ಕೋಲಾರ

ಪಿಜಿ ಕೇಂದ್ರದ ಅಭಿವೃದ್ಧಿಗೆ ಇಚ್ಛಾಶಕ್ತಿ ಕೊರತೆ

Published On :

ಕ.ಪ್ರ.ವಾರ್ತೆ ,  ಕೋಲಾರ ,  ಆ.26
ಉನ್ನತ ಶಿಕ್ಷಣ ಪಡೆಯಲು ಜಿಲ್ಲೆಯ ಗ್ರಾಮೀಣ ಬಡ ವಿದ್ಯಾರ್ಥಿಗಳು ಬೆಂಗಳೂರು ಇನ್ನಿತರ ಕಡೆಗಳಿಗೆ ಹೋಗುವುದಕ್ಕೆ ಕಷ್ಟವಾಗುತ್ತಿದ್ದನ್ನು ಅರಿತ ರಾಜ್ಯ ಸರ್ಕಾರ ತಾಲೂಕಿನ ಮಂಗಸಂದ್ರ ಗ್ರಾಮದ ಬಳಿ ಪಿಜಿ(ಸ್ನಾತಕೋತ್ತರ) ಕೇಂದ್ರ ನಿರ್ಮಾಣಕ್ಕೆ 30 ಎಕರೆ ಮಂಜೂರು ಮಾಡಿದ್ದರೂ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ವಿದ್ಯಾರ್ಥಿಗಳ ಗೋಳು ತಪ್ಪದಂತಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕೋಲಾರ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಕಾಂ., ಎಕನಾಮಿಕ್ಸ್, ಎಂ.ಫಿಲ್ ಮತ್ತು ಎಂಎ ಕನ್ನಡ ಕೋರ್ಸ್‌ಗಳು ಚಾಲ್ತಿಯಲ್ಲಿದ್ದು, ಸುಮಾರು 350 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಬಹುತೇಕರು ಗ್ರಾಮೀಣ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಅಲ್ಲದೆ ದಲಿತ ವರ್ಗಕ್ಕೆ ಸೇರಿದವರು ಹೆಚ್ಚಾಗಿದ್ದಾರೆ.
ಸಿಬ್ಬಂದಿ ಪರದಾಟ: ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಹಾಗೂ ಗುಡ್ಡಗಳ ಸಾಲಿನಲ್ಲಿ ಕೋಲಾರ ಸ್ನಾತಕೋತ್ತರ ಕೇಂದ್ರಕ್ಕೆ ಭೂಮಿ ನೀಡಲಾಗಿದ್ದು, ಆಡಳಿತ ವಿಭಾಗದ ಕಟ್ಟಡವನ್ನು ಮಾತ್ರ ನಿರ್ಮಿಸಲಾಗಿದೆ. ಇದಕ್ಕೆ ಇನ್ನು ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ, ತರಗತಿಗಳ ಕೊಠಡಿಗಳು ಸದ್ಯಕ್ಕೆ ಆಡಳಿತ ವಿಭಾಗದ ಕಟ್ಟಡದಲ್ಲೇ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳು ಹೊಂದಾಣಿಕೆ ಮಾಡಿಕೊಳ್ಳುವಂತಾಗಿದೆ.
ಈ ಹಿಂದೆ ಪಿಜಿ ಕೇಂದ್ರ ಕೋಲಾರ ನಗರದ ಸರ್ಕಾರಿ ಬಾಲಕರ ಕಾಲೇಜಿನ ಹಳೆ ಕಟ್ಟಡದಲ್ಲಿ ನಡೆಯುತ್ತಿತ್ತು. ಬಾಲಕರ ಕಾಲೇಜಿನ ವಿದ್ಯಾರ್ಥಿಗಳಿಗೆ ಕೊಠಡಿಗಳ ಸಮಸ್ಯೆ ಇದೆ ಎಂದು ಪಿಜಿ ಕೇಂದ್ರವನ್ನು ಮಂಗ್ರಸಂದ್ರದಲ್ಲಿ ನಿರ್ಮಿಸಿರುವ ಆಡಳಿತ ವಿಭಾಗಕ್ಕೆ ಸ್ಥಳಾಂತರ ಮಾಡಲಾಗಿದ್ದು, ಮೂಲ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಮಾತ್ರವಲ್ಲದೆ ಬೋಧಕ-ಬೋಧತೇಕರ ಸಿಬ್ಬಂದಿಯೂ ಸಹ ಪರದಾಡುವಂತಾಗಿದೆ. ಪಿಜಿ ಕೇಂದ್ರದಲ್ಲಿ ಎರಡು ಕೊಳವೆ ಬಾವಿಗಳಿದ್ದು, ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಶೌಚಾಲಯಗಳನ್ನು ಸಹ ಉತ್ತಮವಾಗಿ ನಿರ್ಮಿಸಲಾಗಿದೆ. ಆದರೂ ಅದಕ್ಕೆ ಸೆಫ್ಟಿ ಟ್ಯಾಂಕ್ ನಿರ್ಮಿಸದಿದ್ದ ಕಾರಣ ವಿದ್ಯಾರ್ಥಿಗಳು ದುರ್ವಾಸನೆ ತಾಳಲಾರದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅದ್ದರಿಂದ ಬೆಂಗಳೂರು ವಿವಿಯ ಆಡಳಿತ ಮಂಡಳಿಯವರು ಈಗ ಸೆಫ್ಟಿ ಟ್ಯಾಂಕ್ ನಿರ್ಮಾಣ ಕಾರ್ಯಕ್ಕೆ ಮಂಜೂರಾತಿ ನೀಡಿರುವುದರಿಂದ ಕಾಮಗಾರಿ ಆರಂಭಿಸಲಾಗಿದೆ.
