ಅಕ್ರಮ ಬೀಟೆ ಮರ ವಶ, ಮೂವರ ಬಂಧನ
ಕ.ಪ್ರ.ವಾರ್ತೆ ಸಕಲೇಶಪುರ ಆ.31
ಪಟ್ಟಣದ ಮನೆಯೊಂದರ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಪಾರ ಬೆಲೆ ಬಾಳುವ ಬೀಟೆಮರ ವಶಪಡಿಸಿಕೊಂಡು, ಈ ಸಂಬಂಧ ಮೂವರನ್ನು ಶುಕ್ರವಾರ ಬಂಧಿಸಿದ್ದಾರೆ. ಪಟ್ಟಣದ ಪ್ರೇಮನಗರ ಬಡಾವಣೆಯ ಸಿದ್ದೇಗೌಡ ಎಂಬುವವರ ಮನೆಯ ಮೇಲೆ ದಾಳಿ ನಡೆಸಿದ ಉಪವಿಭಾಗೀಯ ಅರಣ್ಯಾಧಿಕಾರಿ ಜಿ ವೆಂಕಟೇಶ್, ವಲಯಅರಣ್ಯಾಧಿಕಾರಿ ಎಸ್.ಪಿ ಮಹದೇವ್ ನೇತೃತ್ವದ ತಂಡ ಮನೆ ಮೇಲೆ ದಾಳಿ ನಡೆಸಿ ತುಂಡುಮಾಡಿ ಇರಿಸಲಾಗಿದ್ದ ಸುಮಾರು ಎರಡು ಲಕ್ಷ ರು. ಬೆಲೆ ಬಾಳುವ ಬೀಟೆ ಮರ ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ಥಳದಲ್ಲಿದ್ದ ಮನೆಯ ಮಾಲೀಕನ ಪುತ್ರ ರಂಜಿತ್, ಮರಗೆಲಸಗಾರ ರಮೇಶ್ ಹಾಗೂ ಶಶಿಕುಮಾರ್ ಅವರನ್ನು ಬಂಧಿಸಿದ್ದಾರೆ. ಮನೆ ಮಾಲೀಕ ಸಿದ್ದೇಗೌಡ ತಲೆಮರೆಸಿಕೊಂಡಿದ್ದಾನೆ.
ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕ ಕಾಂತರಾಜ್, ನಾಗೇಶ್, ಪೃಥ್ವಿ, ಗಿರೀಶ್ ನಾಯಕ್, ಮುಬಾರಕ್, ದೇವು ಹಾಗೂ ವಾಹನ ಚಾಲಕ ಮಂಜು, ಅಬ್ರೋಸ್ ಭಾಗವಹಿಸಿದ್ದರು.
'ಕಾವ್ಯಕ್ಕೆ ಭಾಷೆಯ ಹಂಗಿಲ್ಲ'
ಹಾಸನ: ಕಾವ್ಯಕ್ಕೆ ಭಾಷೆಯ ಹಂಗಿಲ್ಲ, ಕಾವ್ಯವೇ ಒಂದು ಭಾಷೆ. ನಿರಂತರತೆ ಮತ್ತು ತಾತ್ವಿಕತೆಯನ್ನು ಅಳವಡಿಸಿ ಕೊಂಡರೆ ಉತ್ತಮ ಕವಿತೆಗಳ ಸೃಷ್ಟಿ ಸಾಧ್ಯವೆಂದು ಜನಪದ ವಿದ್ವಾಂಸ ಪ್ರೊ. ಹಂಪನಹಳ್ಳಿ ತಿಮ್ಮೇಗೌಡ ವಿಶ್ಲೇಷಿಸಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ಮತ್ತು ಗ್ರಂಥಾಲಯ ವಿಭಾಗದ ಸಂಯುಕ್ತಾಶ್ರಯದಲ್ಲಿ ಇಂಗ್ಲಿಷ್ ಉಪನ್ಯಾಸಕಿ ಎಂ.ಕುಸುಮ ಅವರ ಛದ್ಮವೇಷ ಕವನ ಸಂಕಲನ ಬಿಡುಗಡೆಮಾಡಿ ಮಾತನಾಡಿದ ಅವರು, ಸಮಾಜದ ಡಂಭಾಚಾರದ ಬದುಕು, ವರ್ತಮಾನದ ವಿವಿಧ ಬೆಳವಣಿಗೆ, ಓರೆಕೋರೆಗಳನ್ನು ಪ್ರಕೃತಿ ವಿನಾಶದ ವೈಪರೀತ್ಯವನ್ನು ಅನಾವರಣಗೊಳಿಸಿದರು. ಕವಯತ್ರಿ ರೂಪ ಹಾಸನ ಮಾತನಾಡಿ, ಪುಸ್ತಕಗಳನ್ನು ಓದುವ ಮೂಲಕ ಬರವಣಿಗೆ ರೂಢಿಸಿಕೊಳ್ಳಬೇಕು. ಸಂವೇದನಾಶೀಲತೆಯು ವ್ಯಕ್ತಿಯನ್ನು ಉತ್ತಮ ಬರಹಗಾರರನ್ನಾಗಿ ರೂಪಿಸುತ್ತದೆ ಎಂದರು.
