ಹಾಸನ

ಸಂಗೀತೋತ್ಸವ 23 ರಿಂದ

Published On :

ಹಾಸನ: ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಪ್ರತಿಷ್ಠಾನ ವತಿಯಿಂದ 13ನೇ ವಾರ್ಷಿಕ ಸಂಗೀತೋತ್ಸವ ಕಾರ್ಯಕ್ರಮವನ್ನುಲ ಮೇ23ರಿಂದ 25ರವೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಗೀತ ವಿದ್ವಾನ್ ಆರ್.ಕೆ.ಪದ್ಮನಾಭ ತಿಳಿಸಿದರು.
ನಗದರಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ23ರಂದು ಸಂಜೆ 5ಕ್ಕೆ ಉದ್ಘಾಟನ  ಕಾರ್ಯಕ್ರಮ ನಡೆಯಲಿದ್ದು, ಯುವ ಗಾಯಕರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.ರುದ್ರಪಟ್ಟಣ ವೀಣಾ ಸೋಹದರಾದ ಆರ್.ಪಿ.ಪ್ರಶಾಂತ್ ಮತ್ತು ಆರ್.ಪಿ.ಪ್ರಮೋದ್ ವೀಣಾವಾದನ ನಡೆಸಿಕೊಡಲಿದ್ದಾರೆ. ಕು.ಬಿಂದು, ಸಿಂಧು, ವಿಭಾಶ್ರೀ ಮತ್ತು ಅಪೂರ್ವರಿಂದ ಗಾಯನ ನಡೆಯಲಿದ್ದು, ಕು.ಹಂಸಾ ನಟರಾಜ್ ರಿಂದ  ನೃತ್ಯ ನಡೆಯಲಿದೆ ಎಂದರು.
ಪ್ರಶಸ್ತಿ ಪ್ರದಾನ: ಮೇ 24ರಂದು ರಾತ್ರಿ 8ಕ್ಕೆ ಪ್ರಸಿದ್ಧ ವಿದ್ವಾನ್ ಟಿ.ಎ.ಎಸ್.ಮಣಿ ಅವರಿಗೆ ನಾಚಾರಮ್ಮ ಪ್ರಶಸ್ತಿ ಮತ್ತು  ಲಯವಾದ್ಯ ಕಲಾ ಸ್ಪರ್ಶಮಣಿ  ಬಿರುದು ಪ್ರದಾನ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥಸ್ವಾಮಿಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಎ.ಮಂಜು ಮತ್ತು ಬೆಂಗಳೂರಿನ ಎಂ.ಎಸ್.ರಾಮಯ್ಯ ಯೂನಿರ್ವಸಿಟಿ ಆಫ್ ಅಪ್ಲೈಡೆ ಸೈನ್ಸ್ ಕುಲಪತಿ ಡಾ.ಎಂ.ಆರ್.ಜಯರಾಮ್ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮೂತಭೂತ ಸೌಕರ್ಯಕ್ಕೆ ಒತ್ತಾಯ
ಅರಕಲೂಗುಡು ತಾಲೂಕಿನ ರುದ್ರಪಟ್ಟಣದಲ್ಲಿ ರಸ್ತೆ, ಅತಿಥಿ ಗೃಹ ನಿರ್ಮಾಣ ಮಾಡುವಂತೆ ಹಲವು ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು ಸಹ ಈವರೆಗೂ ಪ್ರಯೋಜನವಾಗಿಲ್ಲ. ಪ್ರವಾಸೋದ್ಯಮ ಇಲಾಖೆಗೂ ಮನವಿ ಮಾಡಲಾಗಿದೆಯಾದರೂ ಉಪಯೋಗವಾಗಿಲ್ಲ. ರುದ್ರಪಟ್ಟಣಕ್ಕೆ ಆಗಮಿಸಲು ರಸ್ತೆ ಸರಿಯಾಗಿಲ್ಲ, ಬಂದವರು ಉಳಿದುಕೊಳ್ಳಲು ಅತಿಥಿ ಗೃಹದ ವ್ಯವಸ್ಥೆಯು ಕೂಡ ಇಲ್ಲ. ಇದರಿಂದ ಇಲ್ಲಿಗೆ ಆಗಮಿಸುವ ಸಂಗೀತಾಭಿಮಾನಿಗಳಿಗೆ ತೀರಾ ತೊಂದರೆ ಉಂಟಾಗುತ್ತಿದೆ ಆದ್ದರಿಂದ ಸರ್ಕಾರ ಸ್ಪಂದಿಸಿ ಇಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಋತುಮಾನ ವಸತಿಯುತ ವಿಶೇಷ ತರಬೇತಿ ಕೇಂದ್ರ
