ಹಕ್ಕುಪತ್ರಕ್ಕಾಗಿ ಒತ್ತಾಯ
ಕ.ಪ್ರ. ವಾರ್ತೆ ಯಾದಗಿರಿ ಮೇ 30
ರಾಜ್ಯದಲ್ಲಿ ಅರಣ್ಯ ಮತ್ತು ಕಂದಾಯ ಪ್ರದೇಶದ ಕುರಿತು ಮರು ಅಧ್ಯಯನ ನಡೆಸಿ, ಅರಣ್ಯ ಬೆಳೆಸಲು ಯೋಗ್ಯವಾದ ಭೂಮಿಯನ್ನು ಅರಣ್ಯಕ್ಕೆ ನೀಡಬೇಕು.
ಉಳಿದ ಜಮೀನನ್ನು ಕಂದಾಯ ಇಲಾಖೆ ವ್ಯಾಪ್ತಿಗೆ ಪಡೆಯಬೇಕು. ಇದನ್ನು ರೈತರ ಸಾಗುವಳಿಗೆ ನೀಡುವ ಸಾಧ್ಯತೆ ಕುರಿತು ಸಮೀಕ್ಷೆ ನಡೆಸಲು ಜಿಲ್ಲಾ ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ಸರ್ಕಾರ ನೇಮಿಸಿರುವ ಸಮಿತಿಗಳಲ್ಲಿ ರೈತ ಮುಖಂಡರನ್ನು ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿಲಾಯಿತು. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರೈತ, ಕೃಷಿಕಾರ್ಮಿಕರ ಸಂಘಟನೆ ಶುಕ್ರವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಬಡ ಭೂವಿಹೀನ ರೈತರು ಅರಣ್ಯವಲ್ಲದ ಕುರುಚಲು ಗಿಡ, ಕಲ್ಲು ಭೂಮಿ ಇರುವ ಪ್ರದೇಶದ ಜಮೀನಿನಲ್ಲಿ ತಮ್ಮ ಜೀವನೋಪಾಯಕ್ಕಾಗಿ ಸುಮಾರು 30-40 ವರ್ಷಗಳಿಂದ ಸುಮಾರು 1 ರಿಂದ 10 ಎಕರೆ ಭೂಮಿಯನ್ನು ಸಾಗುವಳಿ ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ. ಇವರಿಗೆ ಇದರಿಂದ ಬರುವ ಅಲ್ಪ ಸ್ವಲ್ಪ ವರಮಾನವೇ ಜೀವನಾಧಾರವಾಗಿದೆ. ಇಲ್ಲಿಯವರೆಗೆ ಆಳ್ವಿಕೆ ಮಾಡಿದ ಎಲ್ಲ ಸರ್ಕಾರಗಳಿಗೂ, ಈ ಬಡ ಜನರ ಜೀವನದ ವಸ್ತುಸ್ಥಿತಿ ತಿಳಿದಿದೆ. ಸರ್ಕಾರಕ್ಕೆ ಸೇರಿದ ಈ ಜಮೀನಿನಲ್ಲಿ ಉಳುಮೆಗೆ ಅವಕಾಶವಿ ನೀಡುತ್ತಾ ಬಂದಿವೆ.
ಹಕ್ಕುಪತ್ರ: ಆದರೆ ಸದರಿ ಸರ್ಕಾರಗಳು ಇಲ್ಲಿವರೆವಿಗೂ ಉಳುಮೆಗೆ ಅವಕಾಶ ನೀಡುತ್ತಾ ಬಂದಿದ್ದರೂ, ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಅವಶ್ಯಕ ಕ್ರಮಗಳನ್ನು ಕೈಗೊಂಡಿಲ್ಲ.
ಇವರಿಗೆ ಹಕ್ಕುಪತ್ರ ಲಭಿಸದೆ ಇರುವುದರಿಂದ ಆಗಿಂದಾಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ರೈತರಿಗೆ ತೀವ್ರ ಕಿರುಕುಳ ನೀಡುತ್ತಿದ್ದಾರೆ. ಇವರಿಗೆ ಉಳುಮೆ ಮಾಡಲು ಬಿಡುವುದಿಲ್ಲ ಅಥವಾ ಇವರು ಬೆಳೆದ ಫಸಲನ್ನು ಕಿತ್ತು ಹಾಕುತ್ತಾರೆ. ತಾವೇ ಬಂದು, ಇವರ ಹೊಲಗಳಲ್ಲಿ ಅರಣ್ಯ ಗಿಡಗಳನ್ನು ಹಚ್ಚುತ್ತಾರೆ. ಹೀಗಾಗಿ ರೈತರು ಸದಾ ಒಂದು ರೀತಿಯ ಅಭದ್ರತೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ.
ನನೆಗುದಿ: ಸಾಗುವಳಿ ಭೂಮಿಯನ್ನು ಸಕ್ರಮಗೊಳಿಸಿ ಹಕ್ಕುಪತ್ರವನ್ನು ನೀಡುವಂತೆ ಆಗ್ರಹಿಸಿ ಆರ್ಕೆಎಸ್ ರೈತ ಸಂಘಟನೆಯೂ ಸೇರಿದಂತೆ ಹಲವಾರು ರೈತ ಸಂಘಟನೆಗಳು ದಶಕಗಳಿಂದ ಎಲ್ಲಾ ಸರ್ಕಾರಗಳಿಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಆದರೆ ಈವರೆಗೂ ಯಾವ ಸರ್ಕಾರಗಳೂ ಇತ್ತ ಗಮನ ಹರಿಸಿಲ್ಲ. ಅವರ ಸಮಸ್ಯೆ ನನೆಗುದಿಗೆ ಬಿದ್ದಿದೆ. ಬಗರ್ ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಲು ವಿವಿಧ ರೈತ ಸಂಘಟನೆಗಳ ಮುಖಂಡರನ್ನು ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು ಮನವಿ ಮಾಡಿದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಸಂಘಟನೆ ರಾಜ್ಯ ಸಮಿತಿ ಸದಸ್ಯ ಕೆ. ಸೋಮಶೇಖರ್ ಯಾದಗಿರಿ ಹಾಗೂ ತಾಲೂಕು ಅಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿದರು. ಅಧ್ಯಕ್ಷತೆಯನ್ನು ಕಾರ್ಯದರ್ಶಿ ವೆಂಕಟರೆಡ್ಡಿ ಎಸ್. ವಹಿಸಿದ್ದರು. ವಿವಿಧ ಗ್ರಾಮಗಳು ಮತ್ತು ತಾಂಡಾಗಳಿಂದ ನರಸಪ್ಪ ಬದ್ದಿಗಿ, ರೂಮ್ಯಾ, ಚಂದರ್, ಮೋಹನ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

