ಸಕಾಲದಲ್ಲಿ ಸರ್ಕಾರಕ್ಕೆ ಮಾಹಿತಿ ನೀಡಲು ಕರೆ
ಮಾಲೂರು: ರೈತರ ಜೀವನದ ಪ್ರಶ್ನೆಯಾಗಿರುವುದರಿಂದ ಅಧಿಕಾರಿಗಳು ಸರ್ಕಾರಕ್ಕೆ ಸಕಾಲದಲ್ಲಿ ಬೆಳೆ ವಿಮೆ, ಜನನ ಮರಣದ ವರದಿ ನೀಡಬೇಕು ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶಂಕರನಾರಾಯಣ ಹೇಳಿದರು.
ಪಟ್ಟಣದ ಜೆಎಸ್ಎಸ್ ಕಾಲೇಜು ಸಂಭಾಗಣದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳಿಗಾಗಿ ಗುರುವಾರ ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರವು ರೈತರ ಹಾಗೂ ಸಾರ್ವಜನಿಕರ ಶ್ರೇಯೋಭಿವೃದ್ಧಿ ಬಯಸಿ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಬೆಳೆ ನಷ್ಟಕ್ಕೆ ಯೋಜನೆಯ ಮೂಲಕ ಪರಿಹಾರಧನ ಸಹ ವಿತರಿಸುತ್ತದೆ. ಆದರೆ ಅಧಿಕಾರಿಗಳ ಅಪ್ರಾಮಾಣಿಕ ವರದಿ ನೈಜ ಫಲಾನುಭವಿಯ ಭವಿಷ್ಯವೇ ಹಾಳಾಗಬಹುದು. ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆಯಿಂದ ವ್ಯವಹರಿಸಿ ಸಕಾಲದಲ್ಲಿ ವರದಿ ನೀಡಬೇಕು ಎಂದರು.
ಸಹಾಯಕ ಸಾಂಖ್ಯಿಕ ಅಧಿಕಾರಿ ಪ್ರಸಾದ್ ಶಿಬಿರದಲ್ಲಿ ಭಾಗವಹಿಸಿದ್ದ ಅಧಿಕಾರಿಗಳಿಗೆ 2013-14ನೇ ಸಾಲಿನ ಬೆಳೆ ವಿಮೆ ಯೋಜನೆ, ಸಕಾಲಿಕ ವರದಿ ಯೋಜನೆ, ಜನನ-ಮರಣ ದಾಖಲಾತಿ ಬಗ್ಗೆ ಮಾಹಿತಿ ನೀಡಿದರು. ತಹಸೀಲ್ದಾರ್ ನಾಗರಾಜ್ ಶಿಬಿರಕ್ಕೆ ಚಾಲನೆ ನೀಡಿದರು. ಸಾಂಖ್ಯಿಕ ನಿರ್ದೇಶಕ ಬಿ.ಪ್ರಸನ್ನಕುಮಾರ್, ಕಂದಾಯ ಇಲಾಖೆಯ ನಾರಾಯಣಸ್ವಾಮಿ ಸೇರಿದಂತೆ ಪಂಚಾಯಿತಿಯ ಕಾರ್ಯದರ್ಶಿಗಳು, ವಿವಿಧ ಇಲಾಖೆಗಳ ಸಹಾಯಕ ಅಧಿಕಾರಿಗಳು, ರಾಜಸ್ವ ಅಧಿಕಾರಿಗಳು ಭಾಗವಹಿಸಿದ್ದರು.
