ಎಪಿಎಂಸಿಗೆ ರೈತರ ಮುತ್ತಿಗೆ
ಅರಸೀಕೆರೆ: ಕೊಬ್ಬರಿ ಧಾರಣೆ ಇಳಿಮುಖವಾದ ಹಿನ್ನೆಲೆಯಲ್ಲಿ ಬೆಳೆಗಾರರು ಮಂಗಳವಾರ ಕೃಷಿ ಮಾರುಕಟ್ಟೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದರೂ ಕೊಬ್ಬರಿಧಾರಣೆ ಮಾತ್ರ ದಿನೇ ದಿನೇ ಕುಸಿತವಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಈ ಬಗ್ಗೆ ಗಮನ ಹರಿಸುತ್ತಿಲ್ಲ. ರೈತನನ್ನು ನಿರಂತರವಾಗಿ ಸಂಕಷ್ಟಕ್ಕೆ ಸಿಲುಕಿಸಲಾಗುತ್ತಿದೆ.
ಬೆಲೆ ಕುಸಿತದಿಂದ ರೈತರು ಆತ್ಮಹತ್ಯೆ ಹಾದಿ ಹಿಡಿಯುವುದು ಒಂದೇ ಮಾರ್ಗವಾಗಿದೆ. ಶುಕ್ರವಾರದ ಹರಾಜಿನಲ್ಲಿ ಕ್ವಿಂಟಾಲ್ ಕೊಬ್ಬರಿ 5100 ರು.ಗಳಿಗೆ ಖರೀದಿಸಲಾಗಿತ್ತು ಆದರೆ ಇಂದು ದಿಢೀರ್ 4850 ರು.ಗೆ ಬೆಲೆ ಕುಸಿತಗೊಂಡಿದ್ದರಿಂದ ಹೋರಾಟ ನಡೆಸ ಬೇಕಾಯಿತು ಎಂದು ದೂರಿದರು.
ಕೇಂದ್ರದ ನ್ಯಾಫೆಡ್ ಅಧಿಕಾರಿಗಳು ಹಾಗೂ ರಾಜ್ಯ ಮಾರುಕಟ್ಟೆ ಫೆಡರೇಷನ್ ಅಧಿಕಾರಿಗಳ ಮುಸುಕಿನ ಗುದ್ದಾಟದಿಂದಾಗಿ ಕೊಬ್ಬರಿ ಖರೀದಿಸಲು ಆರಂಭವಾಗ ಬೇಕಿದ್ದ ನ್ಯಾಫೆಡ್ ಕೇಂದ್ರ ನೆನಗುದಿಗೆ ಬೀಳುವಂತಾಗಿದೆ ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ತಿಳಿಸಿದರು.
ನ್ಯಾಫೆಡ್ ಕೇಂದ್ರದ ಮೂಲಕ ಕೊಬ್ಬರಿ ಖರೀದಿಸಲಾಗುವುದೆಂದು ಈಗಾಗಲೆ ನೂರಾರು ರೈತರಿಗೆ ದಿನಾಂಕ ನಮೂದಿಸಿ ಕಾರ್ಡ್ ಕೂಡ ವಿತರಿಸಲಾಗಿದೆ. ಫೆ.20 ರಿಂದ ಖರೀದಿ ಕೇಂದ್ರ ಆರಂಭಿಸುವದಾಗಿ ಹೊರಡಿಸಿದ್ದ ಆದೇಶವನ್ನು ತಡೆಹಿಡಿದಿರುವುದು ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿದೆ.
ಜಿಲ್ಲೆಯ ರಾಜಕೀಯ ಮುಖಂಡರು ಮತಯಾಚನೆಗೆ ಬರುವಾಗ ಮಾತ್ರ ರೈತರ ಹೆಸರನ್ನು ಪ್ರಸ್ತಾಪ ಮಾಡುತ್ತಾರೆ. ಆದರೆ ರೈತ ಸಮಸ್ಯೆಗೆ ಸಿಲುಕಿದಾಗ ಇತ್ತ ತಿರುಗಿ ನೋಡುತ್ತಿಲ್ಲವೆಂದು ಅಸಮಾದಾನ ವ್ಯಕ್ತಪಡಿಸಿದರು. ಕೂಡಲೇ ನಫೆಡ್ಕೇಂದ್ರ ಆರಂಭಿಸಬೇಕು ಬೆಲೆ ಕುಸಿತವಾಗದಂತೆ ಮಾರ್ಗಸೂಚಿ ಕಂಡುಹಿಡಿಯ ಬೇಕೆಂದು ಒತ್ತಾಯಿಸಿದರು.
