16 ಮೊಬೈಲ್ ಕದ್ದ ಬಾಲಚೋರ
ಗುಲ್ಬರ್ಗ: ಇಲ್ಲಿನ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾ.7ರ ಶುಕ್ರವಾರ 16 ಮೊಬೈಲ್ಗಳನ್ನು ಕಳವು ಮಾಡಿದ್ದ ಬಾಲಚೋರ ಸೆರೆಸಿಕ್ಕಿದ್ದಾನೆ. ಇದೇ ಠಾಣೆ ವ್ಯಾಪ್ತಿಯಲ್ಲಿ ಬಾಡಿಗೆ ವಿಚಾರಣೆಗೆಂದು ಬಂದ ಆಗತುಂಕರು ಮನೆ ಒಡತಿಗೆ ಚಾಕುವಿನಿಂದ ಬೆದರಿಕೆ ಹಾಕಿ ಬಂಗಾರದ ಮಂಗಳಸೂತ್ರ ಕಿತ್ಕೊಂಡು ಪರಾರಿಯಾಗಿರುವ ಘಟನೆಯೂ ಸಂಭವಿಸಿದೆ.
ಗುಲ್ಬರ್ಗ ನಗರದ ಅಶೋಕ ನಗರ ಠಾಣೆಯ ಪೊಲೀಸರು ಬಾಲಾಪರಾಧಿಯೊರ್ವನನ್ನು ದಸ್ತಗಿರಿ ಮಾಡಿದ್ದು, ಆತನಿಂದ ಕಳವು ಮಾಡಲಾಗಿದ್ದ 16 ವಿವಿಧ ಕಂಪನಿಗಳ, ತರಹೇವಾರಿ ಮೊಬೈಲ್ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಮೊಬೈಲ್ ಕಳ್ಳ ತುಂಬ ಚಾಲಾಕಿ, 10 ವರ್ಷ ವಯಸ್ಸಿನ ಪೋರನಾದರೂ ತರಕಾರಿ ಮಾರುಕಟ್ಟೆ, ಬಸ್ ನಿಲ್ದಾಣ, ಹಣ್ಣು- ಹಂಪಲು ಮಾರುಕಟ್ಟೆ ಸೇರಿದಂತೆ ಜನನಿಬಿಡ, ವಾಹನ ದಟ್ಟಣೆಯ ಸ್ಥಳಗಳಲ್ಲಿ ಹೊಂಚು ಹಾಕಿ, ಸಂಚು ಮಾಡಿ ಮೊಬೈಲ್ ಕಳವು ಮಾಡುವುದರಲ್ಲಿ ಚಾಣಕ್ಷ ಎಂದು ಪೊಲೀಸರು ಹೇಳಿದ್ದಾರೆ.ಆದರೆ ಈ 16 ಮೊಬೈಲ್ ಚೋರ, 10ರ ಪೋರನ ಹೆಸರು ಮಾತ್ರ ಬಹಿರಂಗಪಡಿಸಲು ಪೊಲೀಸರು ಸಿದ್ದರಿಲ್ಲ, ಬಾಲಾಪರಾಧಿಯಾಗಿದ್ದರಿಂದ ಆತನ ಹೆಸರು ಬಹಿರಂಗಪಡಿಸಲಾಗದು ಎಂದಿರುವ ಪೊಲೀಸರು ಬಾಲಚೋರನಿಂದ ವಶಪಡಿಸಿಕೊಂಡ ಮೊಬೈಲ್ಗಳು, ಅವುಗಳ ನಂಬರ್ಗಳ ಸಮೇತ ಮಾಹಿತಿ ಠಾಣೆಯಲ್ಲಿ ಲಭ್ಯ, ಯಾರಾದರೂ ಮೊಬೈಲ್ ಕಳೆದುಕೊಂಡವರು ಠಾಣೆಗೆ ಬಂದು ಮಾಹಿತಿ ಪಡೆಯಬಹುದು, ಹೆಚ್ಚಿನ ಮಾಹಿತಿಗೆ ಪೊಲೀಸರೊಂದಿಗೆ ವಿಚಾರಣೆ ನಡೆಸಬಹುದು ಎಂದು ಅಶೋಕ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಬಾಲಚೋರನಿಂದ ಸ್ಯಾಮಸಂಗ್, ಸೋನಿ, ಮೈಕ್ರೋಮ್ಯಾಕ್ಸ್, ಚೈನಾ ಸೆಟ್ ಸೇರಿದಂತೆ ಹಲವು ಕಂಪನಿಗಳ ಮೊಬೈಲ್ಗಳು ಸೇರಿವೆ. ಈತ ಜನ ತಮ್ಮ ಕೆಲಸದಲ್ಲಿ ತಲ್ಲೀನರಾಗಿದ್ದನ್ನು ಗಮನಿಸಿ ತನ್ನ ಕಳವಿನ ಕೆಲಸ ಮಾಡಿ ಮುಗಿಸುತ್ತಿದ್ದನಂತೆ, ಹೀಗೆಂದು ಬಾಲಚೋರನೆ ವಿಚಾರಣೆ ವೇಳೆ ಪೊಲೀಸರೆದುರು ಬಾಯಿಬಿಟ್ಟಿದ್ದಾನೆ.
