ಜಿಲ್ಲೆ ಅಭಿವೃದ್ಧಿಗೆ ಶ್ರಮಿಸಲು ಸಚಿವ ಖಾದರ್ ಸೂಚನೆ
ಕನ್ನಡಪ್ರಭವಾರ್ತೆ ಕೋಲಾರ ಆ.1
ಜಿಲ್ಲೆಯ ಪ್ರತಿಯೊಬ್ಬ ಅಧಿಕಾರಿ ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಸೂಚನೆ ನೀಡಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಇದ್ದಲ್ಲಿ ಅದಕ್ಕೆ ಬದಲಿ ವ್ಯವಸ್ಥೆ ಮಾಡಿಕೊಂಡು ಕೆಲಸ ನಿರ್ವಹಿಸಬೇಕು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿರುವುದು ಕಂಡುಬಂದಿದೆ. ಅದನ್ನು ಪರಿಹರಿಸುವುದಾಗಿ ಸಚಿವರು ತಿಳಿಸಿದರು.
ಸಾಮಾನ್ಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪ್ರತಿನಿತ್ಯದ ಕಚೇರಿ ಕೆಲಸಗಳನ್ನು ನಿರ್ವಹಿಸದೆ ಇರುವುದು ಅಧಿಕಾರಿಗಳ ಉತ್ತಮ ಲಕ್ಷಣವಲ್ಲವೆಂದು ಹೇಳಿದರು.
ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ವಸತಿ, ಊಟ ಮತ್ತು ಶಿಕ್ಷಣ ನೀಡುವ ಕಡೆ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕೆಂದರು. ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಿಸಬೇಕು ಎಂದು ತಿಳಿಸಿದರು.
ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯಲ್ಲಿ 48 ವಸತಿ ನಿಲಯಗಳಿದ್ದು ಅದರಲ್ಲಿ 33 ಬಾಲಕರ ವಸತಿ ನಿಲಯಗಳು, 16 ಬಾಲಕಿಯರ ವಸತಿ ನಿಲಯಗಳಿವೆ. ವಸತಿ ನಿಲಯಗಳಲ್ಲಿ ಸಿಬ್ಬಂದಿ ಕೊರತೆಯಿದೆ ಎಂದು ಅಧಿಕಾರಿಗಳು ತಿಳಿಸಿದಾಗ ಇಲಾಖೆ ಆಯುಕ್ತರೊಂದಿಗೆ ಮಾತನಾಡಿ ಸಮಸ್ಯೆ ನಿವಾರಣೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ 72 ಕ್ರಷರ್ಗಳಿದ್ದು ನೂತನವಾಗಿ ಯಾವುದೇ ಕ್ರಷರ್ಗಳಿಗೆ ಪರವಾನಗಿ ನೀಡದಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆಗಳನ್ನು ನಡೆಸಬೇಕು ಹಾಗೂ ಅಕ್ರಮ ಮರಳು ಗಣಿಕಾರಿಕೆಯನ್ನು ನಿಲ್ಲಿಸಬೇಕೆಂದು ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಅಬಕಾರಿ ಇಲಾಖೆಯಿಂದ 27 ಕೋಟಿ ತೆರಿಗೆ ವಸೂಲಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮದ್ಯವನ್ನು ಮಾರಾಟ ಮಾಡದಂತೆ ಪೆಟ್ಟಿಗೆ ಅಂಗಡಿಗಳ ಮೇಲೆ ನಿಗಾ ವಹಿಸುವಂತೆ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮಾತನಾಡಿ ಈವರೆಗೂ 78 ಡೆಂಘೀ ಪ್ರಕರಣಗಳು ಕಾಣಿಸಿಕೊಂಡಿದ್ದು ಸಾವು ಉಂಟಾಗಿಲ್ಲವೆಂದು ತಿಳಿಸಿದರು.
ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಕಾರ್ಯಕ್ರಮದಲ್ಲಿ ಜಿಲ್ಲೆಗೆ 42 ಕೋಟಿ ರು. ಅನುದಾನ ಬಂದಿದ್ದು ಅದರಲ್ಲಿ 25 ಕೋಟಿ ವೆಚ್ಚವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ಜುಲ್ಫಿಖಾರ್ ಉಲ್ಲಾ ತಿಳಿಸಿದರಲ್ಲದೆ ಕಾಯಕ ಸಂಘಗಳ ಮೂಲಕ ಎನ್.ಆರ್.ಇ.ಜಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಎಸ್ಪಿ ಡಾ. ರಾಮ ನಿವಾಸ್ ಸಫೆಟ್, ಕೆ.ಜಿ.ಎಫ್. ಎಸ್ಪಿ ರೋಹಿಣಿ ಕಟೋಚ್, ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ವೆಂಕಟೇಶಮೂರ್ತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಆ್ಯಂಬುಲೆನ್ಸ್ ನೌಕರರ ಮುಷ್ಕರ ರೋಗಿಗಳ ಮೇಲೆ ಪರಿಣಾಮ ಬೀರಿಲ್ಲ
ಕೋಲಾರ: ರಾಜ್ಯದಲ್ಲಿ ಒಂದು ವಾರದಿಂದ 108 ಆ್ಯಂಬುಲೆನ್ಸ್ವಾಹನ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸುತ್ತಿದ್ದರೂ ರೋಗಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಯು.ಟಿ.ಖಾದರ್ ಹೇಳಿದರು.
