ಹಾಸನ

20 ನಿಮಿಷ 20 ಸುದ್ದಿ

Published On :

ಹಾಸನ: ಪ್ರಸ್ತುತ ರೈತರಿಗೆ ವಿತರಿಸುತ್ತಿರುವ ಬಿತ್ತನೆ ಆಲೂಗಡ್ಡೆಗೆ ಮೂರು ದಿನಗಳೊಳಗೆ ಅಧಿಕೃತ ರಶೀದಿ ನೀಡದಿದ್ದರೇ ಏಕಾಂಗಿ ಧರಣಿ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಹೋರಾಟಗಾರ ಹೊ.ತಿ. ಹುಚ್ಚೇಗೌಡ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ವರ್ತಕರು ಬಿತ್ತನೆ ಆಲೂಗಡ್ಡೆ ದರವನ್ನು ರು. 1900ರಿಂದ 2000ಗೆ. ಮಾರಾಟ ಮಾಡುತ್ತಿದ್ದು, ಅದರಂತೆ ಆಲೂಗಡ್ಡೆ ಕೊಳ್ಳುವ ರೈತರಿಗೆ ಅಧಿಕೃತವಾಗಿ ಟಿನ್ ನಂಬರ್ ಇರುವ ರಶೀದಿಯನ್ನು ನೀಡುತ್ತಿಲ್ಲ. ಉತ್ತಮ ಆಲೂಗಡ್ಡೆ ಎಂದು ಮಾರಾಟ ಮಾಡುತ್ತಿದ್ದಾರೆ. ಆದರೆ ಅಧಿಕೃತ ಬಿಲ್ಗಳನ್ನು ನೀಡುತ್ತಿಲ್ಲ. ಇದರಿಂದ ರೈತರು ಬೆಳೆ ವಿಮೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದರು. ಜಿಲ್ಲಾಡಳಿತ ಆಲೂಗಡ್ಡೆ ಬಿತ್ತನೆ ಬೀಜ ಎಂದು ಹೇಳುತ್ತಿದೆ ಅಷ್ಟೇ. ಆದರೆ ಅದು ಬಿತ್ತನೆ ಬೀಜ ಅಲ್ಲ ಎಂದರು.

ಆಲೂಗಡ್ಡೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಸವಲತ್ತು
ಹಾಸನ: ಜಿಲ್ಲೆಯಲ್ಲಿ 2014ರ ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಎಪಿಎಂಸಿ ಆವರಣದಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟ ಪ್ರಾರಂಭವಾಗಿದೆ. ಎಪಿಎಂಸಿ ಆವರಣದಲ್ಲೇ ತೋಟಗಾರಿಕೆ ಇಲಾಖೆ ವತಿಯಿಂದ ಆಲೂಗಡ್ಡೆ ಬೆಳೆಯ ಬಗ್ಗೆ ತಾಂತ್ರಿಕ ಮಾಹಿತಿ ನೀಡಲಾಗುತ್ತಿದೆ. ಆಲೂಗಡ್ಡೆ ವಿಶೇಷ ಪ್ಯಾಕೇಜ್ ಅಡಿ ನೀಡಲಾಗುವ ವಿವಿಧ ಸವಲತ್ತುಗಳಿಗೆ ಅರ್ಜಿ ಸ್ವೀಕರಿಸಲಾಗುತ್ತಿದೆ.  
ತೋಟಗಾರಿಕೆ ಇಲಾಖೆ ವತಿಯಿಂದ ತಾಲೂಕುವಾರು ಮಳಿಗೆಗಳನ್ನು ತೆರೆಯಲಾಗಿದ್ದು ಉಚಿತವಾಗಿ ಜೈವಿಕ ಗೊಬ್ಬರ, ಪೀಡೆ ನಾಶಕಗಳನ್ನು ವಿತರಿಸಲಾಗುತ್ತಿದೆ. ರಾಸಾಯನಿಕ ಸಸ್ಯ ಸಂರಕ್ಷಣಾ ಔಷಧಿಗಳನ್ನು ಸಹಕಾರ ಸಂಘಗಳ ಮೂಲಕ ಶೇ. 50ರ ಸಹಾಯಧನದಲ್ಲಿ (ಗರಿಷ್ಠ ಮಿತಿಗೊಳಪಟ್ಟು) ಮಾರಾಟ ಮಾಡಲಾಗುತ್ತಿದೆ. ರೈತರು ಅರ್ಜಿಯೊಂದಿಗೆ ಪಹಣಿ ಪ್ರತಿ, ಆಲೂಗಡ್ಡೆ ಖರೀದಿಸಿದ ಬಿಲ್ಲಿನ ಪ್ರತಿ (ಮೂಲ ಜೆರಾಕ್ಸ್ ಪ್ರತಿ), ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಸಂಖ್ಯೆಯುಳ್ಳ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಮತ್ತು ಕ್ಲೇಮ್ ಬಿಲ್ಲನ್ನು ಆಯಾ ತಾಲೂಕಿನ ಮಳಿಗೆಗಳಲ್ಲಿ ಸಲ್ಲಿಸಿ, ವಿವಿಧ ಸವಲತ್ತುಗಳನ್ನು ಪಡೆದುಕೊಳ್ಳಬಹುದಾಗಿದೆ.