ಬರಡು ರಾಸುಗಳ ತಪಾಸಣೆ ಸದುಪಯೋಗಕ್ಕೆ ಕರೆ
ಬಂಗಾರಪೇಟೆ: ಬರಗಾಲದಲ್ಲಿ ಕೃಷಿ ಎಂಬುದು ರೈತರ ಕೈಗೆ ಎಟುಕದ ಕಸುಬಾಗಿದೆ. ಇಂತಹ ವೇಳೆ ದಶಕಗಳಿಂದ ಅವರ ಒಡನಾಡಿಗಳಾಗಿರುವ ಜಾನುವಾರುಗಳನ್ನು ಪೋಷಣೆ ಮಾಡಲಾಗದೆ ಮಾರಾಟ ಮಾಡುವ ಪರಿಸ್ಥಿತಿ ಉಂಟಾಗಿದ್ದು, ಬರಡು ರಾಸುಗಳ ತಪಾಸಣೆ ಹಾಗೂ ಪಶು ಆರೋಗ್ಯ ಚಿಕಿತ್ಸಾ ಶಿಬಿರ ರೈತರಿಗೆ ವರದಾನವಾಗಲಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಹ ಪ್ರಾಧ್ಯಾಪಕರು ಕೃಷಿ ವಿಸ್ತರಣಾ ವಿಭಾಗ ಕೃಷಿ ವಿಶ್ವವಿದ್ಯಾನಿಲಯದ ಡಾ.ವಿ.ಎಲ್.ಮಧುಪ್ರಸಾದ್ ತಿಳಿಸಿದರು.
ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಕಾಲೇಜು, ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಬೆಂಗಳೂರು ಹಳೇ ವಿದ್ಯಾರ್ಥಿಗಳ ಸಂಘ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ರೈತ ಸಂಪರ್ಕ ಕೇಂದ್ರ ಕಾಮಸಮುದ್ರ ಮತ್ತು ಪಶು ಚಿತ್ಸಾಲಯ ತೊಪ್ಪನಹಳ್ಳಿ ಗ್ರಾಮದಲ್ಲಿ ಅಂತಿಮ ವರ್ಷದ ಬಿ.ಎಸ್ಸಿ (ಕೃಷಿ) ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಅನುಭವ ಕಾರ್ಯಕ್ರಮದ ಅಂಗವಾಗಿ ನಡೆದ ಬರಡು ರಾಸುಗಳ ತಪಾಸಣೆ ಹಾಗೂ ಪಶು ಆರೋಗ್ಯ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಹಾಲು ಹೆಚ್ಚಿಸಲು ಪಶು ವೈದ್ಯರು ನೀಡುವ ಸಲಹೆಯನ್ನು ಪಾಲಿಸಿದರೆ ಬರಡುತನ ಮಾಯವಾಗುತ್ತದೆ ಎಂದರು.
ಶಿಬಿರದಲ್ಲಿ 42 ಬರಡು ರಾಸುಗಳು ಸೇರಿದಂತೆ ಒಟ್ಟು 264 ರಾಸುಗಳಿಗೆ ಉಚಿತ ಚಿಕಿತ್ಸೆ ನೀಡಲಾಯಿತು. ಕೃಷಿ ವಿದ್ಯಾರ್ಥಿಗಳು ಬೆಂಗಳೂರಿನಿಂದ ಬಂದು ಗಡಿ ಭಾಗದ ಗ್ರಾಮಗಳಲ್ಲಿ ರೈತರಲ್ಲಿ ಕೃಷಿ ಚಟುವಟಿಕೆಗಳ ಬಗ್ಗೆ ಹಾಗೂ ರಾಸುಗಳ ನಿರ್ವಾಹಣೆ ಕುರಿತು ಅರಿವು ಮೂಡಿಸುತ್ತಿರುವುದು ಗ್ರಾಮಸ್ಥರ ಮೆಚ್ಚಿಗೆಗೆ ಪಾತ್ರವಾಗಿದೆ. ರಾಸುಗಳಿಗೆ ಖ್ಯಾತ ಪ್ರಸೂತಿ ತಜ್ಞ ಡಾ.ಮರ್ಗೂಬ್ ಹುಸೇನ್, ಡಾ.ಎಂ.ರಾಜಣ್ಣ ಚಿಕಿತ್ಸೆ ನೀಡಿದರು. ಕಾರ್ಯಕ್ರಮದ ಉಸ್ತುವಾರಿಯನ್ನು ಗ್ರಾಮೀಣ ಕಾರ್ಯನುಭವ ಅಂತಿಮ ವರ್ಷದ ವಿದ್ಯಾರ್ಥಿಗಳಾದ ವಿ.ಭವ್ಯ,ಮನು, ದೀಪಾ, ಮೋಹನ್ಕುಮಾರ್,ಮಹಾಲಕ್ಷ್ಮಿ, ಮೋಹನ್ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

