ಕಾಂಗ್ರೆಸ್ ಮಲತಾಯಿ ಧೋರಣೆ
ಕನ್ನಡಪ್ರಭ ವಾರ್ತೆ ಅರಸೀಕೆರೆ ಆ. 28
ಸರ್ಕಾರ ರಾಜ್ಯಾದ್ಯಂತ 52 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿದ್ದರೂ, ರಾಜ್ಯದಲ್ಲೇ ಅತೀ ಹೆಚ್ಚು ಬರ ಪೀಡಿತವಾಗಿರುವ ಅರಸೀಕೆರೆ ಕ್ಷೇತ್ರವನ್ನು ಈ ಪಟ್ಟಿಯಲ್ಲಿ ಸೇರಿಸದಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಮಲತಾಯಿ ಧೋರಣೆಗೆ ಉದಾಹರಣೆಯಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ರೇಣುಕುಮಾರ್ ಟೀಕಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಕ್ಕೆ ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳೇ ಮೂಲ ಕಾರಣರು. ಅಧಿಕಾರಿಗಳು ಸೂಕ್ತ ಮಾಹಿತಿ ಸರ್ಕಾರಕ್ಕೆ ರವಾನಿಸಿದ್ದಲ್ಲಿ ಇಂತಹ ಜನ ವಿರೋಧಿ ಪ್ರಕರಣಗಳು ನಡೆಯುತ್ತಿರಲಿಲ್ಲ ಎಂದರು.
ಜಿಲ್ಲೆಯಾದ್ಯಂತ ಅನೇಕ ಸಮಸ್ಯೆಗಳು ತಾಂಡವಾಡುತ್ತಿದ್ದು ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ನಿರ್ಲಕ್ಷದ ಪರಿಣಾಮ ತಾಲೂಕಿನಾದ್ಯಂತ ತಾಂಡವಾಡುತ್ತಿರುವ ಬರಗಾಲದ ಪರಿಹಾರ ಪಡೆಯುವಲ್ಲಿ ರೈತಾಪಿ ಜನರು ವಿಫಲರಾಗಿದ್ದಾರೆ ಎಂದು ಹೇಳಿದರು.
ಸತತ ಬರಗಾಲ, ಮಳೆಯ ಅಭಾವದಿಂದ ಅಡಿಕೆ ಹಾಗೂ ತೆಂಗು ಬೆಳೆಗೆ ತಗುಲಿದ ಅನೇಕ ರೋಗಗಳಿಂದ ತೆಂಗಿನ ಮರಗಳು ಸುಳಿ ಬಿದ್ದು ನಾಶವಾಗಿದ್ದು ಅದಕ್ಕೆ ತಕ್ಕಂತೆ ಸರ್ಕಾರ ಪರಿಹಾರ ಘೋಷಿಸುವಲ್ಲಿ ವಿಫಲವಾಗಿದೆ. ಕೂಡಲೇ ತೋಟಗಾರಿಕೆ ಇಲಾಖೆಯಿಂದ ಮಾಹಿತಿ ತರಿಸಿಕೊಂಡು ಬೆಳೆಗಾರರಿಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ಪಟ್ಟಣಕ್ಕೆ ಪೂರೈಸಲಾಗುತ್ತಿದ್ದ ಹೇಮಾವತಿ ನದಿ ನೀರು ಕುಡಿಯುವ ನೀರಿನ ವ್ಯವಸ್ಥೆಗೆ ಸೂಕ್ತ ಸಮಯದಲ್ಲಿ ಸ್ಥಳಿಯ ಆಡಳಿತ ವಿದ್ಯುತ್ ಬಿಲ್ ಪಾವತಿಸದಿರುವುದರಿಂದ ಕುಡಿಯುವ ನೀರಿಗೂ ಪಟ್ಟಣದಲ್ಲಿ ತಾತ್ಸಾರವಾಗಿದೆ.ಇಲ್ಲಿಯ ಪುರಸಭೆ ಆಡಳಿತ ವ್ಯಾಪ್ತಿಯಲ್ಲಿ ಆಶ್ರಯ ನಿವೇಶನ ಹಂಚಿಕೆ ಪ್ರಕ್ರಿಯೆಯು ನೆನೆಗುದಿಗೆ ಬಿದ್ದಿದ್ದು, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಎರಡು ವರ್ಷಗಳೇ ಸಂದಿದ್ದರೂ ಯಾವುದು ಕಾರ್ಯರೂಪಕ್ಕೆ ಬಂದಿಲ್ಲದಿರುವುದು ವಿಪರ್ಯಾಸವಾಗಿದೆ ಎಂದರು.
ಜಿಲ್ಲೆಯಾದ್ಯಂತ ಸಾರಿಗೆ ಬಸ್ಗಳು ಉಪಯೋಗಿಸುವುದಕ್ಕೆ ಯೋಗ್ಯವಿಲ್ಲದಷ್ಟು ಕಳಪೆ ಮಟ್ಟದ್ದಾಗಿವೆ. ಬೇಲೂರಿನಲ್ಲಿ ನಡೆದಂತೆ ಅಹಿತಕರ ಘಟನೆಗಳು ಮುಂದಿನ ದಿನಗಳಲ್ಲಿ ನಡೆಯದಂತೆ ಸಾರಿಗೆ ಅಧಿಕಾರಿಗಳು ಮುನ್ನೆಚರಿಕೆ ವಹಿಸಿ ಯೋಗ್ಯವಾದ ವಾಹನಗಳನ್ನು ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ಬರಲಿರುವ ಲೋಕಸಭೆ ಚುನಾವಣೆ ಪೂರಕವಾಗಿ ಜಿಲ್ಲಾದ್ಯಂತ ಪಕ್ಷ ಸಂಘಟಿಸಿ ಪ್ರತಿ ಗ್ರಾಮ ಮಟ್ಟದಿಂದ ಪಕ್ಷವನ್ನು ಚೆನ್ನಾಗಿ ಕಟ್ಟಿ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬಿ ಪಕ್ಷವನ್ನು ಬೆಳೆಸುವ ಮೂಲಕ ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಗೆಲುವಿಗೆ ವೇದಿಕೆ ರೂಪಿಸಲಾಗುವುದು. ಅಲ್ಲದೇ ಪ್ರಮುಖ ಸಮಸ್ಯೆಗಳ ನಿವಾರಣೆ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಘಟಕದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್, ಉದಯಕುಮಾರ್, ಪಾರ್ವತಮ್ಮ, ತಾಲೂಕು ಅಧ್ಯಕ್ಷ ಹರಳಕಟ್ಟ ರಮೇಶ್, ಪ್ರಧಾನ ಕಾರ್ಯದರ್ಶಿ ಮನೋಜಕುಮಾರ್, ಬೆಂಡೆಕೆರೆ ಲೋಕೇಶ್, ಎಪಿಎಂಸಿ ಸದಸ್ಯ ಡಿ.ಬಿ.ಗಂಗಾಧರ್, ತಾಲೂಕು ಪಂಚಾಯಿತಿ ಸದಸ್ಯ ಕಣಕಟ್ಟೆ ದಿನೇಶ್, ಮುಖಂಡರಾದ ಎನ್.ಡಿ.ಪ್ರಸಾದ್, ಶೈಲಜಾ, ಪ್ರಭುಕುಮಾರ್, ಎ.ಎಸ್.ಬಸವರಾಜ್, ಪರ್ವತಯ್ಯ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