ಹಾಸನ: 2014-15ನೇ ಸಾಲಿನಲ್ಲಿ ಹಾಸನ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಕಾರ್ಯತಂತ್ರದಡಿಯಲ್ಲಿ ವಲಸೆ ಹೋಗುವ ಕುಟುಂಬಗಳ ಮಕ್ಕಳು ಶಾಲೆಯನ್ನು ತೊರೆಯುವುದನ್ನು ತಪ್ಪಿಸಲು 06 ತಿಂಗಳ ಋತುಮಾನ ವಸತಿಯುತ ವಿಶೇಷ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲು ಕ್ರಿಯಾ  ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಈ ಸಂಬಂಧ ಸದರಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಸ್ವಯಂಸೇವಾ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಸ್ವಯಂಸೇವಾ ಸಂಸ್ಥೆಯವರು ಅರ್ಜಿಗಳನ್ನು ಉಪನಿರ್ದೇಶಕರ ಕಚೇರಿ, ಸರ್ವಶಿಕ್ಷಣ ಅಭಿಯಾನ, ಹಾಸನ ಇಲ್ಲಿ ಕಚೇರಿ ವೇಳೆಯಲ್ಲಿ ಪಡೆಯುವುದು. ಅರ್ಜಿ ಸಲ್ಲಿಸಲು ಜೂ.3 ಕಡೇ ದಿನ.  ಹೆಚ್ಚಿನ ಮಾಹಿತಿಗೆ ಕಚೇರಿ ಸಂಪರ್ಕಿಸಲು ಕೋರಿದೆ.

ಆಲಿಕಲ್ಲು ಮಳೆ: ಬೆಳೆ ನಷ್ಟ
ಹಳೇಬೀಡು: ಸೋಮವಾರ ಮಧ್ಯಾಹ್ನ ತಾಲೂಕಿನ ಹಳೇಬೀಡು ಹಾಗೂ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ  ಸುರಿದ ಆಲಿಕಲ್ಲು ಮಳೆಗೆ ಭಾರಿ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಹಳೇಬೀಡು ಪಟ್ಟಣಕ್ಕೆ  ಮಳೆ ಸಾಮಾನ್ಯವಾಗಿದ್ದು, ಗಾಳಿ ಮಾತ್ರ ಹೇರಳವಾಗಿ ಬೀಸಿದ ಪರಿಣಾಮ ಕೆಲ ಮನೆಗಳ ಮೇಲೆ ಮರಗಳು ಉರುಳಿ ಬಿದ್ದವು. ಈ ಸಂದರ್ಭದಲ್ಲಿ ಮನೆಯಿಂದ ಅನೇಕ ಜನರು ರಸ್ತೆಗೆ  ಬಂದರು, ಅಲ್ಲದೆ ಮನೆಗಳ ಮೆಲೆ ಹಾಕಿದ್ದ ತಗಡಿನ ಶೀಟುಗಳು ಹಾರಿಹೋದದ್ದರಿಂದ ನಿವಾಸಿಗಳು ಭೀತಿಗೊಂಡರು.  ಭಾರಿ ಗಾಳಿ ಮಳೆಗೆ ಮತ್ತು 50 ಕೆಜಿಯಷ್ಟು ತೂಕದ ಆಲಿಕಲ್ಲುಗಳು ಬಿದ್ದ ರಭಸಕ್ಕೆ ರೈತರ ನರ್ಸರಿಗಳು ಸಂಪೂರ್ಣಹಾನಿಗೀಡಾಗಿ ಸಾಕಷ್ಟು ನಷ್ಟ  ಸಂಭವಿಸಿದೆ.

