ಸಂಸ್ಕೃತಿ ಉಳಿಯಲು ಭಾಷೆ ಬೆಳವಣಿಗೆ ಅಗತ್ಯ: ಆರ್.ಅಶೋಕ
ಸೋಮವಾರಪೇಟೆ: ಕೊಡವ ಸಂಸ್ಕೃತಿ ಉಳಿಯಬೇಕಾದರೆ ಭಾಷೆಯ ಬೆಳವಣಿಗೆ ಅಗತ್ಯ. ಈ ನಿಟ್ಟಿನಲ್ಲಿ ಜನಾಂಗ ಬಾಂಧವರು ನಿರಂತರವಾಗಿ ಸಂಸ್ಕೃತಿಯನ್ನು ಉಳಿಸುವತ್ತ ಗಮನ ಹರಿಸಬೇಕು ಎಂದು ಉಪ ಮುಖ್ಯಮಂತ್ರಿ ಆರ್. ಅಶೋಕ ಹೇಳಿದ್ದಾರೆ.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಕ್ಕಂದೂರು ಕೊಡವ ಸಮಾಜ ಮತ್ತು ಸೋಮವಾರಪೇಟೆ ತಾಲೂಕಿನ ಎಲ್ಲ ಕೊಡವ ಭಾಷಿಕರ ಸಮಾಜದ ಆಶ್ರಯದಲ್ಲಿ ಮಾದಾಪುರದ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ನಡೆದ 'ಕೊಡವ ಮಾನಮ್ಮೆ' ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕೊಡವ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುವಂತಾಗಬೇಕು ಎಂದರು.
ಮುಖ್ಯ ಅತಿಥಿ, ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಮಾತನಾಡಿ, ಸರ್ಕಾರದ ಆಶಯದಂತೆ ಅಕಾಡೆಮಿಯು ಕೆಲಸ ಮಾಡುತ್ತಿದೆ. ಮುಂದಿನ ಪೀಳಿಗೆಗೆ ಪರಿಚಯಿಸಬೇಕಾದ ಕಲೆಗಳ ಅಗತ್ಯತೆಯನ್ನು ಮನಗಂಡು ಅಕಾಡೆಮಿ ಕ್ರಿಯಾಯೋಜನೆಯನ್ನು ಈಗಾಗಲೇ ರೂಪಿಸಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಕೊಡವ ಸಂಸ್ಕೃತಿ ನಿಜವಾಗಿಯೂ ಉಳಿದಿರುವುದು ಕುಗ್ರಾಮಗಳಲ್ಲಿ ಮಾತ್ರ. ಆದರೆ, ಇದು ಜಿಲ್ಲೆಯಾದ್ಯಂತ ಪಸರಿಸಬೇಕು. ಜಿಲ್ಲೆಯ ಎಲ್ಲ ಕೊಡವ ಸಮಾಜಗಳು ಸಂಸ್ಕೃತಿ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದರು.
ಆಶೀರ್ವಚನ ನೀಡಿದ ಅರಮೇರಿ ಕಳಂಚೇರಿ ಮಠದ ಶ್ರೀಶಾಂತ ಮಲ್ಲಿಕಾರ್ಜುನ ಮಠದ ಸ್ವಾಮೀಜಿ, ಭಾಷೆ ಹೃದಯದ ಮಾಧ್ಯಮ. ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೀತಿಸುವುದರೊಂದಿಗೆ ಕೊಡಗು ಜಿಲ್ಲೆಯನ್ನು ಪ್ರೀತಿಸಬೇಕು ಎಂದು ಕಿವಿಮಾತು ಹೇಳಿದರು.