ವಿದ್ಯುತ್ ಸಮಸ್ಯೆ ನೀಗಿಸಲು ಎಇಇಗೆ ಗ್ರಾಮಸ್ಥರ ಮನವಿ
ಆಲೂರು: ತಾಲೂಕಿನ ಗ್ರಾಮಗಳಾದ ಹುಸ್ಕೂರು, ಸುಳುಗೋಡು, ಅಡಿಬೈಲು, ಭರತೂರು, ಕಾಣಿಗೆರೆ, ಕಲ್ಲಾರೆ, ಹಂಜಿಳಿಗೆ, ಮಾಗಡಿಹಳ್ಳಿ, ಮಣಿಪುರ, ಪಿ.ಬಿ.ಹಳ್ಳಿ, ಕೊಡಗತವಳ್ಳಿ, ನೇರಗಳಲೆ ಮುಂತಾದ ಗ್ರಾಮಗಳ ಗ್ರಾಮಸ್ಥರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಎ.ಇ.ಇ.ಗೆ ವಿದ್ಯುತ್ ತಮಗಾಗುತ್ತಿರುವ ವಿದ್ಯುತ್ ಸಮಸ್ಯೆ ನಿವಾರಿಸುವ ಬಗ್ಗೆ ಅರ್ಜಿ ಸಲ್ಲಿಸಿದರು.
ವಿದ್ಯುತ್ ಸಂಪರ್ಕ ಒದಗಿಸಬಹುದು: ಆನೆ ಪೀಡಿದ ಪ್ರದೇಶಗಳಾಗಿರುವುದರಿಂದ ಇಲಾಖೆಯ ಲೈನ್ಮ್ಯಾನ್ಗಳು ಕೆಲಸ ನಿರ್ವಹಿಸಲು ಭಯಪಡುತ್ತಾರೆ. ಪ್ರಮುಖವಾಗಿ ಮಗ್ಗೆಯಿಂದ ಕಣಿವೆ ಬಸವನಹಳ್ಳಿ ಮಾರ್ಗವಾಗಿ (3 ಕಿ.ಮೀ. ಅಂತರದ) ಕಾಣಿಗೆರೆಯ ಪಕ್ಕದಲ್ಲಿಯೇ ಇರುವ ಟಿ.ಸಿ.ಪಾಯಿಂಟ್ಗೆ ಬೈಪಾಸ್ ಮಾಡಿಕೊಟ್ಟರೆ ಸುಮಾರು 12 ಕಿ.ಮೀ. ಹಾದು ಹೋಗಿರುವ ವಿದ್ಯುತ್ ಲೈನ್ಗೆ ಕೇವಲ 3 ಕಿ.ಮೀ.ನಲ್ಲಿ ವಿದ್ಯುತ್ ಸಂಪರ್ಕ ಒದಗಿಸಬಹುದಾಗಿದೆ. ಇದರಿಂದ, ಸುಮಾರು 9 ಕಿ.ಮೀ.ನಷ್ಟು ಅಂತರ ಕಡಿಮೆಯಾಗುತ್ತದೆ. 2001-02ರಲ್ಲಿ ಇಲಾಖೆಯಿಂದ ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ಸರ್ವೇ ಮಾಡಲಾಗಿದ್ದು ಯಾವುದೇ ಪ್ರಗತಿ ಕಂಡಿಲ್ಲ. ಈಗಲಾದರೂ ಈ ಬಗ್ಗೆ ಗಮನ ಹರಿಸಿ ಈ ಕಾರ್ಯವನ್ನು ಶೀಘ್ರ ಚಾಲನೆ ತರುವಂತೆ ಒತ್ತಾಯಿಸಿದರು.

ಮೆರವಣಿಗೆ...
ಅರಸೀಕೆರೆ ಪಟ್ಟಣದಲ್ಲಿ ವಾಸವಿ ಜಯಂತಿ ಅಂಗವಾಗಿ ಪಟ್ಟಣದ ಆರ್ಯವೈಶ್ಯ ಸಮಾಜ ಬಾಂಧವರು ಪಟ್ಟಣದ ಪೇಟೆಬೀದಿಯಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಿಯ ಮೆರವಣಿಗೆ ನಡೆಸಿದರು. ಇದೇ ವೇಳೆ ಬಸವೇಶ್ವರ ವೃತ್ತದಲ್ಲಿ ಪ್ರಸಾದ ವಿನಿಯೋಗ ನಡೆಸಿದರು.

ಸಾಹಿತಿ ನಾರಾಯಣಚಾರ್ಯ ಕೃತಿ ಮುಟ್ಟುಗೋಲಿಗೆ ಆಗ್ರಹ
ಹಾಸನ: ಬೇಡ ಸಮುದಾಯವನ್ನು ಹದ್ದು, ಕಾಗೆಗಳಿಗೆ ಹೋಲಿಕೆ ಮಾಡಿರುವ ಕೆ.ಎಸ್.ನಾರಾಯಣಚಾರ್ಯ ಅವರನ್ನು ಬಂಧಿಸಬೇಕು ಹಾಗೂ ಅವರ ಕೃತಿಯನ್ನು ಮುಟ್ಟುಗೋಲು ಹಾಕುವಂತೆ ಒತ್ತಾಯಿಸಿ ಮೇ 14ರಂದು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರಾಯಣಚಾರ್ಯ ಅವರು ಕಳೆದ ಮಾ 15ರಂದು ಮೈಸೂರಿನಲ್ಲಿ ತಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬೇಡ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಕಾಗೆ ಹಾಗೂ ಹದ್ದುಗಳಿಗೆ ಹೋಲಿಸಿ ಅವಮಾನಗೊಳಿಸಿದ್ದು, ಈ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಮಹಂತಪ್ಪ, ಕಾರ್ಯದರ್ಶಿ ಧರ್ಮಪ್ಪನಾಯಕ ಹಾಗೂ ಇತರರು ಇದ್ದರು.