ಉಚಿತ ಆರೋಗ್ಯ ತಪಾಸಣೆ
ಹಾಸನ: ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿ ಹಾಸನದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಉಚಿತ ಆರೋಗ್ಯ ತಪಾಸಣೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸಹಯೋಗದೊಂದಿಗೆ ನಡೆಸುತ್ತಿದೆ. ಮೇ 21 ರಂದು   ಬಿಪಿಎಲ್ ಕಾರ್ಡುದಾರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಾಸನದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೃದಯರೋಗ, ಕಿಡ್ನಿಯಲ್ಲಿ ಕಲ್ಲು, ನವಜಾತ ಶಿಶುಗಳಿಗೆ ಸಂಬಂಧಿಸಿದ ಕಾಯಿಲೆಗಳು, ಪಾಲಿಟ್ರಾಮ  ಹಾಗೂ ಸುಟ್ಟಗಾಯಕ್ಕೆ ಸಂಬಂಧಿಸಿದಂತೆ ಮೈಸೂರಿನ ಜೆಎಸ್‌ಎಸ್.ಆಸ್ಪತ್ರೆ ಮತ್ತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟಿನ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ.  ಹೆಚ್ಚಿನ ಮಾಹಿತಿಗೆ ದಿವಾಕರ ಆರೋಗ್ಯಮಿತ್ರ ದೂ. ಸಂಖ್ಯೆ 7259003465. ಸವಿತಾ ಆರೋಗ್ಯಮಿತ್ರ ದೂ: 259003454.  ಅರುಣಕುಮಾರ್ ಆರೋಗ್ಯಮಿತ್ರ ದೂ:7259003455. ಉಮೇಶ್, ಜಿಲ್ಲಾ ವ್ಯವಸ್ಥಾಪಕರು, ವಾಜಪೇಯಿ ಆರೋಗ್ಯ ಶ್ರೀ, ಹಾಸನ ದೂ: 259003404.

ವಿದ್ಯಾರ್ಥಿನಿಲಯ: ಅರ್ಜಿ ಆಹ್ವಾನ
ಸಕಲೇಶಪುರ: 2014-15ನೇ ಸಾಲಿಗೆ ಸಕಲೇಶಪುರ ತಾಲೂಕಿನಲ್ಲಿರುವ ಸಮಾಜ ಕಲ್ಯಾಣ ಇಲಾಖಾ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು  5 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಪ.ಜಾತಿ, ಪಂಗಡ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಂದ ಅರ್ಜಿಆಹ್ವಾನಿಸಲಾಗಿದೆ.
ವಿದ್ಯಾರ್ಥಿ ನಿಲಯಗಳ ವಿವರ: ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಸಕಲೇಶಪುರ ಟೌನ್ ಮೆಟ್ರಿಕ್‌ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ, ಸಕಲೇಶಪುರ ಟೌನ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಬಾಳ್ಳುಪೇಟೆ  ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಹಾನುಬಾಳು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಹೆತ್ತೂರು