ಕೋಲಾರ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

Published On :

ಕ.ಪ್ರ.ವಾರ್ತೆ , ಕೆಜಿಎಫ್ , ಅ.30
ಕೆಜಿಎಫ್ ಕ್ಷೇತ್ರದಲ್ಲಿ ರೈತರು ಸೇರಿದಂತೆ ಸಾರ್ವಜನಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್ ನೇತೃತ್ವದಲ್ಲಿ ನಾಡ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕೋಲಾರ ಜಿಲ್ಲೆಯಲ್ಲಿ ತೀವ್ರವಾದ ಬರಗಾಲವನ್ನು ಜನರು ಎದುರಿಸುತ್ತಿದ್ದು ಅಂತರ್ಜಲ 1500 ಅಡಿಗಳಿಗೆ ಕುಸಿದಿದೆ. ಕೆರೆಗಳ ಜಿಲ್ಲೆಯೆಂದೆ ಹೆಸರುವಾಸಿಯಾದ ಕೋಲಾರ ಜಿಲ್ಲೆಯಲ್ಲಿ ಸುಮಾರು 750 ಕೆರೆಗಳು ಬತ್ತಿಹೋಗಿವೆ. ಇಂತಹ ಪರಿಸ್ಥಿತಿಯಲ್ಲಿ ಅಕ್ರಮವಾಗಿ ಮರಳು ಮಾಫಿಯ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ರೈತ ಸಂಘದ ಕಾರ್ಯಕರ್ತರು ಆರೋಪಿಸಿದರು.
ಕೋಲಾರ ಜಿಲ್ಲೆಯ ಜನತೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕಾದ ಸರ್ಕಾರಗಳು ಎಮ್ಮೆ ಮೇಲೆ ಬರೆ ಎಳೆದಂತೆ ಕೈಕಟ್ಟಿ ಕುಳಿತಿದ್ದು ರೈತರ ಮತ್ತು ಸಾರ್ವಜನಿಕರ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದೆ. ಕೂಡಲೇ ಜಿಲ್ಲೆಗಳ ಸಮಗ್ರ ಕೆರೆಗಳ ಅಭಿವೃದ್ಧಿ ಕೈಗೊಂಡು ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಬೇಕು ಮತ್ತು ಬರಪೀಡಿತ ಜಿಲ್ಲೆಯ ರೈತರು ಪಡೆದಿರುವ ಎಲ್ಲಾ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಅದೇ ರೀತಿ ಕೆರೆಗಳ ಹೂಳೆತ್ತುವ ಕಾರ್ಯ ಪ್ರಾರಂಭಿಸಬೇಕು, ಬೆತಮಂಗಲ ರಾಮಸಾಗರ ಕೆರೆಗಳ ಸಂಪೂರ್ಣ ಒತ್ತುವರಿ ತೆರವುಗೊಳಿಸಬೇಕು, 6 ವರ್ಷಗಳಿಂದ ಕೆರೆಗಳ ಹೂಳೆತ್ತುವ ನೆಪದಲ್ಲಿ ಆಗಿರುವ ಅವ್ಯವಹಾರವನ್ನು ಸಮಗ್ರವಾಗಿ ಸರ್ಕಾರದಿಂದ ಸೂಕ್ತ ತನಿಖೆ ನಡೆಸಬೇಕು, ಜಿಲ್ಲೆಯ ರೈತರು ಎಲ್ಲಾ ಸಹಕಾರ ಬ್ಯಾಂಕ್‌ಗಳಲ್ಲಿ ಪಡೆದಿರುವ ಕೃಷಿ ಸಾಲವನ್ನು ಮನ್ನಾ ಮಾಡಿ ಹೊಸದಾಗಿ ರಾತರಿಗೆ ಸಾಲವನ್ನು ನೀಡಬೇಕು, ಕೋಲಾರ ಜಿಲ್ಲೆಯನ್ನು ಕೂಡಲೇ ಬರಪೀಡಿತ ಜಿಲ್ಲೆಯೆಂದು ಘೋಷಿಸಿ ದನ, ಕರುಗಳಿಗೆ ಮೇವು ಮತ್ತು ಕುಡಿಯಲು ನೀರನ್ನು ಒದಗಿಸಲು ಪ್ರತಿ ಪಂಚಾಯಿತಿಯಲ್ಲಿ ಗೋಶಾಲೆ ತೆರೆಯಬೇಕು, ಕೆರೆಗಳಲ್ಲಿ ನಡೆಯುತ್ತಿರುವ ಮರಳು ದಂಧೆ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಂಡು ದಂಧೆಯಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯ ಕ್ರಮಕೈಗೊಳ್ಳಬೇಕು, ಪ್ಲೋರೈಡ್‌ಯುಕ್ತ ವಿಷ ನೀರನ್ನು ಕುಡಿಯುತ್ತಿರುವ ಜಿಲ್ಲೆಯ ಜನರಿಗೆ ನೀರು ಶುದ್ಧೀಕರಣ ಯಂತ್ರಗಳನ್ನು ಸರ್ಕಾರ ಪ್ರತಿ ಮನೆಗೆ ನೀಡಬೇಕು ಎಂಬ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಉಪತಹಸೀಲ್ದಾರ್ ಇನಾಯತ್ತುಲ್ಲಾಖಾನ್ ಅವರ ಮೂಲಕ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳಾದ ಮಂಜುನಾಥ್, ಸೋಮನಾಥ್, ರಾಘವೇಂದ್ರ, ವೆಂಕಟೇಶ್, ಜಯರಾಮ, ದೊಡ್ಡಕಾರಿ ವಿಶ್ವನಾಥ್,  ಸುಬ್ರಮಣಿ, ನಾರಾಯಣಸ್ವಾಮಿ, ಯಲ್ಲಪ್ಪ, ಮುನಿರತ್ನಂರೆಡ್ಡಿ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.