 ಮರಕ್ಕೆ ಡಿಕ್ಕಿ ಹೊಡೆದು ಒರಗಿ ನಿಂತ ಕಾರು!
ಸಕಲೇಶಪುರ: ಇದೊಂದು ವಿಭಿನ್ನ ಶೈಲಿಯ ರಸ್ತೆ ಅಪಘಾತ. ಮರಕ್ಕೆ ವಾಹನಗಳು ಡಿಕ್ಕಿ ಹೊಡೆದು ನಿಲ್ಲುವುದು ಮಾಮೂಲಿ. ಆದರೆ ಮರಕ್ಕೆ ಡಿಕ್ಕಿ ಹೊಡೆದ ಕಾರು, ಅಲ್ಲಿ ಪಲ್ಟಿ ಆಗಿ ಮರಕ್ಕೆ ಒರಗಿ ನಿಂತಿರುವ ಘಟನೆ ಇಲ್ಲಿ ನಡೆದಿದೆ. ಇಲ್ಲೊಂದು ಅಂತಹ ವಿಶಿಷ್ಟವಾದ ಕಾರು ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಯಾರಿಗೂ ಸಣ್ಣ ಗಾಯಗಳು ಆಗಿಲ್ಲ. ಈ ಕಾರು ಅಪಘಾತವಾಗಿರುವ ಶೈಲಿ ನೋಡಲು ಜನರು ತೆರಳುತ್ತಿದ್ದಾರೆ. ಶುಕ್ರವಾರ ಮದ್ಯರಾತ್ರಿ ಸಕಲೇಶಪುರ- ಹಾನುಬಾಳ್ ರಸ್ತೆಯ ವಾಟೇಗಡಿ ಗ್ರಾಮ ಸಮೀಪ ದೇವಾಲಕೆರೆ ಗ್ರಾಮದ ಲೋಕೇಶ್ ಎಂಬುವವರಿಗೆ ಸೇರಿದ ಕಾರು ಅಪಘಾತವಾಗಿದ್ದು, ಗಂಟೆಗಳ ಪ್ರಯತ್ನಿಸಿದರೂ ನಿಲ್ಲಿಸಲಾಗದ ಸ್ಥಿತಿಯಲ್ಲಿ ರಸ್ತೆ ಬದಿಯ ಮರಕ್ಕೆ ಒರಗಿ ನಿಂತಿರುವ ಕಾರನ್ನು ನೋಡಲು ಜನರು ಹರಿದು ಬರುತ್ತಿದ್ದಾರೆ. ಕಾರಿನಲ್ಲಿದ್ದ ಲೋಕೇಶ್ ಕುಟುಂಬ ಯಾವುದೇ ಅಪಾಯವಿಲ್ಲದೆ ಪಾರಾಗಿದೆ. ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಚಿಯಾಗಿದೆ. ಕಾರಿನ ಮುಂಭಾಗ ಕೆಳಮುಖವಾಗಿದ್ದರೇ, ಹಿಂಭಾಗ ಮೇಲ್ಮುಖವಾಗಿ ನಿಂತಿದೆ. ಹೀಗೆ ಉಲ್ಪಾಪಲ್ಟ ಆಗಿ ಕಾರು ಮರಕ್ಕೆ ಒರಗಿಕೊಂಡು ನಿಂತಿದೆ.

ವಿಜೃಂಭಣೆಯ ಗಂಗಾ ಜಯಂತಿ ಆಚರಣೆ
ಜಾವಗಲ್: ಹೋಬಳಿಯಲ್ಲಿ ಗಂಗಾಮತಸ್ಥ ಸಮಾಜದ ವತಿಯಿಂದ  ಗಂಗಾ ಜಯಂತಿಯು ಸಂಭ್ರಮ ಮತ್ತು ಸಡಗರದಿಂದ ಇತ್ತೀಚೆಗೆ ನಡೆಯಿತು. ಗಂಗಾಪರಮೇಶ್ವರಿ ದೇಗುಲದಲ್ಲಿ ಅಮ್ಮನವರಿಗೆ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾಲಂಕಾರ, ಮಹಾಮಂಗಳಾರತಿ ಮಾಡಲಾಯಿತು.  ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಗಂಗಾಪೂಜೆ ಮಾಡಿ, ಗ್ರಾಮ ದೇವತೆಗಳಾದ ಕರಿಯಮ್ಮ, ಪ್ಲೇಗಿನಮ್ಮ ಹಾಗೂ ಯಳವಾರೆ ಚೆಲುವರಾಯ ಸ್ವಾಮಿ ಯವರ ಉತ್ಸವ ಮೂರ್ತಿಗಳೊಂದಿಗೆ  ಗಂಗಾಮಾತೆಯನ್ನು ಗಂಗಾಪರಮೇಶ್ವರಿ ದೇವಾಲಯಕ್ಕೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಭಕ್ತಾದಿಗಳಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು. ನಂತರ ಗ್ರಾಮ ದೇವತೆಗಳಾದ ಕರಿಯಮ್ಮ, ಪ್ಲೇಗಿನಮ್ಮ ಹಾಗೂ ದೊಡ್ಡಮ್ಮ, ವೀರಭದ್ರಸ್ವಾಮಿ, ಕೆಂಚಪ್ಪ ದೇವರುಗಳನ್ನು ಪುಷ್ಪಾಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಿ, ಯಳವಾರೆ ಚೆಲುವರಾಯಸ್ವಾಮಿ ದೇವರ ಮೆರವಣಿಗೆ, ಉತ್ಸವ ನಡೆಯಿತು. ಸಮಾಜದ ಮುಖಂಡರಾದ ಜೆ.ಕೆ. ರಂಗಸ್ವಾಮಿ, ಚಂದ್ರಶೇಖರ್, ಜೆ.ಜಿ. ಜಗನ್ನಾಥ್, ಜಯರಾಮ್, ಜನಾರ್ಧನ್, ನೀಲಕಂಠಪ್ಪ, ದಯಾನಂದ್, ರವಿಶಂಕರ್, ಪದ್ಮನಾಭ ಹಾಗೂ ಸಮಿತಿಯ ಪದಾಧಿಕಾರಿಗಳು ಹಾಗೂ ಮಹಿಳೆಯರು ಭಾಗವಹಿಸಿದ್ದರು.