ಅಕಾಡೆಮಿ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯ ಅರಣ್ಯ ಮತ್ತು ಕೈಗಾರಿಕಾ ನಿಗಮದ ಅಧ್ಯಕ್ಷ ಎಂ.ಬಿ. ದೇವಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಪ್ಪ, ಉಪಾಧ್ಯಕ್ಷೆ ಉಷಾದೇವಮ್ಮ, ಕೊಡವ ಸಮಾಜದ ಒಕ್ಕೂಟದ ಅಧ್ಯಕ್ಷ ಮಲ್ಲೇಂಗಡ ದಾದಾ ಬೆಳ್ಳಿಯಪ್ಪ, ಮಂಗಳೂರು ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಸೀತಮ್ಮ, ಕೃಷಿ ವಿಶ್ವ ವಿದ್ಯಾನಿಲಯದ ಮಾಜಿ ಉಪಕುಲಪತಿ ಪಿ.ಜಿ. ಚಂಗಪ್ಪ, ಅಡಿಷನಲ್ ಅಡ್ವೋಕೇಟ್ ಜನರ ಸಜನ್ ಪೂವಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಪ್ರದೀಪ್, ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಬಿಮನ್ಯು ಕುಮಾರ್ ಮತ್ತಿತರರು ಇದ್ದರು.
ಕುಶಾಲನಗರದ ಕಾವೇರಿ ಕಲಾಪರಿಷತ್ ತಂಡದವರು ಪ್ರಾರ್ಥಿಸಿದರು. ಉಳುವಾಂಗಡ ಲೋಹಿತ್ ಭೀಮಯ್ಯ ತಂಡ ಕೊಡವ ನಾಡಗೀತೆ ಹಾಡಿದರು.
ಕೊಡವ ಮಾನಮ್ಮೆ ಸಮಾರಂಭದಲ್ಲಿ ಕೊಡವ ಆಚಾರ ವಿಚಾರ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿವಿಧ ಪುಸ್ತಕಗಳು ಹಾಗೂ ಧ್ವನಿ ಸುರುಳಿಗಳನ್ನು ಅತಿಥಿಗಳು ಬಿಡುಗಡೆಗೊಳಿಸಿದರು. 'ಕೊಡಗಿನ ಇತಿಹಾಸ' ಪುಸ್ತಕವನ್ನು ಅರಮೇರಿ ಕಳಂಚೇರಿ ಮಠದ ಮಠಾಧೀಶ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ, 'ನರಿಪಾಲ್ ಕುಡ್ಚವು' ಪುಸ್ತಕವನ್ನು ಜಿ.ಪಂ. ಅಧ್ಯಕ್ಷ ಬಿ.ಶಿವಪ್ಪ, 'ಕೊಡವ ರಂಗಭೂಮಿಯ ಕೊಡವತನ' ಪುಸ್ತಕವನ್ನು ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, 'ಕೊಡವ ಭಾಷಿಕ ಜನಾಂಗಗಳ ಸಾಂಸ್ಕೃತಿಕ ಬದುಕು' ಪುಸ್ತಕವನ್ನು ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, 'ಕೊಡವ ಜನಪದ ಆಟಗಳು' ಪುಸ್ತಕವನ್ನು ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಎಂ.ಬಿ. ದೇವಯ್ಯ, 'ಆಂದೋಳತ ಪಾಟ್' ಪುಸ್ತಕವನ್ನು ಕೆಎಎಸ್ ಅಧಿಕಾರಿ ಪಾಲಚಂಡ ಸೀತಮ್ಮ, 'ಅಕಾಡೆಮಿರ ಪಳಮೆ' ಪುಸ್ತಕವನ್ನು ಕಿರುಚಿತ್ರ ಕಲಾವಿದೆ ಐಮುಡಿಯಂಡ ಶ್ವೇತಾ ಚಂಗಪ್ಪ, 'ಕೊಡವ ಭಕ್ತಿಗೀತೆ' ಧ್ವನಿ ಸುರುಳಿಯನ್ನು ಕೃಷಿ ವಿವಿ ನಿವೃತ್ತ ಕುಲಪತಿ ಡಾ. ಪಡಿಞಾರಂಡ ಜಿ.ಚಂಗಪ್ಪ ಬಿಡುಗಡೆ ಮಾಡಿದರು.
ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಉಪಾಧ್ಯಕ್ಷೆ ಬಿದ್ದಂಡ ಉಷಾ ದೇವಮ್ಮ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಪ್ರದೀಪ್, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಮಾಳೇಟಿರ ಅಭಿಮನ್ಯು ಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

