ಜಿಲ್ಲಾಪಂಚಾಯತ್ ಅಧ್ಯಕ್ಷೆ, ಉಪಾಧ್ಯಕ್ಷರ ರಾಜಿನಾಮೆ
ಕ.ಪ್ರ. ವಾರ್ತೆಕೋಲಾರಆ.4
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೌಡೇಶ್ವರಿ ಮತ್ತು ಉಪಾಧ್ಯಕ್ಷೆ ರತ್ನಮ್ಮ ಅವರು ತಮ್ಮ ಪದವಿಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ.
ಇವರಿಬ್ಬರು ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ನಿದ ಸ್ಪರ್ಧಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿದ್ದರು. ಚುನಾವಣೆ ಸಂದರ್ಭದಲ್ಲಿ ಚೌಡೇಶ್ವರಿ ಮತ್ತು ರತ್ನಮ್ಮ ಅವರಿಗೆ ಜೆಡಿಎಸ್ ಮುಖಂಡರು 10 ತಿಂಗಳ ಅಧಿಕಾರದ ನಂತರ ಅಧಿಕಾರ ಬಿಟ್ಟುಕೊಡುವಂತೆ ಸೂಚಿಸಿದ್ದರು. ಅಧಿಕಾರದ ಅವಧಿ ಮುಗಿಯಲು ಇನ್ನು ಒಂದು ತಿಂಗಳು ಇರುವಾಗಲೇ ಮುಖಂಡರ ಮಾತಿನಂತೆ ಇವರಿಬ್ಬರು ರಾಜಿನಾಮೆ ಸಲ್ಲಿಸಿದ್ದಾರೆ.
ಶನಿವಾರ ಇವರಿಬ್ಬರು ಬೆಂಗಳೂರಿಗೆ ತೆರಳಿ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗೆ ಪದವಿ ತ್ಯಾಗ ಪತ್ರ ಸಲ್ಲಿಸಿ ಬಂದಿದ್ದಾರೆ.
ಇವರ ರಾಜಿನಾಮೆ ಅಂಗೀಕಾರಕ್ಕೆ 15 ದಿನಗಳ ಗಡುವಿದ್ದು ಒಂದು ವೇಳೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷ ರಾಜಿನಾಮೆ ಅಂಗೀಕಾರವಾದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿ ಪಡಿಸುವ ಸಾಧ್ಯತೆಗಳಿವೆ.
ಹಾಲಿ ಅಧ್ಯಕ್ಷೆ ಚೌಡೇಶ್ವರಿ ಅವರೇ ಅಧ್ಯಕ್ಷರಾಗಿ ಮುಂದುವರೆಯಲಿ ಎಂಬುದು ಬಿಜೆಪಿಯ ಸದಸ್ಯೆ ಸಿಮೋಲ್ ಮೋಹನ್ ಹಾಗೂ ಪಕ್ಷೇತರ ಸದಸ್ಯರಾಗಿ ಹಾಲಿ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಎಂ.ಎಸ್. ಆನಂದ್ ಅವರ ಅಭಿಪ್ರಾಯವಾಗಿದೆ. ಆದರೆ ಮಾಜಿ ಸಚಿವ ಕೆ. ಶ್ರೀನಿವಾಸಗೌಡ ಅವರು ವೇಮಗಲ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದಿರುವ ಜೆಡಿಎಸ್ನ ಆಶಾ ಅವರನ್ನು ಅಧ್ಯಕ್ಷರನ್ನಾಗಿ ಮಾಡುವುದಕ್ಕೆ ಒಲವು ತೋರಿದ್ದು ಇದಕ್ಕೆ ಜೆಡಿಎಸ್ನಲ್ಲಿರುವ ಪ್ರಬಲ ಕೋಮಿನ ಸದಸ್ಯರು ಒಪ್ಪುತ್ತಾರೆಯೇ ಎಂಬುದು ಪ್ರಶ್ನೆಯಾಗಿದೆ.
ಶ್ರೀನಿವಾಸಪುರ ತಾಲೂಕಿನ ಹಿರಿಯ ಜಿ.ಪಂ ಸದಸ್ಯ ತೂಪಲ್ಲಿ ನಾರಾಯಣಸ್ವಾಮಿ ಅವರಿಗೆ ಕಳೆದ ಅವಧಿಯಲ್ಲಿ ಅಧ್ಯಕ್ಷರಾಗುವ ಅವಕಾಶ ತಪ್ಪಿತ್ತು, 2012ರಲ್ಲಿ ನಡೆದ ಚುನಾವಣೆಯಲ್ಲೂ ಪದವಿಗಾಗಿ ಪ್ರಯತ್ನ ನಡೆಸಿದ್ದರಾದರೂ ಜೆಡಿಎಸ್ ಮುಖಂಡರ ಮಧ್ಯಸ್ಥಿಕೆಯಿಂದಾಗಿ ವರ್ತೂರ್ ಬಣದಿಂದ ಜೆಡಿಎಸೆಗೆ ಬಂದ ಚೌಡೇಶ್ವರಿಯವರನ್ನು ಬೆಂಬಲಿಸುವ ಅನಿವಾರ್ಯತೆ ಉಂಟಾಯಿತು.
