ವಿಶ್ವನಾಥ್ ಸಮಯ ಸಾಧಕ ರಾಜಕಾರಣಿ
ಹಾಸನ: ರಾಜಕೀಯ ಸ್ಥಾನಮಾನ ನೀಡಿದ ಜೆಡಿಎಸ್ ನಾಯಕರ ವಿರುದ್ಧ ಪದೇ ಪದೇ ವಿನಾಕಾರಣ ಆರೋಪ ಮಾಡುತ್ತಿರುವ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಉಂಡ ಮನೆಗೆ ಎರಡು ಬಗೆಯುವ ಕುಟಿಲ ರಾಜಕಾರಣ ಮಾಡುತ್ತಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲಾ ಜೆಡಿಎಸ್ ಮಾಜಿ ಅಧ್ಯಕ್ಷ ಕೆ.ಎಸ್.ಲಿಂಗೇಶ್, ಜಿಪಂ ಮಾಜಿ ಅಧ್ಯಕ್ಷರಾದ ಸತ್ಯನಾರಾಯಣ, ದ್ಯಾವೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಸೈಯದ್ ಅಕ್ಬರ್ ಮತ್ತಿತರರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಜೆಡಿಎಸ್ನಲ್ಲಿ ಶಾಸಕರಾಗಿ ಅಧಿಕಾರ ಅನುಭವಿಸಿ, ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗದ ಕಾರಣಕ್ಕೆ ಕೆಜೆಪಿಗೆ ಹಾರಿದರು. ಅಲ್ಲಿಯೂ ರಾಜಕೀಯವಾಗಿ ಮಣ್ಣು ಮುಕ್ಕಿ, ಈಗ ಕಾಂಗ್ರೆಸ್ ಸೇರುವ ಮೂಲಕ ಗೆದ್ದ ಎತ್ತಿನ ಬಾಲವನ್ನು ಹಿಡಿದ್ದಾರೆ ಎಂದು ಟೀಕಿಸಿದರು.
ತತ್ವ ಸಿದ್ಧಾಂತ ಗಾಳಿಗೆ ತೂರಿದಾತ: ವಿಶ್ವನಾಥ್ ಸಮಯ ಸಾಧಕ ರಾಜಕಾರಣಿಯಾಗಿದ್ದು, ಸಮಾಜವಾದಿ ಚಿಂತಕ ಜಯಪ್ರಕಾಶ್ ನಾರಾಯಣ್ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ, ಈಗ ಕಾಂಗ್ರೆಸ್ ಸೇರುವ ಮೂಲಕ ತಾವೊಬ್ಬ ಅಧಿಕಾರ ದಾಹಿ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಕಿಡಿಕಾರಿದರು.
ಜೆಡಿಎಸ್ನಿಂದ ಉದ್ಧಾರವಾದವರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕೃಪ ಕಟಾಕ್ಷ ಇಲ್ಲದೆ ಹೋಗಿದ್ದರೆ ಎಚ್.ಎಂ.ವಿಶ್ವನಾಥ ಸೇರಿದಂತೆ ಬಹಳಷ್ಟು ಮುಖಂಡರು ಇಂದು ನಗಣ್ಯರಾಗುತ್ತಿದ್ದರು. ರಾಜಕೀಯವಾಗಿ ಪ್ರಸ್ತುತ ಮರೆಯುತ್ತಿರುವವರಲ್ಲಿ ಹೆಚ್ಚಿನವರು ದೇವೇಗೌಡರ ಋಣದಲ್ಲಿ ಇದ್ದಾರೆ. ಮನಸಾಕ್ಷಿ ಇಲ್ಲದವರು ಮಾತ್ರ ವಿಶ್ವನಾಥ್ರಂತೆ ಬಾಯಿಗೆ ಬಂದಂತೆ ಹರಡುತ್ತಾರೆ. ಜೆಡಿಎಸ್ನಿಂದ ಅಧಿಕಾರ ಅನುಭವಿಸಿ ಈಗ ಅದೇ ಪಕ್ಷವನ್ನು ನಿಂದಿಸುತ್ತಿರುವುದು ಅವರ ಏಳಿಗೆಗೆ ಶೋಭೆಯಲ್ಲ ಎಂದು ದೂರಿದರು.
ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ: ಜಿಲ್ಲೆಯಲ್ಲಿ ಜನ ಜೆಡಿಎಸ್ಅನ್ನು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. ಈ ಗೌಡಿಕೆಯಲ್ಲಿ ತಮ್ಮನ್ನು ನಂಬಿದವರನ್ನು ಉಳಿಸುವ ಮತ್ತು ಬೆಳೆಸುವ ಮನೋಧರ್ಮ ಇದೆ. ಆ ಕಾರಣದಿಂದಲೇ ಜಿಲ್ಲೆಯ ಜನ ದೇವೇಗೌಡರನ್ನು ರಾಜಕೀಯವಾಗಿ ಕೈ ಬಿಟ್ಟಿಲ್ಲ ಮಾತ್ರವಲ್ಲ, ಎಂದೂ ಕೈ ಬಿಡುವುದಿಲ್ಲ. ವಿಶ್ವನಾಥ್ ಒಂದು ವೇಳೆ ಸರಳ-ಸಜ್ಜನರೇ ಆಗ್ಗಿದ್ದರೆ ಬೇಲೂರಿನ ಜನತೆ ಅವರ ಕೈಯನ್ನು ಬಿಡುತ್ತಿರಲಿಲ್ಲ. ಇವರಂತಹ ಉಂಡ ಮನೆಗೆ ದ್ರೋಹ ಬಗೆಯುವವರನ್ನು ಜನ ಎಂದಿಗೂ ಒಪ್ಪುವುದಿಲ್ಲ ಎಂದರು.
ವಿಶ್ವನಾಥ್ ಏನು ವೈದ್ಯರೆ?: ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿ ಆರೋಗ್ಯ ಸಮಸ್ಯೆಗೆ ಜೆಡಿಎಸ್ ಕಾರಣವಾಗಿತ್ತು ಎಂಬುದಾಗಿ ವಿಶ್ವನಾಥ ವೈದ್ಯರಂತೆ ಹೇಳುತ್ತಿದ್ದಾರೆ. ಶ್ರೀಗಳ ಆರೋಗ್ಯ ಸ್ಥಿತಿ ಅರಿಯದೆ ಬಾಯಿಗೆ ಬಂದಂತೆ ವಿಶ್ವನಾಥ್ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದಂತೆ ಆದಿಚುಂಚನಗಿರಿ ಮಠದ ಮೇಲೆ ಐಟಿ ದಾಳಿ ನಡೆಸಿದ್ದಾರೆ ಇದನ್ನು ಅವರು ಮರೆತಿರುವುದು ಅವರು ಎಂತಹ ನಯ ವಂಚಕ ಎಂಬುದನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
ಸೋಲು-ಗೆಲವು ಸಾಮಾನ್ಯ: ಒಕ್ಕಲಿಗರ ಮಠದ ಮೇಲೆ ಮಾತ್ರ ದಾಳಿ ನಡೆಸಿದ ಬಗ್ಗೆ ರಾಜ್ಯಾದ್ಯಂತ ಚರ್ಚೆಯಾಯಿತು. ಇತರೆ ಮಠಗಳ ಮೇಲೆ ಏತಕ್ಕೆ ದಾಳಿಯನ್ನು ಮಾಡಲಿಲ್ಲ ಎಂಬ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಹತ್ತಿರ ಉತ್ತರವಿಲ್ಲ ಎಂದ ಅವರು, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾರಣಕ್ಕೆ ದಿವಂಗತ ಇಂದಿರಾ ಗಾಂಧಿಯವರ ಸಮೇತ ಕಾಂಗ್ರೆಸ್ ಸೋತು ನೆಲ ಕಚ್ಚಿ ಹೋಗಿತ್ತು. ಚುನಾವಣೆಯಲ್ಲಿ ಸೋಲು ಗೆಲವು ಸಾಮಾನ್ಯ ಎಂದರು.
ಜೆಡಿಎಸ್ ಹೋರಾಟದ ಪಕ್ಷ: ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳಲ್ಲಿ ನಡೆದಂತ ಚುನಾವಣೆಯಲ್ಲಿ ಜೆಡಿಎಸ್ಗೆ ಸೋಲಾಗಿರಬಹುದು. ಆದರೆ ಆ ಸೋಲನ್ನು ಸವಾಲಾಗಿ ಸ್ವೀಕರಿಸಿ, ಪಕ್ಷ ಸಂಘಟಿಸಿ ಮತ್ತೆ ಕಾಂಗ್ರೆಸ್ಗೆ ಮುಖಾಮುಖಿಯಾಗಿ ಪಕ್ಷವನ್ನು ನಿಲ್ಲಿಸಲಾಗುತ್ತದೆ. ಎಷ್ಟಾದರೂ ಜೆಡಿಎಸ್ ನಿರಂತರ ಹೋರಾಟ ಮಾಡುವಂತ ಪಕ್ಷ ಎಂದು ಹೇಳಿದರು.
ಆಲೂರು ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಯುವ ಜೆಡಿಎಸ್ ಕಾರ್ಯದರ್ಶಿ ಹೊಂಗೆರೆ ರಘು ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