ರಸ್ತೆಯಿಲ್ಲ, ಬಸ್ಸು ಇಲ್ಲ: ಮಾಲೂರು ಮುಖ್ಯರಸ್ತೆಯಿಂದ ಕೋಲಾರ ಪಿಜಿಗೆ ಹೋಗಲು ಸುಮಾರು 700 ಮೀಟರ್ ದೂರವಿದ್ದು, ರಸ್ತೆಯ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಮಣ್ಣಿನ ರಸ್ತೆಯಾಗಿರುವುದರಿಂದ ಮಳೆಗಾಲದಲ್ಲಿ ರಸ್ತೆ ಕೆಸರುಗದ್ದೆಯಾಗಿ ಮಾರ್ಪಡುವುದರಿಂದ ಕೂಡಲೇ ರಸ್ತೆ ಹಾಗೂ ಮಳೆ ನೀರು ಹರಿಯಲು ಚರಂಡಿ ನಿರ್ಮಿಸಬೇಕೆಂಬುದು ವಿದ್ಯಾರ್ಥಿಗಳ ಬೇಡಿಕೆಯಾಗಿದೆ.
ಪಿಜಿ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳು ಮಾಲೂರು ಮುಖ್ಯರಸ್ತೆಯಿಂದ ಕ್ಯಾಂಪಸ್ ಪ್ರವೇಶ ಮಾಡುವುದಕ್ಕೆ ಸಮಸ್ಯೆ ಇರುವುದರಿಂದ ಸರ್ಕಾರಿ ಬಸ್ಸುಗಳು ಕ್ಯಾಂಪಸ್ ತನಕ ಬಂದು ಹೋಗುವ ವ್ಯವಸ್ಥೆ ಮಾಡಬೇಕು. ಪಿಜಿ ಕೇಂದ್ರದ ಮುಂದೆ ಪ್ರವೇಶ ದ್ವಾರ ಹಾಗೂ ತಂಗುದಾಣ ನಿರ್ಮಿಸಬೇಕು, ಬೋಧಕ ಸಿಬ್ಬಂದಿಯ ಕೊರತೆ ನಿವಾರಿಸಬೇಕು, ಕ್ಯಾಂಪಸ್‌ನಲ್ಲೇ ಹಾಸ್ಟೆಲ್ ನಿರ್ಮಿಸಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಹೊಂದಾಣಿಕೆ ಕೊರತೆ: ಆಡಳಿತ ವಿಭಾಗದ ಕಚೇರಿಯ ಪಕ್ಕದಲ್ಲಿ ಗ್ರಂಥಾಲಯ, ತರಗತಿ ಕೊಠಡಿಗಳು, ಸಭಾಂಗಣ, ಬೋಧಕರ ಕೊಠಡಿಗಳ ನಿರ್ಮಾಣಕ್ಕೆಂದು 2007-2008ನೇ ಸಾಲಿನಲ್ಲೇ ಕಾಮಗಾರಿ ಆರಂಭಿಸಿ, ಬೆಂಗಳೂರು ವಿವಿಯ ಅಧಿಕಾರಿಗಳು ಮತ್ತು ಪಿಜಿ ಕೇಂದ್ರದ ನಿರ್ಮಾಣದ ಗುತ್ತಿಗೆ ಹೊಂದಿರುವವರ ನಡುವೆ ಇರುವ ವ್ಯತ್ಯಾಸದಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆ.
