ಆನೆ ಕಾರಿಡಾರ್ಗೆ ಆಗ್ರಹ
ಕ.ಪ್ರ.ವಾರ್ತೆ ಹಾಸನ ಆ. 27
ಖಾಸಗಿ ಜಮೀನುಗಳನ್ನು ವಶಪಡಿಸಿಕೊಂಡು ಪಶ್ಚಿಮ ಘಟ್ಟದ ಅರಣ್ಯ ಪ್ರದೇಶವನ್ನು ವಿಸ್ತರಿಸಿ ಆನೆ ಕಾರಿಡಾರ್ ನಿರ್ಮಾಣ ಮಾಡುವ ಮೂಲಕ ಕಾಡಾನೆಗಳ ಹಾವಳಿಯಿಂದ ಮುಕ್ತಗೊಳಿಸುವಂತೆ ಆಗ್ರಹಿಸಿ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ನಾನಾ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಅರಣ್ಯ ಭವನದ ಮುಂದೆ ಕೆಲ ಸಮಯ ಧರಣಿ ನಡೆಸಿ ಕಾಡಾನೆ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಅರಣ್ಯ ಅಧಿಕಾರಿಗಳಿಗೆ ಮನವಿ ನೀಡಿದರು.
ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಲಿಯ ಗ್ರಾಮಗಳಾದ ಬಿಸಲೆ, ಬೋರನಮನೆ, ಮಾವಿನೂರು,ಯತ್ತಹಳ್ಳ, ಮಂಕನಹಳ್ಳಿ, ಹೊಂಗಡಹಳ್ಳ, ಕಾಗಿನಹರೆ, ಬಾಳೆಹಳ್ಳ, ಹತ್ತಿಹಳ್ಳಿ ಸೇರಿದಂತೆ ನಾನಾ ಗ್ರಾಮಸ್ಥರು ಪಶ್ಚಿಮಘಟ್ಟದ ಅರಣ್ಯಕ್ಕೆ ಹೊಂದಿಕೊಂಡಿರುವ ತಮ್ಮ ಜಮೀನುಗಳನ್ನು ಅರಣ್ಯ ವಿಸ್ತರಣೆಗೆ ಬಿಟ್ಟು ಕೊಡಲು ಒಪ್ಪಿಗೆ ಪತ್ರವನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿರುವ ಖಾಸಗಿ ಜಮೀನುಗಳು, ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಇದ್ದು, ದಟ್ಟ ಅರಣ್ಯ ಪ್ರದೇಶವನ್ನು ಹೊಂದಿದೆ.
ಕಾಡಾನೆ ಉಪಟಳದಿಂದ ಬೇಸತ್ತ ಗ್ರಾಮಸ್ಥರು: ಇಲ್ಲಿನ ರೈತರಿಗೆ ಕಾಡಾನೆ, ಕಾಡುಕೋಣ, ಹುಲಿ, ಚಿರತೆ, ಕಾಡುಹಂದಿಗಳ ಉಪಟಳದಿಂದ ಬೇಸತ್ತಿದ್ದಾರೆ. ಅಲ್ಲದೆ ನೂರಾರು ಬಾರಿ ಅರಣ್ಯ ಇಲಾಖೆಗೆ ರಕ್ಷಣೆಗಾಗಿ ಹಾಗೂ ಪರಿಹಾರಕ್ಕಾಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ರೈತರ ಜಮೀನುಗಳನ್ನು ಪಶ್ಚಿಮಘಟ್ಟ ಅರಣ್ಯಾಭಿವೃದ್ಧಿಗಾಗಿ ಸರ್ಕಾರ ವಹಿಸಿಕೊಳ್ಳಬೇಕು. ವನ್ಯ ಜೀವಿಗಳ ಉಪಟಳದಿಂದ ಬೇಸತ್ತಿರುವ ರೈತರಿಗೆ ಸರ್ಕಾರ ಸೂಕ್ತ ಬೆಲೆ ಹಾಗೂ ಪರಿಹಾರವನ್ನು ನೀಡಿದರೆ ಸ್ವಇಚ್ಛೆಯಿಂದ ಸರ್ಕಾರಕ್ಕೆ ಜಮೀನನ್ನು ನೀಡಲು ಸಿದ್ದವಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ವನ್ಯ ಜೀವಿಗಳ ದಾಳಿಯಿಂದ ಈ ಭಾಗದ ಕೃಷಿ ಸಂಪೂರ್ಣ ನಷ್ಟವಾಗಿದ್ದು, ಈ ನಷ್ಟಕ್ಕೆ ಸರ್ಕಾರದಿಂದ ವೈಜ್ಞಾನಿಕ ಪರಿಹಾರವು ಸಿಗುತ್ತಿಲ್ಲ. ಸಮಸ್ಯೆ ನಿರಂತರವಾಗಿರುವುದರಿಂದ ಈ ಭಾಗದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಕೃಷಿ ಭೂಮಿಯನ್ನು ಪಾಳು ಬೀಡಲಾಗಿದೆ. ಹಿಂದಿನ ಸರ್ಕಾರದ ಅರಣ್ಯ ಮಂತ್ರಿಗಳೇ ಈ ಪ್ರದೇಶಕ್ಕೆ ಭೇಟಿ ಕೊಟ್ಟು ಸಮಸ್ಯೆಗಳನ್ನು ಪರಿಶೀಲಿಸಿ ಒಪ್ಪಿಗೆ ಸೂಚಿಸಿದ್ದರೂ ಸಹ ಯಾವುದೇ ಪ್ರಗತಿ ಕಾರ್ಯ ಆಗಿಲ್ಲ ಎಂದು ದೂರಿದರು.