ಮೇಲ್ಕಂಡ ವಿದ್ಯಾರ್ಥಿ ನಿಲಯಗಳಲ್ಲಿ ವಸತಿ, ಊಟ, ತಿಂಡಿ, ಹಾಸಿಗೆ, ಹೊದಿಕೆ, ಸಮವಸ್ತ್ರ, ನೋಟ್‌ಬುಕ್, ಲೇಖನ ಸಾಮಗ್ರಿ, ಬಟ್ಟೆ ಸೋಪು, ಸ್ನಾನದ ಸೋಪು, ಟೂತ್‌ಪೇಸ್ಟ್ ಇತ್ಯಾದಿ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ. ಅರ್ಜಿಗಳು  ಆಯಾ ವಿದ್ಯಾರ್ಥಿ ನಿಲಯಗಳಲ್ಲಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಉಚಿತವಾಗಿ ದೊರೆಯುತ್ತವೆ. ಅರ್ಜಿಗಳನ್ನು ಮೇ 20 ರಿಂದ ನೀಡಲಾಗುತ್ತದೆ. ಭರ್ತಿ ಮಾಡಿದ ಅರ್ಜಿಯೊಂದಿಗೆ ಅಂಕಪಟ್ಟಿ,  ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ನಕಲು ಪ್ರತಿ ಹಾಗೂ 2 ಪಾಸ್‌ಪೋರ್ಟ್ ಸೈಜ್‌ನ ಫೋಟೊಗಳನ್ನು ಲಗತ್ತಿಸಿ ಜೂನ್ 5 ರಂದು  ಸಂಜೆ 5-30 ರೊಳಗಾಗಿ ಈ ಕಚೇರಿಗೆ ಸಲ್ಲಿಸತಕ್ಕದ್ದು.  ವಿಳಂಬವಾಗಿ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಮಳಿಗೆಯಿಂದ ಹೊರ ವ್ಯಾಪಾರಕ್ಕೆ ನಿರ್ಬಂಧ
ಬೇಲೂರು: ಪಟ್ಟಣದ ದೇವಾಲಯ ರಸ್ತೆ, ಮುಖ್ಯರಸ್ತೆಯಲ್ಲಿ ಮಳಿಗೆಯಿಂದ ಹೊರಗಡೆ ವ್ಯಾಪಾರ ಮಾಡುವುದನ್ನು ಕಡ್ಡಾಯವಾಗಿ ನಿಲ್ಲಿಸುವುದಾಗಿ ಪುರಸಭೆ ಅಧ್ಯಕ್ಷ ಬಿ.ಗಿರೀಶ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ವಾಣಿಜ್ಯ ಮಳಿಗೆಯ ಷಟರ್ ಇರುವುದಕ್ಕಿಂತ 1 ಅಡಿ ಹೆಚ್ಚು ಹೊರಬರಲು ಅವಕಾಶವಿದ್ದು, ಅದಕ್ಕಿಂತ ಮುಂದೆ ವಸ್ತುಗಳನ್ನು ಇಟ್ಟುಕೊಂಡಲ್ಲಿ  ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈಗಾಗಲೇ ಅಧಿಕಾರಿಗಳು ಕಾರ್ಯಾಚರಣೆ  ನಡೆಸಿ ಕೆಲವೊಂದು ವಸ್ತುಗಳನ್ನು ತೆರವುಗೊಳಿಸಿದ್ದಾರೆ. ಆದರೆ, ರಾಜಕಾರಣಿಗಳ ಒತ್ತಡ ಹೆಚ್ಚುತ್ತಿದ್ದು ತೆರವುಗೊಳಿಸಿದ ತಕ್ಷಣ ನಮ್ಮ ಕಡೆಯವರು, ಅವರ ಕಡೆಯವರು, ಸುಮ್ಮನಿರಿ, ತೊಂದರೆ ಕೊಡಬೇಡಿ ಎಂದೆಲ್ಲಾ ದೂರವಾಣಿ ಕರೆ ಮಾಡಿ ಒತ್ತಡ ತರುತ್ತಿದ್ದಾರೆ, ನನಗಂತೂ ಹಿಂಸೆಯಾಗಿದೆ ಎಂದು ತಿಳಿಸಿದರು.
ಲೈಸನ್ಸ್ ಕಡ್ಡಾಯ: ಪಟ್ಟಣದ ಎಲ್ಲ ವರ್ತಕರಿಗೆ ದಿನಸಿ, ತರಕಾರಿ, ಹಾಲು, ಕ್ಯಾಂಟೀನ್, ಬಟ್ಟೆ, ಚಪ್ಪಲಿ ಇತ್ಯಾದಿ ಒಂದು ವಸ್ತುವನ್ನು ಮಾರಾಟ ಮಾಡಲು (ಮದ್ಯ, ಮಾಂಸ ಹೊರತುಪಡಿಸಿ) ಮಾತ್ರ ಲೈಸನ್ಸ್ ನೀಡಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.