ಕರ್ತವ್ಯ ನಿರ್ಲಕ್ಷ್ಯ: ಶಿರಸ್ತೇದಾರ್ಗೆ ತರಾಟೆ
ಕ.ಪ್ರ.ವಾರ್ತೆ ಶಿಡ್ಲಘಟ್ಟ ಆ.1
ಸಾರ್ವಜನಿಕಕರ ವ್ಯಾಪಕ ಟೀಕೆಗೆ ಗುರಿಯಾಗಿರುವ ಆಹಾರ ಇಲಾಖೆಯ ಶಿರಸ್ತೇದಾರ್ ರಂಗನಾಥ್ ಮೇಲೆ ಶಿಸ್ತು ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕೆಂದು ಜಿಲ್ಲಾ ಲೋಕಾಯುಕ್ತ ನಿರೀಕ್ಷಕ ಮಂಜೇಗೌಡ ಅವರು ತಹಸೀಲ್ದಾರ್ ಹನುಮಂತರಾಯ ಅವರಿಗೆ ಸೂಚಿಸಿದರು.
ಆಹಾರ ಇಲಾಖೆಗೆ ಸಬಂಧಿಸಿದಂತೆ ಸಾದಲಿಯ ಸಾರ್ವಜನಿಕರಿಂದ ಬಂದ ಅರ್ಚಿ ಸಂಬಂಧ ವಿಚಾರ ಪಡೆಯಲು ದೂರವಾಣಿ ಕರೆ ಮಾಡಿ ತಿಳಿಸಿದರು. ಆದರೆ, ಕಚೇರಿಗೆ ಬಾರದೆ ದರ್ಪ ತೋರುತ್ತೀರಾ? ಲೋಕಾಯುಕ್ತ ಪೊಲೀಸರು ಅಂದರೆ, ಏನೆಂದು ಕೊಂಡಿದ್ದೀರಿ. ಸಾರ್ವಜನಿಕರು ಸುಮ್ಮಸುಮ್ಮನೆ ದೂರು ನೀಡ್ತಾರಾ? ಎಂದು ಆಹಾರ ಇಲಾಖೆ ಶಿರಸ್ತೇದಾರ್ ರಂಗನಾಥ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಇಲಾಖೆ ವಿರುದ್ಧ ದೂರುಗಳು ಬರುತ್ತಿರುವುದು ಇದೇ ಮೊದಲಲ್ಲ. ಹತ್ತಾರು ದೂರುಗಳು ಬಂದಿವೆ. ಸಾರ್ವಜನಿಕರ ಮುಂದೆ ಇದೆಲ್ಲವನ್ನೂ ಚರ್ಚೆ ಮಾಡುವುದು ಸರಿಯಲ್ಲ. ಸೌಜನ್ಯವಾಗಿ ವರ್ತಿಸಿ ಎಂದು ಸೂಚಿಸಿದ್ದರೂ ನೀವು ನಿಮ್ಮ ವರ್ತನೆಯನ್ನಾಗಲಿ, ಕಾರ್ಯಶೈಲಿಯನ್ನಾಗಲಿ ಬದಲಿಸಿಕೊಳ್ಳುವ ಗೋಜಿಗೆ ಹೋಗಿಲ್ಲ. ಬದಲಿಗೆ ನೀವು ಲೋಕಾಯುಕ್ತಕ್ಕೆ ಸವಾಲೆಸೆಯುವಂತೆ ನಡೆಯುತ್ತಿದ್ದೀರಿ ಎಂದು ರಂಗನಾಥ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇವರನ್ನು ಎಷ್ಟು ಬೈದರೂ, ಹೇಳಿದರೂ ಏನೂ ಪ್ರಯೋಜನವಿಲ್ಲ. ಇವರ ಹಣೆಬರವನ್ನು ಬದಲಿಸಲು ನಮ್ಮಿಂದ ಸಾಧ್ಯವೇ ಇಲ್ಲ. ಇವರ ಕೈಯಲ್ಲಿ ಹೇಗೆ ಕೆಲಸ ಮಾಡಿಸೋದು ಅಂತ ನನಗೆ ಗೊತ್ತಿದೆ ಎಂದ ಅವರು, ಇನ್ನು ಮುಂದೆ ತಾಲೂಕು ಕಚೇರಿ ಹಾಗೂ ಆಹಾರ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಯಾವುದೇ ಬರಲಿ, ಅವುಗಳನ್ನು ನೇರವಾಗಿ ಜಿಲ್ಲಾಧಿಕಾರಿ ವಿಳಾಸಕ್ಕೆ ಕಳುಹಿಸಿ. ಪ್ರತಿಯನ್ನು ಎಸಿ ಹಾಗೂ ತಹಸೀಲ್ದಾರರಿಗೆ ಕಳುಹಿಸಿ. ಜಿಲ್ಲಾಧಿಕಾರಿಗಳೇ ಉತ್ತರಿಸಲಿ ಎಂದು ಲೋಕಾಯುಕ್ತರು ತನ್ನ ಅಧೀನ ಅಧಿಕಾರಿಗಳಿಗೆ ಸೂಚಿಸಿದರು.