ಆದಿಚುಂಚನಗಿರಿ ಮಠದಲ್ಲಿ ಬದುಕು ಒಂದು ಕಲೆ ಉಪನ್ಯಾಸ
ಹಾಸನ: ನಗರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಮೇ 14 ರಂದು ಬುಧವಾರ ಸಂಜೆ 6.30ಕ್ಕೆ ಶ್ರೀ ಮಠದ ಆವರಣದಲ್ಲಿರುವ ನವನಾಥಯಾಗ ಮಂಟಪದಲ್ಲಿ ನಡೆಯಲಿರುವ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಹುಣ್ಣಿಮೆ ಕಾರ್ಯಕ್ರಮದ ಅಂಗವಾಗಿ ಖ್ಯಾತ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಅವರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ. ಹಾಸನದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಶಂಭುನಾಥ ಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ಇಂದುಮತಿ ಸಾಲಿಮಠ ಅವರು, ಬದುಕು ಒಂದು ಕಲೆ ಎಂಬ ವಿಷಯ ಕುರಿತು ಉಪನ್ಯಾಸ ನೀಡುವರು. ಹಾಸನದ ಕಾಲಭೈರವೇಶ್ವರ ಭಜನಾ ಮಂಡಳಿ,  ಶೈಲವಲ್ಲಭ ಭಜನಾ ಮಂಡಳಿ,  ಶಕ್ತಿ ಯೋಗ ಕೇಂದ್ರ, ಆದಿಚುಂಚನಗಿರಿ ಮಹಿಳಾ ಸಮಾಜ ಮತ್ತು ಒಕ್ಕಲಿಗರ ಮಹಿಳಾ ಸಂಘದ ಸದಸ್ಯರು ಭಜನೆ ಕಾರ್ಯಕ್ರಮ ನಡೆಸಿಕೊಡುವರು. ಭಕ್ತರು ಸಮಯಕ್ಕೆ ಸರಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀಮಠದ ವ್ಯವಸ್ಥಾಪಕ ಎಚ್.ಕೆ. ಚಂದ್ರಶೇಖರ್ ಮನವಿ ಮಾಡಿದ್ದಾರೆ.

ಭವಿಷ್ಯ ನಿಧಿ ಅದಾಲತ್ ನಾಳೆ
ಹಾಸನ: ಚಿಕ್ಕಮಗಳೂರಿನಲ್ಲಿ ತನ್ನ ಉಪ ಕ್ಷೇತ್ರೀಯ ಕಚೇರಿ ಹೊಂದಿರುವ,  ಕೇಂದ್ರ ಶ್ರಮ ಮಂತ್ರಾಲಯದ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ವತಿಯಿಂದ ಮೇ 12ರಂದು ಭವಿಷ್ಯ ನಿಧಿ ಅದಾಲತ್ ಹಮ್ಮಿಕೊಳ್ಳಲಾಗಿದೆ. ಕ್ಷೇತ್ರೀಯ ಭವಿಷ್ಯ ನಿಧಿ ಆಯುಕ್ತರು ಈ ಸಭೆ ಹಮ್ಮಿಕೊಳ್ಳಲಾಗಿದೆ.
ಭವಿಷ್ಯನಿಧಿ ಉದ್ಯೋಗದಾರರು ಮತ್ತು ಸದಸ್ಯರು ತಮ್ಮ ದೂರುಗಳನ್ನು ಮತ್ತು ಅರ್ಜಿಯನ್ನು ಖುದ್ದಾಗಿ ಮೇ 12ರ ಬೆಳಗ್ಗೆ 11ರೊಳಗೆ ಅಥವಾ  ಢಿಢಿಢಿ.ಜಠಜ್ಝ್ಜಿಟಡ.್ಜ್ಟಢ.್ಝಟಿ ಇಲ್ಲಿಗೆ ನೊಂದಾಯಿಸಬಹುದು ಎಲ್ಲಾ ದೂರುಗಳನ್ನು ಅದೇ ದಿನ ಇತ್ಯರ್ಥಪಡಿಸಲು ಕ್ರಮ ವಹಿಸಲಾಗುವುದು.
ಭವಿಷ್ಯ ನಿಧಿ ಮೊತ್ತವನ್ನು ಸದಸ್ಯರ ಖಾತೆಗೆ 24 ಗಂಟೆಗಳೊಳಗೆ ಜಮಾ ಮಾಡಲು ಹೊಸ ಃಊಋಖಿ- ಈಇಖ ಸೌಲಭ್ಯ ಒದಗಿಸಲಾಗಿದ್ದು ಎಲ್ಲಾ ಸದಸ್ಯರು ತಮ್ಮ ಅರ್ಜಿ ಜೊತೆ ತಮ್ಮ ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ. 08262-234106.

