ನೀರು ಕೊಟ್ಟರೂ ನಗರ ಜನತೆ ಕೃತಜ್ಞತೆ ತೋರಲಿಲ್ಲ: ವರ್ತೂರ್
ಕ.ಪ್ರ.ವಾರ್ತೆ ಕೋಲಾರ ಆ. 17
ಕುಡಿಯುವ ನೀರಿನ ಸಮಸ್ಯೆಯಿಂದ ತೊಂದರೆಗೆ ಈಡಾಗಿದ್ದ ನಗರ ಜನತೆಯ ಕಷ್ಟ ಅರಿತು ಹಗಲು ರಾತ್ರಿಯನ್ನದೇ ಅಮ್ಮೇರಹಳ್ಳಿ ಮತ್ತು ಮಡೇರಹಳ್ಳಿಯ ಕೆರೆಗಳಲ್ಲಿ ಕೆಟ್ಟು ಹೋಗಿದ್ದ ಕೊಳವೆಬಾವಿಗಳನ್ನು ಸ್ವಂತ ಹಣದಿಂದ ದುರಸ್ತಿ ಮಾಡಿಸಿ, ನೀರಿನ ಬವಣೆ ನಿವಾರಣೆ ಮಾಡಿದರೂ ನಗರದ ಜನತೆ ನಿಯತ್ತು ತೋರಲಿಲ್ಲ ಎಂದು ಶಾಸಕ ಆರ್.ವರ್ತೂರ್ ಪ್ರಕಾಶ್ ಬೇಸರ ವ್ಯಕ್ತಪಡಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ಕುರುಬ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ವಿಧಾನ ಸಭಾ ಚುನಾವಣೆಗೆ ಮುನ್ನಾ ತಾವು ಕೆರೆಗಳಲ್ಲಿನ ಕೊಳವೆಬಾವಿಗಳನ್ನು ಸುಮಾರು 3 ಕೋಟಿ ವೆಚ್ಚದಲ್ಲಿ ದುರಸ್ತಿಗೊಳಿಸಿ, ಓವರ್ ಹೆಡ್ ಟ್ಯಾಂಕ್ ಮೂಲಕ ನಗರದ ಜನತೆಗೆ ನೀರು ನೀಡಿದರೆ ನಗರಸಭೆ ಚುನಾವಣೆಯಲ್ಲಿ ನಗರ ಜನತೆ ನನಗೆ ಮೂರು ನಾಮ ಹಾಕಿದರು ಎಂದರು. ಗ್ರಾಮೀಣ ಪ್ರದೇಶದಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಕ್ಕೆ ಅಲ್ಲಿನ ಜನತೆ ಕೃತತಜ್ಞತೆ ತೋರಿ ತಮ್ಮನ್ನು ಚುನಾವಣೆಯಲ್ಲಿ ಗೆಲ್ಲಿಸಿದರು, ಹಳ್ಳಿ ಜನರಿಗೆ ಕೃತಜ್ಞತೆ ಇದೆ. ಅಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡುವ ಆಶಯವೂ ತಮ್ಮದಾಗಿದೆ. ಪ್ರತಿ ಹಳ್ಳಿಯಲ್ಲೂ ಕನಿಷ್ಠ 5 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಮಾಡಿರುವುದಾಗಿ ತಿಳಿಸಿದರು.
ತಮ್ಮ ಸ್ವಂತ ಹಣದಿಂದ ನಗರ ಜನತೆಗೆ ನೀರು ಕೊಟ್ಟಿದ್ದೇನೆ. ನಗರಸಭೆಯಿಂದ ಇದುವರೆಗೂ 100 ಸಹ ಪಡೆದಿಲ್ಲ. ಮಾಜಿ ಸಚಿವ ಕೆ.ಶ್ರೀನಿವಾಸಗೌಡರು ತಪ್ಪು ಹುಡುಕಲು ಪ್ರಯತ್ನಿ ವಿಫಲರಾಗಿದ್ದಾರೆ ಎಂದು ಹೇಳಿದರು. ನನ್ನ ಮನೆಗೆ ಬರುವ ಬಡವರಿಗೆ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ. ಮುಂದೆಯೂ ಬಡವರಿಗೆ ಸಹಾಯ ಮಾಡುತ್ತೇನೆ. ಶ್ರೀನಿವಾಸಗೌಡರ ಮನೆಗೆ ಹೋಗಿ ತಲೆ ಕೂದಲು ಕಿತ್ತುಕೊಂಡು ಸಹಾಯ ಕೇಳಿದರೂ ಬಿಡಿಗಾಸು ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ನಾನು ತಮ್ಮ ಸ್ವಂತ ಹಣವನ್ನು ವೆಚ್ಚಮಾಡಿ ನಗರದ ಜನತೆಗೆ ನೀರು ಕೊಟ್ಟಿದ್ದು, ನಗರಸಭೆಯಿಂದ ತಾವೇನಾದರೂ 100 ಪಡೆದಿರುವ ಬಗ್ಗೆ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಸಾಬೀತು ಮಾಡಿದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸವಾಲು ಹಾಕಿದರು. ಚಿನ್ನದ ಗಣಿ ಪುನರ್ ಪ್ರಾರಂಭಿಸುವಂತೆ ಸುಪ್ರೀಂ ಕೋರ್ಟ್ ನೀಡುವ ತೀರ್ಪನ್ನು ಎರಡು ಮೂರು ದಿನಗಳ ಮುಂಚೆಯೇ ತಿಳಿದುಕೊಂಡ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಗಣಿ ಸಚಿವರಿಗೆ ಮನವಿ ಪತ್ರ ನೀಡಿ ತಾವೇ ಪ್ರಾರಂಭಿಸಲು ಒತ್ತಾಯಿಸಿರುವುದಾಗಿ ಮಾಧ್ಯಮಗಳಿಗೆ ಫೋಸ್ ನೀಡಿ ಗಿಮಿಕ್ ರಾಜಕಾರಣ ನಡೆಸಲು ಮುಂದಾದರು ಎಂದು ಟೀಕಿಸಿದರು.
ಗ್ರಾಮೀಣ ಜನತೆ ನನ್ನ ಮೇಲೆ ಅತ್ಯಂತ ಪ್ರೀತಿ, ವಿಶ್ವಾಸ ಇಟ್ಟುಕೊಂಡಿದ್ದಾರೆ. ಅದಕ್ಕಾಗಿಯೇ 2ನೇ ಬಾರಿಯೂ ಅಲ್ಲಿನ ಜನತೆ ಹೆಚ್ಚಿನ ಮತ ನೀಡಿ ಗೆಲ್ಲಿಸಿದ್ದಾರೆ. ಈ ಜನರಿಗೆ ಎಂದಿಗೂ ದ್ರೋಹ ಮಾಡುವುದಿಲ್ಲ. ನನ್ನ ಕ್ಷೇತ್ರದಲ್ಲಿ ಈಗ 150 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಕೋಲಾರ ನಗರಕ್ಕೆ ನಾನು ಸಚಿವನಾಗಿದ್ದ ಅವಧಿಯಲ್ಲಿ ಎಷ್ಟು ಹಣ ಬಂದಿದೆ ಎಂಬುದನ್ನು ಇನ್ನೆರಡು ದಿನಗಳಲ್ಲಿ ಬಹಿರಂಗ ಪಡಿಸುತ್ತೇನೆ ಆಗ ಜನತೆಗೆ ಸತ್ಯ ಏನೆಂದು ತಿಳಿಯುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

