'ಕಟ್ಟಿಮನಿ ಸಾಹಿತ್ಯ ಅಧ್ಯಯನ ಅಗತ್ಯ'
ಕನ್ನಡಪ್ರಭ ವಾರ್ತೆ ಹಾಸನ ಆ 22
ಮೌಲ್ಯಗಳು ಕುಸಿಯುತ್ತಿರುವ, ಆದರ್ಶ ಮರೆಯಾಗುತ್ತಿರುವ, ಕೇವಲ ಹಣಕ್ಕಾಗಿಯೇ ಬದುಕುವ ಇಂದಿನ ದಿನಗಳಲ್ಲಿ ಕಟ್ಟಿಮನಿಯವರ ಸಾಹಿತ್ಯವನ್ನು ಯುವಕರು ಅಧ್ಯಯನ ಮಾಡಬೇಕಾದ ಅಗತ್ಯತೆ ಇದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಚ್.ಎಲ್. ಜನಾರ್ದನ್ ಅಭಿಪ್ರಾಯಪಟ್ಟಿದ್ದಾರೆ.
ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ಹಾಗೂ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಗುರುವಾರ ಮೊಸಳೆ ಹೊಸಹಳ್ಳಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಬಸವರಾಜ ಕಟ್ಟಿಮನಿ ಅವರ ಜೀವನ-ಸಾಹಿತ್ಯ-ಸಾಧನೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಬಡತನದಲ್ಲೇ ಹುಟ್ಟಿ ಬೆಳೆದ ಕಟ್ಟಿಮನಿಯವರ ಸಾಹಿತ್ಯದಲ್ಲಿ ಸ್ವಾತಂತ್ರ್ಯ ಹೋರಾಟದ ಚಿತ್ರಣವಿದೆ. ದೌರ್ಜನ್ಯದ ವಿರುದ್ಧ ರೋಷವಿದೆ, ಗ್ರಾಮಜೀವನದ ಪ್ರೀತಿಯಿದೆ, ವ್ಯವಸ್ಥೆಯ ವಿರುದ್ಧ ಕಾರುವ ಕಿಡಿ ಇದೆ. ತಮ್ಮ ವ್ಯಕ್ತಿತ್ವವನ್ನು ಆದರ್ಶಮಯವಾಗಿ ರೂಪಿಸಿಕೊಳ್ಳುವಂತಾಗಲಿ, ಭ್ರಷ್ಟಾಚಾರ, ದುರಾಡಳಿತದ ವಿರುದ್ಧ ದನಿ ಎತ್ತುವಂತಾಗಲಿ ಎಂದು ಆಶಿಸಿದರು. ಇಂದಿನ ವಿದ್ಯಾರ್ಥಿಗಳು ಹಿಂದಿನ ಸಾಹಿತ್ಯವನ್ನು ಓದುವ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಪ್ರೀತಿ: ಗ್ರಾಮೀಣ ಪ್ರದೇಶದ ಪ್ರೀತಿಯನ್ನು ಬೆಳೆಸಿಕೊಂಡು, ಸಮಾಜದ ಜೊತೆ ತಮ್ಮನ್ನು ಗುರುತಿಸಿಕೊಂಡು ಚಲನಶೀಲವಾದ ಸಾಹಿತ್ಯವನ್ನು ರಚಿಸಿದವರು ಬಸವರಾಜ ಕಟ್ಟಿಮನಿಯವರು ಎಂದು ಹೇಳಿದರು.
