ಗುಲ್ಬರ್ಗಾ

ಟೋಲ್ ಸಂಗ್ರಹ ರದ್ದಿಗೆ ಒತ್ತಾಯ

Published On :

ಚಿತ್ತಾಪುರ: ತಾಲೂಕಿನ ಸಣ್ಣೂರ ಕ್ರಾಸ್ ಬಳಿ ಮತ್ತು ಆಳಂದ ರಸ್ತೆಯಲ್ಲಿ ಸೇರಿದಂತೆ ರಾಜ್ಯದಲ್ಲಿರುವ ಹೆದ್ದಾರ್ಥಿಗಳಲ್ಲಿ ಟೋಲ್ ಸಂಗ್ರಹ ಮಾಡುವುದನ್ನು ಕೂಡಲೇ ನಿಲ್ಲಿಸುವಂತೆ ಕರವೇ ತಾಲೂಕು ಅಧ್ಯಕ್ಷ ನರಹರಿ ಕುಲ್ಕರ್ಣಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಟೋಲ್ ಸಂಗ್ರಹದ ಹೆಸರಿನಲ್ಲಿ ಸರ್ಕಾರವು ಖಾಸಗಿ ಸಹಭಾಗಿತ್ವದೊಂದಿಗೆ ಸೇರಿ ಹಗಲು ದರೋಡೆ ಮಾಡುತ್ತಿದೆ. ಇದರಿಂದ ಇದು ನೇರವಾಗಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ ಎಂದು ಅರೋಪಿಸಿದರು. ಖಾಸಗಿ ವಾಹನಗಳು ಪ್ರತಿತಿಂಗಳಿನಂತೆ ಸರ್ಕಾರಕ್ಕೆ ರಸ್ತೆ ತೆರಿಗೆಯನ್ನು ಕಟ್ಟುತ್ತಿದ್ದರೂ, ಮತ್ತೆ ಟೋಲ್ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವುದು ಖಂಡನೀಯವಾಗಿದ್ದು, ಇದನ್ನು ನಿಲ್ಲಿಸದಿದ್ದಲ್ಲಿ ಇದರ ವಿರುದ್ಧ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರವೇ ಅಧ್ಯಕ್ಷ ನರಹರಿ ಕುಲ್ಕರ್ಣಿ ಎಚ್ಚರಿಕೆ ನೀಡಿದ್ದಾರೆ.

ಐಟಿಐ ಸಂಸ್ಥೆಗಳಿಗೆ  ಸೂಚನೆ
ಗುಲ್ಪರ್ಗ: ಉದ್ಯೋಗ ಮತ್ತು ತರಬೇತಿ ಇಲಾಖೆಯು ರಾಜ್ಯಾದ್ಯಂತ ಕೌಶಲ್ಯ ತರಬೇತಿ ನೀಡಲು 158 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು, 196 ಅನುದಾನಿತ ಸಂಸ್ಥೆಗಳು ಹಾಗೂ 1150 ಅನುದಾನ ರಹಿತ ಖಾಸಗಿ ಸಂಸ್ಥೆಗಳ ಮೂಲಕ ಪ್ರತಿವರ್ಷ ಸುಮಾರು 68000 ವಿದ್ಯಾರ್ಥಿಗಳಿಗೆ 40 ವಿವಿಧ ವೃತ್ತಿಗಳಲ್ಲಿ ತರಬೇತಿ ನೀಡಲಾಗುತ್ತಿದೆ. ರಾಜ್ಯ ವೃತ್ತಿ ಶಿಕ್ಷಣ ಷರತ್ತಿನಡಿ ತರಬೇತಿ ನೀಡುತ್ತಿರುವ ವೃತ್ತ ಘಟಕಗಳಿಗೆ ಆಗಸ್ಟ್ 2012 ಮತ್ತು ಆಗಸ್ಟ್ 2013ರಲ್ಲಿ ಪ್ರವೇಶ ಮಾಡಿಕೊಂಡ ತರಬೇತಿದಾರರ ಪಟ್ಟಿಯನ್ನು ನಿಯಮಾನುಸಾರ ಪರಿಶೀಲಿಸಿ 2014ರ ಮಾ.15 ರೊಳಗೆ ಅನುಮೋದನೆ ನೀಡಲು ಆಯಾ ವಿಭಾಗದ ಜಂಟಿ ನಿರ್ದೇಶಕರುಗಳಿಗೆ ಸೂಚಿಸಲಾಗಿದೆ. ಈ ಪ್ರಯುಕ್ತ ನಿಗದಿತ ಸಮಯದೊಳಗೆ ಗುಲ್ಬರ್ಗ ಜಿಲ್ಲೆಯ ಎಲ್ಲ ಅನುದಾನಿತ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳು ತಮ್ಮ ಸಂಸ್ಥೆಯಲ್ಲಿ ಆಗಸ್ಟ್ 2012 ಮತ್ತು ಆಗಸ್ಟ್ 2013 ರಲ್ಲಿ ಪ್ರವೇಶ ಪಡೆದ ತರಬೇತಿದಾರರ ಪಟ್ಟಿಯನ್ನು ಅನುಮೋದನೆಗೆ ಕೂಡಲೇ ಗುಲ್ಬರ್ಗ ವಿಭಾಗದ ಜಂಟಿ ನಿರ್ದೇಶಕರಿಗೆ ಸಲ್ಲಿಸಲು ಜಂಟಿ ನಿರ್ದೇಶಕರು ಕೋರಿದ್ದಾರೆ.