ಕಂದಕ ತೋಡುವುದರಿಂದ ಪ್ರಯೋಜನವಿಲ್ಲ: ಈ ಹಿಂದೆಯೇ ಈ ಭಾಗದಲ್ಲಿ ಸೋಲಾರ್ ಬೇಲಿ ಮತ್ತು ಕಂದಕ ನಿರ್ಮಿಸಿದ್ದು, ಇದು ಸಂಪೂರ್ಣವಾಗಿ ವಿಫಲವಾಗಿದ್ದು, ಮತ್ತೆ ಸರ್ಕಾರ ಕಳೆದ ಬಜೆಟ್ನಲ್ಲಿ ಆನೆ ಹಾವಳಿಗಳ ಪರಿಹಾರಗಳಿಗೆ ಸೋಲಾರ್ ವಿದ್ಯುತ್ ಬೇಲಿ ಮತ್ತು ಕಂದಕ ತೋಡಲು ಹಣ ಮೀಸಲಿರಿಸಿದೆ. ಈ ಭಾಗದಲ್ಲಿ ಬೇಲಿ ಮತ್ತು ಕಂದಕ ತೋಡುವುದರಿಂದ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಭಾಗದಲ್ಲಿ ಕಂದಕ ತೋಡುವ ಕಾರ್ಯವನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.
ಕೇಂದ್ರದ ಸಿಇಸಿ ವರದಿಯನ್ವಯ ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಅ.5, 2012ರಲ್ಲಿ ನಡೆದ ಸಭೆಯಲ್ಲಿ ಅರಣ್ಯ ಇಲಾಖೆಯ ಮುಖ್ಯಸ್ಥರು, ಕಾದಿಟ್ಟ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ, ದಟ್ಟ ಪ್ರಾಕೃತಿಕ ಅರಣ್ಯ ಪ್ರದೇಶವನ್ನು ಖಾಸಗಿ ಜಮೀನನ್ನು ವಶಪಡಿಸಿಕೊಂಡು ಜೀವ ವೈವಿದ್ಯ ಸೂಕ್ಷ್ಮ ಪ್ರದೇಶಗಳನ್ನು ರಕ್ಷಿಸಲು ತೀರ್ಮಾನಿಸಿತ್ತು. ಈ ಭಾಗದ ರೈತರು ಸುಮಾರು 2216 ಎಕರೆ ಪ್ರದೇಶವನ್ನು ಸರ್ಕಾರಕ್ಕೆ ನೀಡಲು ಸಿದ್ದವಿದ್ದೇವೆ. ಇದರಿಂದಾಗಿ ಸುಮಾರು 10 ಸಾವಿರ ಎಕರೆ ಪ್ರದೇಶವು ವನ್ಯ ಪ್ರಾಣಿಗಳಿಗೆ ಮುಕ್ತವಾಗಲಿದೆ.
ಆದ್ದರಿಂದ ಈ ಭಾಗದ ರೈತರ ಜಮೀನಿಗೆ ಸೂಕ್ತ ಬೆಲೆ (ಪ್ರತಿ ಎಕರೆಗೆ 15 ಲಕ್ಷ ರು.ನಂತೆ)ಯನ್ನು ನಿಗದಿ ಪಡಿಸಿ ಸರ್ಕಾರ ಜಮೀನನ್ನು ತನ್ನ ವಶಕ್ಕೆ ಪಡೆದುಕೊಂಡು ಕಾಡಾನೆ ಹಾಗೂ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಬೇಕು ಹಾಗೂ ಈ ಭಾಗದಲ್ಲಿ ವಾಸವಾಗಿರುವ ಭೂ ರಹಿತ ಜನರಿಗೆ ಸೂಕ್ತ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಗದೀಶ್, ಹತ್ತಿಹಳ್ಳಿ ದೇವರಾಜು, ವಿರೂಪಾಕ್ಷ, ಪರಮೇಶ್ಗೌಡ, ಗೌತಮ್, ಕುಮಾರ್ಗೌಡ, ರಂಗೇಗೌಡ, ಮಂಜುನಾಥ್, ಸುರೇಶ್, ಮೋಹನ್, ಪ್ರವೀಣಕುಮಾರ್, ರಾಜು, ಸೋಮು, ವಿನಯಕುಮಾರ್, ಜಗದೀಶ್, ಕುಮಾರ್, ಹೋರಾಟಗಾರ ಮಂಜುನಾಥ್ದತ್ತ, ಆರ್.ಪಿ.ವೆಂಕಟೇಶ್ಮೂರ್ತಿ ಇತರರು ಇದ್ದರು.
ಪ್ರತಿಭಟನಾ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಭೇಟಿ ನೀಡಿ ಆನೆ ಕಾರಿಡಾರ್ ನಿರ್ಮಾಣದ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿದ್ದು, ಈ ಬಗ್ಗೆ ಸರ್ಕಾರ ಒಲವನ್ನು ತೋರಿದೆ. ಆದ್ದರಿಂದ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