ತೂಪಲ್ಲಿ ನಾರಾಯಣಸ್ವಾಮಿ ಬೇಡಿಕೆ: ಒಪ್ಪಂದ ಪ್ರಕಾರ 10 ತಿಂಗಳ ಬಳಿಕ ಚೌಡೇಶ್ವರಿ ರಾಜಿನಾಮೆ ನೀಡಿರುವುದರಿಂದ ತೂಪಲ್ಲಿ ನಾರಾಯಣಸ್ವಾಮಿ ತಮ್ಮ ಬೇಡಿಕೆ ಈಡೇರಿಸುವಂತೆ ಜೆಡಿಎಸ್ ಮುಖಂಡರ ಬಳಿ ಪ್ರಸ್ತಾವನೆ ಮಂಡಿಸಿದ್ದು ಶ್ರೀನಿವಾಸಪುರ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಇದಕ್ಕೆ ಒಪ್ಪುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.
ಮುಳಬಾಗಿಲು ತಾಲೂಕಿನ ಕೃಷ್ಣಪ್ಪ ಸಹ ಅಕಾಂಕ್ಷಿಯಾಗಿದ್ದಾರೆ. ಜಿಲ್ಲಾ ಪಂಚಾಯಿತಿಯಲ್ಲಿ ಅನೇಕ ಸಂದರ್ಭದಲ್ಲಿ ಮ್ಯಾಚ್ಫಿಕ್ಸಿಂಗ್ ರಾಜಕಾರಣ ನಡೆದಿರುವುದರಿಂದ ಜೆಡಿಎಸ್ ಮುಖಂಡರು ಅಧಿಕಾರಕ್ಕಾಗಿ ಬಿಜೆಪಿಯವರಲ್ಲದೆ ಇನ್ನಿತರ ಪಕ್ಷೇತರ ಸದಸ್ಯರಿಗೆ ಗಾಳ ಹಾಕುವ ಸಾಧ್ಯತೆಗಳಿವೆ.
ಬಿಜೆಪಿ ಸದಸ್ಯರು ಜೆಡಿಎಸ್ ಅನ್ನು ಬೆಂಬಲಿಸಿದಲ್ಲಿ ಉಪಾಧ್ಯಕ್ಷೆ ರತ್ನಮ್ಮ ಅವರ ಸ್ಥಾನಕ್ಕೆ ಬಿಜೆಪಿಯ ಸದಸ್ಯರೊಬ್ಬರನ್ನು ಆಯ್ಕೆ ಮಾಡುವುದಕ್ಕೂ ಚಿಂತನೆ ನಡೆಯುತ್ತಿದೆ. ಜಿ.ಪಂ.ನಲ್ಲಿ ಒಟ್ಟು 28 ಸದಸ್ಯರಿದ್ದು ಜೆಡಿಎಸ್ 12, ಕಾಂಗ್ರೆಸ್ 5, ಬಿಜೆಪಿ 7 ಹಾಗೂ 4 ಮಂದಿ ಪಕ್ಷೇತರರು ಇದ್ದಾರೆ. ಈ ಪೈಕಿ ವರ್ತೂರ್ ಬಣದಿಂದ ಗೆದ್ದಿದ್ದ ಚೌಡೇಶ್ವರಿ 2012ರಲ್ಲಿ ಜೆಡಿಎಸ್ ಸೇರಿ ಅಧ್ಯಕ್ಷ ಸ್ಥಾನ ಅಲಂಕರಿಸಿ ಇದೀಗ ರಾಜಿನಾಮೆ ನೀಡಿದ್ದಾರೆ.
ಪಕ್ಷೇತರ ಎಂ.ಎಸ್. ಆನಂದ್ ಈ ಹಿಂದೆ ವರ್ತೂರ್ ಬಣಕ್ಕೆ ನಂತರ ಕಾಂಗ್ರೆಸ್, ಜೆಡಿಎಸ್ಗೆ ಬೆಂಬಲ ನೀಡಿ ಈಗ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು ಈಗ ಯಾವ ನಿರ್ಧಾರ ಕೈಗೊಳ್ಳುತ್ತಾರೋ ಕಾದು ನೋಡಬೇಕಾಗಿದೆ.
ಬಿಜೆಪಿಯ ಸಿಮೋಲ್ ಮೋಹನ್ ಸಹ ಕಳೆದ ವರ್ಷ ಜೆಡಿಎಸ್ಗೆ ಬಹಿರಂಗ ಬೆಂಬಲ ನೀಡಿದ್ದರು. ಇದೇ ಪಕ್ಷದ ಬೆಂಬಲದಿಂದ ಹಾಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾರೆ.
ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ತಟಸ್ಥವಾಗಿರುತ್ತದೋ ಇಲ್ಲವೇ ಮಾಜಿ ಶಾಸಕ ಕೃಷ್ಣಯ್ಯಶೆಟ್ಟಿ ಜೊತೆ ಗುರುತಿಸಿಕೊಂಡಿರುವ ಬಿಜೆಪಿಯ ಸದಸ್ಯರಲ್ಲದೆ, ಪಕ್ಷೇತರ ಸದಸ್ಯರ ಬೆಂಬಲದಿಂದ ಅಧಿಕಾರ ಹಿಡಿಯಲು ತಂತ್ರ ರೂಪಿಸುವುದೇ ಎಂಬುದು ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪನವರ ಮೇಲೆ ಅವಲಂಬಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

