ಹೆಸರು ಸೇರ್ಪಡೆಗೆ ಅವಕಾಶ
ಕನ್ನಡಪ್ರಭವಾರ್ತೆ ಹಾಸನ ಮಾ.20
ವಿಧಾನಸಭಾ ಚುನಾವಣೆ ಸಂಬಂಧ ಮತದಾರರ ಪಟ್ಟಿಯಲ್ಲಿ ಈವರೆಗೂ ಹೆಸರು ಸೇರದೆ ಇರುವ ಮತದಾರರು ನಮೂನೆ-6ನ್ನು 1 ಪಾಸ್ಪೋರ್ಟ್ ಅಳತೆ ಭಾವಚಿತ್ರದೊಂದಿಗೆ, ಜನನ ಪ್ರಮಾಣಪತ್ರ, ವಾಸಸ್ಥಳ ಪ್ರಮಾಣ ಪತ್ರಗಳೊಂದಿಗೆ ಭರ್ತಿ ಮಾಡಿ ಸಲ್ಲಿಸಬಹುದು. ಮೃತರ, ಅನರ್ಹ, ವಾಸವಿಲ್ಲದ ಮತದಾರರ ಹೆಸರು ನಮೂದು ಕೈಬಿಡಲು ನಮೂನೆ-7ನ್ನು, ನಮೂದುಗಳ ತಿದ್ದುಪಡಿಗಾಗಿ ನಮೂನೆ-8, ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಳಾಂತರವಾಗಿದ್ದರೆ, ನಮೂನೆ-8ಎ ನ್ನು ಸೂಕ್ತ ರೀತಿಯಲ್ಲಿ ಭರ್ತಿ ಮಾಡಿ ಸಮರ್ಥನೆಗಾಗಿ ಅವಶ್ಯಕ ದಾಖಲೆಗಳೊಂದಿಗೆ ಮತಗಟ್ಟೆಗಳಿಗೆ ನೇಮಕವಾಗಿರುವ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ (ಬಿಎಲ್ಓ), ತಾಲೂಕು ಕಚೇರಿಗೆ, ಉಪವಿಭಾಗಾಧಿಕಾರಿ ಕಚೇರಿಗೆ, ಕಾಲೇಜು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ, ಬ್ಯಾಂಕ್ಶಾಖೆಗಳಲ್ಲಿ, ಅಂಚೆಕಚೇರಿಗಳಲ್ಲಿಡುವ ಡ್ರಾಪ್ ಬಾಕ್ಸ್ಗಳಿಂದ ಫಾರಂ ತೆಗೆದುಕೊಂಡು ಭರ್ತಿ ಮಾಡಿ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ.
'ಸಕಲೇಶಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ'
ಕನ್ನಡಪ್ರಭವಾರ್ತೆ ಬೇಲೂರು ಮಾ. 20
ಸಕಲೇಶಪುರ ವಿಧಾನಸಭಾ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯಿಂದ ತಾವು ಕಣಕ್ಕೆ ಇಳಿಯುವುದಾಗಿ ಹಾಗೂ ಬಿಜೆಪಿಯ ಪ್ರಬಲ ಅಕಾಂಕ್ಷಿ ಎಂದು ಬೇಲೂರು ತಾಲೂಕು ಪಂಚಾಯ್ತಿ ಸದಸ್ಯ ಶೇಖರಯ್ಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಪಕ್ಷದ ತತ್ವ ಸಿದ್ದಾಂತದ ಅಡಿಯಲ್ಲಿ ಜನಪರ ಮತ್ತು ಸಮಾಜಮುಖಿ ಸೇವೆ ಮಾಡುತ್ತಾ ಬಂದಿದ್ದೇನೆ. ಈ ದಿಸೆಯಲ್ಲಿ ಸಕಲೇಶಪುರದ ಹಲವು ಬಿಜೆಪಿ ಕಾರ್ಯಕರ್ತರು ಹಾಗೂ ಪಕ್ಷದ ಹಿರಿಯ ಮುಖಂಡರು ನೀವು ಸಕಲೇಶಪುರದಿಂದ ಸ್ಫರ್ಧಿಸಬೇಕು ಎಂದು ಕೇಳಿರುವ ಹಿನ್ನೆಲೆಯಲ್ಲಿ ಸಕಲೇಶಪುರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದರು. ಸದ್ಯ ಬೇಲೂರು ತಾಪಂ ಸದಸ್ಯನಾಗಿ ನನ್ನ ಕ್ಷೇತ್ರ ರಾಜನಸಿರಯೂರು ಹಾಗೂ ತಾಲೂಕಿನ ಹಿಂದುಳಿದ ವರ್ಗದವರ ಕೇರಿಗಳ ಅಭಿವೃದ್ಧಿಗೆ ಸುಮಾರು 4, 5 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು, ಕಾಮಗಾರಿಗಳು ಪ್ರಗತಿಯಲ್ಲಿ ಇವೆ ಎಂದು ತಿಳಿಸಿದರು.