ನಗರದಲ್ಲಿ ಗುರುವಾರ ಕ್ಷೀರ ಭಾಗ್ಯ ಯೋಜನೆಯ ಉದ್ಘಾಟನೆಗಾಗಿ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಯು.ಟಿ.ಖಾದರ್ ಸುದ್ದಿಗಾರರೊಂದಿಗೆ ಮಾತನಾಡಿ, 108 ಆ್ಯಂಬುಲೆನ್ಸ್ ಸೇವೆಗಾಗಿ ಸರ್ಕಾರ ಜಿವಿಕೆ ಫೌಂಡೇಷನ್ ಅವರಿಗೆ ಅವಕಾಶ ಕಲ್ಪಿಸಿ ತುರ್ತು ವಾಹನ ಮತ್ತು ಇನ್ನಿತರ ಸೌಲಭ್ಯ ಕಲ್ಪಿಸಿದೆ. ಈ ಸಂಸ್ಥೆಯು ನೌಕರರನ್ನು ನೇಮಕಾತಿ ಮಾಡಿಕೊಂಡಿದ್ದು ಒಪ್ಪಂದದ ಪ್ರಕಾರ ನೌಕರರಿಗೆ ವೇತನ, ರಜೆ ಮತ್ತಿತರ ಸೌಕರ್ಯ ಕಲ್ಪಿಸುತ್ತಿದೆ. ಒಂದು ವೇಳೆ ನೌಕರರ ಮತ್ತು ಸಂಸ್ಥೆಯ ನಡುವೆ ಏನಾದರೂ ಆಂತರಿಕ ಕಚ್ಚಾಟವಿದ್ದರೆ ಅದು ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರವಲ್ಲ. ಜಿವಿಕೆ ಮತ್ತು 108 ವಾಹನದ ನೌಕರರ ನಡುವೆ ಆಗಿರುವ ಒಪ್ಪಂದ ಪಾಲನೆ ಆಗದೆ ಉಲ್ಲಂಘನೆಯಾಗಿದ್ದಲ್ಲಿ ಮಾತ್ರ ಸರ್ಕಾರ ಮಧ್ಯ ಪ್ರವೇಶ ಮಾಡಬಹುದಾಗಿದೆ ಎಂದರು. ನೌಕರರಿಗೆ ಸಂಸ್ಥೆಯಿಂದ ಆನ್ಯಾಯವಾಗುತ್ತಿದ್ದಲ್ಲಿ ಅದನ್ನು ಸರಿಪಡಿಸಿಕೊಳ್ಳುವಂತೆ ಸರ್ಕಾರ ಸಂಸ್ಥೆಯ ಮುಖ್ಯಸ್ಥರಿಗೆ ಸೂಚನೆ ನೀಡಿದೆ. ಸೇವೆ ಕಾಯಂ ಮಾಡುವುದಕ್ಕೆ ಮಂಡಿಸಿರುವ ಬೇಡಿಕೆ ಈಡೇರಿಸಲು ಸಾಧ್ಯವೇ ಇಲ್ಲ. ಆರೋಗ್ಯ ಇಲಾಖೆಯಲ್ಲೇ ಅನೇಕರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವಾಗ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರನ್ನು ಕಾಯಂ ಮಾಡುವುದು ಹೇಗೆ ಸಾಧ್ಯವೆಂದು ಪ್ರಶ್ನಿಸಿದರು. ನೌಕರರ ಬ್ಲಾಕ್ಮೇಲ್ ತಂತ್ರಗಾರಿಕೆಗೆ ಸರ್ಕಾರ ಜಗ್ಗುವುದಿಲ್ಲ. ಜಿವಿಕೆ ಸಂಸ್ಥೆಯ ಜತೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಕೆಲಸ ಮಾಡಿ. ಹಾಗೊಂದು ವೇಳೆ ಸಂಸ್ಥೆಯಿಂದ ಏನಾದರೂ ಸಮಸ್ಯೆಯಾದಲ್ಲಿ ನಾವು ಸ್ಪಂದಿಸುತ್ತೇವೆ. 108 ಆ್ಯಂಬುಲೆನ್ಸ್ ವಾಹನ ಸಿಬ್ಬಂದಿಯ ಮುಷ್ಕರದಿಂದ ಯಾವುದೇ ತೊಂದರೆ ಆಗಿಲ್ಲ. ಜಿವಿಕೆ ಸಂಸ್ಥೆಯು ಸರ್ಕಾರದ ಸಹಾಯದೊಂದಿಗೆ ತನ್ನ ಸೇವೆ ಮುಂದುವರೆಸಿದೆ. ವಾಹನಗಳಿಗೆ ಪರ್ಯಾಯ ಚಾಲಕರ ಹಾಗೂ ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದೆ. 2008ರಲ್ಲಿ ಜಿವಿಕೆ ಮತ್ತು ನೌಕರರ ನಡುವೆ ಒಪ್ಪಂದವಾಗಿದ್ದು ಇದನ್ನು ಸರ್ಕಾರ ಪರಿಷ್ಕೃತಗೊಳಿಸಲು ಸಾಧ್ಯವಿಲ್ಲ. ಮುಷ್ಕರದ ನಡುವೆಯೂ ಪ್ರತಿನಿತ್ಯ ಸಾರ್ವಜನಿಕರಿಂದ 1200ರಿಂದ 1400 ಕರೆಗಳು ಬರುತ್ತಿದ್ದು ಈ ಎಲ್ಲ ಕರೆಗಳನ್ನು ಸ್ವೀಕರಿಸಿ ರೋಗಿಗಳಿಗೆ ಸೇವೆ ನೀಡಲಾಗುತ್ತಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