ಜಂಬೂರು ಜಕ್ಕೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ
ನುಗ್ಗೇಹಳ್ಳಿ: ಇಲ್ಲಿಗೆ ಸಮೀಪದ ಜಂಬೂರು ಜಕ್ಕೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ಶ್ರೀಮುಖ ನಕ್ಷತ್ರದ ಮಿಥುನ ಲಗ್ನದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಧ್ವಜಾರೋಹಣ, ಬೇರಿ ತಾಡನ, ವೃಷಭ ವಾಹನೋತ್ಸವ, ಅಷ್ಟಮಿ ಅಗಲು ಅಗ್ನಿ ಜನನ, ಆಧಿವಾಸ ಹೋಮ, ಅಭಿಷೇಕ, ನಿತ್ಯೋತ್ಸವ, ಕುದುರೆ ಉತ್ಸವ, ಕಲ್ಯಾಣೋತ್ಸವ, ಗಂಧೋತ್ಸವದ ನಂತರ ಬ್ರಹ್ಮರಥೋತ್ಸವ ನಡೆಯಿತು. ಈ ಜಾತ್ರಾ ಮಹೋತ್ಸವದಲ್ಲಿ ಜಕ್ಕೇಶ್ವರಸ್ವಾಮಿಯ ಸೇವಾಸಮಿತಿ ಅಧ್ಯಕ್ಷ ಜಿಲ್ಲಾ ಪಂಚಾಯ್ತಿ  ಸದಸ್ಯ ಎಂ.ಎ ರಂಗಸ್ವಾಮಿ, ಅರ್ಚಕ ಕೃಷ್ಣಮೂರ್ತಿ ದೀಕ್ಷಿತ್, ಮಂಜುನಾಥ ದೀಕ್ಷಿತ್ ಇದ್ದರು.

ಹಿರಿಯರ ಸ್ಮರಣೆ...
ಬೇಲೂರಿನಲ್ಲಿ ಭಾರತ ಸೇವಾದಳದ ಸ್ಥಾಪಕ ನಾ.ಸು. ಹರ್ಡೀಕರ್ ಅವರ 125ನೇ ಜಯಂತಿ ಆಚರಿಸಲಾಯಿತು. ಸಾಹಿತಿ ಬೇಲೂರು ಕೃಷ್ಣಮೂರ್ತಿ, ಸೇವಾದಳದ ಜಿಲ್ಲಾ ಸಂಘಟಕಿ ರಾಣಿ, ಹಿರಿಯ ಪ್ರಮುಖ ಎಚ್.ಎಂ. ಶಿವಣ್ಣ, ವೆಂಕಟೇಶ್, ಕುಮಾರಸ್ವಾಮಿ ಇದ್ದಾರೆ.

ಪ್ರೊ. ಸಿ. ನಂಜುಂಡಯ್ಯಗೆ ಸಂಸ್ಕೃತ ವಿವಿ ಡಿ. ಲಿಟ್
ಹಾಸನ: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾಲಭೈರವೇಶ್ವರ ವೇದಾಗಮ ಸಂಸ್ಕೃತ ಸ್ನಾತಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಚಾರ್ಯರಾದ ಪ್ರೊ. ಸಿ.ನಂಜುಂಡಯ್ಯನವರಿಗೆ ಕರ್ನಾಟಕ ಸಂಸ್ಕತ ವಿಶ್ವವಿದ್ಯಾಲಯ, ಡಾಕ್ಟರ್ ಆಫ್ ಲಿಟರೇಚರ್ (ಡಿ.ಲಿಟ್) ಪದವಿ ನೀಡಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಂಸ್ಕೃತ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ರಾಜ್ಯಪಾಲ ಹಂಸರಾಜ ಭಾರಧ್ವಾಜ್, ನಂಜುಂಡಯ್ಯನವರಿಗೆ ಡಿ.ಲಿಟ್ ಪದವಿ ಪ್ರದಾನ ಮಾಡಿದರು. ಪ್ರೊ. ಸಿ. ನಂಜುಂಡಯ್ಯ ಅವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ  ಕುಲಪತಿ ಪ್ರೊ. ಮಲ್ಲೇಪುರಂ ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ್ದ ಭಾಣಭಟ್ಟಸ್ಯ ಕಾದಂಬರ್ಯಾ- ಸಾಂಸ್ಕತಿಕಂ ಅಧ್ಯಯನಮ್ ವಿಷಯದ ಶೋಧ ಪ್ರಬಂಧಕ್ಕೆ ಸಂಸ್ಕೃತ ವಿವಿ ಡಿ. ಲಿಟ್ ಪದವಿ ನೀಡಿದೆ.