ಉಪನ್ಯಾಸಕ ಹಾಗೂ ಸಾಹಿತಿ ಡಾ.ರಾಜಶೇಖರಮಠಪತಿ ಸೃಜನಶೀಲ ಬರವಣಿಗೆ ಕುರಿತು ಉಪನ್ಯಾಸ ನೀಡುತ್ತಾ ಪುಸ್ತಕಗಳೇ ನಮ್ಮ ನಿಜವಾದ ಆಸ್ತಿ. ವಿದ್ಯಾರ್ಥಿಗಳು ಬಾಲ್ಯದಿಂದಲೇ ಓದುವ, ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಸಾಮಾನ್ಯರಲ್ಲೂ ಉತ್ತಮ ಕವಿತಾ ಶಕ್ತಿ ಅಡಗಿರುತ್ತದೆ. ಅವರು ಅದನ್ನು ಕಂಡುಕೊಳ್ಳಬೇಕಷ್ಟೆ. ನವ್ಯ, ದಲಿತ,ಬಂಡಾಯ, ಮಹಿಳಾವಾದಿ ಮತ್ತಿತರ ಚೌಕಟ್ಟನ್ನು ಮೀರಿ ಬೆಳೆಯುವುದೇ ಸಶಕ್ತ ಕಾವ್ಯವಾಗುತ್ತದೆ ಎಂದು ನುಡಿದರು. ಸಂವಿಧಾನಶಿಲ್ಪಿ ಡಾ. ಅಂಬೇಡ್ಕರ್ರವರ ಪುಸ್ತಕ ಪ್ರೀತಿಯ ದೃಷ್ಟಾಂತ ವಿವರಿಸಿದರು.
ಪ್ರಾಂಶುಪಾಲ ಪ್ರೊ. ಎಚ್.ಎನ್.ರೂಪರಾಜ್ಚಂದನ್ ಅಧ್ಯಕ್ಷತೆ ವಹಿಸಿದ್ದು, ಗ್ರಂಥಾಲಯ ಕಾಲೇಜಿನ ದೇಗುಲವಿದ್ದಂತೆ, ವಿದ್ಯಾರ್ಥಿಗಳು ಅದರ ಸದ್ಬಳಕೆ ಮಾಡಿ ಕೊಳ್ಳಬೇಕೆಂದರು.
ಸಾಹಿತಿ ಜ.ಹೊ.ನಾರಾಯಣಸ್ವಾಮಿ, ಲೇಖಕ ಡಾಕೆ.ಕೆ.ಜಯಚಂದ್ರ ಗುಪ್ತ ಹಾಗೂ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಕವಯತ್ರಿ, ಉಪನ್ಯಾಸಕಿ ಎಂ.ಕುಸುಮ ಸ್ವಾಗತಿಸಿದರು. ಗ್ರಂಥಪಾಲಕ ಬಿ.ಆರ್. ಮಾನಸ ಪ್ರಾಸ್ತ್ತಾವಿಕವಾಗಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