ಲೇಖಕ ಗೊರೂರು ಶಿವೇಶ್ ಮಾತನಾಡಿ, ಇತಿಹಾಸ ಇಂದು ಕೇವಲ ರಾಜರ ಕತೆಗಳಾಗಿ ಮಾತ್ರ ಉಳಿದುಕೊಂಡಿದೆ. ಆದರೆ ಸಾಹಿತ್ಯ ಆಯಾ ಕಾಲದ ಜನಜೀವನದ ಚಿತ್ರಣವನ್ನು ನೀಡುತ್ತದೆ. 20ನೇ ಶತಮಾನದ ಸಾಹಿತ್ಯ ಚಳವಳಿಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ಪರಿಚಯಿಸುವ ಸದುದ್ದೇಶದಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸುತ್ತಿದೆ. ಆ ಹಿನ್ನಲೆಯಲ್ಲಿ ಪ್ರಗತಿಶೀಲ ಚಳವಳಿ ಹಾಗೂ ಆ ಚಳವಳಿಯ ಪ್ರಮುಖ ಬರಹಗಾರರಾದ ಬಸವರಾಜ ಕಟ್ಟೀಮನಿಯವರನ್ನು ಪರಿಚಯಿಸುವುದು ಈ ವಿಚಾರ ಸಂಕಿರಣದ ಉದ್ದೇಶವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕನ್ನಡ ಸಹ ಪ್ರಾಧ್ಯಾಪಕ ಡಾ.ಡಿ.ಶ್ರೀನಿವಾಸ ಮಾತನಾಡಿ, ಪ್ರಗತಿಶೀಲ ಸಾಹಿತ್ಯಕ್ಕೆ ಬಸವರಾಜ ಕಟ್ಟೀಮನಿ ಕೊಡುಗೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಸಮಾಜದ ಸಮಸ್ಯೆಗಳನ್ನು ಕುರಿತು ನಿರ್ಭಯವಾಗಿ ಬರೆಯುವುದಕ್ಕೆ ಅವಕಾಶವಿರುವ ವಾತಾವರಣ ನಿರ್ಮಿಸಿ, ಸಮೃದ್ಧ ಗದ್ಯಸಾಹಿತ್ಯವನ್ನು ರಚಿಸಿ ಆ ಮೂಲಕ ಓದುಗ ವಲಯವನ್ನು ವಿಕಾಸಗೊಳಿಸಿದ ಕೀರ್ತಿ ಪ್ರಗತಿಶೀಲ ಸಾಹಿತ್ಯಕ್ಕೆ ಸಲ್ಲುತ್ತದೆ. ಈ ಘಟ್ಟದ ಪ್ರಾತಿನಿಧಿಕ ಬರಹಗಾರರಲ್ಲಿ ಒಬ್ಬರಾಗಿ ಪ್ರಗತಿಶೀಲತೆಯ ಮೌಲ್ಯಗಳನ್ನು ಮೈಗೂಡಿಸಿಕೊಂಡರೂ ಆ ಚಳವಳಿಯಿಂದ ಸ್ವಲ್ಪ ದೂರ ನಿಂತು ಬರೆದವರು ಬಸವರಾಜ ಕಟ್ಟಿಮನಿ.
ಬರವಣಿಗೆಯಲ್ಲಿ ಸಿಡಿಲಿನ ಶಕ್ತಿ, ಶೋಷಣೆ ವಿರುದ್ಧ ಕಿಡಿ: ತಮ್ಮ ಬರವಣಿಗೆಯಲ್ಲಿ ಸಿಡಿಲಿನ ಶಕ್ತಿ ಹಾಗೂ ಶೋಷಣೆಯ ವಿರುದ್ಧ ಕಿಡಿಯನ್ನು ಉಳಿಸಿಕೊಂಡರೂ, ಪ್ರಗತಿಶೀಲ ಲೇಖಕರಲ್ಲಿ ಕಾಣದ ಮೃದುತ್ವ, ಪ್ರೀತಿ, ವಿಶ್ವಾಸ ಹಾಗೂ ಗ್ರಾಮಜೀವನದ ಬಗೆಗಿನ ಅಪಾರವಾದ ಪ್ರೀತಿ, ಸಂಕೀರ್ಣತೆಯ ಜೊತೆಗೆ ಸರಳತೆಯನ್ನು ತಮ್ಮ ಬರವಣಿಗೆಯಲ್ಲಿ ಮೂಡಿಸಿದ್ದು ಕಟ್ಟಿಮನಿಯವರ ವಿಶೇಷ. ಅವರ ಅನುಭವ ಗಟ್ಟಿಯಾದದ್ದು, ಶೈಲಿ ಹರಿತವಾದದ್ದು ಎಂದು ಹೇಳಿದರು.
ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಸಕಲೇಶಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಎಚ್.ಕೆ.ಅಶೋಕ್ ಅವರು ಬಸವರಾಜ ಕಟ್ಟೀಮನಿಯವರ ಸಾಹಿತ್ಯದ ಧೋರಣೆಗಳು ಎಂಬ ವಿಷಯವನ್ನು ಕುರಿತು ಉಪನ್ಯಾಸ ನೀಡಿದ ಅವರು, ಕಟ್ಟಿಮನಿಯವರು ಸ್ವಾತಂತ್ರ್ಯ ಚಳುವಳಿಯ ಹೊರನಿಂತು ಮಾತನಾಡಿದವರಲ್ಲ. ನೇರವಾಗಿ ಚಳುವಳಿಯಲ್ಲಿ ಭಾಗವಹಿಸಿ ಸೆರೆವಾಸವನ್ನು ಅನುಭವಿಸಿದರು.