ಶಾಂತಿಗ್ರಾಮ ಸರ್ಕಾರಿ ಕಾಲೇಜಿಗೆ ಶೇ. 88 ಫಲಿತಾಂಶ
ಹಾಸನ: ತಾಲೂಕಿನ ಶಾಂತಿಗ್ರಾಮ ಪಿ.ಯು.ಸಿ. ಕಾಲೇಜಿಗೆ 2014ರ ಮಾರ್ಚ್ ಮಾಹೆಯಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 88ರಷ್ಟು ಫಲಿತಾಂಶ ಬಂದಿದ್ದು ಪ್ರಥಮ ದರ್ಜೆಯಲ್ಲಿ 12, ದ್ವಿತೀಯ ದರ್ಜೆಯಲ್ಲಿ 8 ಮತ್ತು ತೃತೀಯ ದರ್ಜೆಯಲ್ಲಿ 2 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಶಾಂತಿಗ್ರಾಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ಶೇ. 91 ಫಲಿತಾಂಶ: ಗೊರೂರು ಪಿ.ಯು.ಸಿ. ಕಾಲೇಜಿಗೆ 2014ರ ಮಾರ್ಚ್ ಮಾಹೆಯಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 91ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಒಟ್ಟು 33 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,  30 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ ಎಂದು ಗೊರೂರು ಸರ್ಕಾರಿ ಪದವಿ ಪೂರ್ವಕಾಲೇಜು ಪ್ರಾಂಶುಪಾಲ ಶೇಷಾಚಾರ್ ತಿಳಿಸಿದ್ದಾರೆ.
ನಿಶಾಲ್ ಜಿಲ್ಲೆಗೆ ಪ್ರಥಮ: ನಗರದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ನಿಶಾಲ್ ಡ್ರಿಮಾ ಪಿಂಟೋ ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಒಟ್ಟು 580 ಅಂಕ ಗಳಿಸುವುದರ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

 ಮೆಕ್ಯಾನಿಕ್ ವೇಷದಲ್ಲಿ ಆಭರಣ ದೋಚುತ್ತಿದ್ದ ಕಳ್ಳರಿಗೆ ಗೂಸ
ಹಾಸನ: ಸ್ಟವ್ ರಿಪೇರಿ ಮಾಡುವ ನೆಪದಲ್ಲಿ ಒಬ್ಬಂಟಿಗಳ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ದೋಚುತ್ತಿದ್ದ ಇಬ್ಬರು ಆರೋಪಿಗಳನ್ನು ಸಾರ್ವಜನಿಕರು ಹಿಡಿದು ಮರಕ್ಕೆ ಕಟ್ಟಿ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ಕುಂದೂರಿನಲ್ಲಿ ಶನಿವಾರ ನಡೆದಿದೆ. ಆರೋಪಿಗಳಾದ ವಿಜಯ್ ಮತ್ತು ಕುಮಾರ್ ಎಂಬವರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಆರೋಪಿಗಳು ಬೈಕ್ನಲ್ಲಿ ಸ್ಟವ್ ರಿಪೇರಿ ಮಾಡುವ ನೆಪದಲ್ಲಿ ಅಡ್ಡಾಡಿ ಒಬ್ಬಂಟಿ ಮಹಿಳೆಯರು ಹಾಗೂ ಪುರುಷರನ್ನು ಕಂಡರೆ ಅವರನ್ನು ಅಡ್ಡಗಟ್ಟಿ ಅವರ ಮೇಲೆ ಹಲ್ಲೆ ಮಾಡಿ, ನಂತರ ಅವರ ಬಳಿ ಇದ್ದ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದರು ಎನ್ನಲಾಗಿದೆ. ಆರೋಪಿಗಳ ತಂಡದಲ್ಲಿ ಅನೇಕ ಮಂದಿ ಇದ್ದು, ಈ ಪೈಕಿ ಇಬ್ಬರು ಮಾತ್ರ ಸಿಕ್ಕಿ ಬಿದ್ದಿದ್ದಾರೆ. ಒಬ್ಬಂಟಿ ಮಹಿಳೆಯರನ್ನು ಹಿಂಬಾಲಿಸಿ ತಲೆಗೆ ಹೊಡೆದು ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಅಷ್ಟೇ ಅಲ್ಲದೆ, ರಾತ್ರಿ ವೇಳೆಯಲ್ಲಿ ಮನೆಗಳಿಗೆ ನುಗ್ಗಿ ದರೋಡೆ ಮಾಡುವಂಥ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಆರೋಪಿಗಳಿಗೆ ಸೂಕ್ತ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿ, ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ಅವರನ್ನು ಒಪ್ಪಿಸಿದ್ದಾರೆ.