ಬಾಡಿಗೆ ಮನೆಬೇಕೆಂಬ ನೆಪದಲ್ಲಿ ಬಂದು ಸರಗಳ್ಳತನ: ಹಲ್ಲೆ: ಬಾಡಿಗೆ ಮನೆ ಇದೆಯಾ ಎಂದು ವಿಚಾರಣೆ ಮಾಡುತ್ತಲೇ ಮನೆ ಹೊಕ್ಕ ಖದೀಮರಿಬ್ಬರು ಮನೆ ಒಡತಿಯ ಮೇಲೆ ಎರಪಗಿ, ಚಾಕುವಿನಿಂದ ಪ್ರಾಣ ಬೆದರಿಕೆ ಹಾಕಿದ್ದಲ್ಲದೆ ಅವರ ಕೊರಳಲ್ಲಿದ್ದ 50 ಸಾವಿರ ಮೌಲ್ಯದ ಬಂಗಾರದ ಮಂಗಳಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮಾ.7ರ ಶುಕ್ರವಾರ ನಡೆದಿದೆ. ಅಶೋಕ ನಗರ ಠಾಣೆಯ ವ್ಯಾಪ್ತಿಯಲ್ಲಿನ ಪಾರ್ವತಿ ಗಂಡ ಶಾಂತಮಲ್ಲಪ್ಪ ಶಿವಕೇರಿ (ಕಾಂತ ಕಾಲೋನಿ) ಇವರೇ ಬಾಡಿಗೆ ವಿಚಾರಣೆ ಮಾಡಲು ಬಂದಿದ್ದ ಆಗತುಂಕ ಖದೀಮರಿಂದ ತೀವ್ರ ಹಲ್ಲೆಗೊಳಗಾಗಿದ್ದಲ್ಲದೆ ಮಂಗಳಸೂತ್ರವನ್ನು ಕಳೆದುಕೊಂಡಿದ್ದಾರೆ.
ಮನೆಯಲ್ಲಿ ಪಾರ್ವತಿಯವರು ಒಬ್ಬರೆ ಇದ್ದಾಗ ಮಧ್ಯಾಹ್ನದ ಹೊತ್ತು ಬೈಕ್ ಸವಾರಿಯಲ್ಲಿ ಯುವಕ- ಯುವತಿ ಇಬ್ಬರು ಕೂಡಿಕೊಂಡು ಇವರ ಮನೆಗೆ ಆಗಮಿಸಿದ್ದಾರೆ. ತಮಗೆ ಬಾಡಿಗೆ ಮನೆ ಬೇಕು ಎಂದು ವಿಚಾರಿಸಿದ್ದಾರೆ. ತಾವು ಇಬ್ಬರೂ ಹುಮನಾಬಾದ್ ಕಡೆಯವರಿದ್ದೇವೆ ಎಂದು ಹೇಳಿ ಬಾಡಿಗೆಗೆ ಇರುವ ರೂಮುಗಳನ್ನು ನೋಡಲು ಮುಂದಾಗಿದ್ದಾರೆ.
ಬಾಡಿಗೆಗೆ ನೀಡಬೇಕೆಂದು ಇಟ್ಟಿದ್ದ ಮೂರು ರೂಮುಗಳನ್ನು ನೋಡುವ ಸಂದರ್ಭದಲ್ಲೇ ಇವರು ಜೊತೆಯಲ್ಲೇ ಇದ್ದ ಪಾರ್ವತಿ ಶಿವಕೇರಿ ಇವ ಮೇಲೆರಗಿದ್ದಾರೆ. ಯುವತಿ ಒಮ್ಮೆಲೆ ತಮ್ಮ ಮೈಮೇಲೆ ಬಿದ್ದು ಕೈ ಹಿಡಿದುಕೊಂಡಳು. ಆಕೆಯ ಜೊತೆಗಾರ ಯುವಕ ತನಗೆ ಚಾಕು ತೊರಿಸಿ ನೆಲಕ್ಕೆ ಕೆಡವಿ ಕೊರಳಲ್ಲಿದ್ದ ಕರಿಮಣಿಯುಳ್ಳ 50 ಸಾವಿರ ಬೆಲೆಬಾಳುವ ಬಂಗಾರದ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಆ ಹಲ್ಲೆ ಸಮಯದಲ್ಲಿ ತನ್ನ ಕೈಗೆ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ. ಚೀರಾಡುತ್ತಿರುವಾಗ ಅವರಿಬ್ಬರೂ ಅವರ ಮೊಟಾರು ಸೈಕಲನ್ನು ಮನೆಮುಂದೆ ಬಿಟ್ಟು ಓಡಿ ಹೋಗಿದ್ದಾರೆಂದು ಪಾರ್ವತಿ ದೂರಿನಲ್ಲಿ ಹೇಳಿದ್ದಾರೆ.
