ಕೋಲಾರ

ಆಹಾರ ಶಾಖೆ ಅವ್ಯವಹಾರ ವಿರುದ್ಧ ಪ್ರತಿಭಟನೆ: ಮಾತಿನ ಚಕಮಕಿ

Published On :

ಕ.ಪ್ರ.ವಾರ್ತೆ   ಚಿಂತಾಮಣಿ   ಆ. 17
ತಾಲೂಕು ಕಚೇರಿ ಆಹಾರ ಶಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ವಿರುದ್ಧ ಶನಿವಾರ ವಂದೇ ಮಾತರಂ ಸಂಘಟನೆ ಕಾರ್ಯಕರ್ತರು ಒಳಗೆ ನುಗ್ಗಿ ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ತಡೆಯಲು ಯತ್ನಿಸಿದರು. ಇದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ದಂಡಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ತಾಲೂಕು ಕಚೇರಿ ಆಹಾರ ಶಾಖೆಯಲ್ಲಿ ಹಲವು ಮಧ್ಯವರ್ತಿಗಳು ಸೇರಿ ಸಾವಿರಾರು ರು. ವಸೂಲಿ ಮಾಡಿ ಶ್ರೀಮಂತರಿಗೆ ಬಿಪಿಎಲ್ ಕಾರ್ಡ್ ನೀಡಿ, ಅರ್ಹ ಬಡ ಜನರಿಗೆ ನೀಡದೆ ದಿನನಿತ್ಯ ಕಾರ್ಡ್ ಪಡೆಯಲು ಸರದಿ ಸಾಲಿನಲ್ಲಿ ನಿಂತರೂ ಪಡಿತರ ಚೀಟಿ ದೊರೆಯದೆ ಇರುವ ಬಗ್ಗೆ ವಂದೇ ಮಾತರಂ ಸಂಘಟನೆ ಹಲವು ಬಾರಿ ತಾಲೂಕು ಆಡಳಿತ ಗಮನಕ್ಕೆ ತಂದಿತ್ತು. ಆದರೆ, ಪ್ರಯೋಜನವಾಗಿಲ್ಲ ಎಂದು ಆರೋಪಿಸಿ, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ದಂಡಾಧಿಕಾರಿ ಎಂ.ಎನ್. ಮಂಜುನಾಥ್ ಕಾರ್ಯವೈಖರಿ ವಿರುದ್ಧ ಘೋಷಣೆ ಕೂಗಿದರು.
ವಾಗ್ವಾದ:  ಶನಿವಾರ ಬೆಳಿಗ್ಗೆ ಆಹಾರ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿವಕುಮಾರ್ ಬೇನಾಮಿ ವ್ಯಕ್ತಿಗಳ ಜೊತೆಗೆ ಒಳಒಪ್ಪಂದ ಮಾಡಿಕೊಂಡು ಬಲಾಢ್ಯರಿಂದ 1500 ರಿಂದ 3000 ವರೆಗೂ ವ್ಯವಹಾರ ಕುದುರಿಸಿಕೊಂಡು ಕೇವಲ ಒಂದೇ ಗಂಟೆಯಲ್ಲಿ ಪಡಿತರ ಕಾರ್ಡ್ಗಳನ್ನು ವಿತರಿಸುತ್ತಿದ್ದಾರೆ ಎಂದು ವಂದೇ ಮಾತರಂ ಸಂಘಟನೆ ಜಿಲ್ಲಾಧ್ಯಕ್ಷ ವಿ.ರವಿ, ತಾಲೂಕು ಅಧ್ಯಕ್ಷ ಪ್ರಕಾಶ್ ಕೆ. ಮತ್ತಿತರರು ಆರೋಪಿಸಿದರು.
ಮಂದಿ ಪ್ರತಿಭಟನಾಕಾರರು ತಾಲೂಕು ಕಚೇರಿಯ ಮುಂಭಾಗದ ಗೇಟ್ನಿಂದ ಒಳನುಗ್ಗಿ ಆಹಾರ ಶಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ವಿರುದ್ಧ ತಿರುಗಿ ಬಿದ್ದು ಒಳನುಗ್ಗಿದರು.
ಇದನ್ನು ತಡೆಯಲು ಯತ್ನಿಸಿದ ಪೊಲೀಸರು ಬಲವಂತದಿಂದ ಪ್ರತಿಭಟನಾಕಾರರನ್ನು ತಡೆಯಲು ಮುಂದಾದರು. ಆಗ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು. ಪೊಲೀಸರು, ಪ್ರತಿಭಟನಾಕಾರರ ಮಧ್ಯೆ ಕೆಲ ಕಾಲ ವಾಗ್ವಾದ ನಡೆಯಿತು.
ಆಗ್ರಹ:  ಆಹಾರ ಶಾಖೆಯಲ್ಲಿ ಕೇವಲ ಒಬ್ಬ ಸರ್ಕಾರಿ ಅಧಿಕಾರಿ (ಶಿವಕುಮಾರ್) ಅವರನ್ನು ಹೊರೆತುಪಡಿಸಿ ಉಳಿದೆಲ್ಲಾ ಬೇನಾಮಿ ವ್ಯಕ್ತಿಗಳೇ ಆಗಿರುವುದರಿಂದ ಆರ್ಟಿಐ ಮುಖಾಂತರ ಮಾಹಿತ ಕೇಳಿದರೂ ಇದಕ್ಕೆ ಅಧಿಕಾರಿಗಳು ತಕ್ಕ ಉತ್ತರ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಪಟ್ಟಣದ ನ್ಯಾಯ ಬೆಲೆ ಅಂಗಡಿಗಳವರು ಅವ್ಯವಹಾರ ನಡೆಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲು ಅಸಮರ್ಥರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಆಹಾರ ಶಾಖೆಯಲ್ಲಿ ಶಿವಕುಮಾರ್ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಅಧಿಕಾರಿ ಮೇಲೆ ಶಿಸ್ತಿನ ಕ್ರಮ ಜರುಗಿಸಿ ಬದಲಿ ಅಧಿಕಾರಿಗಳನ್ನು ನೇಮಿಸಬೇಕು ಎಂದು ಆಗ್ರಹಿಸಿದರು. ಬಳಿಕ ತಾಲೂಕು ದಂಡಾಧಿಕಾರಿ ಎಂ.ಎನ್. ಮಂಜುನಾಥ್ಗೆ ಮನವಿ ಅರ್ಪಿಸಿದರು.
ಈ ಸಂದರ್ಭ ತಾಲೂಕು ದಂಡಾಧಿಕಾರಿಗಳು ಕಾಲಾವಕಾಶ ಕೋರಿ ಸಾಮಾನ್ಯ ಜನರಿಗೆ ನ್ಯಾಯ ಕಲ್ಪಿಸುವಲ್ಲಿ ಪ್ರಾಮಾಣಿಕ ಸೇವೆ ಮಾಡುತ್ತೇನೆ. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭ ಸಂಘಟನೆ ಮುಖಂಡರಾದ ನಾರಾಯಣಸ್ವಾಮಿ, ಸುಧಾಕರ್, ನಾಗೇಶ್, ನರಸಿಂಹಮೂರ್ತಿ,ಶ್ರೀನಿವಾಸರೆಡ್ಡಿ, ವೇಣುಗೋಪಾಲ್, ನರಸಿಂಹಮೂರ್ತಿ, ಗೌಶಾನ್, ಮಂಜುನಾಥ್, ಶ್ರೀರಾಮ, ಬಾಬುರೆಡ್ಡಿ, ಮಹಮದ್ ಹನೀಫ್ ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.