ಜಾವಗಲ್ ಕಾಲೇಜಿಗೆ ಶೇ. 75.2 ಫಲಿತಾಂಶ
ಜಾವಗಲ್: ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇ. 75.2ರಷ್ಟು ಫಲಿತಾಂಶ ಲಭಿಸಿದೆ. ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 210 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 158 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ. ಕಲಾವಿಭಾಗದಿಂದ 112 ವಿದ್ಯಾರ್ಥಿಗಳು ಹಾಜರಾಗಿದ್ದು, 78 ವಿದ್ಯಾರ್ಥಿಗಳು ಉತೀರ್ಣರಾಗಿದ್ದು ಶೇ. 69.6, ವಿಜ್ಞಾನ ವಿಭಾಗದಲ್ಲಿ 21 ವಿದ್ಯಾರ್ಥಿಗಳಿಗೆ 8 ವಿದ್ಯಾರ್ಥಿಗಳು ಉತೀರ್ಣರಾಗಿದ್ದು, ಶೇ. 38 ಹಾಗೂ ವಾಣಿಜ್ಯ ವಿಭಾಗದಲ್ಲಿ 77 ವಿದ್ಯಾರ್ಥಿಗಳಿಗೆ 72 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. 93.5ರಷ್ಟು ಫಲಿತಾಂಶ ದೊರೆತಿದೆ.  ಕಲಾ ವಿಭಾಗದ ಗಾಯತ್ರಿ 549 (ಶೇ.91.5) ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.  ವಾಣಿಜ್ಯ ವಿಭಾಗದ ಜೆ.ಎಸ್. ಶಿಲ್ಪಾ 547 ಅಂಕ ಗಳಿಸಿದ್ದಾರೆ. ವಿಜ್ಞಾನ ವಿಭಾಗದ ಎಂ.ಸಿ. ಬಿಂದು 509 ಅಂಕ ಗಳಿಸಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 9 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 88, ದ್ವಿತೀಯ ದರ್ಜೆಯಲ್ಲಿ 37, ತೃತೀಯ ದರ್ಜೆಯಲ್ಲಿ 45 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ವಸಂತರಾಜೇ ಅರಸ್ ತಿಳಿಸಿದ್ದಾರೆ.

ತಂಬಾಕು ಬೆಳೆಗಾರರಿಗೆ ಲೈಸನ್ಸ್ ಪಡೆಯಲು ಸೂಚನೆ
ರಾಮನಾಥಪುರ: ಕಳೆದ ವರ್ಷ ಶೇ. 50ರಷ್ಟು ತಂಬಾಕನ್ನು ಕಡಿಮೆ ಬಿಟ್ಟಿರುವ ರೈತರು ಮುಚ್ಚಳಿಕೆ ಬರೆದುಕೊಟ್ಟು ಲೈಸೆನ್ಸ್ ಪಡೆಯತಕ್ಕದ್ದು. ಇಂತಹ ರೈತರು ಗೊಬ್ಬರ ಇನ್ನಿತರೆ ಸವಲತ್ತುಗಳಿಗೆ ಅನರ್ಹರು.  ಸತತವಾಗಿ 2012-13ನೇ ಸಾಲಿನಲ್ಲಿ 50 ಭಾಗಕ್ಕಿಂತ ತಂಬಾಕು ಬೆಳೆಯನ್ನು ಮಂಡಳಿಗೆ ಕಡಿಮೆ ಬಿಟ್ಟಿದ್ದರೆ ಅಂತಹವರು ಲೈಸೆನ್ಸ್ಗೆ ಅನರ್ಹರು.  ಮಂಡಳಿ ನಿಗದಿಪಡಿಸಿದ ವಿಸ್ತೀರ್ಣದಷ್ಟೇ ತಂಬಾಕು ಬೆಲೆ ನಾಟಿ ಮಾಡಿ ಎಷ್ಟು ಬೆಳೆ ನಿಗದಿಪಡಿಸಿರುವಷ್ಟು ಬೆಳೆ ನಾಟಿ ಮಾಡಬೇಕೆಂದು ಸುಮಾರು ಅಂದಾಜು ಹತ್ತು ಸಾವಿರ ತಂಬಾಕು ಬೆಳೆಯುವ ರೈತರಿದ್ದು, ಇವರಲ್ಲಿ ತಂಬಾಕು ಮಂಡಳಿ ವಿನಂತಿಸಿಕೊಂಡಿರುವುದಾಗಿ ಹಾಗೂ ಮೇಲಿನ ಆದೇಶದಂತೆ ಏ. 30ರವರೆಗೂ ದಂಡವಿಲ್ಲ.  ಜೂನ್ 10 ರವರೆಗೆ 100 ರು ಮತ್ತು ಜೂನ್ 20ರವರೆಗೆ ರು. 400 ದಂಡ ವಿಧಿಸಲಾಗುವುದು ಎಂದು ಹರಾಜು ಅಧೀಕ್ಷಕ ಶ್ರೀನಿವಾಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಂದೂಕು ವಾಪಸ್ ನೀಡಲು ಕರ್ನಾಟಕ ಬೆಳೆಗಾರರ ಸಂಘ ಆಗ್ರಹ
ಸಕಲೇಶಪುರ: ಚುನಾವಣಾ ಸಮಯದಲ್ಲಿ ಜಿಲ್ಲಾಡಳಿತ ವಶಕ್ಕೆ ಪಡೆದಿರುವ  ಬಂದೂಕುಗಳನ್ನು ಹಿಂದಿರುಗಿಸುವಂತೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಜಯರಾಂ ಹೇಳಿದ್ದಾರೆ. ಕಾಫಿ, ಏಲಕ್ಕಿ ಹಾಗೂ ಮೆಣಸಿನ ಬೆಲೆ ಏರಿಕೆ ಆಗಿರುವುದರಿಂದ ಕಳ್ಳರು ಹಾಗೂ ದರೋಡೆಕೋರರ ಹಾವಳಿ ಹೆಚ್ಚುತ್ತಿದ್ದು, ಅವರಿಂದ ರಕ್ಷಣೆಪಡೆಯಲು ಹಾಗೂ ಕಾಡಾನೆ, ಕಾಡು ಪ್ರಾಣಿಗಳ ದಾಳಿಯನ್ನು ಎದುರಿಸಲು ಬಂದೂಕು ಹೊಂದುವುದು ಈ ಸಮಯದಲ್ಲಿ ಅನಿವಾರ್ಯವಾಗಿದೆ. ಬಂದೂಕು ವಶಕ್ಕೆ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಈಚರವಳ್ಳಿ ಗ್ರಾಮದ ಪ್ರಸನ್ನ ಎಂಬುವವರ ಮನೆಯಲ್ಲಿ , ಕಳ್ಳರು ಪೊಲೀಸ್ ಮಾರು ವೇಷದಲ್ಲಿ ಬಂದು ಮನೆ ಲೂಟಿ ಮಾಡಿ, ಕೆಲವು ದನ, ಕರುಗಳನ್ನು ಹೊಡೆದುಕೊಂಡು ಹೋಗಿದ್ದಾರೆ.  ಆಲೂರು ತಾಲೂಕು ಬೋಸ್ಮನಹಳ್ಳಿಯಲ್ಲಿಯೂ ಸಹ ಕಳ್ಳರು ಮನೆಯ ಮೇಲೆ ಲೂಟಿ ನಡೆದಿದೆ. ಬಂದೂಕುಗಳಿದ್ದರೆ ಈ ಘಟನೆಗಳು ನಡೆಯುತ್ತಿರಲಿಲ್ಲ. ಆದ್ದರಿಂದ, ಜಿಲ್ಲಾಡಳಿತ ಕೂಡಲೇ ಪರಿಸ್ಥಿತಿಯ ಗಂಭೀರತೆಯನ್ನು ಅರಿತು,  ಪ್ರಸ್ತುತ ಜಮೆ ಮಾಡಿಕೊಂಡಿರುವ ಬಂದೂಕುಗಳನ್ನು ಎಲ್ಲಾ ರೈತ ಬೆಳೆಗಾರರಿಗೆ ವಾಪಾಸು
ನೀಡಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