ಎಂಜಿನಿಯರ್‌ಗಳ ಕಾದಾಟ: ಪ್ರತಿಭಟನೆ
ಯಾದಗಿರಿ:ಕುರ್ಚಿಗಾಗಿ ಕಾದಾಟ ನಡೆಸುತ್ತಿರುವ ಇಬ್ಬರು ಕೆಬಿಜೆಎನ್‌ಎಲ್ ಎಂಜೀನಿಯರ್‌ಗಳ ವರ್ಗಾವಣೆಗೆ ಆಗ್ರಹಿಸಿ ಕರವೇ (ಉತ್ತರ ಕರ್ನಾಟಕ) ಅಧ್ಯಕ್ಷ ಶರಣು ಗದ್ದುಗೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ರೈತರ ಜೀವನಾಡಿಯಾದ ಕೆಬಿಜೆಎನ್‌ಎಲ್ ಕಚೇರಿಯನ್ನು ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡಿರುವ ಅಧಿಕಾರಿಗಳನ್ನು ವರ್ಗಾವಣೆಗೊಳಿಸುವಂತೆ ಗದ್ದುಗೆ ಒತ್ತಾಯಿಸಿದರು.ಒಬ್ಬ ಆಧಿಕಾರಿ ಕಚೇರಿಗೆ ಬೀಗ ಜಡಿದರೆ ಮತ್ತೊಬ್ಬ ಅಧಿಕಾರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ರೈತರ ಹಿತಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾದ ಅಧಿಕಾರಿಗಳು ಸ್ವಹಿತಾಸಕ್ತಿಗಾಗಿ ಕಚ್ಚಾಟದಲ್ಲಿ ತೊಡಗಿದ್ದಾರೆ. ಕೆಬಿಜೆಎನ್‌ಎಲ್ ಇಲಾಖೆಯಲ್ಲಿ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಆರೋಪಿಸಿದರು.

ಅಲ್ಪಸಂಖ್ಯಾತರ ಮೋರ್ಚಾಕ್ಕೆ ನೇಮಕ
ಶಹಾಪುರ: ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ಡಾ. ಮಹ್ಮದ್ ಶಫಿ ತುನ್ನೂರ ಅವರ ನಿರ್ದೇಶನದ ಮೇರೆಗೆ ಶಹಾಪುರ ತಾಲೂಕಾ ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷರನ್ನಾಗಿ ಸೈಯದ್ ಸೋಫಿಸಾಬ ಎಸ್.ಜಮಾದಾರ ಏವೂರ ಮತ್ತು ಪ್ರ. ಕಾರ್ಯದರ್ಶಿಯನ್ನಾಗಿ ನಯೀಮ್ ಅಫಗಾನ್ ಅವರನ್ನು ನೇಮಕ ಮಾಡಲಾಗಿದೆ.

ರಸಗ್ರಹಣ ಕಾರ್ಯಕ್ರಮ
ಗುಲ್ಗರ್ಗ: ಗುಲ್ಬರ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಾ.11 ರಂದು ಮಧ್ಯಾಹ್ನ 11ಕ್ಕೆ ರಸಗ್ರಹಣ ಕಾರ್ಯಕ್ರಮದಡಿ ಹಿಂದೂಸ್ತಾನಿ ವಾದ್ಯ ಸಂಗೀತ (ಸಿತಾರ ವಾದನ) ಕುರಿತಂತೆ ಪ್ರಾತ್ಯಕ್ಷಿಕೆ, ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಏರ್ಪಡಿಸಿದೆ. ಮದರಾ(ಬಿ) ಗ್ರಾಮದ ಪ್ರಭುಲಿಂಗ ಜಿ. ಬೊರಟಿ ಪ್ರಾತ್ಯಕ್ಷಿಕೆ- ಪ್ರದರ್ಶನ ಕಾರ್ಯಕ್ರಮ ನಡೆಸಿಕೊಡುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.