ಸೂರುಕೋಡು ಗ್ರಾಮಸ್ಥರ ಪ್ರತಿಭಟನೆ
ಹಾಸನ: ಅರೇಹಳ್ಳಿ - ಬಿಕ್ಕೋಡು ಮುಖ್ಯರಸ್ತೆಯ ಹುಲಿಕಲಬಸ್ ನಿಲ್ದಾಣದಿಂದ ಸೂರುಗೋಡು ಗ್ರಾಮಕ್ಕೆ ಡಾಂಬರೀಕರಣ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ತಾಲೂಕು ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಭಾರೀ ಪ್ರತಿಭಟನೆ ನಡೆಸಿದರು.
ಸೂರುಕೋಡು ಗ್ರಾಮಸ್ಥರು ಮತ್ತು ಕರ್ನಾಟಕ ಸಂಘಟಿತ ಕಟ್ಟಡ ಮತ್ತು ಟೈಲರಿಂಗ್ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ತಾಲೂಕಿನ ಅರೇಹಳ್ಳಿ ಹೋಬಳಿ ಸೂರುಗೋಡು ಗ್ರಾಮಕ್ಕೆ ಕಳೆದ 8 ವರ್ಷಗಳಿಂದ ರಸ್ತೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.
ಇತ್ತೀಚಿಗೆ ತಾಲೂಕು ಪಂಚಾಯಿತಿಯಿಂದ ಡಾಂಬರೀಕರಣಗೊಳಿಸುವಂತೆ ಅದೇಶ ಬಂದಿದ್ದು ತಾಪಂ ಮಾಜಿ ಅಧ್ಯಕ್ಷೆ ಕಮಲಚನ್ನಪ್ಪ ದುರಾಡಳಿತದಿಂದ ತಮ್ಮ ಸ್ವಾರ್ಥ ಸಾಧನೆಗೆ ಗ್ರಾಮಸ್ಥರ ಗಮನಕ್ಕೆ ತರದೆ ಮನಸೋ ಇಚ್ಛೆ ಕೇವಲ 4 ಮನೆಗೆ ಉಪಯೋಗವಾಗುವಂತೆ ಡಾಂಬರೀಕರಣ ನಡೆಸಿರುವುದು ಖಂಡನೀಯ.
ಈ ಸಂಬಂಧ ತಾಪಂ ಕಾರ್ಯ ನಿರ್ವಾಹಣಾಧಿಕಾರಿ ದೂರು ನೀಡಿದ್ದು ಕಾಮಗಾರಿ ತಾತ್ಕಾಲಿಕ ತಡೆಹಿಡಿಯುವಂತೆ ಆದೇಶ ನೀಡಿದ್ದರೂ ಗುತ್ತಿಗೆದಾರರು ಮತ್ತು ಕೆಲ ಅಧಿಕಾರಿಗಳು ಶಾಮೀಲಾಗಿ ಕಾಮಗಾರಿ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಜನ ಪಕ್ಷಪಾತ: ಕೂಲಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಮೋಹನ್ಕುಮಾರ್ ಮಾತನಾಡಿ, 35 ಕುಟುಂಬಗಳು ವಾಸ ಮಾಡುವ ರಸ್ತೆಗೆ ಡಾಂಬರೀಕರಣ ಮಾಡುವುದನ್ನು ಬಿಟ್ಟು ಸರ್ಕಾರದಿಂದ ಬರುವ ಅನುದಾನವನ್ನು ತಮ್ಮ ಸ್ವಂತದ್ದು ಎಂದು ಭಾವಿಸಿ ತಮ್ಮ ಮನೆಯಿಂದ ಡಾಂಬರೀಕರಣ ಮಾಡಲು ಮುಂದಾಗಿರುವುದು ಸರಿಯಲ್ಲ.
