ಇಂದು ಭಜನೆಯೊಂದಿಗೆ ನಂದಿಗಿರಿ ಪ್ರದಕ್ಷಿಣೆ
ಚಿಕ್ಕಬಳ್ಳಾಪುರ: ಸಹಸ್ರಾರು ಜನರು ಕಣ್ಮನ ಸೆಳೆಯುವ ಆಹ್ಲಾದಕರ ವಾತಾವರಣವನ್ನು ಸವಿಯುತ್ತ ದೇವರ ನಾಮಜಪ, ಜತೆಗೆ ಭಜನೆಯೊಂದಿಗೆ ನಂದಿಗಿರಿಯನ್ನು ಪ್ರದಕ್ಷಿಣೆ ಹಾಕುವ ಆಕರ್ಷಕ ಕಾರ್ಯಕ್ರಮವು ಪ್ರತಿ ವರ್ಷದಂತೆ ಈ ಬಾರಿಯು ಆಷಾಡ ಮಾಸದ ಕೊನೆಯ ಸೋಮವಾರವಾದ ನಡೆಯುತ್ತಿದೆ.ಇದಕ್ಕಾಗಿ ಈಗಾಗಲೇ ಶ್ರೀ ನಂದಿ ಗಿರಿ ಪ್ರದಕ್ಷಿಣಾ ಸೇವಾ ಟ್ರಸ್ಟ್ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು ಸಹಸ್ರಾರು ಜನರು ಪ್ರದಕ್ಷಿಣೆ ಹಾಕುವ ತವಕದಲ್ಲಿದ್ದಾರೆ.
ಐತಿಹಾಸಿಕ ನಂದಿ ಗಿರಿಯನ್ನು ಪ್ರದಕ್ಷಿಣೆ ಹಾಕುವ ಈ ಕಾರ್ಯಕ್ರಮವು ಕಳೆದ 74 ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ಪ್ರಾರಂಭದಲ್ಲಿ ಮನೆಯಲ್ಲಿ ಭಜನೆಯನ್ನು ನಡೆಸಿಕೊಂಡು ಹೋಗುತ್ತಿದ್ದ ದೊಡ್ಡಬಳ್ಳಾಪುರ ತಾಲೂಕಿನ ಭಕ್ತರ ತಂಡವೊಂದು ಈ ಕಾರ್ಯಕ್ರಮವನ್ನು ಆಚರಣೆಗೆ ತಂದಿದ್ದು ಅನೇಕ ದಶಕಗಳ ಕಾಲ ಸುಗುಮವಾಗಿ ಗಿರಿ ಪ್ರದಕ್ಷಿಣೆ ನಡೆಯಿತಾದರೂ ಕೆಲ ಕಾರಣಗಳಿಂದ ಕೆಲ ವರ್ಷಗಳ ಕಾಲ ಸ್ಥಗಿತಗೊಂಡಿತ್ತು.
ಈ ನಡುವೆ ಹಿಂದೆ ರೂಢಿಯಲ್ಲಿದ್ದ ಗಿರಿ ಪ್ರದಕ್ಷಿಣೆ ಕಾರ್ಯಕ್ರಮದ ಬಗ್ಗೆ ತಿಳಿದುಕೊಂಡ ಶ್ರೀ ನಂದಿ ಗಿರಿ ಪ್ರದಕ್ಷಿಣಾ ಸೇವಾ ಟ್ರಸ್ಟ್ ಜನರ ಸಹಕಾರದೊಂದಿಗೆ ಪುನಃ ಗಿರಿ ಪ್ರದಕ್ಷಿಣೆ ಕಾರ್ಯಕ್ರಮವನ್ನು ಪ್ರಾರಂಭಿಸಿ ಹಾಗೆಯೇ ನಡೆಸಿಕೊಂಡು ಬಂದಿದ್ದು ಇದೀಗ ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಬೆಂಬಲ ಸಿಗುತ್ತಿದೆ.