ಉದ್ಘಾಟನೆ...
ಹಾಸನದ ಸಂಸ್ಕೃತ ಭವನದಲ್ಲಿ ಹಮ್ಮಿಕೊಂಡಿದ್ದ 151ನೇ ವಿಶ್ವ ರೆಡ್ಕ್ರಾಸ್ ದಿನಾಚರಣೆಯನ್ನು ಖ್ಯಾತ ವೈದ್ಯ, ಸಮಾಜ ಸೇವಕ ಹಾಗೂ ರೆಡ್ಕ್ರಾಸ್ ಜಿಲ್ಲಾ ಶಾಖೆ ಉಪಾಧ್ಯಕ್ಷ ಡಾ. ಗುರುರಾಜ ಹೆಬ್ಬಾರ್ ಉದ್ಘಾಟಿಸಿದರು.

ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಆಹ್ವಾನ
ಹಾಸನ: 2014-15ನೇ ಸಾಲಿಗೆ ಅರಸೀಕೆರೆ ತಾಲ್ಲೂಕಿನ ಬಿ ಸಿ ಎಂ ಇಲಾಖೆಯಿಂದ ನಡೆಯುತ್ತಿರುವ ಈ ಕೆಳಕಂಡ ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳು, ಆಶ್ರಮಶಾಲೆಗಳು ಮತ್ತು ಖಾಸಗಿ ಅನುದಾನಿತ ವಿದ್ಯಾರ್ಥಿ ನಿಲಯಗಳಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಪ್ರವೇಶ ಬಯಸುವ ವಿದ್ಯಾರ್ಥಿಗಳು ಈ ಕೆಳಕಂಡ ನಿಬಂಧನೆಗಳಿಗೆ ಒಳಪಟ್ಟಿರಬೇಕು. ವಿದ್ಯಾರ್ಥಿಯು 5ನೇ ತರಗತಿಯಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳು ಅಂದರೆ ವರ್ಗ-1, 2ಎ, 2ಬಿ, 3ಎ, 3ಬಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರು. 45000 ಮಿತಿಯಲ್ಲಿರಬೇಕು. ಇದಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಅವರಿಂದ ಜಾತಿ ಮತ್ತು ಆದಾಯ ದೃಢೀಕರಣ ಪತ್ರವನ್ನು ಅರ್ಜಿಯ ಜೊತೆಯಲ್ಲಿ ಸಲ್ಲಿಸಬೇಕು.  ಅಭ್ಯರ್ಥಿಯು ವ್ಯಾಸಂಗ ಮಾಡುತ್ತಿರುವ ಹಿಂದಿನ ವರ್ಷದ ವಾರ್ಷಿಕ ಪರೀಕ್ಷೆಯ ತೇರ್ಗಡೆಯಾದ ಅಂಕಪಟ್ಟಿಯನ್ನು ಲಗತ್ತಿಸಬೇಕು. ವರ್ಗ-1, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಆದಾಯ ಮಿತಿ ಇರುವುದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.