ಹಾಸನ

ಶ್ವಾನ ಸಂತತಿ ಸಾವಿರ...ಸಾವಿರ...

Published On :

- ಪಿ.ರವಿಕುಮಾರ್
ಹಾಸನ: ಬಿಡಾಡಿ ದನಗಳು ಹಾಗೂ ಬೀದಿ ನಾಯಿಗಳ ಹಾವಳಿ ಹಾಸನ ನಗರ ಮತ್ತು ಜಿಲ್ಲೆಯಲ್ಲಿ ದಿನ ದಿನಕ್ಕೂ ಹೆಚ್ಚಾಗುತ್ತಿದ್ದು, ರಸ್ತೆಗಳಲ್ಲಿ ಓಡಾಡಲು ಹೆದರುವಂತಹ ಸನ್ನಿವೇಶ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಕೆಲವರು ದನಗಳನ್ನು ಬೀದಿಗೆ ಬಿಡುವುದರಿಂದ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಇದರಿಂದ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದಂತಾಗಿದೆ. ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಕೊಳ್ಳದೆ ಬೇಕಾಬಿಟ್ಟಿ ರಸ್ತೆಗೆ ಬಿಟ್ಟಿರುವುದರಿಂದ ಇತರರಿಗೆ ಭಾರಿ ತೊಂದರೆ ಉಂಟಾಗುತ್ತಿದೆ. ಇದರ ನೈಜ ದರ್ಶನ ನಿಮಗಾಗಬೇಕಾದರೆ ನಗರದ ಎನ್.ಆರ್.ವೃತ್ತದಲ್ಲಿ ಒಮ್ಮೆ ಬಂದರೆ ಸಾಕು...ಬಿಡಾಡಿ ದನಗಳು ಸಾಲುಗಟ್ಟಿ ರಸ್ತೆಯಲ್ಲಿ ಮಲಗಿರುವ ನೋಟ ಗೋಚರಿಸುತ್ತದೆ. ಮೊದಲೇ ಕಿರಿದಾದ ರಸ್ತೆ, ಸಾರಿಗೆ ಸಂಸ್ಥೆಯ ಬಸ್ ತಂಗುದಾಣದಿಂದ ಕಿರಿಕಿರಿ ಅನುಭವಿಸುತ್ತಿರುವ ವಾಹನ ಸವಾರರು ಹಾಗೂ ಪಾದಚಾರಿಗಳು ಬಿಡಾಡಿ ದನಗಳ ಹಿಂಡನ್ನು ಕಂಡು ಒಮ್ಮೆ ಬೆಚ್ಚಬೇಕಾಗುತ್ತದೆ.
ರಸ್ತೆ ವಿಭಜಕದ ಮೇಲೆ ಮಲಗುವ ಈ ಬಿಡಾಡಿ ದನಗಳನ್ನು ಎಬ್ಬಿಸಿ ರಸ್ತೆಯ ಬದಿಗೆ ಕಳುಹಿಸಲು ಯಾರಾದರೂ ಮುಂದಾದರೇ ಸಾಕು...ದನಗಳಿಗೆ ತೊಂದರೆ ನೀಡುವಂತಹವರಿಗೆ ಆ ದನಗಳು ಪ್ರತಿರೋಧವನ್ನು ಒಡ್ಡದೆ ಬಿಡುವುದಿಲ್ಲ. ತಮ್ಮ ಸಹವಾಸಕ್ಕೆ ಬಂದರೆ ತಾನು ಯಾರಿಗೂ ಜಗ್ಗುವುದಿಲ್ಲ ಎಂಬ ಉತ್ತರವನ್ನು ಬೀಡಾಡಿ ದನಗಳು ಪ್ರದರ್ಶಿಸುತ್ತವೆ. ತಮ್ಮನ್ನು ಕೆಣಕುವವರನ್ನು ಹಿಮ್ಮೆಟ್ಟಿಸಿ ದಾಳಿಯನ್ನೂ ನಡೆಸುತ್ತವೆ.
ದೊಡ್ಡ ಬಿಡಾಡಿ ದನಗಳ ಉಪಟಳದಿಂದ ನಗರದ ಹೃದಯ ಭಾಗದಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ದನಗಳ ಹಾವಳಿಯಿಂದ ಸಾಕಷ್ಟು ಅವಘಾತಗಳು ಉಂಟಾಗಿ ಸಾವು ನೋವುಗಳು ಸಂಭವಿಸಿವೆ. ಬಿಡಾಡಿ ದನಗಳು ಒಂದಕ್ಕೊಂದು ಗುದ್ದಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿವೆ. ಈ ಬಗ್ಗೆ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳದೆ ಮೌನ ಧರಿಸಿದ್ದಾರೆ. ಬಿಡಾಡಿ ದನಗಳನ್ನು ರಸ್ತೆಗೆ ಬಿಡುವ ಮಾಲೀಕರಿಗೆ ನಗರಸಭೆ ಹಾಗೂ ಜಿಲ್ಲಾ ಪೊಲೀಸ್ ನೋಟಿಸ್ ನೀಡಿ ದಂಡ ವಿಧಿಸುವಂತ ಕ್ರಮ ಜಾರಿಯಲ್ಲಿದ್ದರೂ ಈವರೆಗೂ ಸಂಬಂಧಪಟ್ಟವರು ದನಗಳ ಮಾಲೀಕರಿಗೆ ನೋಟಿಸ್ ನೀಡಿರುವುದು ಕಂಡು ಬಂದಿಲ್ಲ. ಇದರಿಂದ ಪ್ರತಿನಿತ್ಯ ದನಗಳನ್ನು ಬೀದಿಗೆ ಬಿಡುವವರ ಸಂಖ್ಯೆ ಹೆಚ್ಚಾಗಿದೆ.  