ಹಾಗಾಗಿ ಅವರ ಬರಹಗಳಲ್ಲಿ ದೇಶಪ್ರೇಮ, ದೌರ್ಜನ್ಯದ ವಿರುದ್ಧ ಪ್ರತಿಭಟನೆಯ ಕಾವು ಹೆಚ್ಚಾಗಿ ಕಾಣುತ್ತದೆ. ಜೊತೆಗೆ ಭಾರತೀಯ ಮಹಿಳೆಯರ ನೋವನ್ನು, ರೈತರ ಬದುಕಿನ ಭೀಕರತೆಯನ್ನು, ಸಾಮಾಜಿಕ ಅಸಮಾನತೆಯನ್ನು, ಗ್ರಾಮಜೀವನದ ಸಂಘರ್ಷವನ್ನು ಅವರ ಬರಹಗಳಲ್ಲಿ ಕಾಣುತ್ತೇವೆ. ಸ್ವಾತಂತ್ರ್ಯ ಎನ್ನುವುದು ಅರ್ಥ ಕಳೆದುಕೊಳ್ಳುತ್ತಿರುವ, ಶೋಷಣೆ ಇನ್ನೂ ಉಳಿದುಕೊಂಡಿರುವ ಇಂದಿನ ದಿನಗಳಲ್ಲಿ ಕಟ್ಟಿಮನಿಯವರ ಸಾಹಿತ್ಯ ಇಂದಿಗೂ ಅತ್ಯಂತ ಪ್ರಸ್ತುತ ಎನಿಸುತ್ತದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸಿ.ಕೆ.ಹರೀಶ್ ಮಾತನಾಡಿ, ಎಲ್ಲಿ ಶೋಷಣೆಯ ವಿರುದ್ಧ ದನಿ ಏರುವುದೋ ಅಲ್ಲಿ ಸಾಹಿತ್ಯ ಮತ್ತು ಹೋರಾಟ ಹುಟ್ಟಿಕೊಳ್ಳುತ್ತದೆ. ಇಂದು ಪೋಷಕರು ಹಾಗೂ ಸಮಾಜ ಕೇವಲ ಜ್ಞಾನದ ಬೆನ್ನತ್ತಿದೆ. ಆದರೆ ಸಾಹಿತ್ಯ ನೀಡುವ ಸಂತೋಷ, ಆಹ್ಲಾದ, ಶಾಂತಿ, ಆ ತೃಪ್ತಿಯನ್ನು ನೀಡಿದಂತೆ ಕೇವಲ ಜ್ಞಾನ ನೀಡದು. ಅಭಿರುಚಿಯಿಂದ ಸಾಹಿತ್ಯದ ಓದುಗರಾದವರಿಗೆ ಇವು ದೊರೆಯುತ್ತವೆ. ಸಾಹಿತ್ಯದ ಓದು ಹೊಸ ಚಿಂತನೆಯನ್ನು ಹುಟ್ಟಿಹಾಕಿ ಬೌದ್ಧಿಕತೆಯ ವಿಕಾಸಕ್ಕೆ ಸಹಾಯಕವಾಗುತ್ತದೆ. ವಿದ್ಯಾರ್ಥಿಗಳು ಈ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಂ.ಪಿ.ಗೋಪಾಲಲ್ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಸಾಹಿತ್ಯವನ್ನು ಪ್ರಸಾರ ಮಾಡುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಸ್ತುತ್ಯಾರ್ಹವಾಗಿದೆ. ಕೇವಲ ಪಠ್ಯಜ್ಞಾನಕ್ಕೆ ಸೀಮಿತರಾಗುತ್ತಿರುವ ಇಂದಿನ ವಿದ್ಯಾರ್ಥಿ ಸಮುದಾಯದ ಮಾನಸಿಕ ವಿಕಾಸಕ್ಕೆ ಇಂತಹ ಕಾರ್ಯಕ್ರಮಗಳು ಸಹಾಯಕವಾಗುತ್ತವೆ. ಈಪ್ರಕ್ರಿಯೆ ನಿರಂತರವಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ದ್ವಿತೀಯ ಬಿ.ಎ.ವಿದ್ಯಾರ್ಥಿಗಳು ಹಾಡಿದ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಎನ್.ಮಂಜುನಾಥ್ ಸ್ವಾಗತಿಸಿದರು. ಇತಿಹಾಸ ವಿಭಾಗದ ರಾಮಚಂದ್ರ ವಂದಿಸಿದರು, ಅರ್ಥಶಾಸ್ತ್ರ ವಿಭಾಗದ ಎಂ.ಮಾದೇಗೌಡ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