'ಷೇಕ್ಸ್ಪಿಯರ್ ನಾಟಕ ಎಚ್ಚರಿಕೆ ಗಂಟೆಯಿದ್ದಂತೆ'
ಹಾಸನ: ಇಂಗ್ಲಿಷ್ ಸಾಹಿತ್ಯದ ಶ್ರೇಷ್ಠ ನಾಟಕಕಾರ ಷೇಕ್ಸ್ಪಿಯರ್ ರಚಿಸಿದ ನಾಟಕಗಳು ಇಂದಿನ ಜೀವನದಲ್ಲೂ ಮನುಷ್ಯರಿಗೆ ಎಚ್ಚರಿಕೆಯಂತಿದೆ ಎಂದು ಸರ್ಕಾರಿ ಕಲಾ ಕಾಲೇಜಿನ ಅಧ್ಯಾಪಕ ಪ್ರೊ. ರಾಜಪ್ಪ ಅಭಿಪ್ರಾಯ ಪಟ್ಟರು. ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ಲಿಟರರಿ ಕ್ಲಬ್ನಿಂದ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮ್ಯಾಕ್ಬೆತ್ ದುಃಖಾಂತ್ಯಕ್ಕೆ ಅತಿಮಾನುಷ ಶಕ್ತಿಗಳ ಪ್ರಭಾವ ಕುರಿತು ಮನ ಮುಟ್ಟುವಂತೆ ತಿಳಿಸಿದರು. ಅತಿಯಾಸೆ ಮತ್ತು ಊಹಾಶಕ್ತಿವಂತನಾಗಿದ್ದ ಮ್ಯಾಕ್ಬೆತ್ ನಿಜ ಸ್ಥಿತಿ ಅರಿಯುವುದಕ್ಕಾಗದೆ, ಮನಸ್ಸಿನ ನೆಮ್ಮದಿ ಕಳೆದುಕೊಳ್ಳತ್ತಾನೆ ಎಂದು ವಿವರಿಸಿದರು. ಪ್ರಾಂಶುಪಾಲ ಪ್ರೊ. ವಿ. ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಎಂ. ಕುಸುಮ ಪ್ರಾಸ್ತ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಚಂದ್ರಶೇಖರ್ ಸ್ವಾಗತಿಸಿ ವಂದಿಸಿದರು. ಸುಮನಾ ಪ್ರಾರ್ಥನೆ, ಅಕ್ಷತಾ ನಿರೂಪಿಸಿದರು.
ಇಂದು ವಸ್ತ್ರ ಮೇಳ
ಹಾಸನ: ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯ್ತಿಯಿಂದ ಹಾಸನಾಂಬ ವಸ್ತ್ರ ಮೇಳ ಎಂಬ ಜಿಲ್ಲಾ ಮಟ್ಟದ ಕೈಮಗ್ಗ ಮೇಳದ ಉದ್ಘಾಟನಾ ಸಮಾರಂಭ ಮಾ.21ರಂದು ಸಂಜೆ 5ಕ್ಕೆ ನಗರದಲ್ಲಿ ಮಾ.21 ರಿಂದ 27ರವರೆಗೆ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ವಾಣಿಜ್ಯ ಹಬ್ಬ
ಹಾಸನ: ನಗರದ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ವಿಭಾಗದಿಂದ ಮಾ. 21ರಂದು ಸ್ನಾತಕೋತ್ತರ ಕೇಂದ್ರದ ಹೇಮಗಂಗೋತ್ರಿ ಸಭಾಂಗಣದಲ್ಲಿ ವಾಣಿಜ್ಯ ಹಬ್ಬ ಆಯೋಜಿಸಲಾಗಿದೆ. ಜಿಲ್ಲೆಯಾದ್ಯಂತ 26 ಪ್ರಥಮ ದರ್ಜೆ ಕಾಲೇಜುಗಳ ವಾಣಿಜ್ಯ ಮತ್ತು ನಿರ್ವಹಣಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಾ ಸ್ಪರ್ಧೆ, ಜಾಹಿರಾತು ಮತ್ತು ರಸಪ್ರಶ್ನೆ ಏರ್ಪಡಿಸಲಾಗಿದೆ. ಕಾವೇರಿ ಗ್ರಾನೈಟ್ ಇಂಡಸ್ಟ್ರಿಸ್ ವ್ಯವಸ್ಥಾಪಕ ನಿರ್ದೇಶಕ ಎ.ರವಿ ಪ್ರಕಾಶ್ ರೆಡ್ಡಿ ಉದ್ಘಾಟಿಸಲಿದ್ದಾರೆ.