ತಾಪಂವತಿಯಿಂದ ನೀಡಿರುವ ಅಭಿವೃದ್ಧಿ ಸೌಲಭ್ಯಗಳನ್ನು ಮಾಜಿ ಅಧ್ಯಕ್ಷೆ ಕಮಲ ಚನ್ನಪ್ಪ ಗ್ರಾಮೀಣ ಜನರಿಗೆ ಅನುಕೂಲ ವಾಗುವಂತೆ ಬಳಸದೆ ತಮಗೆ ಬೇಕಾದಂತೆ ಕಾಮಗಾರಿ ನಡೆಸುವ ಮೂಲಕ ಸ್ವಜನ ಪಕ್ಷಪಾತ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಕೆಜೆಪಿ ರಾಜ್ಯ ಉಪಾಧ್ಯಕ್ಷ ಎಚ್.ಎಂ. ವಿಶ್ವನಾಥ್, ಕೆಜೆಪಿ ಮುಖಂಡ ಅರುಣ್ಕುಮಾರ್, ಗ್ರಾಮದ ಮಂಜು, ಅರುಣ್, ಸೋಮಶೇಖರ್, ಸೋಮಣ್ಣ, ಭೂಮೇಶ್, ಸತೀಶ್, ರಾಜಶೇಖರ್, ಸುಧಾ, ರಾಧ ಲೀಲಾವತಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ರಸ್ತೆ ದುರಸ್ತಿಗೆ ಆಗ್ರಹಿಸಿ ಮಾಜಿ ಶಾಸಕ ಧರಣಿ
ಸಕಲೇಶಪುರ: ತಾಲೂಕಿನಾದ್ಯಂತ ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಒತ್ತಾಯಿಸಿ ಪಟ್ಟಣದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೊಠಡಿಯಲ್ಲಿ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಧರಣಿ ನಡೆಸಿದರು.
ಶಾಸಕ ಎಚ್.ಕೆ ಕುಮಾರಸ್ವಾಮಿ ಅಧಿಕಾರ ಅವಧಿಯಲ್ಲಿ ತಾಲೂಕಿನೆಲ್ಲೆಡೆ ರಸ್ತೆಗಳು ದುರಸ್ತಿಗೀಡಾಗಿದ್ದು ವಾಹನ ಸಂಚಾರಕ್ಕೆ ಸಾಧ್ಯವಿಲ್ಲದಂತ ಸ್ಥಿತಿ ನಿರ್ಮಾಣವಾಗಿದೆ.
ಆದರೆ ಇದುವರೆಗೂ ರಸ್ತೆ ದುರಸ್ತಿಪಡಿಸಲು ಶಾಸಕರಿಂದ ಸಾಧ್ಯವಾಗಿಲ್ಲ. ಶಾಸಕರ ಸ್ವಪ್ರಯತ್ನದಿಂದ ಇದುವರೆಗೆ ಕ್ಷೇತ್ರಕ್ಕೆ ಯಾವುದೇ ಅನುದಾನ ಬಂದಿಲ್ಲ ಹಾಗೂ ಯಾವುದೇ ಅಭಿವೃದ್ಧಿ ಕೆಲಸ ಮಾಡಲಾಗಿಲ್ಲ ಎಂದು ಅವರುದೂರಿದರು.
ಲೋಕೋಪಯೋಗಿ ಸಚಿವರು ಕ್ಷೇತ್ರದಲ್ಲಿ ಸಂಚರಿಸಿ ಕೆಲವೊಂದು ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಆದರೆ. ಈ ಕೆಲಸಗಳು ಸಹ ಶಾಸಕರ ನಿರ್ಲಕ್ಷ್ಯತೆಯಿಂದ ಇನ್ನೂ ಪ್ರಾರಂಭವಾಗಿಲ್ಲ ಎಂದು ಹೇಳಿದರು.
ತಾಲೂಕಿನ ಹಾನುಬಾಳು ಹೋಬಳಿಯನ್ನು ರಾಜಕೀಯ ದ್ವೇಷದಿಂದ ಕಡೆಗಣಿಸಲಾಗಿದೆ. ಕಳೆದ 5 ವರ್ಷಗಳಿಂದ ವೃಥಾ ಕಾಲಹರಣ ಮಾಡಿರುವ ಶಾಸಕರಿಗೆ ಮತದಾರರು ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