ಶಿವಕೇರಿಯವರ ಮನೆಯಲ್ಲಿನ ಗಲಾಟೆ ಸದ್ದಿಗೆ ಹೊರಗೋಡಿ ಬಂದ ಅಕ್ಕಪಕ್ಕದವರು ಆಗತುಂಕರನ್ನು ಬೆನ್ನಟ್ಟಿದ್ದರೂ ಸಿಕ್ಕಿರುವುದಿಲ್ಲ. ಅವರು ಬಿಟ್ಟು ಹೋದ ಹಿರೊಹೊಂಡಾ ಪ್ಯಾಶನ್ ಮೊಟಾರ ಸೈಕಲ್ (ಕೆಎ 32 ಎಸ್ 06) ದೊರಕಿದೆ ಎಂದು ಪಾರ್ವತಿ ಶಿವಕೇರಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅಶೋಕ ನಗರ ಠಾಣೆಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅಬಕಾರಿ ದಾಳಿ: ದಂಗಾಪೂರ ಗ್ರಾಮದಲ್ಲಿಯ ಬಸ್ ನಿಲ್ದಾಣದ ಹತ್ತಿರ ಇರುವ ಹೋಟೆಲ್ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಅಕ್ರಮವಾಗಿ ಮಧ್ಯವನ್ನು ತನ್ನ ಸ್ವಾಧೀನದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ದಂಗಾಪೂರ ಗ್ರಾಮಕ್ಕೆ ಹೋಗಿ ದಾಳಿ ಮಾಡಿ ಲೈಸನ್ಸ್ ಇಲ್ಲದೆ ಮಧ್ಯ- ಮಾರಾಟ ಮಾಡುತ್ತಿದ್ದ ಇಬ್ರಾಹಿಂ ತಂ ಬಾಷಾಸಾಬ ಕಂಟೇಕೊರ ಈತನನ್ನು ದಸ್ತಗೀರ ಮಾಡಿ ಆತನಿಂದ 1,300 ಮೌಲ್ಯದ ಮದ್ಯ, ಮದ್ಯ ಮಾರಿದ ನಗದು 290 ಜಪ್ತಿ ಮಾಡಿಕೊಂಡಿರುವ ನಿಂಬರ್ಗಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಟಕಾ- ಓರ್ವನ ಬಂಧನ: ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಚಿದಾನಂದ ತಂದೆ ಬಸಣ್ಣ ಜಮಾದಾರ ಧುತ್ರಗಾಂವ ಈತನಿಗೆ ದಸ್ತಗಿರಿ ಮಾಡಿ ಆತನಿಂದ ಒಂದು ಬಾಲ್ ಪೆನ್ನು, ಮಟಕಾ ಬರೆದ ಒಂದು ಚೀಟಿ ಹಾಗೂ ನಗದು 1,110 ಜಪ್ತಿ ಮಾಡಿಕೊಂಡು ಆತನ ವಿರುದ್ಧ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪ್ರಸಂಗ ಆಳಂದ ತಾಲೂಕಿನಲ್ಲಿ ನಡೆದಿದೆ.
ಟವೇರಾ ವಾಹನ ಕಳವು: ಮನೆಯ ಮುಂದೆಯೇ ನಿಲ್ಲಿಸಿದ್ದ ಟವೆರಾ ವಾಹನ ಕಾಣೆಯಾಗಿರುವ ಪ್ರಸಂಗ ಇಲ್ಲಿನ ರೋಜಾ ಠಾಣೆಯ ಯದುಲ್ಲಾ ಕಾಲೋನಿಯಲ್ಲಿ ಸಂಭವಿಸಿದೆ. ವಾಹನದ ಮಾಲೀಕರಾದ ಇಕ್ಬಾಲ್ ಜಮೀಲ್ ಅಹ್ಮದ್ ತಮ್ಮ ಚಾಲಕನ ಮನೆಯ ಮುಂದೆಯೇ ವಾಹನ ನಿಲ್ಲಿಸುತ್ತಿದ್ದರು. ಎಂದಿನಂತೆ ಮಾ.7 ರಂದೂ ವಾಹನ ಚಾಲಕನ ಮನೆಯ ಮುಂದೆಯೇ ನಿಲ್ಲಿಸಲಾಗಿತ್ತು. ಬೆಳಗ್ಗೆ ಎದ್ದು ನೋಡುವಷ್ಟರಲ್ಲೇ ವಾಹನ ನಾಪತ್ತೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

