ಗೋಹತ್ಯೆ ನಿಷೇಧ ಕಾಯ್ದೆ ವಾಪಸಿಗೆ ಆಕ್ರೋಶ
ಕ.ಪ್ರ.ವಾರ್ತೆ, ಕೋಲಾರ, ಆ.28
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯಿದೆಯನ್ನು ವಾಪಸು ಪಡೆದಿರುವುದು ಹಾಗೂ ದೇವಸ್ಥಾನ ಸಮಿತಿಗಳಿಗೆ ನೇಮಕವಾಗಿದ್ದ ವ್ಯವಸ್ಥಾಪನಾ ಮಂಡಳಿ ಸದಸ್ಯರನ್ನು ರದ್ದುಗೊಳಿಸಿರುವುದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಬುಧವಾರ ನಗರದ ಸರ್ಕಾರಿ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಗೋಹತ್ಯೆ ನಿಷೇಧಕ್ಕಾಗಿ ಬಿಜೆಪಿ ಸರ್ಕಾರ ಕಾಯಿದೆ ಮಂಡಿಸಿತ್ತು. ಹಾಗೆಯೇ ದೇವಾಲಯಗಳಿಗೆ ವ್ಯವಸ್ಥಾಪನಾ ಮಂಡಳಿ ರಚಿಸಿ ಸದಸ್ಯರನ್ನು ನೇಮಕ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಗೋಹತ್ಯೆ ಸಂರಕ್ಷಣಾ ಕಾಯಿದೆಯನ್ನು ಹಾಗೂ ದೇವಾಲಯ ಸಮಿತಿಗಳ ಸದಸ್ಯರನ್ನು ರದ್ದು ಮಾಡುವ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರಾಜ್ಯಪಾಲರು ಈ ಬಿಜೆಪಿ ಸರ್ಕಾರ ಕಳುಹಿಸಿದ್ದ ಗೋಸಂರಕ್ಷಣೆ ಕಾಯಿದೆಗೆ ಅನುಮೋದನೆ ನೀಡದೆ ಕಡತವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಓಟ್ಬ್ಯಾಂಕ್ ರಾಜಕಾರಣಕ್ಕಾಗಿ ಗೋವುಗಳ ಹತ್ಯೆಗೆ ಅವಕಾಶ ನೀಡಲು ಹೊರಟಿದೆ. ಇದರಿಂದ ಗೋವುಗಳನ್ನು ಪೂಜಿಸುವ ಜನರ ಭಾವನೆಗಳನ್ನು ಘಾಸಿಗೊಳಿಸುತ್ತಿದೆ ಎಂದು ದೂರಿದರು.
ಹಸು ಎತ್ತುಗಳನ್ನು ಕಸಾಯಿಖಾನೆಗೆ ಕಳುಹಿಸುವ ಈ ನಿರ್ಣಯದಿಂದ ರೈತರು ಹೆಚ್ಚು ರಾಸಾಯನಿಕ ಗೊಬ್ಬರನ್ನು ಅವಲಂಭಿಸುವಂತೆ ಮಾಡುತ್ತದೆ, ಈಗಾಗಲೇ ಹಾಲು ಉತ್ಪಾದನೆಗೆ ಉತ್ತೇಜನ ನೀಡುವ ಯೋಜನೆ ಜಾರಿಗೆ ತಂದ ಸರ್ಕಾರ ಅದೇ ಹಾಲು ಕೊಡುವ ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸುವ ನಿರ್ಧಾರ ಕೈಗೊಂಡಿರುವುದು ಅತ್ಯಂತ ನೋವಿನ ಸಂಗತಿ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್. ಕೃಷ್ಣಾರೆಡ್ಡಿ, ಮಾಜಿ ಶಾಸಕ ವೈ. ಸಂಪಂಗಿ, ಮುಖಂಡರಾದ ಓಂಶಕ್ತಿ ಚಲಪತಿ, ನೀಲಿ ಜಯಶಂಕರ್, ಮು. ರಾಘವೇಂದ್ರ, ನರಸಿಂಹರಾಜು, ಮಾಗೇರಿ ನಾರಾಯಣಸ್ವಾಮಿ, ಡಿ.ಆರ್. ನಾಗರಾಜ್, ಕೆಂಬೋಡಿ ನಾರಾಯಣಸ್ವಾಮಿ, ರಾಮಸಂದ್ರ, ನಾಗರಾಜ್, ನರೇಶ್, ಸಾ.ಮಾ. ಅನಿಲ್, ಅಬ್ಬಣಿ ನಾಗರಾಜ್, ನಿರ್ಮಲಮ್ಮ, ಮಮತ, ವೆಂಕಟೇಶ ಮೌರ್ಯ, ಜಯಂತಿಲಾಲ್, ಚಿನ್ನಾಪುರ ನಾರಾಯಣಸ್ವಾಮಿ, ಜಿಲ್ಲಾ ಬಿಜೆಪಿ ವಕ್ತಾರ ಶಿಳ್ಳಂಗೆರೆ ಮಹೇಶ್ ಇದ್ದರು.
ಮಾತಿನ ಚಕಮಕಿ: ಬಿಜೆಪಿ ಕಾರ್ಯಕರ್ತರು ಗೋಸಂರಕ್ಷಣಾ ಕಾಯಿದೆ ಹಿಂದಕ್ಕೆ ಪಡೆದಿರುವ ರಾಜ್ಯ ಸರ್ಕಾರದ ವಿರುದ್ಧ ನಗರದ ಸರ್ಕಾರಿ ಬಸ್ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಸ್ಥಳಕ್ಕೆ ಆಗಮಿಸಿದ ಸಿಪಿಐ ರಮೇಶ್ ಪ್ರತಿಭಟನೆಗೆ ಕೇವಲ 5 ನಿಮಿಷ ಅವಕಾಶ ನೀಡಿದ್ದು, ಅಷ್ಟರೊಳಗೆ ರಸ್ತೆತಡೆ ತೆರವು ಮಾಡುವಂತೆ ಹೇಳಿದಾಗ ಕಾರ್ಯಕರ್ತರು ಮತ್ತು ಸಿಪಿಐ ನಡುವೆ ಮಾತಿನ ಚಕಮಕಿ ನಡೆಯಿತು.
ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.
---
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

