ ಮುಚ್ಚಳವಿಲ್ಲದೆ ಹಾಗೆಯೇ ಬಿಟ್ಟಲ್ಲಿ ಆ ಇಲಾಖೆಯ ಅಭಿಯಂತರರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಅದರಂತೆ ಜಿಲ್ಲೆಯಲ್ಲಿ ಟಾಸ್ಕ್ಫೋರ್ಸ್ ಸಮಿತಿ ನಿರ್ಧಾರದಂತೆ ಕೊರೆಯಿಸಲಾದ 364 ಕೊಳವೆ ಬಾವಿಗಳ ಯಶಸ್ವಿ, ಕೈಪಂಪ್ ಅಳವಡಿಕೆ ಮತ್ತು ವಿಫಲವಾಗಿರುವ ಬಗ್ಗೆ ಸಮಗ್ರ ಮಾಹಿತಿಯನ್ನು ಆಯಾ ಜಿಪಂ ಸದಸ್ಯರ ಗಮನಕ್ಕೆ ತರಬೇಕು ಎಂದು ಅಧ್ಯಕ್ಷ ಸಿದ್ದನಗೌಡ ತಿಳಿಸಿದರು.
ಸುವರ್ಣ ಗ್ರಾಮ ಯೋಜನೆ ಅಡಿ ಇರುವ ಕಾಮಗಾರಿಗಳನ್ನು ಗುಣಮಟ್ಟ ಮತ್ತು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಮುಂಬರುವ ದಿನಗಳಲ್ಲಿ ರೈತರಿಗೆ ಬೀಜ ರಸಗೊಬ್ಬರ ಸಕಾಲಕ್ಕೆ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ನೀಡಿದರು.
ಸಿಇಒ ಗೈರು: ಸಭಾತ್ಯಾಗ
ಯಾದಗಿರಿ: ಜಿಪಂ ಸಿಇಒ ಸಭೆಗೆ ಬಾರದೇ ಇರುವುದನ್ನು ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಸಭಾತ್ಯಾಗಕ್ಕೆ ಮುಂದಾದ ಘಟನೆ ನಡೆಯಿತು.
ಸದಸ್ಯ ಎಚ್.ಸಿ. ಪಾಟೀಲ್ ಮಾತನಾಡಿ, ಸಾಮಾನ್ಯ ಸಭೆಗೆ ಸಿಇಒ ಇರದೇ ಸಭೆಯಲ್ಲಿ ತೆಗೆದುಕೊಂಡು ನಿರ್ಣಯ ಅಂಗೀಕರಿಸುವ ಹಾಗೂ ಅನುಷ್ಠಾನಗೊಳಿಸುವ ಅಧಿಕಾರ ನಿಮಗೆ ಇದೆಯೇ ಎಂದು ಅಧ್ಯಕ್ಷರಿಗೆ ಪ್ರಶ್ನಿಸಿದರು. ಸದಸ್ಯರಾದ ಭೀಮರಾಯ ಹಯ್ಯಾಳಪ್ಪನೋರ್, ಶರಣಿಕುಮಾರ ಧೋಖಾ ಅವರು ಸಹ ಇದಕ್ಕೆ ಧ್ವನಿಗೂಡಿಸಿದರು.
ಸದಸ್ಯ ದೇವರಾಜ ನಾಯಕ ಮಾತನಾಡಿ, ಜಿಲ್ಲೆಯ ರೈತರು, ಗ್ರಾಮೀಣ ಜನರು ಸಂಕಷ್ಟದಲ್ಲಿದ್ದಾರೆ. ಕಳೆದ ಆರು ತಿಂಗಳಿಂದ ಸಭೆ ಆಗಿಲ್ಲ. ಈಗಾಲಾದರೂ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುಬೇಕು ಎಂದು ಆಗ್ರಹಿಸಿದರು.
ನಂತರ ಮಾತನಾಡಿದ ಅಧ್ಯಕ್ಷ ಸಿದ್ದಣಗೌಡ, ಸಿಇಒ ಅವರು ಜಿಲ್ಲಾಧಿಕಾರಿ ಹುದ್ದೆ ಪ್ರಭಾರಿಯೂ ಆಗಿರುವುದರಿಂದ ಶಹಾಪುರ ತಾಲೂಕಿನ ಕನ್ಯಾಕೋಳೂರಿನಲ್ಲಿ ಶಾಂತಿ ಸಭೆ ನಡೆಸಲು ಹೋಗಿದ್ದಾರೆ. ಇನ್ನೊಂದು ಗಂಟೆಯಲ್ಲಿ ಸಭೆಯಲ್ಲಿ ಭಾಗವಹಿಸಲಿದ್ದಾರೆಂದು ಸಭೆಗೆ ಹೇಳಿದರು.
ಇದಕ್ಕೆ ಒಪ್ಪದ ಸದಸ್ಯರು, ಸಿಇಒ ಬಂದ ನಂತರವೇ ಸಭೆ ನಡೆಸಲು ಒತ್ತಾಯಿಸಿದರು. ಇದಕ್ಕೆ ಸಮ್ಮತಿಸಿದ ಅಧ್ಯಕ್ಷರು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