ಅಹವಾಲು ಸ್ವೀಕಾರ
ಹಾಸನ: ಲೋಕಾಯುಕ್ತ ಹಾಸನ ವಿಭಾಗ ಪೊಲೀಸ್ ಅಧೀಕ್ಷಕ ಡಾ. ಸಿ.ಬಿ.ವೇದಮೂರ್ತಿ, ಪೊಲೀಸ್ ಉಪಾಧಿಕ್ಷಕರು ಮತ್ತು ಪೊಲೀಸ್ ನಿರೀಕ್ಷಕರು ಹಾಗೂ ತಂಡದವರು 21ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1 ರವರೆಗೆ ಬೇಲೂರು ತಾಲೂಕು ಕೇಂದ್ರಕ್ಕೆ ಭೇಟಿ ನೀಡಲಿದ್ದು, ನಂತರ ಮಧ್ಯಾಹ್ನ 3 ರಿಂದ 5.30ರವರೆಗೆ ತಾಲೂಕು ಕೇಂದ್ರಕ್ಕೆ ಭೇಟಿ ನೀಡಲಿದ್ದು, ಭೇಟಿ ಸಮಯದಲ್ಲಿ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.
23 ರಂದು ದೇವಿರಮ್ಮ ರಥೋತ್ಸವ
ಬೇಲೂರು: ತಾಲ್ಲೂಕಿನ ಶೆಟ್ಟಿಗೆರೆ ದೇವಿರಮ್ಮ ರಥೋತ್ಸವ ಮಾ. 22 ಮತ್ತು 23 ರಂದು ಏರ್ಪಡಿಸಲಾಗಿದೆ. 23ರಂದು ಮಧ್ಯಾಹ್ನ 12.30 ರಿಂದ 1.30ರ ವರೆಗೆ ದಿವ್ಯ ರಥರೋಹಣ ಹಾಗೂ ಸಿಡಿ ನಡೆಯಲಿದೆ.
ಮರಳು ಲಿಂಗ ವಿಸರ್ಜನೆ
ಚನ್ನರಾಯಪಟ್ಟಣ: ಮರಳು ಲಿಂಗವನ್ನು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ಕೆರೆಯಲ್ಲಿ ವಿಸರ್ಜಿಜಿಸಲಾಯಿತು. ಮಹಾ ಶಿವರಾತ್ರಿಯಂದು ಭಕ್ತಾದಿಗಳ ದರ್ಶನಕ್ಕೆ ಸಹಸ್ರ ಕೋಟಿ ಕೋಟಿ ಮರಳು ಲಿಂಗವನ್ನು ಪಟ್ಟಣದ ಕುವೆಂಪು ನಗರದ ಜಯಾನಂದ ಆಶ್ರಮದಲ್ಲಿ ಪೂಜಿಸಲಾಯಿತು. 9 ದಿನಗಳ ಕಾಲ ಲಿಂಗಕ್ಕೆ ವಿಶೇಷ ಪೂಜೆ ಕಾರ್ಯ ಜಯದೇವ ರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಜರುಗಿತು.
ನೋಂದಣಿಗೆ ಮನವಿ
ಹಾಸನ: ಅಖಿಲ ಕರ್ನಾಟಕ ವಚನ ಸಾಹಿತ್ಯ ಪರಿಷತ್ ವತಿಯಿಂದ ಸಮ್ಮೇಳನದ ಅಂಗವಾಗಿ ವಚನ ಗೋಷ್ಠಿಯಲ್ಲಿ ಪಾಲ್ಗೊಳ್ಳುವರು ಹಾಗೂ ಮೆರವಣಿಗೆಯಲ್ಲಿ ಭಾಗವಹಿಸುವ ಕಲಾವಿದರು ತಮ್ಮ ಹೆಸರನ್ನು ಮಾ. 21 ರೊಳಗೆ ನೋಂದಾಯಿಸಿ ಕೊಳ್ಳಲು ಕೋರಲಾಗಿದೆ. ಆಸಕ್ತರು ನಾಯಕರಹಳ್ಳಿ ಮಂಜೇಗೌಡ, ಜಿಲ್ಲಾ ಧ್ಯಕ್ಷರು, ವಚನ ಸಾಹಿತ್ಯ ಪರಿಷತ್, ಗಣಪತಿ ದೇವಸ್ಥಾನ ರಸ್ತೆ, ಅಕ್ಷಯ ಭಂಡಾರದ ಹತ್ತಿರ, ಶಾಂತಿ ನಗರ, ಹಾಸನ. ಮೊ.9448 318011 ಸಂಪರ್ಕಿಸಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