ಸಭೆ ಮಧ್ಯೆ ಪಟ್ಟಣದ ನಾಗರಿಕರು ಕೈಯಲ್ಲಿ ಸೀಮೆಎಣ್ಣೆ ಕ್ಯಾನ್, ರೇಷನ್ ಕಾರ್ಡ್ಗಳನ್ನು ಪ್ರದರ್ಶಿಸುತ್ತಲೇ ಲೋಕಾಯುಕ್ತರ ಸಭೆಯಲ್ಲಿ ಅವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸಭೆ ನಡೆಯುತ್ತಿದ್ದ ಸಭಾಂಗಣಕ್ಕೆ ನುಗ್ಗಿ ಅಹವಾಲು ಸಲ್ಲಿಸಿದರು. ಎಲ್ಲರದ್ದೂ ಒಂದೆ ಸಮಸ್ಯೆ. ನಮಗೆ ರೇಷನ್ ಕಾರ್ಡ್ ಇದ್ದರೂ ಅಕ್ಕಿ ಕೊಡ್ತಿಲ್ಲ. ಸೀಮೆಎಣ್ಣೆ ನೀಡುತ್ತಿಲ್ಲ ಎಂದು ದೂರಿದರು.
ಸಮಸ್ಯೆ ಆಲಿಸಿದ ಮಂಜೇಗೌಡರು ನೀವೆಲ್ಲರೂ ಅರ್ಜಿ ಬರೆದು ಕೊಡಿ. ಶೀಘ್ರ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಕಳುಹಿಸಿದರು.
ತಾಪಂ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಅವರು, ಇಡೀ ತಾಲೂಕಿನ ಎಲ್ಲ ಇಲಾಖೆ ವಿರುದ್ಧವೂ ಬಾರದ ದೂರುಗಳು ತಾಲೂಕು ಕಚೇರಿ, ಆಹಾರ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ವಿರುದ್ಧ ಮಾತ್ರ ಬರುತ್ತಿವೆ. ಅದರಲೂ ತಾಲೂಕು ಕಚೇರಿ ಹಾಗೂ ಆಹಾರ ಇಲಾಖೆಗೆ ಸಂಬಂಧಿಸಿದ ದೂರುಗಳ ಮಹಾಪೂರ ಎಂದಿಗೂ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ತಾಪಂ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 18 ಅರ್ಜಿ ಸ್ವೀಕರಿಸಲಾಯಿತು. ವಿವಿಧ ಬೇಡಿಕೆಗಳ ಈಡೇರಿಕೆಗೆ ಯೋಜನೆಗಳ ಫಲಾನುಭವಿಗಳು ಹಾಗೂ ವಿವಿಧ ಸಮಾಜದವರು ಪ್ರತ್ಯೇಕ ಮನವಿ ಅರ್ಪಿಸಿದರು.
ತಹಸೀಲ್ದಾರ್ ಟಿ.ಎ. ಹನುಮಂತರಾಯ, ಸಿಪಿಐ ಆರ್.ಜಗದೀಶ್ ಸೇರಿದಂತೆ ತಾಲೂಕುಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

