29, ರಾಜ್ಯ ಮಟ್ಟದ ವಿಚಾರ ಸಂಕಿರಣ
ಹೊಳೆನರಸೀಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆ.29ರಂದು ರಾಷ್ಟ್ರದ ಆಂತರಿಕ ಭದ್ರತೆಗಿರುವ ಸವಾಲುಗಳು ಎಂಬ ವಿಷಯದ ಕುರಿತಂತೆ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲು ಆಸಕ್ತಿ ಇರುವ ಪದವಿ ವಿದ್ಯಾರ್ಥಿಗಳು ಆ.25ರೊಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವಂತೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಬಿ.ಇರ್ಷಾದ್ ಕೋರಿದ್ದಾರೆ. ಇದೇ ಮೊದಲ ಬಾರಿಗೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಿಂದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದ್ದು, ಈ ವಿಚಾರ ಸಂಕಿರಣದಲ್ಲಿ ರಾಜ್ಯದ ನಾನಾ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಭಾಗವಹಿಸಲಿಚ್ಛಿಸುವ ವಿದ್ಯಾರ್ಥಿಗಳು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಪಿ.ಆರ್.ಶಾಂತ ಅಥವಾ ಸಹಾಯಕ ಪ್ರಾಧ್ಯಾಪಕ ಎನ್.ವಿ.ಶ್ರೀನಿವಾಸ್ ಅವರಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿ ಕೊಳ್ಳಬಹುದು. ಮಾಹಿತೆಗ ಸಂಪರ್ಕಿಸುವ ದೂರವಾಣಿ 9611807132, 9964604144 ಅಥವಾ ತಮ್ಮ ಕಾಲೇಜಿನ ಮುಖ್ಯಸ್ಥರ ಗುರುತಿನ ಪತ್ರದೊಂದಿಗೆ ಕಾಲೇಜಿನ ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಳೆನರಸೀಪುರ, ಹಾಸನ ಜಿಲ್ಲೆ ಈ ವಿಳಾಸಕ್ಕೆ ತಮ್ಮ ಪ್ರವೇಶ ಪತ್ರವನ್ನು ಕಳಿಸಿಕೊಡುವಂತೆ ಕೋರಲಾಗಿದೆ.
5 ಮಹಿಳೆಯರಿಗೆ ಶಿವದೀಕ್ಷೆ
ಅರಸೀಕೆರೆ: ಸಾಮಾಜಿಕ, ಧಾರ್ಮಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸ್ತ್ರೀಯರಿಗೆ ಸಮಾನತೆ ನೀಡಿ ಪುರುಷರಷ್ಟೇ ಸಮಾನ ಸ್ಥಾನಮಾನ ನೀಡಿದ ಏಕೈಕ ಧರ್ಮ ವೀರಶೈವ ಧರ್ಮ ಎಂದು ಚನ್ನರಾಯಪಟ್ಟಣ, ನುಗ್ಗೆಹಳ್ಳಿ ರಂಭಾಪುರಿ ಶಾಖಾ ಮಠ ಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ತಾಲೂಕಿನ ತಳ್ಳೂರು ಗ್ರಾಮದ ಜಂಬುಲಿಂಗೇಶ್ವರ ಸ್ವಾಮಿ ಮತ್ತು ಕುಂಭಾಭಿಷೇಕ ಹಾಗೂ ವೀರಶೈವ ವಟುಗಳೊಂದಿಗೆ ಐವರು ಮಹಿಳೆಯರಿಗೆ ಶಿವದೀಕ್ಷೆ ನೀಡಿ ಇಷ್ಟಲಿಂಗ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