ಗಿರಿ ಪ್ರದಕ್ಷಿಣೆ ಮಾರ್ಗ : ಆಷಾಡ ಮಾಸದ ಕೊನೆಯ ಸೋಮವಾರ ದಿನದಂದು ನಡೆಯುವ ನಂದಿಗಿರಿ ಪ್ರದಕ್ಷಿಣೆ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ತಾಲೂಕು ಸೇರಿದಂತೆ ವಿವಿಧೆಡೆಯಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಈ ಪ್ರದಕ್ಷಿಣೆ ಕಾರ್ಯಕ್ರಮವು ನಂದಿ ಗಿರಿಧಾಮದ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆಯನ್ನು ಸಲ್ಲಿಕೆಯಾದ ನಂತರ ಪ್ರಾರಂಭವಾಗುತ್ತದೆ. ಆ ನಂತರ ನಂದಿ ಗ್ರಾಮದಿಂದ, ಕಾರಹಳ್ಳಿ ಕ್ರಾಸ್, ಕಣಿವೆನಾರಾಯಣಪುರ, ಸುಲ್ತಾನ್ ಪೇಟೆ ಸೇರಿದಂತೆ ವಿವಿಧ ಗ್ರಾಮಗಳ ಮಾರ್ಗಗಳಲ್ಲಿ ಸಂಚರಿಸುತ್ತ ಜನರು ಮತ್ತೆ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯಕ್ಕೆ ಆಗಮಿಸುತ್ತಾರೆ. ಈ ಮೂಲಕ ನಂದಿಗಿರಿ, ಗೋಪಿನಾಥಗಿರಿ, ದಿಬ್ಬಗಿರಿ, ಬ್ರಹ್ಮಗಿರಿ, ಚನ್ನಗಿರಿ ಸೇರಿದಂತೆ ಪಂಚ ಗಿರಿಗಳ ಪ್ರದಕ್ಷಿಣೆಯನ್ನು ಹಾಕುತ್ತಾರೆ.
ಮಹಿಳೆಯರು, ವೃದ್ಧರು, ಮಕ್ಕಳು, ಯುವಕ ಯುವತಿಯರು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸುಮಾರು 15 ಕ್ಕೂ ಹೆಚ್ಚು ಕಿ.ಮೀ ದೂರ ಕ್ರಮಿಸುತ್ತಾರೆ. ಈ ಸಂದರ್ಭದಲ್ಲಿ ದೇವರ ಭಜನೆ, ಮಂತ್ರಗಳ ಜಪಗಳ ಮೂಲಕ ಹೆಜ್ಜೆ ಹಾಕಲಾಗುತ್ತದೆ. ಊಟಿಯ ಮಾದರಿಯಲ್ಲಿ ಕಂಡು ಬರುವ ನಂದಿಗಿರಿಯ ಆಹ್ಲಾದಕರ ವಾತಾವರಣದಲ್ಲಿ ಪ್ರದಕ್ಷಿಣೆ ಹಾಕುವುದರಿಂದ ಮನಸ್ಸಿಗೆ ಉಲ್ಲಾಸ ದೊರೆಯುವುದಲ್ಲದೇ ದೇವರ ನಾಮಜಪದಿಂದ ಪುಣ್ಯ ಬರುತ್ತದೆ ಎಂಬ ನಂಬಿಕೆ ಜನರದ್ದಾಗಿದೆ.
ಪ್ರದಕ್ಷಿಣೆಗೆ ಚಾಲನೆ : ನಂದಿಗಿರಿ ಪ್ರದಕ್ಷಿಣೆ ಕಾರ್ಯಕ್ರಮವು ಹಂಪಿ ಹೇಮಕೂಟ ಶ್ರೀಗಾಯಿತಿಪೀಠ ಮಹಾ ಸಂಸ್ಥಾನಾಧೀಶ ಶ್ರೀ ದಯಾನಂದಪುರಿ ಮಹಾಸ್ವಾಮಿ ಮತ್ತು ದೊಡ್ಡಬಳ್ಳಾಪುರ ತಾಲೂಕಿನ ತಪೀಸಿಹಳ್ಳಿಯ ಪುಷ್ಪಾಂಷಡಜ ಮಹರ್ಷಿ ಆಶ್ರಮದ ಶ್ರೀ ದಿವ್ಯಜ್ಞಾನಾನಂದ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಸೋಮವಾರ ಬೆಳಿಗ್ಗೆ 6.30 ಕ್ಕೆ ಪ್ರಾರಂಭವಾಗಲಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರ ದಣಿವು ನೀಗಿಸಲು ಸ್ವಯಂ ಸೇವಾ ಸಂಸ್ಥೆಗಳು ನೀರಿನ ವ್ಯವಸ್ಥೆ, ಗ್ಲೂಕೋಸ್ ವಿತರಣೆ ಸೇರಿದಂತೆ ನಾನಾ ರೀತಿಯ ಸೌಕರ್ಯಗಳನ್ನು ಒದಗಿಸಲಿದ್ದು ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಹ ಕೈಗೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