ಬೀದಿ ನಾಯಿಗಳ ಹಾವಳಿ ಬೇರೆ: ಇನ್ನೂ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬೀದಿನಾಯಿಗಳ ಸಂತತಿ ಹೆಚ್ಚಾಗುತ್ತಿದ್ದು, ಹಾಸನ, ಚನ್ನರಾಯಪಟ್ಟಣ, ಅರಕಲಗೂಡು ಸೇರಿದಂತೆ ಇತರೆ ಕಡೆಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.  ಬೀದಿಗಳಲ್ಲಿ ನಾಯಿಗಳ ಕಾಟ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಸಾರ್ವಜನಿಕರು ನಾಯಿಗಳ ಹಾವಳಿಗಳಿಂದ ಬೇಸತ್ತು ಹೋಗಿದ್ದಾರೆ. ಬೀದಿನಾಯಿಗಳ ಕಡಿತಕ್ಕೆ ತುತ್ತಾಗಿ ಸಾರ್ವಜನಿಕರು ಸಂಕಷ್ಟ ಎದರಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇನ್ನೂ ಸಣ್ಣ ಪುಟ್ಟ ಮಕ್ಕಳು ಬೀದಿಯಲ್ಲಿ ಆಟವಾಡುತ್ತಿದ್ದಾಗ ನಾಯಿಗಳ ಕ್ರೌರ್ಯಕ್ಕೆ ತುತ್ತಾಗಿರುವುದೂ ಉಂಟು.
ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಹೆಚ್ಚಾಗುತ್ತಿರುವ ಬೀದಿ ನಾಯಿಗಳ ಹಾವಳಿಗೆ ವೃದ್ಧರು, ಮಕ್ಕಳು ಎಲ್ಲರು ತುತ್ತಾಗುತ್ತಿದ್ದಾರೆ. ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳಲ್ಲಿ ನಾಯಿ ಹಾವಳಿಯನ್ನು ತಡೆಗಟ್ಟಲು ಸಂತಾನ ಹರಣ ನಿಯಂತ್ರಣ ಕಾರ್ಯಕ್ರಮ ಕೈಗೊಂಡಿದ್ದರೂ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ.
ನಗರದಲ್ಲಿ 5- 6 ಸಾವಿರ ನಾಯಿಗಳು:  ಹಾಸನ ನಗರದಲ್ಲಿ ಸುಮಾರು 5 ಸಾವಿರದಿಂದ 6 ಸಾವಿರದಷ್ಟು ಬೀದಿನಾಯಿಗಳಿವೆ. ಈ ಪೈಕಿ 2666 ಬೀದಿನಾಯಿಗಳಿಗೆ ಸಂತಾನ ಹರಣ ಯೋಜನೆಯಡಿ ಕಿವಿಗಳನ್ನು ಕತ್ತರಿಸಲಾಗಿದೆ. ಆದರೆ ಕೆಲವು ನಾಯಿಗಳು ಬೇರೆಡೆಯಿಂದ ನಗರದೊಳಗೆ ಬಂದು ಬೀದಿನಾಯಿಗಳ ಸಂತತಿ ಹೆಚ್ಚಾಗುವಂತೆ ಮಾಡುತ್ತಿವೆ. ಇದರಿಂದ ನಗರದ ಬೀದಿಗಳಲ್ಲಿ ನಾಯಿಗಳ ಹಿಂಡು ಹೆಚ್ಚಾಗಿ ಸಾರ್ವಜನಿಕ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ.
ಸಂತಾನಹರಣ ಯೋಜನೆಯಡಿ ನಾಯಿಗಳಿಗೆ ಕಿವಿಯನ್ನು ಕತ್ತರಿಸಿದರೆ ಅವುಗಳ ದೇಹ ದಪ್ಪವಾಗುತ್ತವೆ. ಆದ್ರೆ ಅವು ಸಂತಾನಕ್ಕೆ ಅವಕಾಶವನ್ನು ನೀಡುವುದಿಲ್ಲ. ಕೆಲವೊಂದು ಸಂತಾನ ಹರಣ ಆಗದಂತಹ ನಾಯಿಗಳು ಬೇರೆಡೆಯಿಂದ ನಗರಕ್ಕೆ ಬಂದು ಸಂತಾನವನ್ನು ಹೆಚ್ಚಿಸುತ್ತಿದ್ದಾವೆ. ನಗರಸಭೆಯು ಈ ನಾಯಿಗಳ ಹಾವಳಿಯನ್ನು ನಿಯಂತ್ರಣಕ್ಕೆ ತರಲು ಸಾಕಷ್ಟು ಶ್ರಮವಹಿಸ ಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕಾಗಿಯೇ ನಗರಸಭೆಯ ತನ್ನ ಬಜೆಟ್‌ನಲ್ಲಿ ಸಾವಿರಾರು ರು.ಗಳ ಅನುದಾನ ಮೀಸಲಿಸಿರಿದೆ.
ಶಾಶ್ವತ ಪರಿಹಾರ ರೂಪಿಸಿ:  ನಗರಸಭೆಯಿಂದ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳುತ್ತಿದ್ದರೂ ನಾಯಿಗಳ ಹಾವಳಿ ಮಾತ್ರ ತಪ್ಪಿಲ್ಲ. ಇದಕ್ಕಾಗಿ ಸಾಕಷ್ಟು ಹಣವನ್ನು ವ್ಯಯಿಸುತ್ತಿದ್ದರೂ ನೀರಿನಲ್ಲಿ ಹೋಮ ಮಾಡಿದಂತಹ ಪರಿಸ್ಥಿತಿ ನಗರಸಭೆಯದಾಗಿದೆ. ನಗರಸಭೆ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಇದೆ.  ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.