ಶ್ರೀಗಳು ಆದಿ ಅನಾದಿಕಾಲದಿಂದಲೂ ಎಲ್ಲಾ ಧರ್ಮಗಳು ಸ್ತ್ರೀಯರನ್ನು ಶೋಷಣೆ ಮಾಡುತ್ತ ದೇವರಿಂದ ದೂರವಿಟ್ಟರೆ ವೀರಶೈವ ಧರ್ಮ ಶಿವಧೀಕ್ಷೆ ನೀಡಿ ಅವರಿಗೆ ಸಮಾನತೆ ನೀಡಿದೆ ಎಂದರು. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ, ಸ್ತ್ರೀಯರಿಗೆ ಸಮಾನತೆ ನೀಡದ ಧರ್ಮವನ್ನು ತಿರಸ್ಕರಿಸಿ ವೀರಶೈವಧರ್ಮ ಸ್ವೀಕರಿಸಿ ಮಹಿಳೆಯರಿಗೆ ಎಲ್ಲ ರಂಗಗಳಲ್ಲಿ ಸಮಾನತೆ ದೊರಕಿಸಿ ಕೊಡಲು ಹೋರಾಟ ಮಾಡಿದ ಮಹಾನ್ ಪುರುಷ ಎಂದರು. ಹರಿದು ಹಂಚಿ ಹೋಗಿದ್ದ ವೀರಶೈವರನ್ನು ಒಂದುಗೂಡಿಸಿ ಪಂಚಪೀಠ ಸ್ಥಾಪಿಸಿದ ಕೀರ್ತಿ ಜಗದ್ಗುರು ರೇಣುಕಾಚಾರ್ಯ ಅವರದ್ದಾದರೆ, ಬಸವಣ್ಣ ಮೇಲು ಕೀಳುಗಳನ್ನು ಹೋಗಲಾಡಿಸಿ ಎಲ್ಲರಿಗೂ ಲಿಂಗಧಾರಣೆ ಮಾಡುವ ಮೂಲಕ ವೀರಶೈವಧರ್ಮ ಉದ್ಧಾರಕ್ಕೆ ಕಾರಣರಾದರು ಎಂದು ಹೇಳಿದರು. ವೀರಶೈವನಾಗಿ ಹುಟ್ಟಿದ ಪ್ರತಿಯೊಬ್ಬನಿಗೆ ದೀಕ್ಷೆಯಾಗಲೇಬೇಕು. ದೀಕ್ಷೆಯಾಗದಿದ್ದಲ್ಲಿ ಮೋಕ್ಷವಿಲ್ಲ. ಕೊರಳಲ್ಲಿ ರುದ್ರಾಕ್ಷಿ, ಹಣೆಯಲ್ಲಿ ವಿಭೂತಿ ಧರಿಸಿ ಅಂಗೈಯನ್ನು ಲಿಂಗದ ಪೀಠವನ್ನಾಗಿಸಿ ಶ್ರದ್ಧಾಭಕ್ತಿಯಿಂದ ಯಾರು ಪೂಜೆ ಮಾಡುತ್ತಾರೋ ಆತ ನಿಜವಾದ ಸಂಸ್ಕಾರವಂತನಾಗುತ್ತಾನೆ. ಹಣೆಯಲ್ಲಿ ಧರಿಸುವ ವಿಭೂತಿಯ 3 ಎಳೆಗಳು ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಪ್ರತಿಪಾದಿಸುತ್ತವೆ. ಬ್ರಹ್ಮ ಮಂತ್ರಪ್ರಿಯನಾದರೆ, ವಿಷ್ಣು ಅಲಂಕಾರಪ್ರಿಯ, ಶಿವ ಭಕ್ತಪ್ರಿಯನೂ ಅಭಿಷೇಕಪ್ರಿಯನೂ ಹೌದು. ಅದಕ್ಕಾಗಿಯೇ ವೀರಶೈವರು ಶುಭ ಹಾಗೂ ಅಶುಭ ಸಂದರ್ಭಗಳಲ್ಲಿ ಗುರುಗಳನ್ನು ಕರೆಯಿಸಿ ಶಿವನಿಗೆ ಅಭಿಷೇಕಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದರು. ವೇದರತ್ನ ವಿಶ್ವರಾಧ್ಯ ಶಾಸ್ತ್ರಿ ಮಾತನಾಡಿದರು. ಗ್ರಾಮದೇವತೆಗಳಾದ ಬನ್ನಿಮಹಾಕಾಳಿ, ವೀರಭದ್ರಸ್ವಾಮಿ ಹಾಗೂ ಧೂತರಾಯ ಸ್ವಾಮಿ ಸಮ್ಮುಖದಲ್ಲಿ ಶ್ರೀ ಜಂಬುಲಿಂಗೇಶ್ವರ ಸ್ವಾಮಿಯವರ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಹಾಗೂ ದೇವರಿಗೆ ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