ಬುನಾದಿ(ಪಾಯ)ಕ್ಕೆ ಅಳವಡಿಸಿರುವ ಕಬ್ಬಿಣ ತುಕ್ಕು ಹಿಡಿಯುತ್ತಿದೆ. ಪಿಜಿ ಕೇಂದ್ರ ಸುತ್ತ ಬೆಟ್ಟ ಹಾಗೂ ಅರಣ್ಯ ಪ್ರದೇಶವಿದ್ದು ಕಾಂಪೌಂಡ್ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ನೆಮ್ಮದಿಯಿಂದ ಓಡಾಡಲು, ಉತ್ತಮ ಪರಿಸರದಲ್ಲಿ ಓದಲು ಕಷ್ಟವಾಗುತ್ತಿರುವುದರಿಂದ ಬೇಗನೆ ಕಾಂಪೌಂಡ್ ನಿರ್ಮಿಸುವ ಮೂಲಕ ವಿದ್ಯಾರ್ಥಿಗಳಿಗೆ ರಕ್ಷಣೆ ಒದಗಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಚಿರತೆ ಹಾವಳಿ!: ಪಿಜಿ ಕೇಂದ್ರದ ಸುತ್ತ ಇರುವ ಬೆಟ್ಟಗಳಲ್ಲಿ ಹಾಡುಹಗಲೇ ಚಿರತೆಗಳು ಕಾಣುವುದರಿಂದ ಪ್ರಾಣ ಭೀತಿ ಎದುರಾಗಿದೆ, ರಾತ್ರಿ ವೇಳೆ ಕಾವಲುಗಾರ ಪಿಜಿ ಕೇಂದ್ರದಲ್ಲಿ ಇರಲು ಭಯ ಪಡುತ್ತಾನೆ, ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ಯಾವುದೇ ಒಬ್ಬ ವ್ಯಕ್ತಿ ಪಿಜಿ ಕೇಂದ್ರದ ರಕ್ಷಣೆಗಾಗಿ ಬರಲು ಸಾಧ್ಯವಾಗುತ್ತಿಲ್ಲವೆಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪಿಜಿ ಕೇಂದ್ರಕ್ಕೆ ಭದ್ರತೆ ಇಲ್ಲದಿರುವುದರಿಂದ ಅಪರಿಚಿತ ವ್ಯಕ್ತಿಗಳ ಕಾಟ ಹೆಚ್ಚಾಗಿದೆ, ಕೆಲವರು ಸಂಜೆ ವೇಳೆ ಮತ್ತು ರಜೆ ದಿನಗಳಲ್ಲಿ ಪಿಜಿ ಕೇಂದ್ರಕ್ಕೆ ಅತಿಕ್ರಮ ಪ್ರವೇಶ ಮಾಡಿ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಾರೆ. ಕೆಲ ಟೋಮೊಟೋ ಮಾರಾಟಗಾರರು ಎಪಿಎಂಸಿಯಲ್ಲಿ ವಿಲೇವಾರಿ ಆಗದ ಮತ್ತು ಕೊಳೆತ ಟೋಮೊಟೋಗಳನ್ನು ಪಿಜಿ ಕೇಂದ್ರದ ಬಳಿ ಸುರಿದು ವಿದ್ಯಾರ್ಥಿಗಳ ನೆಮ್ಮದಿ ಹಾಳು ಮಾಡುತ್ತಿದ್ದು, ಇದಕ್ಕೆ ಕಣಿವಾಣ ಹಾಕಬೇಕೆಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಇಚ್ಛಾಶಕ್ತಿ ಕೊರತೆ: ಬೆಂಗಳೂರು ವಿವಿಯನ್ನು ವಿಭಜನೆ ಮಾಡಿ ಹೊಸಕೋಟೆಯಲ್ಲಿ ಡಿವಿಜಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಸರ್ಕಾರ ಮುಂದಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು, ಕಟ್ಟಡ ಹುಡುಕಿ ಇಲ್ಲವೇ ಹೊಸದಾಗಿ ಕಟ್ಟಡ ನಿರ್ಮಿಸಿ ಹೊಸ ವಿವಿ ಸ್ಥಾಪನೆ ಮಾಡುವುದಕ್ಕಿಂತ ಕೋಲಾರದಲ್ಲಿ ಈಗ ಅರ್ಧಕ್ಕೆ ನಿಂತಿರುವ ಕಟ್ಟಡವನ್ನು ತ್ವರಿತಗತಿಯಲ್ಲಿ ಮುಗಿಸಿದರೆ ರಾಜ್ಯಕ್ಕೆ ಮಾದರಿಯಾಗುವ ವಿವಿಯನ್ನು ಕಾಣಬಹುಗಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಿದಲ್ಲಿ ಕೋಲಾರ ಪಿಜಿಯ ಎಲ್ಲ ಸಮಸ್ಯೆಗಳನ್ನು ನಿವಾರಣೆ ಮಾಡಲು ಸಾಧ್ಯವೆಂದಿದ್ದಾರೆ.
