ಪಾಕಿಸ್ತಾನ ವಿರುದ್ಧ ಮಾಜಿ ಸೈನಿಕರ ಪ್ರತಿಭಟನೆ
ಗೌರಿಬಿದನೂರು: ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನದ ಸೈನಿಕರ ಗುಂಡಿನ ದಾಳಿ ವಿರೋಧಿಸಿ ಹಾಗೂ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕು ಮಾಜಿ ಸೈನಿಕರ ಸಂಘ, ಎನ್‌ಸಿಸಿ ವಿದ್ಯಾರ್ಥಿಗಳು ಪಾಕಿಸ್ತಾನದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಸಂಘದ ಅಧ್ಯಕ್ಷ ಚೌಡಪ್ಪ ಮಾತನಾಡಿ, ಪಾಕಿಸ್ತಾನದ ಸೈನಿಕರು ನಿರಂತರವಾಗಿ ನಮ್ಮ ಸೈನಿಕರ ಹತ್ಯೆ ನಡೆಸುತ್ತಿದ್ದು, ಕೇಂದ್ರ ಸರಕಾರ ನಮ್ಮ ಸೈನಿಕರ ರಕ್ಷಣೆ ಹಾಗೂ ಎದುರಾಳಿಯನ್ನು ಸದೆಬಡೆಯುವ ಬಗ್ಗೆ ಹೆಚ್ಚು ಜಾಗೃತರಾಗಬೇಕಿದೆ. ಇತ್ತೀಚೆಗೆ ಬಿಹಾರದ ಮಂತ್ರಿ ಭೀಮಸಿಂಗ್‌ರವರು, ಭಾರತ ಸೇನೆಗೆ ಹಾಗೂ ಪೊಲೀಸ್ ಇಲಾಖೆಗೆ ಸೇರುವುದು ಪ್ರಾಣಬಿಡುವ ಸಲುವಾಗಿ ಎಂಬ ಹೇಡಿತನದ ಹೇಳಿಕೆಯನ್ನು ನೀಡುವ ಮೂಲಕ ದೇಶದ ಸೈನಿಕರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಿದ್ದು, ಮಾಜಿ ಸೈನಿಕರ ಸಂಘ ತೀವ್ರವಾಗಿ ಖಂಡಿಸುತ್ತಿರುವುದಾಗಿ ತಿಳಿಸಿದರು.
ಕ್ಯಾಪ್ಟನ್ ಸತೀಶ್ ಮಾತನಾಡಿ, ಪಾಕಿಸ್ತಾನದ ಸೈನಿಕರು ಹೇಡಿಗಳಂತೆ ಭಾರತದ ಗಡಿಯಲ್ಲಿನ ಸೈನಿಕರ ಮೇಲೆ ಗುಂಡಿನ ದಾಳಿಯನ್ನು ನಡೆಸಿರುವುದು ಅವರ ಹೇಡಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸರಕಾರಗಳು ಈ ಬಗ್ಗೆ ನಿರ್ಧಾಕ್ಷಿಣ್ಯವಾಗಿ ಕ್ರಮವನ್ನು ಜರುಗಿಸಲು ಯಾವುದೇ ಮೀನಮೇಷ ಎಣಿಸಬಾರದು ಎಂದು ಹೇಳಿದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ದೇವಿಮಂಜುನಾಥ್ ಮಾತನಾಡಿ, ನಮ್ಮ ಸೈನಿಕರನ್ನು ಪಾಕಿಸ್ತಾನದವರು ಹಿಂಬದಿಯಿಂದ ಹೇಡಿಗಳಂತೆ ಬಂದು ದಾಳಿಮಾಡಿರುವುದು ಖಂಡನೀಯ, ಈ ಬಗ್ಗೆ ಸರಕಾರ ಕಟ್ಟು ನಿಟ್ಟಿನ ಕ್ರಮವನ್ನು ಜರುಗಿಸಬೇಕಿದೆ ಎಂದು ಹೇಳಿದರು.
ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಅಶ್ವತ್ಥನಾರಾಯಣ, ಸದಸ್ಯರುಗಳಾದ ಸೋಮಶೇಖರ್, ಶ್ರೀನಿವಾಸರೆಡ್ಡಿ, ಭೂಪಾಲರೆಡ್ಡಿ, ತುಕಾರಾಂ ರಾವ್, ರಮೇಶ್, ಸುರೇಶ್, ಎನ್.ಸಿ.ಸಿ. ಕಮಾಂಡೆಂಟ್‌ಗಳಾದ ಬಿ.ಸುರೇಶ್, ಅರ್ಜುನ್, ರಂಗದಾಮಯ್ಯ, ರಾಜೇಶ್‌ರೆಡ್ಡಿ, ಮನೋಜ್‌ಕುಮಾರ್, ಹಾಗೂ ಎನ್.ಸಿ.ಸಿ.ವಿದ್ಯಾರ್ಥಿಗಳು ಇದ್ದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಾಕಿಸ್ತಾನದ ವಿರುದ್ದ ಘೋಷಣೆಗಳನ್ನು ಕೂಗಿ ಪ್ರತಿಭಟನಾ ಮೆರವಣಿ ನಡೆಸಿ ನಂತರ ತಾಲೂಕು ಕಚೇರಿಗೆ ಆಗಮಿಸಿ ತಹಸಿಲ್ದಾರ್ ಮೂಲಕ ಕೇಂದ್ರಸರಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

