ಯುಪಿಎಯಿಂದ ದೇಶ ಲೂಟಿ
ಶಿಗ್ಗಾಂವಿ: ಸುಮಾರು ವರ್ಷಗಳ ಕಾಲ ನಮ್ಮನ್ನಾಳಿದವರು ಬ್ರಿಟಿಷರು. ಅವರಿಗಿಂತ ಮೊದಲು ದೇಶ ಲೂಟಿ ಹೊಡೆದ ಮೊಘಲರಿಗಿಂತ ಹೆಚ್ಚು ಯುಪಿಎ ಸರ್ಕಾರ ಹತ್ತು ವರ್ಷಗಳಲ್ಲಿ ಲೂಟಿ ಮಾಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಶಿ ಆರೋಪಿಸಿದರು.
ಪಟ್ಟಣದ ಸವಣೂರ ರಸ್ತೆಯಲ್ಲಿರುವ ಶಾಸಕ ಬಸವರಾಜ ಬೊಮ್ಮಾಯಿ ಅವರ ಗೃಹದಲ್ಲಿ ನಡೆದ ಶಿಗ್ಗಾಂವ-ಸವಣೂರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಭಾರತವನ್ನು ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನಕ್ಕೆ ತಂದಿಡುವ ನಿಟ್ಟಿನಲ್ಲಿ ಪ್ರಯತ್ನಿಸಿದೆ. ತಿನ್ನುವ ಆಹಾರ ಧಾನ್ಯಗಳಿಂದ ಹಿಡಿದು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆಯಲ್ಲಿ ಏರಿಕೆಯಾಗಿದೆ. ಬಡ ಜನರ ಹಾಗೂ ರೈತರ ಜೀವನ ದುಸ್ತರವಾಗಿದೆ. ದೇಶದ ಭದ್ರತೆಯಲ್ಲಿಯೂ ಕಾಂಗ್ರೆಸ್ ವಿಫಲವಾಗಿದೆ. ವಾರಣಾಸಿ, ಕಾಶಿಯಲ್ಲಿ ಬಾಂಬ್ ದಾಳಿ ಮಾಡಿದವರ ಮೇಲಿದ್ದ ದೂರುಗಳನ್ನು ವಾಪಸ್ ತೆಗೆಸುವ ಪ್ರಯತ್ನ ನಡೆಯಿತು. ಜನಸಾಮಾನ್ಯರ ಸಮಸ್ಯೆಗಳಿಗೆ ಸಹಕಾರಿಯಾಗುವಂತ ಒಂದೂ ಕಾರ್ಯ ಕೈಗೊಳ್ಳದ ಸರ್ಕಾರ, ದೇಶದ ಗಡಿಯಲ್ಲಿ ಚೀನಾ ದೇಶದವರು 8 ಕಿಮೀ ಪ್ರದೇಶದಲ್ಲಿ ಒಳ ನುಗ್ಗಿದಾಗಲೂ ಕಣ್ಮುಚ್ಚಿ ಕುಳಿತಿತ್ತು. ಉಗ್ರರು ಎರಡು ಯೋಧರ ತಲೆ ಕಡಿದರೂ ಪ್ರಧಾನಿ ನಿದ್ರೆ ಮಾಡುತ್ತಿದ್ದರು ಎಂದು ಜೋಶಿ ವಾಗ್ದಾಳಿ ನಡೆಸಿದರು. ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ಈ ಬಾರಿ ನರೇಂದ್ರ ಮೋದಿ ಪರ ದೇಶಾದ್ಯಂತ ಬೀಸುತ್ತಿರುವ ಅಲೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ನಡೆದ ಎಲ್ಲ ಚುನಾವಣೆಯಲ್ಲಿ ಜಗತ್ತಿನಲ್ಲಿಯೇ ಹೆಚ್ಚು ಜನರ ಗಮನ ಸೆಳೆದ ಚುನಾವಣೆ ಇದಾಗಿದ್ದು, ಎಲ್ಲರ ಚಿತ್ತ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯತ್ತ ನೆಟ್ಟಿದೆ ಎಂದರು. 10 ವರ್ಷ ಯುಪಿಎ ಸರ್ಕಾರದ ದುರಾಡಳಿತ, ಬಡವರ ಮನೆಯಂಗಳಕ್ಕೆ ಬಂದಿದೆ. ಬೆಲೆ ಏರಿಕೆಯಿಂದ ಬದುಕು ದುಸ್ತರವಾಗಿದೆ. ಇದು ದುರಾಡಳಿತದ ಫಲವಾಗಿದೆ. ದೇಶದ 120 ಕೋಟಿ ಜನಸಂಖ್ಯೆಯಲ್ಲಿ ತಲಾ ಒಬ್ಬರ ಮೇಲೆ ರು. 3 ಲಕ್ಷ ಸಾಲವಿದೆ. ಭಾರತ ದೇಶ ಆರ್ಥಿಕವಾಗಿ ದಿವಾಳಿಯಾಗಿದೆ. ಕರ್ನಾಟಕಕ್ಕೆ ಬಿಡುಗಡೆಯಾಗಬೇಕಿದ್ದ ರು. 6 ಸಾವಿರ ಕೋಟಿ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು. ಇದು ರಾಜ್ಯದ ಜನರ ಆಕ್ರೋಶಕ್ಕೂ ಕಾರಣವಾಗಿದೆ. ಜನರ ಅಕ್ರೋಶವನ್ನು ಮೋದಿ ಅವರ ಹವಾ ತಣ್ಣನೆ ಮಾಡಿದೆ. ಯುಪಿಎ ಮೇಲಿರುವ ಅಕ್ರೋಶ ಮೋದಿ ಮೇಲೆ ವಿಶ್ವಾಸಗಟ್ಟಿಗೊಳಿಸಿದೆ. ಬಿಜೆಪಿ ಕಾರ್ಯಕರ್ತರು, ಮತದಾರರ ಮನೆಗೆ ತೆರಳಿ ಮತದಾರರನ್ನು ಜಾಗೃತಗೊಳಿಸಿ ಅಭ್ಯರ್ಥಿ ಜಯಕ್ಕಾಗಿ ಒಂದಾಗಿ ಶ್ರಮಿಸಿ ಎಂದು ಬೊಮ್ಮಾಯಿ ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಸಚಿವ ಸಿ.ಎಂ. ಉದಾಸಿ ಮಾತನಾಡಿದರು. ಬಿಜೆಪಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಜಿಪಂ. ತಾಪಂ, ಪುರಸಭೆ ಸದಸ್ಯರು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು. ಶಿವಾನಂದ ಮ್ಯಾಗೇರಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