ಕತ್ತಲಿನಲ್ಲಿ ಪಿಜಿ ಕೇಂದ್ರ: ಆಡಳಿತಾಂಗ ವಿಭಾಗದ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಅದಷ್ಟು ಬೇಗನೆ ಆಗಬೇಕು, ಕಟ್ಟಡದ ಉದ್ಘಾಟನೆ ಕಾರ್ಯ ನಡೆಸಿ ಬಾಕಿ ಇರುವ ಕಟ್ಟಡ ಕಾಮಗಾರಿ ಹಾಗೂ ಇನ್ನಿತರ ಅಭಿವೃದ್ಧಿ ಕೆಲಸಕ್ಕೆ ಸರ್ಕಾರ ಕ್ರಮ ಜಗುರಿಸುವ ಮೂಲಕ ಅತ್ಯಂತ ಹಿಂದುಳಿದ ಕೋಲಾರ ಜಿಲ್ಲೆಯ ಶೈಕ್ಷಣಿಕ ಪ್ರಗತಿ ಹೆಚ್ಚಿಸುವುದರ ಜೊತೆಗೆ ಹೊಸ ಕೋರ್ಸ್‌ಗಳು ಪ್ರಾರಂಭಕ್ಕೆ ಸಹಕಾರ ನೀಡಬೇಕೆಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಹಾಸ್ಟೆಲ್ ಬಾಡಿಗೆ ದುಬಾರಿ: ಕೋಲಾರ ನಗರದಲ್ಲಿ ಪಿಜಿ ಹಾಸ್ಟೆಲ್ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ, ಖಾಸಗಿ ಕಟ್ಟಡಕ್ಕೆ ಪ್ರತಿ ತಿಂಗಳು 87 ಸಾವಿರ ರು. ಬಾಡಿಗೆ ನೀಡಲಾಗುತ್ತಿದೆ. ಪ್ರತಿ ಎರಡು ವರ್ಷಕ್ಕೆ ಒಮ್ಮೆ ಶೇ.20ರಷ್ಟು ಬಾಡಿಗೆ ಹೆಚ್ಚಳಕ್ಕೆ ಕರಾರು ಪತ್ರದಲ್ಲಿ ತಿಳಿಸಿರುವುದರಿಂದ ಬಾಡಿಗೆ ತಿಂಗಳಿಗೆ 1 ಲಕ್ಷ ರು. ಕೊಡಬೇಕಾಗಿರುವುದರಿಂದ ಪಿಜಿಗೆ ಹಾಗೂ ಸರ್ಕಾರಕ್ಕೆ ಹೊರೆ ಆಗುವುದರಿಂದ ಕೋಲಾರ ಪಿಜಿ ಪ್ರಾಂಗಣದಲ್ಲೇ ಹಾಲ್ಟೆಲ್ ನಿರ್ಮಿಸುವುದರಿಂದ ಸರ್ಕಾರಕ್ಕೆ ಮತ್ತು ಬೆಂಗಳೂರು ವಿವಿಗೆ ಹೊರೆ ತಪ್ಪುತ್ತದೆ ಎಂದು ವಿದ್ಯಾರ್ಥಿಗಳು ಹಾಗೂ ಪಿಜಿ ಆಡಳಿತ ಅಭಿಪ್ರಾಯಪಟ್ಟಿದ್ದಾರೆ.
ಪಿಜಿಗೆ ಬೇಕಾದ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ಆ.18ರಿಂದ ತರಗತಿ ಬಹಿಷ್ಕಾರದ ಎಚ್ಚರಿಕೆ ನೀಡಿದ್ದ ವಿದ್ಯಾರ್ಥಿಗಳು ಉಪ ಕುಲಪತಿಗಳ ಜೊತೆ ಪಿಜಿಯ ನಿರ್ದೇಶಕ ಡಾ. ನಾಗಭೂಷಣ್ ಚರ್ಚಸಿ ವಿದ್ಯುತ್ ಕೆಲಸ, ಸೆಫ್ಟಿ ಟ್ಯಾಂಕ್ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಪ್ರತಿಭಟನೆ ಮುಂದೂಡಿದ್ದಾರೆ. ಪಿಜಿಯ ಕಟ್ಟಡ ನಿರ್ಮಾಣ ಕಾಮಗಾರಿ ಮುಂದುವರೆಯಲು ಜನಪ್ರತಿನಿಧಿಗಳು ವಿವಿಯ ಮೇಲೆ ಒತ್ತಡ ತಂದು ಕೆಲಸ ಆರಂಭಿಸಲಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.